ETV Bharat / state

ಹಂಪಿಯ ಬೆರಗು ಹೆಚ್ಚಿಸುವ ನರಸಿಂಹನಿಗಿದೆ 500 ವರ್ಷಗಳ ಇತಿಹಾಸ

author img

By

Published : Nov 7, 2020, 1:50 PM IST

‌ವಿಜಯನಗರ ಸಾಮ್ರಾಜ್ಯ ದಾಳಿಗೆ ಒಳಗಾದಗ ಅಖಂಡ ಶಿಲೆ ಹಾನಿಗೊಂಡು, ಮೂರ್ತಿಯ ಕೈ ಕಾಲು ಮತ್ತು ಲಕ್ಷ್ಮಿ ಕೆತ್ತನೆಗೆ ಹಾನಿಯಾಗಿದೆ. ಅಲ್ಲದೇ ವಿಗ್ರಹದ ಎಡಭಾಗದಲ್ಲಿ ಏಕಶಿಲಾ ಶಿವಲಿಂಗವಿದ್ದು, ಈ ಲಿಂಗವನ್ನು ಜಲಕಂಠೇಶ್ವರ ಎಂಬುದಾಗಿಯೂ ಕರೆಯಲಾಗುತ್ತದೆ.

hampis-famous-narasimha-idol-has-500-year-history
ಹಂಪಿಯ ಪ್ರಖ್ಯಾತಿ ಹೆಚ್ಚಿಸುವ ನರಸಿಂಹನ ವಿಗ್ರಹ

ಹೊಸಪೇಟೆ (ಬಳ್ಳಾರಿ): ಹಂಪಿಯ ಸುಂದರ ಕೆತ್ತನೆಗಳ ನಡುವೆ ದೊಡ್ಡ ಆಕರವುಳ್ಳ ಮೂರ್ತಿ ಎಂದರೆ ಅದು ಲಕ್ಷ್ಮಿ ನರಸಿಂಹ ವಿಗ್ರಹವಾಗಿದೆ.‌ ಆದರೆ ಜನರು ಉಗ್ರನರಸಿಂಹ ಹೆಸರಿನಿಂದ ಕರೆಯುವುದುಂಟು.

ಈ ಮೂರ್ತಿ ಸುಂದರ ಕೆತ್ತನೆಯಿಂದ ಕೂಡಿದೆ. ಕೃಷ್ಣದೇವರಾಯರ ಅನುಮತಿ ಮೇರೆಗೆ ಆರ್ಯಕೃಷ್ಣ ಭಟ್ಟನು ಕೃಷ್ಣಾಪುರದಲ್ಲಿ ಲಕ್ಷ್ಮಿ ನರಸಿಂಹ ದೇವರನ್ನು ಪ್ರತಿಷ್ಠಾಪನೆ ಮಾಡಿರುವುದು ತಿಳಿದು ಬರುತ್ತದೆ. ಅಲ್ಲದೇ ದೊರೆಯು ಅದಕ್ಕೆ ಎರಡು ಹಳ್ಳಿಗಳನ್ನು ದತ್ತಿಬಿಟ್ಟನೆಂದು ಕ್ರಿ.ಶ 1528ರ ಶಾಸನವೊಂದು ತಿಳಿಸುತ್ತದೆ‌.

ಹಂಪಿಯ ಬೆರಗು ಹೆಚ್ಚಿಸುವ ನರಸಿಂಹನಿಗಿದೆ 500 ವರ್ಷಗಳ ಇತಿಹಾಸ

ಮೊದಲು ಉಗ್ರ ನರಸಿಂಹ ಹೆಸರಿನಿಂದ ಕರೆಯಲಾಗುತ್ತಿತ್ತು. ನಂತದದಲ್ಲಿ ದೊರೆತ ಲಕ್ಷ್ಮಿವಿಗ್ರಹ ಮತ್ತು ಶಾಸನ ಆಧಾರದಿಂದ ಲಕ್ಷ್ಮಿ ನರಸಿಂಹ ಎಂದು ತಿಳಿದು ಬಂತು. ಈ ಮೂರ್ತಿಯು ಅಖಂಡ ಶಿಲೆಯಿಂದ ಕೆತ್ತನೆ ಮಾಡಲಾಗಿದೆ. 6.5 ಮೀಟರ್ ಎತ್ತರವನ್ನು ಈ ಮೂರ್ತಿ ಹೊಂದಿದೆ. ಈ ವಿಗ್ರಹಕ್ಕೆ ನಾಲ್ಕು ಕೈಗಳಿವೆ. ತೆಲೆ ಮೇಲೆ ಏಳು ಹೆಡೆಗಳ ನಾಗಶಿಲ್ಪವಿದೆ. ಮೂರ್ತಿಯ ತೊಡೆ ಭಾಗದ ಮೇಲೆ ಅಖಂಡ ಶಿಲೆಯ ಲಕ್ಷ್ಮಿಯನ್ನು ಕೆತ್ತನೆ ಮಾಡಲಾಗಿತ್ತು. ‌ವಿಜಯನಗರ ಸಾಮ್ರಾಜ್ಯ ದಾಳಿಗೆ ಒಳಗಾದಾಗ ಅಖಂಡ ಶಿಲೆ ಹಾನಿಗೊಂಡು, ಮೂರ್ತಿಯ ಕೈ ಕಾಲು ಮತ್ತು ಲಕ್ಷ್ಮಿ ಕೆತ್ತನೆಗೆ ಹಾನಿಯಾಗಿರುವುದು ಕಂಡುಬರುತ್ತದೆ.

ಈ ಹಿಂದೆ ಲಕ್ಷ್ಮಿನರಸಿಂಹ ವಿಗ್ರಹಕ್ಕೆ ಭಾರತೀಯ ಸರ್ವೇಕ್ಷಣಾ ಪುರಾತತ್ವ ಇಲಾಖೆ ಅವರು ಒಡೆದು ಹೋಗಿರುವ ಭಾಗಕ್ಕೆ ರಸಾಯನಿಕ ಮಿಶ್ರಣ ಬಳಸಿ ಅಂಟಿಸಲು ಮುಂದಾಗಿದ್ದರು. ಇದಕ್ಕೆ ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಹಾಗೂ ಹಿರಿಯ ಸಾಹಿತಿ ಶಿವರಾಮ ಕಾರಂತರು ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ಆ ಕಾರ್ಯವನ್ನು ಪುರಾತತ್ವ ಇಲಾಖೆ ಕೈ ಬಿಟ್ಟಿತ್ತು.

ಲಕ್ಷ್ಮಿನರಸಿಂಹ ಎಡಭಾಗದಲ್ಲಿ ಬಡವಿ ಲಿಂಗವೊಂದನ್ನು ಕಾಣಬಹುದಾಗಿದೆ. ಕಣಶಿಲೆಯಲ್ಲಿ ಏಕಶಿಲಾ ಲಿಂಗವಿದೆ. ಈ ಲಿಂಗವನ್ನು ಬಡವಿ ಲಿಂಗ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ.‌ ಈ ಲಿಂಗ ಸದಾ ನೀರಿನಲ್ಲಿ ಇರುವುದರಿಂದ ಜಲಕಂಠೇಶ್ವರ ಎಂಬ ಹೆಸರು ಸಹ ಇದೆ. ಸುಮಾರು 3 ಮೀಟರ್ ಎತ್ತರದಲ್ಲಿ ಈ‌ ಮೂರ್ತಿ ಇದೆ. ಶಿವಲಿಂಗವು ಬ್ರಹ್ಮಭಾಗದ ಎತ್ತರದ ಪೀಠ, ವಿಷ್ಣುಭಾಗ ವಿಶಾಲವಾದ ಪಾಣಿಪೀಠ ಮತ್ತು ಎತ್ತರದ ರುದ್ರಭಾಗಗಳನ್ನು ಹೊಂದಿದೆ. ಲಿಂಗದ ರುದ್ರಭಾಗದಲ್ಲಿ ರೇಖೆಗಳಲ್ಲಿ ಕೆತ್ತಲಾದ ಸೋಮಸೂತ್ರ ಮತ್ತು ಮೂರು ಕಣ್ಣುಗಳಿರುವುದನ್ನು ಕಾಣಬಹುದು. ‌ಈ ಲಿಂಗದ ಸುತ್ತಲೂ ನಿರಂತರವಾಗಿ ನೀರಿರಲೆಂದು ತುರ್ತು ಕಾಲುವೆ ಜೋಡಣೆ ಮಾಡಿರುವುದು ವಿಶೇಷವಾಗಿದೆ.‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.