ವಿಮ್ಸ್​ನ ಐಸಿಯುನಲ್ಲಿ ಸಾವು ಪ್ರಕರಣ.. ಆಸ್ಪತ್ರೆಗೆ ಸಚಿವ ಸುಧಾಕರ್ ಭೇಟಿ, ಪರಿಶೀಲನೆ

author img

By

Published : Sep 18, 2022, 5:33 PM IST

Updated : Sep 18, 2022, 5:55 PM IST

ಬಳ್ಳಾರಿಯ ವಿಮ್ಸ್​ ಆಸ್ಪತ್ರೆಗೆ ಡಾ ಕೆ ಸುಧಾಕರ್ ಭೇಟಿ

ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯಾದ್ಯಂತ ಬಳ್ಳಾರಿ ವಿಮ್ಸ್​ನದ್ದೇ ಸುದ್ದಿ. ಇಲ್ಲಿನ ಅವ್ಯವಸ್ಥೆಯಿಂದ ನಾಲ್ವರು ರೋಗಿಗಳು ಮೃತಪಟಟ್ಟಿದ್ದರು. ಇಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ವಿಮ್ಸ್​ಗೆ ಭೇಟಿ ನೀಡಿದ್ರು.

ಬಳ್ಳಾರಿ: ವಿಮ್ಸ್​ನಲ್ಲಿ ಆದ ದುರ್ಘಟನೆಗಳ ಕುರಿತು ತಡವಾಗಿಯಾದರೂ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಎಚ್ಚೆತ್ತುಕೊಂಡಿದ್ದಾರೆ. ಇಂದು ವಿಮ್ಸ್ ಗೆ ಭೇಟಿ ನೀಡಿದ ಅವರು, ಅಧಿಕಾರಿಗಳ ಸಭೆ ನಡೆಸಿ ಸಮಗ್ರ ಮಾಹಿತಿ ಪಡೆದಿದ್ದಾರೆ. ಆದ್ರೆ ಇಂದೂ ಸಹ ವಿಮ್ಸ್ ನಿರ್ಲಕ್ಷ್ಯತನಕ್ಕೆ ಕೈಗನ್ನಡಿ ಹಿಡಿಯುವಂತ ಘಟನೆಯೊಂದು ನಡೆದಿದ್ದು, ಒಂದೆಡೆ ಸಚಿವರ ಸಭೆ, ಮತ್ತೊಂದೆಡೆ ವಿಮ್ಸ್ ನ ಬೇಜವಾಬ್ದಾರಿ ವರ್ತನೆ ಎರಡೂ ಮುಂದುವರೆದಿತ್ತು.

ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಅವರು ಮಾತನಾಡಿದರು

ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯಾದ್ಯಂತ ಬಳ್ಳಾರಿ ವಿಮ್ಸ್ ನದ್ದೇ ಸುದ್ದಿ. ಇಲ್ಲಿ ನಾಲ್ಕು ಜನ ಮೃತಪಟ್ಟಿದ್ದಾರೆ. ಇಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ವಿಮ್ಸ್ ಗೆ ಭೇಟಿ ನೀಡಿದ್ರು. ಬರ್ತಿದ್ದ ಹಾಗೆ ನೇರವಾಗಿ ವಿಮ್ಸ್ ಮೀಟಿಂಗ್ ಹಾಲ್​ಗೆ ತೆರಳಿದ ಅವರು, ಅಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ರು. ನಡೆದಿರುವ ದುರಂತದ ಬಗ್ಗೆ ಸಮಗ್ರ ಮಾಹಿತಿ ಪಡೆದ್ರು.

ಸುಧಾಕರ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಸಾಥ್ ನೀಡಿದ್ರು. ಸಭೆ ವೇಳೆ ವಿಮ್ಸ್ ನಿರ್ದೇಶಕ ಡಾ. ಗಂಗಾಧರ ಗೌಡ, ಡಿಸಿ ಪವನಕುಮಾರ್ ಮಾಲಪಾಟಿ ಸೇರಿದಂತೆ ಹಲವರಿಗೆ ಸಚಿವ ಸುಧಾಕರ್ ಕ್ಲಾಸ್ ತೆಗೆದುಕೊಂಡ್ರು ಎನ್ನುವ ಮಾತುಗಳು ಕೇಳಿಬಂದಿವೆ. ಒಂದೆಡೆ ಸಚಿವರ ಸಭೆ ನಡೀತಿದ್ರೆ, ಮತ್ತೊಂದೆಡೆ ಇಂದೂ ಸಹ ವಿಮ್ಸ್ ಸಿಬ್ಬಂದಿ ನಿರ್ಲಕ್ಷ್ಯತನ ಮುಂದುವರೆದಿತ್ತು. ಕಳೆದ ಮೂರು ದಿನಗಳಿಂದ ಚಿಕಿತ್ಸೆಗಾಗಿ ಅಸ್ವಸ್ಥನೊಬ್ಬ ಒದ್ದಾಡ್ತಿದ್ರೂ ವಿಮ್ಸ್ ಸಿಬ್ಬಂದಿ ಕ್ಯಾರೇ ಎಂದಿರಲಿಲ್ಲ ಎಂಬ ಆರೋಪ ಕೇಳಿಬಂದಿದೆ.

ಯಾವಾಗ ಮಾಧ್ಯಮಗಳ ಕ್ಯಾಮರಾಗಳು ಆತನನ್ನು ಶೂಟ್ ಮಾಡಲು ಶುರು ಮಾಡಿದ್ವೋ ಇದ್ದಕ್ಕಿದ್ದ ಹಾಗೆ ವಿಮ್ಸ್ ಸಿಬ್ಬಂದಿಗೆ ಜ್ಞಾನೋದಯವಾಗಿ ಅಸ್ವಸ್ಥನನ್ನು ಅಡ್ಮಿಟ್ ಮಾಡಿಕೊಂಡು ಚಿಕಿತ್ಸೆ ಪ್ರಾರಂಭ ಮಾಡಿದ್ರು. ಒಂದೆಡೆ ಇಲಾಖೆ ಸಚಿವರ ಸಭೆ, ಮತ್ತೊಂದೆಡೆ ವಿಮ್ಸ್ ಸಿಬ್ಬಂದಿ ನಿರ್ಲಕ್ಷ್ಯ ಇದು ವಿಮ್ಸ್ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಂತಿತ್ತು.

ಎರಡು ಸಾವು ಬಗ್ಗೆ ವರದಿ: ಇನ್ನು ಸಭೆ ಬಳಿಕ ಡಾ. ಕೆ ಸುಧಾಕರ್ ಕೇಬಲ್ ಬ್ಲಾಸ್ಟ್ ಆಗಿದ್ದ ಸ್ಥಳ ನೋಡಿದ್ರು. ಹಾಗೆಯೇ ಸಮಸ್ಯೆ ಉಂಟಾಗಿದ್ದ ಐಸಿಯುಗೂ ತೆರಳಿ ಸ್ಥಳ ಪರಿಶೀಲನೆ ಜೊತೆ ವಾಸ್ತವ ಪರಿಸ್ಥಿತಿಯ ಪರಿಶೀಲನೆ ಮಾಡಿದ್ರು. ನಂತರ ಅವರು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ್ರು. ಅದರಲ್ಲಿಯೂ ಸಹ ಅವರು ಸರ್ಕಾರದ್ದು ಯಾವುದೇ ಬಗೆಯ ತಪ್ಪಿಲ್ಲ. ಮೃತಪಟ್ಟಿರೋದು ಇಬ್ಬರೇ ಎನ್ನುವ ದಾಟಿಯಲ್ಲಿ ಮಾತನಾಡಿದ್ರು. ವಿಮ್ಸ್ ಆಸ್ಪತ್ರೆಯಲ್ಲಿ ನಡೆದ ಘಟನೆಯಲ್ಲಿ ಎರಡು ಸಾವು ಬಗ್ಗೆ ವರದಿಯಾಗಿದೆ.

ಆರೋಗ್ಯ ಸಮಸ್ಯೆಯಿಂದ ನಾನು ಸದನಕ್ಕೆ ಹೋಗಿರಲಿಲ್ಲ. ನನ್ನ ಪರವಾಗಿ ಸಚಿವ ಶ್ರೀರಾಮುಲು ಸದನದಲ್ಲಿ ಉತ್ತರ ಕೊಟ್ಟಿದ್ದಾರೆ. ಸತ್ಯವನ್ನು ಮುಚ್ಚಿಡಲು ಸಾಧ್ಯವಾಗುವುದಿಲ್ಲ. ರಾಜ್ಯದ ಜನರಿಗೆ ಸತ್ಯ ಗೊತ್ತಾಗಬೇಕು ಅನ್ನೋದು ನಮ್ಮ ಉದ್ದೇಶವಾಗಿದ್ದು, ಈ ಬಗ್ಗೆ ತನಿಖೆ ನಡೆಸಲು ಉನ್ನತ ಮಟ್ಟದ ತನಿಖೆ ಸಮಿತಿ ಮಾಡಿದ್ದೇವೆ. ತನಿಖಾ ಸಮಿತಿ ಕೂಡ ವಿಮ್ಸ್​ಗೆ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ.

ಮೆದುಳಿನಲ್ಲಿ ರಕ್ತಸ್ರಾವ: ವಿದ್ಯುತ್ ಸ್ಥಗಿತವಾದ ವೇಳೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ವೈದ್ಯಾಧಿಕಾರಿಗಳು ದಾಖಲೆ ನೀಡಿದ್ದು, ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ವ್ಯಕ್ತಿಗೆ ಉಸಿರಾಟದ ಸಮಸ್ಯೆ ಇತ್ತು. ಮೆದುಳಿನಲ್ಲಿ ರಕ್ತಸ್ರಾವ ಆಗಿದೆ. ಬಿಪಿ ಕೂಡ ಹೆಚ್ಚಾಗಿದೆ. ರೋಗಿಯ ಸ್ಥಿತಿಯ ಸಂಬಂಧಿಕರೊಂದಿಗೆ ವೈದ್ಯಾಧಿಕಾರಿಗಳು ಮಾತನಾಡಿದ್ದಾರೆ ಎಂದರು.‌

ಸೆ 14 ರಂದು 9. 45 ಕ್ಕೆ ಆ ವ್ಯಕ್ತಿ ಸಾವನ್ನಪ್ಪಿದ್ದಾರೆ. ಸಾವಿಗೆ ಕಾರಣದ ಬಗ್ಗೆ ನಾನು ಈಗಲೇ ಹೇಳುವುದಿಲ್ಲ. ಈಗಾಗಲೇ ಈ ಬಗ್ಗೆ ಉನ್ನತ ಮಟ್ಟದ ಸಮಿತಿ ತನಿಖೆ ನಡೆಯುತ್ತಿದೆ. 30 ವರ್ಷದ ಮಹಿಳೆ ಹಾವು ಕಚ್ಚಿದ್ದರಿಂದ ಸೆ 13 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಎಲ್ಲಾ ರೀತಿಯ ಚಿಕಿತ್ಸೆ ನೀಡಲಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಹೃದಯಸ್ತಂಭನದಿಂದ ಮೃತಪಟ್ಟಿದ್ದಾರೆ.

ನಿರ್ದೇಶಕರ ವಿರುದ್ಧ ಷಡ್ಯಂತ್ರ: ಇದರ ಹೊರತಾಗಿಯೂ ಎಲ್ಲಾ ವಿಭಾಗದ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ್ದು, ತನಿಖಾ ವರದಿ ಬಂದ ಬಳಿಕ ಸದನದ ಮುಂದೆ ರಾಜ್ಯದ ಜನರ ಮುಂದೆ ವರದಿ ನೀಡುತ್ತೇವೆ. ತನಿಖೆ ಬಳಿಕ ವರದಿಯಲ್ಲಿ ಯಾರದ್ದಾದರೂ ನಿರ್ಲಕ್ಷ್ಯ ಕಂಡು ಬಂದ್ರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಿರ್ದೇಶಕರ ವಿರುದ್ಧ ಷಡ್ಯಂತ್ರ ನಡೆದಿದ್ರೆ ಈ ಬಗ್ಗೆ ತನಿಖಾ ಸಮಿತಿ ತನಿಖೆ ನಡೆಸಲಿದೆ ಎಂದರು.

ಇನ್ನು, ವಿಮ್ಸ್​ನಲ್ಲಿ ನಡೆದ ದುರಂತದ ಹಿಂದೆ ಷಡ್ಯಂತ್ರ ನಡೆದಿದೆ ಅನ್ನೋ ಗಂಭೀರ ಆರೋಪವನ್ನು ನಿರ್ದೇಶಕ. ಡಾ ಗಂಗಾಧರ್ ಗೌಡ ಮಾಡಿದ್ದಾರೆ. ಇದನ್ನು ತನಿಖಾ ಸಮಿತಿ ಮುಂದೆ ಹೇಳಿದ್ದಾರೆ. ಷಡ್ಯಂತ್ರದ ವಿಚಾರ ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಷಡ್ಯಂತ್ರದ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಓದಿ: ತಪ್ಪು ಮಾಡದವರು ಎಲ್ಲಾ ಸಂಕಷ್ಟದಿಂದ ಆಚೆ ಬರುತ್ತಾರೆ: ಡಿಕೆಶಿಗೆ ಸಚಿವ ಅಶ್ವತ್ಥ್​ ನಾರಾಯಣ್ ಟಾಂಗ್​

Last Updated :Sep 18, 2022, 5:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.