ETV Bharat / state

"5 ವರ್ಷ ನಮ್ಮದೇ ಸರ್ಕಾರ, ನಾನೇ ಮುಂದುವರೆಯುವೆ": ವಿಜಯನಗರದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ

author img

By ETV Bharat Karnataka Team

Published : Nov 2, 2023, 5:23 PM IST

Updated : Nov 2, 2023, 8:03 PM IST

ರಾಜ್ಯದಲ್ಲಿ ಸಿಎಂ ಬದಲಾಗ್ತಾರಾ ಎಂಬ ಊಹಾಪೋಹಾಕ್ಕೆ ಸಿಎಂ ಸಿದ್ದರಾಮಯ್ಯ ಸ್ವತಃ ಉತ್ತರ ನೀಡುವ ಮೂಲಕ ತೆರೆ ಎಳೆದಿದ್ದಾರೆ.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ವಿಜಯನಗರದಲ್ಲಿ ಸಿಎಂ ಸಿದ್ದರಾಮಯ್ಯ ಮಾಧ್ಯಮ ಪ್ರತಿಕ್ರಿಯೆ

ವಿಜಯನಗರ: ಐದು ವರ್ಷ ನಮ್ಮದೇ ಸರ್ಕಾರ ಇರಲಿದ್ದು, ನಾನೇ ಮುಂದುವರೆಯುವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಹಂಪಿಯಲ್ಲಿ ಕರ್ನಾಟಕ ಸಂಭ್ರಮ 50ಕ್ಕೆ ಚಾಲನೆ ಹಾಗೂ ಇತರ ಕಾರ್ಯಗಳಿಗೆ ಹೊಸಪೇಟೆಗೆ ಸಿಎಂ ಆಗಮಿಸಿದ್ದರು.

ಈ ವೇಳೆ ಬದಲಾವಣೆ ವಿಚಾರದ ಪ್ರಶ್ನೆ ಮಾಡಿದ ಸುದ್ದಿಗಾರರಿಗೆ ಅವರು, "ಐದು ವರ್ಷ ನಮ್ಮದೇ ಸರ್ಕಾರ ಇರುತ್ತದೆ. ನಾನು ಈಗ ಮುಖ್ಯಮಂತ್ರಿ" ಎಂದು ಉತ್ತರಿಸಿದ್ದಲ್ಲದೇ, 5 ವರ್ಷ ನೀವೇ ಸಿಎಂ ಆಗಿರುತ್ತೀರಾ ಎನ್ನುವ ಪ್ರಶ್ನೆಗೆ "ನಾನೇ ಮುಂದುವರೆಯುವೆ, ಡಿಸಿಎಂ ವಿಚಾರವಾಗಿ ತೀರ್ಮಾನ ಮಾಡುವುದು ಹೈಕಮಾಂಡ್. ನಮ್ಮದು ನ್ಯಾಷನಲ್ ಪಾರ್ಟಿ, ಏನೇ ತೀರ್ಮಾನವಿದ್ದರೂ ಹೈಕಮಾಂಡ್ ಜೊತೆ ಚರ್ಚೆ ಮಾಡಿದ ಬಳಿಕವೇ ಆಗಲಿದೆ" ಎಂದು ಪ್ರತಿಕ್ರಿಯಿಸಿದರು.

ಸರ್ಕಾರ ಬೀಳುತ್ತೆ ಎನ್ನುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ''ಅವರು ಸೋತಿದ್ದಾರೆ. ಬೇರೆ ಕೆಲಸ ಇಲ್ಲದೇ ಬಾಯಿಗೆ ಬಂದಂತೆ ಮಾತಾಡ್ತಾನೆ. ರಾಜ್ಯದ ಜನ ನಮಗೆ 136 ಸೀಟು ಕೊಟ್ಟು ಗೆಲ್ಲಿಸಿದ್ದಾರೆ. ಐದು ವರ್ಷ ಸುಭದ್ರ ಸರ್ಕಾರ ಕೊಡುತ್ತೇವೆ. ಬಿಜೆಪಿಯವರು ಭ್ರಮ ನೀರಸವಾಗಿದ್ದಾರೆ. ಅವರಿಗೆ ಅಧಿಕಾರ ಇಲ್ಲದೇ ಇರಲು ಆಗುವುದಿಲ್ಲ. ಈ ಹಿಂದೆ ಆಪರೇಷನ್ ಮಾಡಿ ಯಶಸ್ಸು ಕಂಡಿದ್ದಾರೆ. ಮತ್ತೆ ಆಪರೇಷನ್ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅದು ಸಾಧ್ಯವಾಗಲ್ಲ'' ಎಂದು ಬಿಜೆಪಿಗರಿಗೆ ತಿರುಗೇಟು ನೀಡಿದರು.

ಸಿಎಂಗೆ ಮಕ್ಕಳಿಂದ ಪ್ರೀತಿಯ ಸ್ವಾಗತ: ಹೊಸಪೇಟೆಯ ಬಾಲಕಿಯರ ಪದವಿಪೂರ್ವ ಕಾಲೇಜು, ಬಾಲಕಿಯರ ಪ್ರೌಢಶಾಲೆಗಳ ಉದ್ಘಾಟನೆಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯರನ್ನು ಮಕ್ಕಳು ವಿಶೇಷವಾಗಿ ಸ್ವಾಗತಿಸಿದರು. ಮುಖ್ಯಮಂತ್ರಿಯವರಿಗೆ ಗುಲಾಬಿ ಹೂ ನೀಡಿ ವಿದ್ಯಾರ್ಥಿನಿಯರು ಸಂಭ್ರಮಿಸಿದರು. ಮಕ್ಕಳ ಜೊತೆಗೆ ಕೆಲ ಕಾಲ ಮಾತನಾಡಿದ ಸಿಎಂ, ಪಾಠ ಪ್ರವಚನ ಹೇಗೆ ನಡೆಯುತ್ತಿದೆ. ಸರ್ಕಾರದ ಸವಲತ್ತುಗಳನ್ನು ಸಿಕ್ತಿವೆಯಾ..? ಎಂದು ವಿಚಾರಿಸಿದರು.

ಈ ವೇಳೆ, ಸಚಿವ ಜಮೀರ್ ಅಹಮ್ಮದ್ ಖಾನ್, ಸಚಿವ ಶಿವರಾಜ್ ತಂಗಡಗಿ, ಭೈರತಿ ಸುರೇಶ್, ಕೆಎಮ್​ಎಫ್​ ಅಧ್ಯಕ್ಷ ಭೀಮಾನಾಯ್ಕ್, ಶಾಸಕರಾದ ಗವಿಯಪ್ಪ, ಲತಾ ಮಲ್ಲಿಕಾರ್ಜುನ, ತುಕಾರಾಂ, ಎನ್​ಟಿ ಶ್ರೀನಿವಾಸ್, ರಾಘವೇಂದ್ರ ಹಿಟ್ನಾಳ್, ಮಾಜಿ ಸಂಸದ ಉಗ್ರಪ್ಪ ಉಪಸ್ಥಿತರಿದ್ದರು.

ದೇವರನ್ನು ನಂಬುವೆ, ಮೂಢನಂಬಿಕೆಯನ್ನಲ್ಲ ಎಂದ ಸಿಎಂ: ''ನಾನು ದೇವರನ್ನು ನಂಬುತ್ತೇನೆ, ಆದರೆ ಮೂಢನಂಬಿಕೆಯನ್ನಲ್ಲ. ಅಂದು ಸಿಎಂ ದೇವರಾಜ್ ಅರಸು ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಿದ್ದರು. ಇದೀಗ ನನಗೆ ಅವಕಾಶ ಸಿಕ್ಕಿದೆ, ಇದು ಕಾಕತಾಳೀಯ'' ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಹಂಪಿ ವಿರೂಪಾಕ್ಷೇಶ್ವರ ದೇಗುಲಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಮೂಢನಂಬಿಕೆ, ಮೌಢ್ಯಗಳಲ್ಲಿ ನಂಬಿಕೆ ಇಲ್ಲ. ಹಾಗಂತ ದೇವರನ್ನೇ ನಂಬುವುದಿಲ್ಲ ಅಂತಲ್ಲ. ದೇವರನ್ನು ನಂಬುತ್ತೇನೆ, ಅವೆಲ್ಲ ಅವರವರ ನಂಬಿಕೆಗಳಷ್ಟೆ. ಕೆಲವರೆಲ್ಲ ನಂಬುತ್ತಾರೆ, ಕೆಲವರು ನಂಬುವುದಿಲ್ಲ. ಸಮಾಜಕ್ಕೆ ಒಳ್ಳೆಯದಾಗುವುದಾದರೆ ನಂಬೋಣ, ಸಮಾಜಕ್ಕೆ ಅನುಕೂಲ ಆಗದಿರುವುದನ್ನು ನಂಬುವುದಿಲ್ಲ ಎಂದರು.

1973, ನವೆಂಬರ್ 2ರಂದು ಜ್ಯೋತಿ ರಥಯಾತ್ರೆಗೆಗೆ ಇಲ್ಲಿಂದಲೇ ಚಾಲನೆ ನೀಡಿದ್ದ ದೇವರಾಜ್ ಅರಸು ಅವರು ವಿರೂಪಾಕ್ಷ ದೇವಸ್ಥಾನದಿಂದ ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಿದರು. ಕರ್ನಾಟಕ ನಾಮಕರಣವಾಗಿ 50 ವರ್ಷ ಪೂರ್ಣಗೊಂಡ ಹಿನ್ನೆಲೆ ಇದೀಗ ನನಗೆ ಅವಕಾಶ ಸಿಕ್ಕಿದೆ. ಅವರು ಮೈಸೂರು ಜಿಲ್ಲೆಯವರು, ನಾನು ಮೈಸೂರು ಜಿಲ್ಲೆಯವನು ಎಂದು ಸಿಎಂ ತಿಳಿಸಿದರು.

ಇದನ್ನೂ ಓದಿ: 'ಬರ ಪರಿಹಾರ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ': ಕೇಂದ್ರದ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ

Last Updated : Nov 2, 2023, 8:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.