ವಿಜಯನಗರ: ಕೊಟ್ಟೂರು ತಾಲೂಕಿನ ಉಜ್ಜಿನಿ ಪೀಠದ ಭಕ್ತರು ಮತ್ತು ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ತರಳಬಾಳು ಪೀಠದ ಭಕ್ತರ ನಡುವೆ ಮಾರಾಮಾರಿ ನಡೆದಿರುವ ಘಟನೆ ಜಿಲ್ಲೆಯ ಕೊಟ್ಟೂರು ತಾಲೂಕಿನ ಕಾಳಾಪುರ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಕಾಳಾಪುರ ಗ್ರಾಮದ ಬಸಕ್ಕ ಹಾಗೂ ಮತ್ತೋರ್ವ ಮಹಿಳೆಗೆ ಗಾಯವಾಗಿದ್ದು, ಜೊತೆಗೆ ಪೊಲೀಸ್ ಪೇದೆ ಲಿಂಗಯ್ಯ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮನೆಗೆ ನುಗ್ಗಿ ದುಷ್ಕರ್ಮಿಗಳು ಹಲ್ಲೆ ನಡೆಸಿರುವುದಾಗಿ ಗಾಯಾಳುಗಳನ್ನು ಆರೋಪಿಸಿದ್ದಾರೆ.
ಸಿರಿಗೆರೆ ಮತ್ತು ಉಜ್ಜಿನಿ ಪೀಠದ ಭಕ್ತರ ನಡುವೆ ಗಲಾಟೆ: ಕೊಟ್ಟೂರು ಪಟ್ಟಣದಲ್ಲಿ ಹಮ್ಮಿಕೊಂಡಿರುವ ತರಳಬಾಳು ಹುಣ್ಣಿಮೆ ಕಾರ್ಯಕ್ರಮ ನಿಮಿತ್ತ ಸಿರಿಗೆರೆ ಮಠದ ಭಕ್ತರು ಸಿರಿಗೆರೆಯಿಂದ ಕೊಟ್ಟೂರು ತನಕ ಬೈಕ್ ರ‍್ಯಾಲಿ ಹಮ್ಮಿಕೊಂಡಿದ್ದರು. ಬೈಕ್ ರ‍್ಯಾಲಿಯಲ್ಲಿದ್ದ ಕೆಲ ದುಷ್ಕರ್ಮಿಗಳು ಕಾಳಾಪುರ ಗ್ರಾಮಕ್ಕೆ ತಲುಪುತ್ತಲೇ ಏಕಾಏಕಿ ಗ್ರಾಮಸ್ಥರ ಮನೆ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಜೊತೆಗೆ ಗ್ರಾಮಸ್ಥರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ ವಿಷಯ ತಿಳಿದು ತಕ್ಷಣ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ಗ್ರಾಮದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.
ಸಿರಿಗೆರೆ ಮಠದ ಭಕ್ತರು ಹಮ್ಮಿಕೊಂಡ ಬೈಕ್ ರ‍್ಯಾಲಿ ಕಾಳಾಪುರ ಪ್ರವೇಶ ಮಾಡಿದಾಗ ಬೈಕ್ ರ‍್ಯಾಲಿಯಲ್ಲಿ ಪಾಲ್ಗೊಂಡವರು ಹಾಗೂ ಕಾಳಾಪುರ ಗ್ರಾಮಸ್ಥರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಆಕ್ರೋಶಗೊಂಡ ಬೈಕ್ ರ‍್ಯಾಲಿಯಲ್ಲಿ ಬಂದವರು ಗ್ರಾಮಸ್ಥರ ಮೇಲೆ ದಾಳಿ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಮನೆ ಮುಂದೆ ನಿಲ್ಲಿಸಿದ ಬೈಕ್ಗಳನ್ನೂ ಜಖಂಗೊಳಿಸಿದ್ದಾರೆ. ಜೊತೆಗೆ ಮನೆಯ ಬಾಗಿಲು, ಕಿಟಕಿ ಮುರಿದು ಹಾಕಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
144 ಸೆಕ್ಷನ್ ಜಾರಿ: ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಟಿ. ವೆಂಕಟೇಶ್, ತರಳಬಾಳು ಹುಣ್ಣಿಮೆ ಮೆರವಣಿಗೆ ವೇಳೆ ಸಣ್ಣ ಗಲಾಟೆ ನಡೆದಿದೆ. ಸದ್ಯ ಪರಿಸ್ಥಿತಿ ಹತೋಟಿಗೆ ಬಂದಿದ್ದು, ಗಲಾಟೆ ನಡೆದ ಪ್ರದೇಶದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಮೆರವಣಿಗೆ ಹಿನ್ನೆಲೆ ಉಜ್ಜಯಿನಿ ಭಾಗದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಕಾಳಾಪುರ ಗ್ರಾಮದಲ್ಲಿ ಮೆರವಣಿಗೆಯಲ್ಲಿದ್ದವರು ಹಾಗೂ ಕೆಲ ಗ್ರಾಮಸ್ಥರ ನಡುವೆ ಜಗಳ ನಡೆದಿರುವುದಾಗಿ ತಿಳಿದು ಬಂದಿದೆ. ಘಟನೆಯಲ್ಲಿ ಪೊಲೀಸರ ಮೇಲೆಯೂ ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಎಸ್ಪಿ ಶ್ರೀಹರಿಬಾಬು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
ಉಜ್ಜಿನಿಯ ಮರಳುಸಿದ್ದೇಶ್ವರ ದೇವಸ್ಥಾನ ಸಾಧು ಸದ್ಧರ್ಮ ಜನಾಂಗದ ಆರಾಧ್ಯ ದೈವವಾಗಿದೆ. ಉಜ್ಜಿನಿಯಲ್ಲಿರುವ ದೇವಸ್ಥಾನ ಸಾಧು ಸದ್ಧರ್ಮ ಜನಾಂಗಕ್ಕೆ ಸೇರಬೇಕು ಎಂಬ ಹೋರಾಟ ನಿರಂತರವಾಗಿ ನಡೆದುಕೊಂಡು ಬಂದಿದೆ. ಇದೀಗ ಕೊಟ್ಟೂರಿನಲ್ಲಿಯೇ ತರಳಬಾಳು ಹುಣ್ಣಿಮೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ವಿಚಾರ ಮುನ್ನೆಲೆಗೆ ಬಂದಿದೆ. ಕಾಳಾಪುರದಲ್ಲಿ ಉಜ್ಜಿನಿಯ ದೇವಸ್ಥಾನಕ್ಕೆ ಸಂಬಂಧಪಟ್ಟಂತೆ 9 ಪಾದುಕೆಗಳು ಇದ್ದು, ಭರತ ಹುಣ್ಣಿಮೆ ವೇಳೆ ಇಲ್ಲಿ ಪೂಜಾ ವಿಧಿ ವಿಧಾನ ನಡೆಯುತ್ತಿವೆ. ಇದೇ ಕಾರಣಕ್ಕೆ ಕೆಲವರು ದಾಳಿ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : ಮಂಡ್ಯ: ಪ್ಲಾಸ್ಟಿಕ್ ಬುಟ್ಟಿಯಲ್ಲಿ ನವಜಾತ ಗಂಡು ಶಿಶು ಪತ್ತೆ