ETV Bharat / state

ಪತ್ರಕರ್ತರಿಗೆ ಆಯುಷ್ಮಾನ್ ಭಾರತ - ಆರೋಗ್ಯ ಕರ್ನಾಟಕ ಕಾರ್ಡ್ ವಿತರಣೆ

author img

By

Published : Sep 30, 2020, 9:41 AM IST

ಆಯುಷ್ಮಾನ್ ಭಾರತ - ಆರೋಗ್ಯ ಕರ್ನಾಟಕ ಕಾರ್ಡ್​ಅನ್ನು ಮಾನ್ಯತೆ ಪಡೆದ ಪತ್ರಕರ್ತರಿಗೆ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ವಿತರಣೆ ಮಾಡಿದರು.

Bellary
Bellary

ಬಳ್ಳಾರಿ: ಜಿಲ್ಲಾ ಉಸ್ತುವಾರಿ ಸಚಿವ ಆನಂದ್​ ಸಿಂಗ್ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ "ಆಯುಷ್ಮಾನ್ ಭಾರತ - ಆರೋಗ್ಯ ಕರ್ನಾಟಕ ಕಾರ್ಡ್"ಅನ್ನು ಮಾನ್ಯತೆ ಪಡೆದ ಪತ್ರಕರ್ತರಿಗೆ ವಿತರಿಸಿದರು.

ಈ ವೇಳೆ ಮಾತನಾಡಿದ ಸಚಿವರು, ಮೊದಲ ಹಂತದಲ್ಲಿ ಮಾನ್ಯತೆ ಪಡೆದ ಪತ್ರಕರ್ತರು ಹಾಗೂ ಅವರ ಅವಲಂಬಿತರಿಗೆ “ಆಯುಷ್ಮಾನ್ ಭಾರತ - ಆರೋಗ್ಯ ಕರ್ನಾಟಕ” ಕಾರ್ಡ್​ಅನ್ನು ಒದಗಿಸಲಾಗುತ್ತಿದೆ. ನಂತರ ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳಲ್ಲಿ ಕೆಲಸ ಮಾಡುವ ಪತ್ರಕರ್ತರು ಮತ್ತು ಅವಲಂಬಿತರಿಗೆ ಕಾರ್ಡ್ ಒದಗಿಸಲಾಗುತ್ತದೆ. ಜಿಲ್ಲೆಯಲ್ಲಿ ಸದ್ಯ 31 ಜನ ಮಾನ್ಯತೆ ಪಡೆದ ಪತ್ರಕರ್ತರು ಹಾಗೂ ಅವಲಂಬಿತರಿಗೆ ಒಟ್ಟು 124ಕ್ಕೂ ಹೆಚ್ಚು ಕಾರ್ಡ್​ಗಳನ್ನು ಮುದ್ರಿಸಿ ವಿತರಿಸಲಾಗುತ್ತಿದೆ ಎಂದರು.

ಈ ಯೋಜನೆಯಡಿ 1,614 ರೋಗಗಳಿಗೆ ಸಂಬಂಧಿಸಿದಂತೆ ಶಸ್ತ್ರ ಚಿಕಿತ್ಸೆಗಳನ್ನು ಉಚಿತವಾಗಿ ನೀಡಲಾಗುವುದು ಹಾಗೂ ಎಪಿಎಲ್ ಹೊಂದಿದ ಫಲಾನುಭವಿಗಳಿಗೂ ಸಹ ನಿರ್ದಿಷ್ಟಪಡಿಸಿದ ಚಿಕಿತ್ಸೆಗಳನ್ನು ಸರ್ಕಾರಿ ಮತ್ತು ಖಾಸಗಿ ನೋಂದಾಯಿತ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲಾಗುತ್ತದೆ. ಪತ್ರಕರ್ತರು ಈ ಆಯುಷ್ಮಾನ್ ಭಾರತ - ಆರೋಗ್ಯ ಕರ್ನಾಟಕ ಕಾರ್ಡ್‌ಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಈ ವೇಳೆ ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿಪಂ ಸಿಇಒ ಕೆ.ಆರ್.ನಂದಿನಿ, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.