ETV Bharat / state

ಸುವರ್ಣಸೌಧದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್: ಪಾಸ್ ಇದ್ದವರಿಗೆ ಮಾತ್ರ ಪ್ರವೇಶ

author img

By ETV Bharat Karnataka Team

Published : Dec 14, 2023, 12:38 PM IST

Updated : Dec 14, 2023, 1:26 PM IST

Tight Security in Suvarna Soudha: ಸಂಸತ್​ನಲ್ಲಿ ಭದ್ರತಾ ವೈಫಲ್ಯತೆ ಘಟನೆ ನಡೆದ ಬೆನ್ನಲ್ಲೇ ಚೀಫ್​ ಮಾರ್ಷಲ್​ಗಳ ಸಭೆ ಕರೆದಿದ್ದ ಸ್ಪೀಕರ್​ ಯು ಟಿ ಖಾದರ್​ ಉಭಯ ಸದನ ಕಲಾಪಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲು ಸೂಚಿಸಿದ್ದರು.

Tight Police security in Suvarna Soudha Belagavi
ಸುವರ್ಣಸೌಧದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

ಬೆಳಗಾವಿ: ಸಂಸತ್​ನಲ್ಲಿ ಭದ್ರತಾ ಲೋಪವಾಗಿರುವ ಹಿನ್ನೆಲೆ ಸುವರ್ಣಸೌಧದಲ್ಲೂ ಇಂದು ಬಿಗಿ ಪೊಲೀಸ್ ಭದ್ರತೆಯನ್ನು ಏರ್ಪಡಿಸಲಾಗಿದೆ. ಸುವರ್ಣಸೌಧದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.‌ ಈ ಸಂಬಂಧ ಸ್ಪೀಕರ್ ಯು ಟಿ ಖಾದರ್ ಸೂಚನೆ ನೀಡಿದ್ದು, ಸುವರ್ಣಸೌಧ ಪ್ರವೇಶಿಸುವ ನಾಲ್ಕು ದ್ವಾರಗಳ ಬಳಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ಸೂಕ್ತ ಪ್ರವೇಶ ಪಾಸ್​ಗಳಿದ್ದರೆ ಮಾತ್ರ ಒಳಗೆ ಹೋಗಲು ಅನುವು ಮಾಡಿಕೊಡಲಾಗುತ್ತಿದೆ.

ಇತ್ತ ಪೊಲೀಸರು ಎಲ್ಲಾ ದ್ವಾರಗಳಲ್ಲಿ ಪಾಸ್​ಗಳನ್ನು ತಪಾಸಣೆ‌ ಮಾಡಿ ಒಳಗೆ ಬಿಡುತ್ತಿದ್ದಾರೆ. ಯಾರ ಬಳಿ ಸೂಕ್ತ ಪಾಸ್ ಇಲ್ಲವೋ, ಅವರನ್ನು ಒಳ ಹೋಗಲು ತಡೆಯುತ್ತಿದ್ದಾರೆ.‌ ಹೀಗಾಗಿ ಸಚಿವರು, ಶಾಸಕರ ಜೊತೆ ಬರುವ ಬೆಂಬಲಿಗರಿಗೆ ಪ್ರವೇಶವನ್ನು ನಿರಾಕರಿಸಲಾಗುತ್ತಿದೆ.‌ ಈ ವೇಳೆ ಪೊಲೀಸರು ಮತ್ತು ಬೆಂಬಲಿಗರ ಮಧ್ಯೆ ಮಾತಿನ‌ ಚಕಮಕಿ ನಡೆಯುತ್ತಿದೆ.‌

ನಿನ್ನೆ ಸಂಸತ್​ನಲ್ಲಿ ಘಟನೆ ನಡೆದ ತಕ್ಷಣ ಚೀಫ್ ಮಾರ್ಷಲ್​ಗಳ ಸಭೆ ಕರೆದು, ಸ್ಪೀಕರ್ ಯು.ಟಿ ಖಾದರ್, ಸದನ ಕಲಾಪದಲ್ಲಿ ಭದ್ರತೆ ಬಿಗಿ ಮಾಡಲು ಸೂಚಿಸಿದ್ದರು. ಈ ಹಿನ್ನೆಲೆ ಸುವರ್ಣಸೌಧದಲ್ಲಿ ನಿನ್ನೆಯೇ ಪೊಲೀಸರು ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಿದ್ದರು.‌ ಸುವರ್ಣಸೌಧದ ವಿಧಾನಸಭೆ ಪ್ರವೇಶ ದ್ವಾರದ ಮಹಡಿಯಲ್ಲಿ ಬ್ಯಾರಿಕೇಡ್​ಗಳನ್ನು ಅಳವಡಿಸಿ ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ. ಇದರ ಜೊತೆಗೆ ಸುವರ್ಣಸೌಧ ಪ್ರವೇಶಿಸುವ ಸಾರ್ವಜನಿಕರನ್ನೂ ಹೆಚ್ಚಿನ ತಪಾಸಣೆ ಮಾಡಿ ಒಳ ಬಿಡಲಾಗುತ್ತಿದೆ.

ಸಂಸತ್​ನಲ್ಲಿ ಭದ್ರತಾ ಲೋಪ: ಬುಧವಾರ ಲೋಕಸಭೆ ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಇಬ್ಬರು ಯುವಕರು ಸದನದೊಳಗೆ ಜಿಗಿದಿದ್ದರು. ಸದನದೊಳಗೆ ಯುವಕರು ಸ್ಮೋಕ್​ ಕ್ರ್ಯಾಕರ್​ ಅನ್ನು ಸ್ಪ್ರೇ ಮಾಡಿದ್ದರು. ಈ ವೇಳೆ ಭಯಗೊಂಡ ಸಚಿವರು ಹಾಗೂ ಸಂಸದರು ಆತಂಕದಿಂದ ಅಡ್ಡಾದಿಡ್ಡಿಯಾಗಿ ಹೊರಗಡೆ ಬಂದಿದ್ದರು. ಇದೇ ಸಮಯಕ್ಕೆ ಹೊರಗಿನ ಗೇಟ್​ ಬಳಿ ಇದ್ದ ಯುವತಿಯೊಬ್ಬಳು ಅದೇ ರೀತಿ ಬಣ್ಣವನ್ನು ಸ್ಪ್ರೇ ಮಾಡಿದ್ದಳು.

2001ರಲ್ಲಿ ಸಂಸತ್ ಭವನದ​ ಮೇಲೆ ದಾಳಿ ನಡೆಸಿದ ಘಟನೆ ಸರಿಯಾಗಿ 22 ವರ್ಷ ತುಂಬಿದ ದಿನವೇ ಮತ್ತೆ ಸಂಸತ್​ನಲ್ಲಿ ಭದ್ರತಾ ಲೋಪವಾಗಿರುವ ಘಟನೆ ಸಂಭವಿಸಿದೆ. ಈ ಘಟನೆಯಲ್ಲಿ ಆರು ಜನ ಭಾಗಿಯಾಗಿದ್ದು, ಈವರೆಗೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಘಟನೆ ನಂತರ ಸಂಸತ್​ನಲ್ಲಿ ಭದ್ರತಾ ತಪಾಸಣೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ. ಇದುವರೆಗೆ ತಪಾಸಣೆ ವೇಳೆ ಶೂ ತಪಾಸಣೆ ಮಾಡದೇ ಇದ್ದ ಭದ್ರತಾ ಸಿಬ್ಬಂದಿ, ಪ್ರತಿಯೊಬ್ಬರ ಶೂಗಳನ್ನು ತಪಾಸಣೆ ನಡೆಸಿ, ಕಳುಹಿಸುತ್ತಿದ್ದಾರೆ.

ಇದನ್ನೂ ಓದಿ: ಸಾರ್ವಜನಿಕರ ನೈಜತೆ ನೋಡಿಕೊಂಡು ವಿಧಾನಸಭೆಗೆ ಪಾಸ್ ವಿತರಿಸಲು ಸ್ಪೀಕರ್ ಯು ಟಿ ಖಾದರ್ ಸೂಚನೆ

Last Updated : Dec 14, 2023, 1:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.