ETV Bharat / state

ವೈದ್ಯರ ಕಡ್ಡಾಯ ಗ್ರಾಮೀಣ ಸೇವೆಗೆ ವಿನಾಯಿತಿ ನೀಡುವ ವಿಧೇಯಕ ಸೇರಿ 3 ವಿಧೇಯಕ ಮಂಡನೆ

author img

By ETV Bharat Karnataka Team

Published : Dec 5, 2023, 8:57 PM IST

Three Bills tabled in Assembly Session: ಕರಾವಳಿ ಅಭಿವೃದ್ಧಿ ಮಂಡಳಿ ವಿಧೇಯಕ, ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ (ತಿದ್ದುಪಡಿ) ವಿಧೇಯಕ ಹಾಗೂ ಕಡ್ಡಾಯ ಸೇವಾ (ತಿದ್ದುಪಡಿ) ವಿಧೇಯಕಗಳನ್ನು ಅಧಿವೇಶನದಲ್ಲಿ ಮಂಡಿಸಲಾಯಿತು.

Assembly Session
ವಿಧಾನಸಭೆ ಅಧಿವೇಶನ

ಬೆಳಗಾವಿ: ವೈದ್ಯರ ಕಡ್ಡಾಯ ಗ್ರಾಮೀಣ ಸೇವೆಗೆ ವಿನಾಯಿತಿ ನೀಡುವ ಕರ್ನಾಟಕ ವೈದ್ಯಕೀಯ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ (ತಿದ್ದುಪಡಿ) ವಿಧೇಯಕ ಸೇರಿದಂತೆ ಮೂರು ವಿಧೇಯಕಗಳನ್ನು ವಿಧಾನಸಭೆ ಕಲಾಪದಲ್ಲಿ ಮಂಡಿಸಲಾಯಿತು.

ಕರಾವಳಿ ಅಭಿವೃದ್ಧಿ ಮಂಡಳಿ ವಿಧೇಯಕ, ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ (ತಿದ್ದುಪಡಿ) ವಿಧೇಯಕವನ್ನು ಮಂಡಿಸಲಾಯಿತು. ಕರ್ನಾಟಕ ವೈದ್ಯಕೀಯ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ (ತಿದ್ದುಪಡಿ) ವಿಧೇಯಕವನ್ನು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ (ತಿದ್ದುಪಡಿ) ವಿಧೇಯಕವನ್ನು ಗ್ರಾಮೀಣಾವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಮತ್ತು ಕರಾವಳಿ ಅಭಿವೃದ್ಧಿ ಮಂಡಳಿಯನ್ನು ಯೋಜನೆ ಸಚಿವ ಡಿ. ಸುಧಾಕರ್ ಪರವಾಗಿ ಕಾನೂನು ಸಚಿವ ಎಚ್‌.ಕೆ.ಪಾಟೀಲ್‌ ಮಂಡಿಸಿದರು.

ಕಡ್ಡಾಯ ಗ್ರಾಮೀಣ ಸೇವೆಯಿಂದ ವಿನಾಯಿತಿ: ಕರ್ನಾಟಕ ವೈದ್ಯಕೀಯ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ (ತಿದ್ದುಪಡಿ) ವಿಧೇಯಕದ ಮೂಲಕ ಕೇಂದ್ರ ಅಥವಾ ರಾಜ್ಯ ಸರ್ಕಾರಿ ಸೇವೆಗೆ ಆಯ್ಕೆಯಾದ ವೈದ್ಯಕೀಯ ಅಭ್ಯರ್ಥಿಗಳಿಗೆ ಒಂದು ವರ್ಷದ ಕಡ್ಡಾಯ ಗ್ರಾಮೀಣ ಸೇವೆಯಿಂದ ವಿನಾಯಿತಿ ನೀಡಲಿದೆ. ವೈದ್ಯಕೀಯ ಕೋರ್ಸ್‌ ಪೂರ್ಣಗೊಳಿಸಿದ ಬಳಿಕ ಒಂದು ವರ್ಷ ಕಡ್ಡಾಯವಾಗಿ ಗ್ರಾಮೀಣ ಸೇವೆ ಮಾಡಬೇಕಿತ್ತು. ಈ ವಿಧೇಯದಿಂದಾಗಿ ಇದಕ್ಕೆ ವಿನಾಯಿತಿ ನೀಡಲಾಗಿದೆ.

ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ ಪೂರ್ಣಗೊಳಿಸಿದ ವಿದ್ಯಾಥಿಗಳು ಒಂದು ವರ್ಷಗಳ ಕಾಲ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಬೇಕು. ಅವರನ್ನು ಸೀನಿಯರ್‌ ರೆಸಿಡೆಂಟ್‌ ಎಂದು ಗುರುತಿಸಿ, ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ತಜ್ಞ ವೈದ್ಯ ಕನಿಷ್ಠ ಸಂಬಳಕ್ಕಿಂತ ನೂರು ರೂ. ಕಡಿಮೆಗೆ ಸಮನಾಗಿ ವೃತ್ತಿ ವೇತನ ನೀಡಬೇಕು ಎಂದು ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.

ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ: ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕವನ್ನು ಮಂಡಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ, ಶಿವಮೊಗ್ಗ ಹಾಗೂ ಶಿಕಾರಿಪುರ ತಾಲೂಕುಗಳನ್ನು ಹೊರತುಪಡಿಸಿ ಉಳಿದ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿಗೆ ಜನಸಂಖ್ಯೆ ಮಿತಿ ನಿಯಮಿಸಿ ಚುನಾವಣೆ ನಡೆಸಲು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯಿತ್ ರಾಜ್ ನಿಯಮಕ್ಕೆ ರಾಜ್ಯ ಸರ್ಕಾರ ತಿದ್ದುಪಡಿ ತಂದಿದೆ.

ಈ ಹಿಂದೆ ಸಂಪುಟದಲ್ಲಿ ತೆಗೆದುಕೊಂಡ ನಿರ್ಣಯದ ಹಿನ್ನೆಲೆಯಲ್ಲಿ ಈ ತಿದ್ದುಪಡಿ ವಿಧೇಯಕವನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯಿತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಗುರುವಾರ ವಿಧಾನಸಭೆಯಲ್ಲಿ ಮಂಡಿಸಿದ್ದಾರೆ. ನ್ಯಾಯಾಲಯದಲ್ಲಿ ಸಲ್ಲಿಕೆಯಾದ ರಿಟ್ ಅರ್ಜಿ ಹಿನ್ನೆಲೆಯಲ್ಲಿ ಈ ವಿಧೇಯಕ ಜಾರಿಗೆ ತರಲಾಗಿದೆ. ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ಜನಸಂಖ್ಯೆ ಅನುಗುಣವಾಗಿ ಚುನಾವಣೆ ನಡೆಸುವ ವಿಧೇಯಕ ಇದಾಗಿದೆ.

ಕರಾವಳಿ ಅಭಿವೃದ್ಧಿ ಮಂಡಳಿ ವಿಧೇಯಕ: ಕರಾವಳಿ ಪ್ರದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಕರಾವಳಿ ಅಭಿವೃದ್ಧಿ ಮಂಡಳಿ ರಚಿಸುವ ಅವಶ್ಯಕವೆಂದು ಪರಿಗಣಿಸಿ, ಕರಾವಳಿ ಅಭಿವೃದ್ಧಿ ಮಂಡಳಿ ವಿಧೇಯಕವನ್ನು ಮಂಡಿಸಲಾಗಿದೆ. ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ದಕ್ಷಿಣಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನು ಬೇರ್ಪಡಿಸಿ ಕರಾವಳಿ ಅಭಿವೃದ್ಧಿ ಮಂಡಳಿ ರಚಿಸುವ ಉದ್ದೇಶದಿಂದ ಕರಾವಳಿ ಅಭಿವೃದ್ಧಿ ಮಂಡಳಿ ವಿಧೇಯಕ ರೂಪಿಸಲಾಗಿದೆ. ಕರಾವಳಿ ಪ್ರದೇಶದಲ್ಲಿನ ಜಲ ಸಂಪನ್ಮೂಲಗಳ ಅಭಿವೃದ್ಧಿ ಹಾಗೂ ಸಂರಕ್ಷಣೆ ಉತ್ತೇಜಿಸುವುದು ವಿಧೇಯಕದ ಉದ್ದೇಶವಾಗಿದೆ.

ಇದನ್ನೂ ಓದಿ: ಹರೀಶ್ ಪೂಂಜಾ ಹಕ್ಕುಚ್ಯುತಿ ಪ್ರಸ್ತಾವನೆ ಅಂಗೀಕಾರ; ಹಕ್ಕು ಬಾಧ್ಯತಾ ಸಮಿತಿಗೆ ವಹಿಸಿದ ಸ್ಪೀಕರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.