ETV Bharat / state

ಬಿಜೆಪಿಯಲ್ಲಿ ಕಿರುಕುಳ ಅನುಭವಿಸುವವರು ಕಾಂಗ್ರೆಸ್​ಗೆ ಬರಬಹುದು: ಗೃಹ ಸಚಿವ ಪರಮೇಶ್ವರ ಸ್ವಾಗತ

author img

By

Published : Aug 18, 2023, 1:37 PM IST

Updated : Aug 18, 2023, 8:41 PM IST

G Parmeshwar invite BJP MLAs to Congress: ನಮ್ಮಿಂದ ಹೋದ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದನ್ನು ಗಮನಿಸಿ, ಈ ಮಾತನ್ನು ಹೇಳುತ್ತಿದ್ದೇನೆ ಎಂದು ಡಾ ಜಿ ಪರಮೇಶ್ವರ್​ ಹೇಳಿದ್ದಾರೆ.

Home Minister Dr G Parameshwar
ಗೃಹ ಸಚಿವ ಡಾ ಜಿ ಪರಮೇಶ್ವರ್​

ಗೃಹ ಸಚಿವ ಡಾ ಜಿ ಪರಮೇಶ್ವರ್​

ಬೆಳಗಾವಿ: ನಮ್ಮಲ್ಲಿಂದ ಹೋಗಿರುವ ಶಾಸಕರಿಗೆ ಬಿಜೆಪಿಯಲ್ಲಿ ಕಿರುಕುಳ ಇರೋದು ಸತ್ಯವಾದರೆ, ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿ ಬಂದರೆ ಸ್ವಾಗತ ಎಂದು ಗೃಹ ಸಚಿವ ಜಿ ಪರಮೇಶ್ವರ ತಿಳಿಸಿದ್ದಾರೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜತೆಗೆ ಮಾತನಾಡಿದ ಅವರು, ನಾವು ಯಾರಿಗೂ ಬರಬೇಡಿ ಅಂತ ಹೇಳಿಲ್ಲ. ನಮ್ಮ ಸಿದ್ಧಾಂತ ಒಪ್ಪಿ ಬರೋದಾದರೆ ಬರಲಿ ಅವರನ್ನು ಸ್ವಾಗತ ಮಾಡುತ್ತೇವೆ. ಯಾವ ಶಾಸಕರು ಬರ್ತಾರೆ ಅಂತ ನನಗೆ ಗೊತ್ತಿಲ್ಲ. ಆದರೆ, ಬರ್ತಾರೆ ಎನ್ನುವ ಮಾತಿದೆ ಬರುವವರನ್ನು ನಾವು ಕರೆದುಕೊಳ್ಳುತ್ತೇವೆ ಎಂದರು.

135 ಶಾಸಕರಿದ್ದರೂ ಬೇರೆ ಶಾಸಕರ ಅವಶ್ಯಕತೆ ಇದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಅವಶ್ಯಕತೆ ಪ್ರಶ್ನೆ ಅಲ್ಲ, ಅವರು ನಮ್ಮ ಕಾಂಗ್ರೆಸ್ ಪಕ್ಷದ ನಾಯಕತ್ವ, ಸಿದ್ದಾಂತ ಒಪ್ಪುವುದಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬರಬೇಕಾಗುತ್ತೆ ಎಂದರು. ಬಿಜೆಪಿಯಲ್ಲಿ ನಮಗೆ ಕಿರುಕುಳ ಕೊಡ್ತಿದ್ದಾರೆ ಎಂಬ ಶಿವರಾಮ್ ಹೆಬ್ಬಾರ್ ಹೇಳಿಕೆ ವಿಚಾರದ ಕುರಿತು ಮಾತನಾಡಿ, ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ನಮ್ಮಲ್ಲಿಂದ ಹೋದ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಆದರೆ, ಅದು ಸತ್ಯವಾಗಿದ್ದರೆ ಬಿಜೆಪಿ ಬಿಟ್ಟು ಬರಬಹುದು ಎಂದು ಪರಮೇಶ್ವರ ಬಹಿರಂಗವಾಗಿ ತಮ್ಮ ಹಳೇ ಸ್ನೇಹಿತರಿಗೆ ಸ್ವಾಗತಿಸಿದರು.

ಪಕ್ಷ ಬಿಟ್ಟು ಹೋದವರು ನಿಮ್ಮನ್ನು ಸಂಪರ್ಕ ಮಾಡಿದ್ದಾರಾ ಎಂಬ ಪ್ರಶ್ನೆಗೆ, ನನ್ನನ್ನು ಯಾರೂ ಸಂಪರ್ಕ ಮಾಡಿಲ್ಲ. ಆದರೆ, ಅಧ್ಯಕ್ಷರಿಗೆ ಸಂಪರ್ಕ ಮಾಡಿರಬಹುದು ಎಂದ ಪರಮೇಶ್ವರ್​, ಸರ್ಕಾರ ಉಳಿಸಲು ಕಾಂಗ್ರೆಸ್ ಆಪರೇಷನ್ ಅನಿವಾರ್ಯತೆ ಇದೆಯಾ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಅನಿವಾರ್ಯತೆ ಏನಿಲ್ಲ, ನಾವೇನೂ ಯಾವುದೇ ಆಪರೇಷನ್ ಮಾಡ್ತಿಲ್ಲ. ಅವರು ರಾಜೀನಾಮೆ ಕೊಟ್ಟು ಪಕ್ಷ ಸೇರ್ತೀವಿ ಅಂದಾಗ ಬೇಡ ಎನ್ನುವುದಿಲ್ಲ ಎಂದರು.

ದಲಿತ ಸಿಎಂ ಕೂಗು ವಿಚಾರಕ್ಕೆ ರಾಜ್ಯದಲ್ಲಿ ಈಗ ಸುಭದ್ರ ಕಾಂಗ್ರೆಸ್ ಸರ್ಕಾರವಿದೆ.‌ ನಾವೀಗ ಐದು ಗ್ಯಾರಂಟಿಗಳನ್ನು ಕೊಟ್ಟು, ಜನ ಸಾಮಾನ್ಯರಿಗೆ ಕೊಟ್ಟ ಬೇಡಿಕೆಗಳನ್ನು ಈಡೇರಿಸುತ್ತಿದ್ದೇವೆ. ಹಾಗಾಗಿ ಈ ಸಂದರ್ಭದಲ್ಲಿ ಇಂತಹ ಮಾತುಗಳು ಕೇಳಿ ಬರಬಾರದು ಎಂದರು. ಇನ್ನು, ಅಧಿಕಾರ ಹಂಚಿಕೆ ವೇಳೆ ನಿಮಗೆ ಮುಖ್ಯಮಂತ್ರಿ ಸ್ಥಾನ ಸಿಗುತ್ತಾ ಎಂಬ ಬಗ್ಗೆ, ಯಾರು ಹೇಳಿದ್ರೂ ನಿಮಗೆ..? 50:50 ಅಧಿಕಾರ ಹಂಚಿಕೆ ಎಂದು ಪ್ರಶ್ನಿಸಿದ ಪರಮೇಶ್ವರ್​, ಇದೆಲ್ಲಾ ನೀವೇ ಕ್ರಿಯೇಟ್ ಮಾಡ್ತಿರೋದು ಎಂದರು.

ಹಿಂಡಲಗಾ ಜೈಲಿನಲ್ಲಿ ಅಕ್ರಮ, ಕೈದಿಗಳಿಗೆ ಕಿರುಕುಳ ವಿಚಾರದ ಕುರಿತು ಮಾತನಾಡಿದ ಅವರು, ಈ ಬಗ್ಗೆ ನಾನು ಕೇಳಿದ್ದೇನೆ, ಬೆಳಗಾವಿಯ ಹಿಂಡಲಗಾ ಜೈಲಿಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಕಳೆದ ಬಾರಿ ನಾನು ಗೃಹ ಸಚಿವನಾಗಿದ್ದಾಗಲೂ, ಹಿಂಡಲಗಾ ಜೈಲಿಗೆ ಭೇಟಿ ಕೊಟ್ಟಿದ್ದೆ. ಆಗ ಇಂತಹ ಪ್ರಕರಣ ಬೆಳಕಿಗೆ ಬಂದಿರಲಿಲ್ಲ. ಈಗ ಇಂತಹ ಘಟನೆಗಳು ಹೊಸದಾಗಿ ಕೇಳಿ ಬರುತ್ತಿವೆ. ಸದ್ಯದಲ್ಲೇ ಭೇಟಿ ಕೊಟ್ಟು ಅಕ್ರಮ ಕಡಿವಾಣ ಹಾಕಲು ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಪರಮೇಶ್ವರ ಸ್ಪಷ್ಟಪಡಿಸಿದರು.

ಜೈನಮುನಿ ಹತ್ಯೆ ಪ್ರಕರಣದ ತನಿಖೆ ಎಲ್ಲಿಗೆ ಬಂದಿತು ಎಂಬ ಪ್ರಶ್ನೆಗೆ, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಒಂದು ಸಮುದಾಯಕ್ಕೆ ಬೇರೆ ಸಂದೇಶ ಹೋಗಿದೆ ಎಂದು ಸಿಐಡಿಗೆ ಪ್ರಕರಣ ವರ್ಗಾಯಿಸಲಾಗಿದೆ. ಈಗ ತನಿಖೆ ನಡೆಯುತ್ತಿದೆ, ಇದರ ನಡುವೆ ತನಿಖಾ ವಿಚಾರಗಳನ್ನು ಹೇಳಲು‌ ಆಗಲ್ಲ. ತನಿಖೆ ಪೂರ್ಣಗೊಂಡ ಬಳಿಕ ಎಲ್ಲ ವಿಚಾರಗಳನ್ನು ಬಹಿರಂಗ ಪಡಿಸುತ್ತೇವೆ, ಯಾವುದು ಮುಚ್ಚಿಡುವುದಿಲ್ಲ ಎಂದರು.

ಸುಧಾಮ್ ದಾಸ್​ಗೆ ಪರಿಷತ್ತು ಟಿಕೆಟ್ ಕೊಟ್ಟಿದ್ದಕ್ಕೆ ಹೈಕಮಾಂಡ್​ಗೆ ಪತ್ರ ಬರೆದಿರುವ ವಿಚಾರದ ಕುರಿತು, ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ಪಕ್ಷದಲ್ಲಿ ಅವರಿಗಿಂತ ಹೆಚ್ಚು ದುಡಿದವರು ಬಹಳಷ್ಟಿದ್ದು, ಹಾಗಾಗಿ ಅವರನ್ನು ಪರಿಗಣಿಸಬಹುದಿತ್ತು. ಆದರೆ, ನಾವು ಅಂತಿಮವಾಗಿ ಹೈಕಮಾಂಡ್ ನಿರ್ಧಾರ ಒಪ್ಪಿಕೊಳ್ಳಬೇಕಾಗುತ್ತೆ. ಸುಧಾಮ್ ದಾಸ್​ ಅವರನ್ನು ಪರಿಗಣಿಸಿದ್ದು ಸರಿ ಇದೆಯಾ ಎಂಬ ಪ್ರಶ್ನೆಗೆ, ಹೈಕಮಾಂಡ್ ದೃಷ್ಟಿಯಲ್ಲಿ ಸರಿ ಇದೆ, ಹಾಗಾಗಿ ಒಪ್ಪಿಕೊಳ್ಳಬೇಕಾಗಿದೆ. ಇದರಲ್ಲಿ ನಮ್ಮ ದೃಷ್ಟಿ ಪ್ರಶ್ನೆ ಬರಲ್ಲ, ಹೈಕಮಾಂಡ್ ದೃಷ್ಟಿಯೇ ಬರೋದು ಎಂದರು.

ಆರು ತಿಂಗಳಲ್ಲಿ ಸರ್ಕಾರ ಪತನವಾಗುತ್ತೆ ಎಂಬ ಯತ್ನಾಳ ಭವಿಷ್ಯ ವಿಚಾರಕ್ಕೆ, ಅವರು ಬಹಳ ಬಹಳ ಭವಿಷ್ಯ ಹೇಳುತ್ತಾ ಇರುತ್ತಾರೆ ಎಂದಷ್ಟೇ ಹೇಳಿದರು.

ಇದನ್ನೂ ಓದಿ: S T Somashekhar: ಎಲ್ಲವನ್ನೂ ಸರಿಪಡಿಸುವುದಾಗಿ ನಾಯಕರು ತಿಳಿಸಿದ್ದಾರೆ, ವಿಶ್ವಾಸವಿಡುವಂತೆ ಬೆಂಬಲಿಗರಿಗೆ ಸೂಚಿಸಿದ್ದೇನೆ- ಎಸ್.ಟಿ.ಸೋಮಶೇಖರ್

Last Updated : Aug 18, 2023, 8:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.