ETV Bharat / state

ಚಳಿಗಾಲದ ಅಧಿವೇಶನ: ವಿಧಾನಸಭೆಯಲ್ಲಿ 10 ವಿವಿಧ ಮಸೂದೆಗಳಿಗೆ ಅಂಗೀಕಾರ

author img

By ETV Bharat Karnataka Team

Published : Dec 14, 2023, 7:01 AM IST

Belagavi winter session: ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಬುಧವಾರ 10 ವಿವಿಧ ಮಸೂದೆಗಳಿಗೆ ಅಂಗೀಕಾರ ನೀಡಲಾಯಿತು.

suvarna soudha
ಸುವರ್ಣ ಸೌಧ

ಬೆಳಗಾವಿ: ವಿಧಾನಸಭೆಯಲ್ಲಿ ಬುಧವಾರ 10 ವಿವಿಧ ಮಸೂದೆಗಳಿಗೆ ಅಂಗೀಕಾರ ನೀಡಲಾಯಿತು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಂಡಿಸಿದ 2023 ನೇ ಸಾಲಿನ ಬೃಹತ್​​ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ವಿಧೇಯಕ, ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಮಂಡಿಸಿದ 2023ನೇ ಸಾಲಿನ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ವಿಧೇಯಕ ಹಾಗೂ 2023ನೇ ಸಾಲಿನ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (2ನೇ ತಿದ್ದುಪಡಿ) ವಿಧೇಯಕವನ್ನು ಅಂಗೀಕರಿಸಲಾಯಿತು.

ಗೃಹ ಸಚಿವ ಡಾ. ಜಿ. ಪರಮೇಶ್ವರ್​ ಅವರು ಮಂಡಿಸಿದ 2023ನೇ ಸಾಲಿನ ಕರ್ನಾಟಕ ಸಾರ್ವಜನಿಕ ಪರೀಕ್ಷೆ (ನೇಮಕಾತಿಯಲ್ಲಿನ ಭ್ರಷ್ಟಾಚಾರ ಮತ್ತು ಅನುಚಿತ ವಿಧಾನಗಳ ಪ್ರತಿಬಂಧಕ ಕ್ರಮಗಳು) ವಿಧೇಯಕ ಅಂಗೀಕೃತವಾಯಿತು. ಕಾನೂನು, ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಹೆಚ್ ಕೆ ಪಾಟೀಲ ಅವರು ಮಂಡಿಸಿದ 2023ನೇ ಸಾಲಿನ ಕರ್ನಾಟಕ ಉಚ್ಚ ನ್ಯಾಯಾಲಯ (ತಿದ್ದುಪಡಿ) ವಿಧೇಯಕ, 2023ನೇ ಸಾಲಿನ ಕರ್ನಾಟಕ ಸಿವಿಲ್ ನ್ಯಾಯಾಲಯಗಳ (ತಿದ್ದುಪಡಿ) ವಿಧೇಯಕ, 2023ನೇ ಸಾಲಿನ ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ವಿಧೇಯಕ, ನಗರಾಭಿವೃದ್ಧಿ ಮತ್ತು ನಗರ ಯೋಜನಾ ಸಚಿವ ಬಿ ಎಸ್ ಸುರೇಶ್​ ಅವರ ಪರವಾಗಿ ಮಂಡಿಸಿದ 2023ನೇ ಸಾಲಿನ ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ, ಸಮಾಜ ಕಲ್ಯಾಣ ಸಚಿವ ಎಚ್ ಸಿ ಮಹಾದೇವಪ್ಪ ಅವರು ಮಂಡಿಸಿದ 2023ನೇ ಸಾಲಿನ ಕರ್ನಾಟಕ ಅನುಸೂಚಿತ ಜಾತಿಗಳ ಉಪ ಹಂಚಿಕೆ ಮತ್ತು ಬುಡಕಟ್ಟು ಉಪ ಹಂಚಿಕೆ (ಹಂಚಿಕೆ ಮಾಡಬಹುದಾದ ಆಯವ್ಯಯ ರೂಪಿಸುವುದು, ಆರ್ಥಿಕ ಸಂಪನ್ಮೂಲಗಳ ಹಂಚಿಕೆ ಮತ್ತು ಬಳಕೆ) (ತಿದ್ದುಪಡಿ) ವಿಧೇಯಕಗಳನ್ನು ಸದನದಲ್ಲಿ ಅಂಗೀಕರಿಸಲಾಯಿತು.

ಹಿಂದುಳಿದ ವರ್ಗಗಳ ಸಮುದಾಯದಲ್ಲಿರುವ ನಿರುದ್ಯೋಗ ಸಮಸ್ಯೆ ನಿವಾರಿಸಲು ಹಾಗೂ ಒಂದು ಕೋಟಿ ರೂ. ವರೆಗಿನ ಟೆಂಡರ್‌ನಲ್ಲಿ ಭಾಗವಹಿಸಲು ಅನುಕೂಲವಾಗುವ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ಎರಡನೇ ತಿದ್ದುಪಡಿ) ವಿಧೇಯಕ-2023 ಸೇರಿ ಎರಡು ವಿಧೇಯಕಗಳು ಅಂಗೀಕಾರಗೊಂಡಿತು. ಹಿಂದುಳಿದ ವರ್ಗಗಳ ಗುತ್ತಿಗೆದಾರರನ್ನು ಪ್ರೋತ್ಸಾಹಿಸಲು ಹಾಗೂ ನಿರ್ದಿಷ್ಟಪಡಿಸಿದ ಹಿಂದುಳಿದ ಜಾತಿಗಳಿಗೆ ಸೇರಿದ ಟೆಂಡರ್‌ದಾರರು ಮಾತ್ರ ಟೆಂಡರ್ ಪಡೆಯಲು ವಿಧೇಯಕ ಅವಕಾಶ ಕಲ್ಪಿಸಿದೆ.

ಇದನ್ನೂ ಓದಿ: 3542.10 ಕೋಟಿ ರೂ. ಮೊತ್ತದ ಮೊದಲ ಕಂತಿನ ಪೂರಕ ಅಂದಾಜು ವೆಚ್ಚಗಳಿಗೆ ವಿಧಾನಸಭೆ ಅಂಗೀಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.