ETV Bharat / state

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಾಮಗಾರಿ ವಿಳಂಬ: ಸಾರ್ವಜನಿಕರಿಂದ ಆಕ್ರೋಶ..!

author img

By

Published : Aug 10, 2020, 6:01 PM IST

ಬೆಳಗಾವಿಯ ಜಿಲ್ಲಾಸ್ಪತ್ರೆ ಆವರಣದೊಳಗೆ ನಿರ್ಮಿಸಲಾಗುತ್ತಿರುವ ಸೂಪರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿಗೆ, ನೀಡಲಾಗಿರುವ ಅವಧಿ ಮುಗಿದು ವರ್ಷಗಳೇ ಕಳೆದರೂ ಈವರೆಗೂ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ.

Super specialty hospital delay
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಾಮಗಾರಿ ವಿಳಂಬ

ಬೆಳಗಾವಿ: ಉತ್ತಮ ಆರೋಗ್ಯ ಸೇವೆ ಒದಗಿಸುವ ಸದುದ್ದೇಶದಿಂದ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳ ಹಿಂದೆಯೇ ಚಾಲನೆ ನೀಡಲಾಗಿದ್ದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಾಮಗಾರಿ ವಿಳಂಬಕ್ಕೆ, ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಕೊರೊನಾ ಹೊಡತಕ್ಕೆ ನಲುಗಿದ ಜಿಲ್ಲೆಯ ಜನರಿಗೆ ಸೂಕ್ತ ಚಿಕಿತ್ಸೆಯ ಜೊತೆಗೆ, ಗುಣಮಟ್ಟದ ಆರೋಗ್ಯ ಸೇವೆ ಇಲ್ಲದೇ ಪರದಾಡುವಂತಾಗಿದೆ.

ನಗರದ ಜಿಲ್ಲಾಸ್ಪತ್ರೆ ಆವರಣದೊಳಗೆ ನಿರ್ಮಿಸಲಾಗುತ್ತಿರುವ ಸೂಪರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿಗೆ ನೀಡಲಾಗಿರುವ ಅವಧಿ ಮುಗಿದು, ವರ್ಷಗಳೇ ಕಳೆದರೂ ಈವರೆಗೂ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಪರಿಣಾಮ ಇಡೀ ವಿಶ್ವವನ್ನೇ ಕಾಡುತ್ತಿರೋ ಕೊರೊನಾ ವೈರಸ್​​ನಿಂದಾಗಿ ಸಣ್ಣಪುಟ್ಟ ಹಾಗೂ ದೊಡ್ಡ ಖಾಸಗಿ ಆಸ್ಪತ್ರೆಗಳಲ್ಲಿ ಸಾರ್ವಜನಿಕರಿಗೆ ಚಿಕಿತ್ಸೆ ನಿರಾಕರಿಸಲಾಗುತ್ತಿದ್ದು, ಒಂದು ವೇಳೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಮುಂದಾದರೂ ಸಾರ್ವಜನಿಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿವೆ ಎಂಬ ಸಾಕಷ್ಟು ಆರೋಪಗಳಿವೆ.

ಹೀಗಾಗಿ ಜಿಲ್ಲೆಯಲ್ಲಿ ಸಾಮಾನ್ಯ ಹಾಗೂ ಕೊರೊನಾಗೆ ತುತ್ತಾದ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಜೊತೆಗೆ ಬೆಡ್‌ಗಳ ವ್ಯವಸ್ಥೆಗಳಿಲ್ಲ ಎಂಬ ಆರೋಪವೂ ಕೇಳಿಬರುತ್ತಿದೆ. ಇದರಿಂದಾಗಿ ಅನಾರೋಗ್ಯಕ್ಕೆ ತುತ್ತಾದ ಸಾರ್ವಜನಿಕರಿಗೆ ಸೂಕ್ತ ಚಿಕಿತ್ಸೆ ಲಭ್ಯವಾಗದ ಹಿನ್ನೆಲೆ, ಸಾವಿನ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ ಎನ್ನಲಾಗಿದೆ.

ಇನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನೀಡಿದ ಗಡುವು ಮುಗಿದರೂ ಸಂಬಂಧಿಸಿದ ಗುತ್ತಿಗೆದಾರನ ವಿರುದ್ಧ, ಜಿಲ್ಲಾಡಳಿತ ಈವರೆಗೂ ಕ್ರಮಕೈಗೊಳ್ಳದೇ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಒಂದು ವೇಳೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ನಿಗಧಿತ ವೇಳೆಗೆ ಪೂರ್ಣಗೊಂಡಿದ್ರೆ, ಜಿಲ್ಲೆಯಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಕೊರೊನಾ ವೈರಸ್ ಹತೋಟಿಯ ಜೊತೆಗೆ ಜಿಲ್ಲೆಯ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಬಹುದಿತ್ತು ಎನ್ನಲಾಗಿದೆ.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಾಮಗಾರಿ ವಿಳಂಬ

ಮಾಜಿ ಸಿಎಂ ಸಿದ್ದರಾಮಯ್ಯ ಅವಧಿಯಲ್ಲಿ ಘೋಷಣೆ:

ಬೆಳಗಾವಿ ಬಿಮ್ಸ್ ಆಸ್ಪತ್ರೆಯ ಆವರಣದಲ್ಲಿ 140 ಕೋಟಿ ರೂ. ವೆಚ್ಚದಲ್ಲಿ 219 ಹಾಸಿಗೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸಲಾಗುತ್ತಿದೆ. ಇದನ್ನು 2015ರಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯನವರು ಬಜೆಟ್‌ನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಣೆ ಮಾಡಿದ್ದರು. ಆದ್ರೆ, ಅನುದಾನ ಬಿಡುಗಡೆಯಾಗದ ಹಿನ್ನೆಲೆ ಯೋಜನೆ ನನೆಗುದಿಗೆ ಬಿದ್ದಿತ್ತು.

ನಂತರ ಮತ್ತೊಮ್ಮೆ ಅಂದ್ರೆ 2017-18ರ ಬಜೆಟ್‌ನಲ್ಲಿ ಆಸ್ಪತ್ರೆ ಘೋಷಣೆ ಮಾಡಿ ಅನುದಾನ ಬಿಡುಗಡೆಗೊಳಿಸಿದ್ದರು. ಅದರಂತೆ 2018ರ ಮಾರ್ಚ್​​​ನಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆದ್ರೆ ಈವರೆಗೆ ಶೇ.60ಕ್ಕೂ ಕಡಿಮೆ ಕಾಮಗಾರಿ ಪೂರ್ಣಗೊಂಡಿದೆ. ಇನ್ನು ಗುತ್ತಿಗೆದಾರನಿಗೆ ನೀಡಲಾಗಿದ್ದ 18 ತಿಂಗಳ ಕಾಲಾವಧಿಯೂ ಮುಗಿದು ಹೋಗಿದೆ. ಬಾಕಿ ಕಾಮಗಾರಿ ಪೂರ್ಣಗೊಳ್ಳಬೇಕಾದರೆ ಇನ್ನೂ ಎರಡು ವರ್ಷ ಬೇಕು ಎನ್ನಲಾಗುತಿದೆ. ಹೀಗಾಗಿ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ವಿಳಂಬಕ್ಕೆ ಜಿಲ್ಲೆಯ ಸಚಿವರ ತರಾಟೆ:

ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಿದ್ದ ಈಗಿನ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹಾಗೂ ಸತೀಶ ಜಾರಕಿಹೊಳಿ ಕಾಮಗಾರಿ ಪರಿಶೀಲನೆ ನಡೆಸಿ, ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದರು. ಆದರೀಗ ಜಿಲ್ಲೆಯಲ್ಲಿ ಓರ್ವ ಕೇಂದ್ರ ಸಚಿವ, ಡಿಸಿಎಂ ಸೇರಿದಂತೆ ಐವರು ಪ್ರಭಾವಿ ಸಚಿವರಿದ್ದರೂ ಕಾಮಗಾರಿ ಮಾತ್ರ ಅಮೆ ಗತಿಯಲ್ಲಿಯೇ ಸಾಗುತ್ತಿದೆ. ಸಾರ್ವಜನಿಕರ ಗೋಳು ಈ ಪ್ರಭಾವಿ ರಾಜಕಾರಣಿಗಳಿಗೆ ಕೇಳಿಸುತ್ತಿಲ್ಲವೇ ಎಂಬುವುದು ಸಾರ್ವಜನಿಕರ ಅಳಲು.

ಜಿಲ್ಲಾಸ್ಪತ್ರೆಗೆ ಹೆಚ್ಚಿದ ಒತ್ತಡ:

ಬೆಳಗಾವಿ ಜಿಲ್ಲೆ 50 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದೆ. ಇಂತಹ ಸಂದರ್ಭದಲ್ಲಿ ಇಡೀ ವಿಶ್ವವನ್ನೇ ಕಾಡುತ್ತಿರೋ ಮಹಾಮಾರಿ ಕೊರೊನಾ ಕುಂದಾನಗರಿಯನ್ನು ಇನ್ನಿಲ್ಲದಂತೆ ಕಾಡುತ್ತಿದ್ದು, ಇಡೀ ಬಿಮ್ಸ್ ಆಸ್ಪತ್ರೆಯನ್ನು ಈಗಾಗಲೇ ಕೋವಿಡ್ ವಾರ್ಡ್ ಆಗಿ ಪರಿವರ್ತನೆ ಮಾಡಲಾಗಿದೆ. ಇದರಿಂದ ಜಿಲ್ಲೆಯ ಜನರಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ಉತ್ತಮ ಸರಕಾರಿ ಆಸ್ಪತ್ರೆ ಜಿಲ್ಲೆಯಲ್ಲಿ ಇಲ್ಲದಂತಾಗಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಬಡವರ ಹಣ ಲೂಟಿ..?

ಕೊರೊನಾ ಹೊಡೆತಕ್ಕೆ ಅಂಜಿದ ಜಿಲ್ಲೆಯ ಸಣ್ಣಪುಟ್ಟ ಹಾಗೂ ದೊಡ್ಡ ಆಸ್ಪತ್ರೆಗಳಲ್ಲಿ ಕೊರೊನಾ ವೈರಸ್ ನೆಪವೊಡ್ಡಿ ಚಿಕಿತ್ಸೆ ನಿರಾಕರಿಸಲಾಗುತ್ತಿದೆ ಎನ್ನಲಾಗಿದೆ. ಆದರೀಗ ಜಿಲ್ಲಾಸ್ಪತ್ರೆಯನ್ನು ಕೋವಿಡ್ ವಾರ್ಡ್ ಆಗಿ ಪರಿವರ್ತನೆ ಮಾಡಿರೋದ್ರಿಂದ, ಜಿಲ್ಲೆಯ ಬಹುತೇಕ ಜನರು ಖಾಸಗಿ ಆಸ್ಪತ್ರೆಗಳನ್ನು ನೆಚ್ಚಿಕೊಂಡಿದ್ದಾರೆ.

ಪರಿಣಾಮ, ಸಾರ್ವಜನಿಕರು ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆ ಪಡೆಯಲು ಹೋದ್ರೆ ಅಲ್ಲಿ ಕೊರೊನಾ ವೈರಸ್ ನೆಪವೊಡ್ಡಿ ದುಪ್ಪಟ್ಟು ಹಣವನ್ನು ಪೀಕುತ್ತಿದ್ದಾರೆ ಎಂಬ ಗಂಭೀರ ಆರೋಪವಿದ್ದು, ಜಿಲ್ಲಾಡಳಿತ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ಸಲುವಾಗಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಕಾಮಗಾರಿಗೆ ವೇಗ ನೀಡಬೇಕು. ಕಾಮಗಾರಿ ವಿಳಂಬಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಠಿಣಕ್ರಮಕೈಗೊಳ್ಳಬೇಕು ಎಂಬುದು ಪ್ರಜ್ಞಾವಂತರ ಮಾತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.