ETV Bharat / state

ಬೆಳಗಾವಿಯಲ್ಲಿ ಅಭ್ಯರ್ಥಿಗಳ ನಾಮಪತ್ರ ಭರಾಟೆ: ಶಿಷ್ಯನಿಗೆ ಸಾಥ್ ಕೊಟ್ಟ ರಮೇಶ ಜಾರಕಿಹೊಳಿ

author img

By

Published : Apr 17, 2023, 6:04 PM IST

ಬೆಳಗಾವಿಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಇಂದು ನಾಮಪತ್ರ ಸಲ್ಲಿಕೆ ಮಾಡಿದರು.

Submission of nomination papers
ನಾಮಪತ್ರ ಸಲ್ಲಿಕೆ

ಚಿಕ್ಕೋಡಿ (ಬೆಳಗಾವಿ) : ಜಿಲ್ಲೆಯ ಬೆಳಗಾವಿ ಉತ್ತರ, ಗ್ರಾಮೀಣ, ದಕ್ಷಿಣ, ಸವದತ್ತಿ, ರಾಮದುರ್ಗ, ಅಥಣಿ, ನಿಪ್ಪಾಣಿ, ಕಾಗವಾಡ ಕ್ಷೇತ್ರಗಳ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಇಂದು ನಾಮಪತ್ರ ಸಲ್ಲಿಕೆ ಮಾಡಿದರು. ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ರವಿ ಪಾಟೀಲ, ಕೆಲವೇ ಕೆಲವು ಕಾರ್ಯಕರ್ತರು, ಮುಖಂಡರ ಜೊತೆಗೆ ಮಹಾನಗರ ಪಾಲಿಕೆ ಕಚೇರಿಗೆ ಆಗಮಿಸಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಈ ವೇಳೆ ಸಂಸದೆ ಮಂಗಳಾ ಅಂಗಡಿ ಹೊರತು ಪಡಿಸಿ ಹಿರಿಯ ನಾಯಕರ ಗೈರು ಹಾಜರಿ ಎದ್ದು ಕಾಣಿಸಿತು. ಡಾ. ರವಿ ಪಾಟೀಲ ಗೆಲುವಿಗೆ ಒಟ್ಟಾಗಿ ಶ್ರಮಿಸುತ್ತೇವೆ ಎಂದಿದ್ದ ಶಾಸಕ ಅನಿಲ ಬೆನಕೆ ಕೂಡ ಆಗಮಿಸದಿರುವುದು ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಸ್ಪಷ್ಟವಾಯಿತು.

ಬೆಳಗಾವಿ ಗ್ರಾಮೀಣ ಬಿಜೆಪಿ ಅಭ್ಯರ್ಥಿ ನಾಗೇಶ ಮನ್ನೋಳ್ಕರ್, ಮಾಜಿ ಶಾಸಕ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರೊಂದಿಗೆ ನಗರದಲ್ಲಿ ಬೃಹತ್ ಮೆರವಣಿಗೆ ಮಾಡಿ ಶಕ್ತಿ ಪ್ರದರ್ಶಿಸಿದರು. ತಹಸೀಲ್ದಾರ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದರು. ಈ ವೇಳೆ, ನಾಗೇಶ ಮನ್ನೋಳ್ಕರ್​ಗೆ ಮಾಜಿ ಶಾಸಕ ಸಂಜಯ ಪಾಟೀಲ, ಕಿರಣ ಜಾಧವ ಸೇರಿ ಮತ್ತಿತರ ನಾಯಕರು ಸಾಥ್ ನೀಡಿದರು.

ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಭಯ ಪಾಟೀಲ ಕೂಡ ಮಹಾನಗರ ಪಾಲಿಕೆಗೆ ಆಗಮಿಸಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಇದಕ್ಕೂ ಮುನ್ನ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಳೆದ ಐದು ವರ್ಷದಲ್ಲಿ ನನ್ನ ಕ್ಷೇತ್ರದಲ್ಲಿ ಮೂಲ ಸೌಕರ್ಯಗಳಿಗೆ ಆದ್ಯತೆ ಕೊಟ್ಟು ಅಭಿವೃದ್ಧಿ ಪಡಿಸಿದ್ದೇನೆ. ರಸ್ತೆ, ಚರಂಡಿ, ನೀರು, ಸರ್ಕಾರಿ ಶಾಲೆ, ಆಸ್ಪತ್ರೆ ನಿರ್ಮಾಣ ಮಾಡಿದ್ದೇನೆ ಎಂದರು.

ಸವದತ್ತಿ ಯಲ್ಲಮ್ಮ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಶ್ವಾಸ ವೈದ್ಯ, ಮಾಜಿ ಶಾಸಕ ಸುಭಾಷ ಕೌಜಲಗಿ ನೇತೃತ್ವದಲ್ಲಿ ತಹಸೀಲ್ದಾರ್ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಅವರ ಪತ್ನಿ ಸೇರಿ ಮತ್ತಿತರರು ಜೊತೆಗಿದ್ದರು. ಇನ್ನು ಗಾಲಿ ಜನಾರ್ದನ ರೆಡ್ಡಿಯವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಪ್ರವೀಣ ಹಿರೇಮಠ ಮತ್ತು ರಾಮದುರ್ಗ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಪಟ್ಟಣ ನಾಮಪತ್ರ ಸಲ್ಲಿಸಿದರೆ, ಬಿಜೆಪಿ ಟಿಕೆಟ್ ವಂಚಿತ ಶಾಸಕ ಮಹಾದೇವಪ್ಪ ಯಾದವಾಡ ಪಕ್ಷೇತರ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದರು.

ಅಥಣಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಮೊದಲಿಗೆ ಬಿ ಫಾರಂ ಗೆ ಮನೆಯಲ್ಲಿ ಪೂಜೆ ಸಲ್ಲಿಸಿ, ಬೃಹತ್ ರೋಡ್ ಶೋ ನಡೆಸಿದರು. ಬಳಿಕ ಸಿದ್ದೇಶ್ವರ ದೇವರ ದರ್ಶನ ಪಡೆದು ಅಥಣಿ ಮಿನಿ ವಿಧಾನಸೌಧದಲ್ಲಿ ಚುನಾವಣೆ ಅಧಿಕಾರಿಗೆ ನಾಮಪತ್ರ ಸಲ್ಲಿಸಿದರು. ನಾಮ ಪತ್ರ ಸಲ್ಲಿಸಿದ ನಂತರ ಮಾದ್ಯಮಗಳ ಜೊತೆ ಮಾತನಾಡಿದ ಮಹೇಶ್ ಕುಮಟಳ್ಳಿ, ನನಗೆ ಸ್ಪರ್ಧಿಸಲು ಬಿಜೆಪಿ ವರಿಷ್ಠರು ಮತ್ತೊಮ್ಮೆ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು. ನಮಗೆ ವಿಶ್ವಾಸವಿದೆ ಈ ಚುನಾವಣೆಯಲ್ಲಿ ನಾವು ಗೆಲುವು ಸಾಧಿಸುತ್ತೇವೆ. ಕ್ಷೇತ್ರದಲ್ಲಿನ ಪ್ರಚಾರಕ್ಕೆ ರಾಜ್ಯಮಟ್ಟದ ನಾಯಕರು ಬರಲಿದ್ದು, ಅಲ್ಲಿವರೆಗೆ ಸ್ಥಳೀಯರನ್ನು ಕರೆದುಕೊಂಡು ಪ್ರಚಾರ ಮಾಡುತ್ತೇವೆ ಎಂದು ಹೇಳಿದರು. ಮತ್ತೊಂದೆಡೆ, ನಿಪ್ಪಾಣಿಯಲ್ಲಿ ಬಿಜೆಪಿ ಅಭ್ಯರ್ಥಿ ಶಶಿಕಲಾ ಜೊಲ್ಲೆ ಹಾಗೂ ಕಾಗವಾಡ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ನಾಮಪತ್ರ ಸಲ್ಲಿಕೆ ಮಾಡಿದರು.

ಇದನ್ನೂ ಓದಿ : ಕಲಬುರಗಿ ದಕ್ಷಿಣ ಮತಕ್ಷೇತ್ರದ ಅಧಿಪತಿ ಯಾರು? ಬಿಜೆಪಿ-ಕಾಂಗ್ರೆಸ್​ ಪೈಪೋಟಿ, ಜೆಡಿಎಸ್ ರಣತಂತ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.