ETV Bharat / state

ಪರೀಕ್ಷೆ ಹಿಂದಿನ ದಿನ ತಂದೆ ಸಾವು: ನೋವಿನ ಮಧ್ಯೆಯೂ 10ನೇ ತರಗತಿ ಪರೀಕ್ಷೆ ಬರೆದ ವಿದ್ಯಾರ್ಥಿನಿ

author img

By

Published : Apr 1, 2023, 7:01 PM IST

ತಂದೆಯ ಸಾವಿನ ನಡುವೆಯೂ ವಿದ್ಯಾರ್ಥಿನಿ ಪರೀಕ್ಷೆ ಬರೆದಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

sslc-student-attended-exam-despite-of-fathers-death
ತಂದೆ ಸಾವಿನ ನಡುವೆಯೂ ಹತ್ತನೇ ತರಗತಿ ಪರೀಕ್ಷೆ ಬರೆದ ವಿದ್ಯಾರ್ಥಿನಿ

ತಂದೆ ಸಾವಿನ ನಡುವೆಯೂ ಹತ್ತನೇ ತರಗತಿ ಪರೀಕ್ಷೆ ಬರೆದ ವಿದ್ಯಾರ್ಥಿನಿ

ಚಿಕ್ಕೋಡಿ (ಬೆಳಗಾವಿ): ತಂದೆಯ ಸಾವಿನ ದುಃಖದ ನಡುವೆಯೂ ಶಾಲಾ ವಿದ್ಯಾರ್ಥಿನಿಯೋರ್ವಳು ಹತ್ತನೇ ತರಗತಿ ಪರೀಕ್ಷೆ ಬರೆದಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಹುಕ್ಕೇರಿ ತಾಲೂಕಿನ ಕೆಸ್ತಿ ಗ್ರಾಮದ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿನಿಯಾದ ಮಿದ್ದತ್ ಅಬ್ದುಲ್ ರಜಾಕ್ ಸನದಿ ಎಸ್​ಎಸ್​ಎಲ್​​ಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿ.

ಘಟನೆ ವಿವರ : ಕಳೆದ ಗುರುವಾರ ರಾತ್ರಿ ವಿದ್ಯಾರ್ಥಿನಿ ಮಿದ್ದತ್​​ ಅವರ ತಂದೆ ಮೃತಪಟ್ಟಿದ್ದರು. ಈ ಹಿನ್ನೆಲೆ ಮರುದಿನ ನಡೆಯಬೇಕಿದ್ದ ಪರೀಕ್ಷೆಗೆ ವಿದ್ಯಾರ್ಥಿನಿ ಗೈರು ಹಾಜರಾಗಿದ್ದರು. ಈ ಬಗ್ಗೆ ತಿಳಿದ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಣಾಧಿಕಾರಿ ಮೋಹನ್​ ದಂಡಿನ ಅವರ ಗಮನಕ್ಕೆ ತಂದಿದ್ದಾರೆ. ಈ ಸಂಬಂಧ ಶಿಕ್ಷಣಾಧಿಕಾರಿಗಳು ಮುಖ್ಯೋಪಾಧ್ಯಾಯರಿಗೆ ಮತ್ತು ಕೆಲ ಶಿಕ್ಷಕರಿಗೆ ವಿದ್ಯಾರ್ಥಿನಿಯ ಮನೆಗೆ ತೆರಳುವಂತೆ ಸೂಚಿಸಿದ್ದಾರೆ. ವಿದ್ಯಾರ್ಥಿನಿಯ ಮನೆಗೆ ತೆರಳಿದ ಶಿಕ್ಷಕರು, ವಿದ್ಯಾರ್ಥಿನಿಯ ಮನವೊಲಿಸಿ, ಆತ್ಮಸ್ಥೈರ್ಯ ತುಂಬಿ ಪರೀಕ್ಷೆ ಬರೆಯುವಂತೆ ಕೋರಿದ್ದಾರೆ. ಅಷ್ಟೇ ಅಲ್ಲದೆ ವಿದ್ಯಾರ್ಥಿನಿಗೆ ಅನುಕೂಲವಾಗುವಂತೆ ಪರೀಕ್ಷಾ ಕೇಂದ್ರದ ವರೆಗೆ ವಾಹನದ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ವಿದ್ಯಾರ್ಥಿನಿ ಮಿದ್ದತ್ ಅಬ್ದುಲ್​ ರಜಾಕ್​​ ಸನದಿ, ಗುರುವಾರ ರಾತ್ರಿ ತಂದೆ ಚೆನ್ನಾಗಿಯೇ ಇದ್ದರು. ನಾನು ಮತ್ತು ತಂದೆ ತುಂಬಾ ಹೊತ್ತು ಮಾತನಾಡಿದ್ದೆವು. ಬಳಿಕ ತಂದೆ ನಿನಗೆ ನಾಳೆ ಪರೀಕ್ಷೆ ಇದೆ ಹೋಗಿ ಮಲಗುವಂತೆ ಹೇಳಿದರು. ಅಷ್ಟೇ ಅಲ್ಲದೆ ನನ್ನನ್ನು ಶಾಲೆಗೆ ಬಿಡುವುದಾಗಿಯೂ ಹೇಳಿದ್ದರು. ಸ್ವಲ್ಪ ಹೊತ್ತಿನ ಬಳಿಕ ತಂದೆಗೆ ಎದೆನೋವು ಕಾಣಿಸಿಕೊಂಡು ನಿಧನರಾಗಿದ್ದಾರೆ. ತಂದೆಯ ಪ್ರೇರಣೆಯಿಂದ ನಾನು ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದಿದ್ದೇನೆ ಎಂದು ವಿದ್ಯಾರ್ಥಿನಿ ಹೇಳಿದ್ದಾಳೆ.

ಶಿಕ್ಷಣಾಧಿಕಾರಿ ಮೋಹನ್​ ದಂಡಿನ ಮಾತನಾಡಿ, ಕೆಸ್ತಿ ಗ್ರಾಮದ ಪ್ರೌಢ ಶಾಲೆಯ ವಿದ್ಯಾರ್ಥಿನಿ ಎಸ್ಎಸ್​ಎಲ್​​ಸಿ​​ ಪರೀಕ್ಷೆಗೆ ಗೈರಾಗಿದ್ದರು. ಈ ವೇಳೆ ವಿದ್ಯಾರ್ಥಿನಿಯ ತಂದೆ ಗುರುವಾರ ರಾತ್ರಿ ಮೃತಪಟ್ಟಿರುವುದಾಗಿ ಎಂದು ತಿಳಿದುಬಂತು. ಈ ಸಂಬಂಧ ವಿದ್ಯಾರ್ಥಿನಿಯ ಮನೆಗೆ ತೆರಳಿ ಪರೀಕ್ಷೆ ಬರೆಯಲು ಮನವೊಲಿಸುವಂತೆ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರಿಗೆ ತಿಳಿಸಲಾಯಿತು. ಈ ಹಿನ್ನೆಲೆ ವಿದ್ಯಾರ್ಥಿನಿಯ ಮನೆಗೆ ತೆರಳಿ ಪರೀಕ್ಷೆ ಬರೆಯುವಂತೆ ಮನವೊಲಿಸಲಾಯಿತು. ಬಳಿಕ ವಿದ್ಯಾರ್ಥಿನಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಪರೀಕ್ಷೆಗೆ ಹಾಜರಾದರು. ಈ ವೇಳೆ ಸ್ಥಳಕ್ಕೆ ತೆರಳಿ ವಿದ್ಯಾರ್ಥಿನಿಗೆ ಆತ್ಮಸ್ಥೈರ್ಯ ತುಂಬಲಾಯಿತು ಎಂದು ಶಿಕ್ಷಣಾಧಿಕಾರಿ ಮೋಹನ್​ ದಂಡಿ ಹೇಳಿದರು. ಸದ್ಯ ಬಿಇಓ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತವಾಗಿದೆ.

ಮಾರ್ಚ್​ 31ರ ಶುಕ್ರವಾರದಂದು ರಾಜ್ಯಾದ್ಯಂತ ಹತ್ತನೇ ತರಗತಿ ಪರೀಕ್ಷೆಗಳು ಆರಂಭಗೊಂಡಿವೆ. ಶುಕ್ರವಾರ ಪ್ರಥಮ ಭಾಷೆ ಪರೀಕ್ಷೆ ನಡೆದಿದೆ. ರಾಜ್ಯಾದ್ಯಂತ ಶೇ. 98.48ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಇನ್ನೂ, ಎಸ್ಎಸ್​ಎಲ್​ಸಿ ಪರೀಕ್ಷೆ ವೇಳೆ ಯಾವುದೇ ರೀತಿಯ ಅಕ್ರಮಗಳು ವರದಿ ಆಗಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಬೆಂಗಳೂರಿನ ನಿಸರ್ಗ ಸೌಂದರ್ಯವನ್ನು ಕನ್ನಡದಲ್ಲೇ ಹೊಗಳಿದ ಪ್ರಧಾನಿ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.