ETV Bharat / state

ಇಳಿ ವಯಸ್ಸಿನಲ್ಲೂ ಉತ್ಸಾಹದಿಂದ ಮತದಾನ.. ಯುವಕರಿಗೆ ಮಾದರಿಯಾದ ಹಿರಿಯ ನಾಗರಿಕರು

author img

By

Published : May 10, 2023, 6:16 PM IST

ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಬೆಳಗಾವಿ ಜಿಲ್ಲೆಯಲ್ಲಿ ಹಿರಿಯ ನಾಗರಿಕರು ಮತದಾನ ಮಾಡಿದರು.

senior-citizens-casted-voting-in-belagavi
ಇಳಿ ವಯಸ್ಸಿನಲ್ಲೂ ಉತ್ಸಾಹದಿಂದ ಮತದಾನ ಮಾಡಿದ ಹಿರಿಯ ನಾಗರಿಕರು

ಇಳಿ ವಯಸ್ಸಿನಲ್ಲೂ ಉತ್ಸಾಹದಿಂದ ಮತದಾನ.. ಯುವಕರಿಗೆ ಮಾದರಿಯಾದ ಹಿರಿಯ ನಾಗರಿಕರು

ಬೆಳಗಾವಿ : ಬೆಳಗಾವಿ ನಗರ ಸೇರಿ ಜಿಲ್ಲೆಯ ವಿವಿಧ ವಿಧಾನಸಭೆ ಕ್ಷೇತ್ರಗಳಲ್ಲಿ ಹಿರಿಯ ನಾಗರಿಕರು ತಮ್ಮ ತಮ್ಮ ಮತಗಟ್ಟೆಗಳಿಗೆ ಆಗಮಿಸಿ ಅತ್ಯಂತ ಉತ್ಸಾಹದಿಂದ ಮತದಾನ ಮಾಡಿದರು. ಜೊತೆಗೆ ಎಲ್ಲರೂ ಮತದಾನ ಮಾಡುವಂತೆ ಕರೆ ನೀಡಿದರು.

ಇಲ್ಲಿನ ವಡಗಾವಿ ಕರ್ನಾಟಕ ಪಬ್ಲಿಕ್ ಶಾಲೆಯ ಮತಗಟ್ಟೆಗೆ 88 ವರ್ಷದ ಜಾನಕಿ ಬಾಯಿ ಕುಲಕರ್ಣಿ ಎಂಬವರು ತಮ್ಮ ಪುತ್ರ, ಸೊಸೆ, ಮೊಮ್ಮಗನ ಜೊತೆ ವ್ಹೀಲ್ ಚೇರ್ ಮೇಲೆ ಆಗಮಿಸಿ ಮತ ಚಲಾವಣೆ ಮಾಡಿದರು. ಈ ವೇಳೆ ಈಟಿವಿ ಭಾರತದೊಂದಿಗೆ ಮಾತನಾಡಿದ ಜಾನಕಿಬಾಯಿ, ನನಗೀಗ 88 ವರ್ಷ ವಯಸ್ಸು. ಹಿಂದಿನ ಎಲ್ಲ ಚುನಾವಣೆಗಳಲ್ಲೂ ನಾನು ಮತ ಹಾಕಿದ್ದೇನೆ. ಈ ಬಾರಿಯೂ ಮತ ಹಾಕಲು ಬಂದಿದ್ದೇನೆ. ಎಲ್ಲರೂ ತಪ್ಪದೇ ಮತದಾನ ಮಾಡಿ ಎಂದು ಹೇಳಿದರು.

ಆಝಾದ್ ನಗರ ನಿವಾಸಿ 76 ವರ್ಷದ ಮೈನೂದ್ದೀನ್ ಮಕಾನದಾರ್ ತಮ್ಮ ಹಕ್ಕನ್ನು ಚಲಾಯಿಸಿದರು. ಬಳಿಕ ಮಾತನಾಡಿದ ಅವರು, ಐದು ವರ್ಷಕ್ಕೊಮ್ಮೆ ಬರುವ ಚುನಾವಣೆಯಲ್ಲಿ ಪ್ರತಿಯೊಬ್ಬರು ಮತದಾನ ಮಾಡಬೇಕು. ಮಳೆ, ಬಿಸಿಲು ಎಂದು ಮನೇಲಿ ಕುಳಿತಕೊಳ್ಳಬೇಡಿ. ಸೂಟಿ ಅಯ್ತಿ ಅಂತ ಗೋವಾಕ ಪ್ರವಾಸಕ್ಕೂ‌ ಹೋಗಬ್ಯಾಡ್ರಿ, ವೋಟ್ ಹಾಕಿ ಚಲೋ ನಾಯಕನ ಆಯ್ಕೆ ಮಾಡಬೇಕು ಎಂದು ಹೇಳಿದರು.

ಇದನ್ನೂ ಓದಿ : ಬೆಂಗಳೂರಿನ 28 ಕ್ಷೇತ್ರದಲ್ಲಿ ಮಧ್ಯಾಹ್ನ 3 ಗಂಟೆ ವೇಳೆಗೆ ಶೇಕಡಾವಾರು ಮತದಾನ ಎಷ್ಟು? ಇಲ್ಲಿದೆ ಮಾಹಿತಿ

ಅನಗೋಳದ ಚಿದಂಬರ ನಗರದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 24ರಲ್ಲಿ 75 ವರ್ಷದ ಮನೋಹರ ಲಕ್ಷ್ಮಣ ಪವಾರ ಎಂಬುವವರು ತಮ್ಮ ಪುತ್ರನ ಜೊತೆಗೆ ಆಗಮಿಸಿ ಹಕ್ಕು ಚಲಾಯಿಸಿದರು. ಬಳಿಕ ಮಾತನಾಡಿದ ಅವರು, ಮತದಾನ ಮಾಡುವುದು ಪ್ರತಿಯೊಬ್ಬರ ಹಕ್ಕು ಎಂದು ಹೇಳಿದರು.

ಮತದಾನದಿಂದ ದೂರ ಉಳಿದ ಹಿರಿಯ ನಾಗರಿಕ : ನಗರದಲ್ಲಿ ಒಂದೆಡೆ ಹಿರಿಯ ನಾಗರಿಕರು ಮತದಾನಕ್ಕೆ ಆಸಕ್ತಿ ತೋರುತ್ತಿದ್ದರೆ ಮತ್ತೊಂದೆಡೆ ಹಿರಿಯ ನಾಗರಿಕರೋರ್ವರು ಮತದಾನದಿಂದ ದೂರ ಉಳಿದಿದ್ದಾರೆ. ಭಾಗ್ಯನಗರದ ನಿವಾಸಿ ಕೆ.ವಿದ್ಯಾಸಾಗರ ಎಂಬುವವರೇ ಮತದಾನದಿಂದ ದೂರ ಉಳಿದವರು.

ಈ ಬಗ್ಗೆ ಪ್ರತಿಕ್ರಿಯಿಸಿದ ಕೆ. ವಿದ್ಯಾಸಾಗರ್​ ಅವರು, ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಎಲ್ಲಾ ಇಲಾಖೆಗಳಲ್ಲೂ ಭ್ರಷ್ಟಾಚಾರವಿದೆ. ಹೀಗಾಗಿ ನಾನು ಮತ ಚಲಾಯಿಸುತ್ತಿಲ್ಲ. ಅಲ್ಲದೇ ಕಳೆದ ಹಲವು ಚುನಾವಣೆಗಳಲ್ಲೂ ನಾನು ಮತ ಹಾಕಿಲ್ಲ. ಈ ಹಿಂದೆ 1985ರಲ್ಲಿ ನಾನು ಕೂಡ ಉಚಗಾಂವ ಕ್ಷೇತ್ರವಿದ್ದಾಗ ಸಂಚೆ ವಿಚಾರ್ ಮಂಚ್ ಪಕ್ಷದಿಂದ ಸ್ಪರ್ಧಿಸಿ ಐದು ಸಾವಿರ ಮತ ಪಡೆದಿದ್ದೆ ಎಂದರು. ಕೆ.ವಿದ್ಯಾಸಾಗರ ಅವರು 1980ರಲ್ಲಿ ಬೆಳಗಾವಿ ಮಹಾನಗರದಲ್ಲಿ ಭಿಕ್ಷುಕರ ಕಲ್ಯಾಣಕ್ಕಾಗಿ ಶ್ರಮಿಸಿದ್ದರು. ಹೀಗಾಗಿ ಭಿಕ್ಷುಕರ ನಾಯಕರಾಗಿ ಗುರುತಿಸಿಕೊಂಡಿದ್ದರು.

ಇದನ್ನೂ ಓದಿ : ಮತ ಚಲಾಯಿಸಿದ ಆರ್​ಎಸ್​ಎಸ್​ನ ದತ್ತಾತ್ರೇಯ ಹೊಸಬಾಳೆ, ವಚನಾನಂದ ಶ್ರೀ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.