ETV Bharat / state

ರಾಹುಲ್ ಗಾಂಧಿ ಇಂದು ಬೆಳಗಾವಿಗೆ: ಯುವ ಕ್ರಾಂತಿ ಸಮಾವೇಶದಲ್ಲಿ ಭಾಗಿ

author img

By

Published : Mar 20, 2023, 11:32 AM IST

Updated : Mar 20, 2023, 1:28 PM IST

ಬೆಳಗಾವಿಯಲ್ಲಿ ನಡೆಯುವ ಯುವ ಕ್ರಾಂತಿ ಸಮಾವೇಶದಲ್ಲಿ ಕಾಂಗ್ರೆಸ್​​​ ನಾಯಕ ರಾಹುಲ್​ ಗಾಂಧಿ ಭಾಷಣ ಮಾಡಲಿದ್ದಾರೆ.

Rahul Gandhi to address Yuva Kranti Samavesha in Belagavi today
ಬೆಳಗಾವಿಯಲ್ಲಿ ಯುವ ಕ್ರಾಂತಿ ಸಮಾವೇಶ : ರಾಹುಲ್ ಗಾಂಧಿ ಭಾಷಣ

ಬೆಳಗಾವಿ : ರಾಜ್ಯ ಕಾಂಗ್ರೆಸ್ ಇಂದು ಬೆಳಗಾವಿಯಲ್ಲಿ ಹಮ್ಮಿಕೊಂಡಿರುವ ಯುವ ಕ್ರಾಂತಿ ಸಮಾವೇಶದಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಪಾಲ್ಗೊಳ್ಳುವರು. ನಗರದ ಸಿಪಿಇಡಿ ಮೈದಾನದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಪಕ್ಷದ​​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​​, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಹಲವು ಮುಖಂಡರು ಭಾಗವಹಿಸಲಿದ್ದಾರೆ. ಸಮಾವೇಶ ಉದ್ದೇಶಿಸಿ ರಾಹುಲ್​ ಗಾಂಧಿ ಭಾಷಣ ಮಾಡಲಿದ್ದಾರೆ.

ರಾಹುಲ್​ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯು ವಿವಿಧ ರಾಜ್ಯಗಳಲ್ಲಿ ಸಂಚರಿಸಿ ಸಮಾಪನಗೊಂಡಿತ್ತು. ಇದೀಗ ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಜೋಡೋ ಯಾತ್ರೆಯ ಬಳಿಕ ಇದೇ ಮೊದಲ ಬಾರಿಗೆ ಅವರು ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ.

4ನೇ ಚುನಾವಣಾ ಆಶ್ವಾಸನೆ ಘೋಷಣೆ ಸಾಧ್ಯತೆ: ಪಕ್ಷದ ಮೂಲಗಳ ಪ್ರಕಾರ, ಸಮಾವೇಶದಲ್ಲಿ ಭಾಗವಹಿಸುವ ರಾಗಾ ವಿಧಾನಸಭೆ ಚುನಾವಣೆಯ ನಾಲ್ಕನೇ ಆಶ್ವಾಸನೆಯನ್ನು ಘೋಷಣೆ ಮಾಡುವ ಸಾಧ್ಯತೆ ಇದೆ. ಯುವಜನತೆಯನ್ನು ಗಮನದಲ್ಲಿಟ್ಟುಕೊಂಡು ಈ ಭರವಸೆ ರೂಪಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಇನ್ನು ಎಲ್ಲ ರಾಜಕೀಯ ಪಕ್ಷಗಳು ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರನ್ನು ತಮ್ಮತ್ತ ಸೆಳೆಯಲು ವಿವಿಧ ರೀತಿಯಲ್ಲಿ ಕಸರತ್ತು ನಡೆಸುತ್ತಿವೆ. ಎಲ್ಲ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ಉಚಿತಗಳ ಆಶ್ವಾಸನೆಗಳನ್ನು ನೀಡುತ್ತಿವೆ. ಕಾಂಗ್ರೆಸ್ ಈಗಾಗಲೇ ಮೂರು ಚುನಾವಣಾ ಆಶ್ವಾಸನೆಗಳನ್ನು ಘೋಷಿಸಿದೆ.

ಕಾಂಗ್ರೆಸ್‌ ಚುನಾವಣಾ ಭರವಸೆಗಳು: ಪ್ರಜಾಧ್ವನಿ ಯಾತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದರೆ ಗೃಹ ಜ್ಯೋತಿ ಯೋಜನೆಯಡಿ ಎಲ್ಲ ಮನೆಗಳಿಗೆ 200 ಯುನಿಟ್​ ಉಚಿತ ವಿದ್ಯುತ್​ ಕೊಡುವುದಾಗಿ ಹೇಳಿತ್ತು. ಬಳಿಕ ಬೆಂಗಳೂರಿನಲ್ಲಿ ನಡೆದಿದ್ದ ನಾ ನಾಯಕಿ ಸಮಾವೇಶದಲ್ಲಿ ಗೃಹ ಲಕ್ಷ್ಮೀ ಯೋಜನೆಯಡಿ ಕುಟುಂಬ ನಿರ್ವಹಿಸುವ ಮನೆ ಯಜಮಾನಿಗೆ ಮಾಸಿಕ 2,000 ರೂಪಾಯಿ ನೀಡುವುದಾಗಿ ಘೋಷಣೆ ಮಾಡಿದೆ. ಇದರ ಜೊತೆಗೆ ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಬಿಪಿಎಲ್​ ಕಾರ್ಡ್​ ಹೊಂದಿರುವ ಕುಟುಂಬದ ಪ್ರತೀ ಸದಸ್ಯರಿಗೆ 10 ಕೆ.ಜಿ ಉಚಿತ ಅಕ್ಕಿ ನೀಡುವುದಾಗಿ ಹೇಳಿತ್ತು. ಇಂದು ರಾಹುಲ್​ ಗಾಂಧಿಯವರು ಕಾಂಗ್ರೆಸ್​ನ ನಾಲ್ಕನೇ ಚುನಾವಣಾ ಆಶ್ವಾಸನೆ ಘೋಷಣೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ಗುರಿ ಹೊಂದಿರುವ ಕಾಂಗ್ರೆಸ್, ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 224 ಸ್ಥಾನಗಳಲ್ಲಿ ಕನಿಷ್ಠ 150 ಸ್ಥಾನಗಳನ್ನು ಗೆಲ್ಲುವ ಆಕಾಂಕ್ಷೆ ಹೊಂದಿದೆ.

ಯುಗಾದಿಗೆ ಮೊದಲ ಪಟ್ಟಿ: ಯುವಕ್ರಾಂತಿ ಸಮಾವೇಶದ ಬಳಿಕ ಪಕ್ಷದ​​ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹೇಳಿದ್ದರು. ಚುನಾವಣೆಗೆ ಸ್ಪರ್ಧಿಸುವ 125 ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಅಂತಿಮಗೊಳಿಸಿದ್ದು, ಯುಗಾದಿ ಹಬ್ಬದಂದು ಬಿಡುಗಡೆಗೊಳಿಸಲು ನಿರ್ಧರಿಸಿದೆ.

ಡಿ.ಕೆ.ಶಿವಕುಮಾರ್ ಹೇಳಿಕೆ: ಭಾರತ ಜೋಡೋ ಯಾತ್ರೆ ಬಳಿಕ ಬೆಳಗಾವಿಯಲ್ಲಿ ರಾಹುಲ್ ಗಾಂಧಿ ಯುವ ಕ್ರಾಂತಿ ಸಮಾವೇಶ ನಡೆಸುತ್ತಿದ್ದು ಇದು ಕಾಂಗ್ರೆಸ್​ಗೆ ಐತಿಹಾಸಿಕ ಕ್ಷಣ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿದರು. ಸಮಾವೇಶಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ದೇಶ ಮತ್ತು ರಾಜ್ಯದಲ್ಲಿ ಬದಲಾವಣೆಗೆ ಯುವಕರು ಎಚ್ಚರಿಕೆ ವಹಿಸಬೇಕು. ಮಹಿಳೆಯರು, ಯುವಕರು ಒಗ್ಗಟ್ಟಾದಾಗ ಮಾತ್ರ ಈ ಬದಲಾವಣೆ ಸಾಧ್ಯ. ಅದಕ್ಕಾಗಿ ರಾಹುಲ್ ಆಗಮಿಸುತ್ತಿದ್ದಾರೆ" ಎಂದರು.

"ಪ್ರಿಯಾಂಕಾ ಗಾಂಧಿ ಬೆಂಗಳೂರಿಗೆ ಬಂದು ಗೃಹಲಕ್ಷ್ಮಿ ಯೋಜನೆ ಘೋಷಿಸಿದ್ದರು. ಅದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಬಿಪಿಎಲ್ ಕಾರ್ಡ್‌ದಾರರಿಗೆ ಹಣ ನೀಡುವ ಯೋಜನೆಗೆ ಮುಂದಾಗಿದ್ದಾರೆ. ನಮ್ಮ ಗ್ಯಾರಂಟಿ ಕಾರ್ಡ್ ಬಗ್ಗೆ ಬಿಜೆಪಿ ನಾಯಕರು ಟೀಕೆ ಮಾಡುತ್ತಿದ್ದಾರೆ, ಮಾಡಲಿ. ಚುನಾವಣೆಯಲ್ಲಿ 500ಕ್ಕೂ ಅಧಿಕ ಭರವಸೆಯನ್ನು ಪ್ರಣಾಳಿಕೆಯಲ್ಲಿ ಹಾಕಿದ್ದಾರೆ. ನಾಲ್ಕು ಬಜೆಟ್ ಮಂಡಿಸುವ ಅವಕಾಶ ಇದ್ದರೂ ಬಹುತೇಕ ಯೋಜನೆ ಜಾರಿಯಾಗಿಲ್ಲ. ಕಾಂಗ್ರೆಸ್ ಯೋಜನೆ ನೋಡಿ ಬಿಜೆಪಿ ಸರ್ಕಾರ ನಮ್ಮನ್ನು ಫಾಲೋ ಮಾಡುತ್ತಿದೆ. ಗೃಹಲಕ್ಷ್ಮಿಗೆ ಪರ್ಯಾಯವಾಗಿ ಸ್ತ್ರಿಶಕ್ತಿ ಯೋಜನೆ, ಈಗ ಯುವಶಕ್ತಿ ಯೋಜನೆಗೆ ಬಿಜೆಪಿ ಮುಂದಾಗಿದೆ. ನಾವು ಜನಪರ ಯೋಜನೆ ಬಗ್ಗೆ ವಿಚಾರ ಮಾಡುತ್ತಿದ್ದರೆ, ಬಿಜೆಪಿ ಭ್ರಷ್ಟಾಚಾರ ಬಗ್ಗೆ ಚಿಂತೆ ಮಾಡುತ್ತಿದೆ" ಎಂದರು.

"ರಾಜ್ಯ ಬಿಜೆಪಿ ದೇಶದಲ್ಲೇ ಅತಿ ಭ್ರಷ್ಟ ಸರ್ಕಾರವಾಗಿದೆ. ಮಂತ್ರಿಗಳು, ಶಾಸಕರು ನೇರವಾಗಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ನೇಮಕಾತಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ಆಗಿದ್ದು, ಯುವಕರು ರೋಸಿ ಹೋಗಿದ್ದಾರೆ. ಅಧಿಕಾರ ಇದ್ದಾಗ ಮಾಡದ ಬಿಜೆಪಿಯವರು ಈಗ ಪ್ರಣಾಳಿಕೆಯಲ್ಲಿ ಹಾಕುತ್ತಿದ್ದಾರೆ. ಯುವಕರು, ಮಹಿಳೆಯರನ್ನು ಸೆಳೆಯಲು ಭರವಸೆ ನೀಡುತ್ತಿದ್ದಾರೆ. ಮಹನೀಯರ ಜೀವನ ಚರಿತ್ರೆ ಬಗ್ಗೆ ಸುಳ್ಳನ್ನು ಹೇಳಲು ಹೊರಟಿದ್ದಾರೆ" ಎಂದು ಸಚಿವ ಅಶ್ವತ್ಥ ನಾರಾಯಣ, ಶೋಭಾ ಕರಂದ್ಲಾಜೆ ಮತ್ತು ಸಿ.ಟಿ.ರವಿ ಬಗ್ಗೆ ವ್ಯಂಗ್ಯವಾಡಿದರು.

"ಟಿಪ್ಪು ಸಾಧನೆ ಬಗ್ಗೆ ಇತಿಹಾಸವೇ ಇದೆ, ಸಾಕಷ್ಟು ಗ್ರಂಥಗಳಿವೆ. ಆದರೂ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈಗ ಉರಿಗೌಡ ಮತ್ತು ನಂಜೆಗೌಡ ಬಗ್ಗೆ ಚಿತ್ರ ಮಾಡಲು ಹೊರಟಿದ್ದಾರೆ. ಬಿಜೆಪಿ ಕಾಲ್ಪನಿಕ ಕಥೆ ಮೂಲಕ ತಪ್ಪು ಸಂದೇಶ ರವಾನಿಸಲಾಗುತ್ತದೆ. ಯಾವುದೋ ಒಂದು ಪುಸ್ತಕದಲ್ಲಿ ಈ ಬಗ್ಗೆ ಸಣ್ಣ ಉಲ್ಲೇಖ ಇದೆ. ಸಂಶೋಧನೆ ಮೂಲಕ ಇತಿಹಾಸ ಬರೆದಿರುತ್ತಾರೆ, ಸಂಶೋಧನೆ ಮೂಲಕವೇ ಇತಿಹಾಸ ಇರಬೇಕು. ಉರಿಗೌಡ ಮತ್ತು ನಂಜೇಗೌಡ ಹೆಸರನ್ನು ಇಷ್ಟು ದಿನ ಎಲ್ಲಿ ಕೇಳಿದ್ರಿ? ಈ ಚರ್ಚೆ ಹುಟ್ಟುಹಾಕಿದ ಬಿಜೆಪಿ ನಾಯಕರ ಮೇಲೆ ಮೊದಲು ಕೇಸ್ ಹಾಕಬೇಕು. ಯಾರು ಪ್ರಚೋದನೆ ಮಾಡುತ್ತಿದ್ದಾರೋ ಅವರ ಮೇಲೆ ಡಿಜಿಐಜಿಪಿ ಕೇಸ್ ಹಾಕಬೇಕು. ಪೇ ಸಿಎಂ ಅಭಿಯಾನ ಆದಾಗ ನನ್ನ ಮತ್ತು ಸಿದ್ದರಾಮಯ್ಯನವರ ಮೇಲೆ ಕೇಸ್ ಹಾಕಿದ್ರಿ, ಈಗೇಕೆ ಸೈಲೆಂಟ್ ಆಗಿದ್ದೀರಿ? ದೇಶದಲ್ಲಿ ಅಶಾಂತಿ ಸೃಷ್ಟಿಸುತ್ತಿರುವ ಶೋಭಾ ಕರಂದ್ಲಾಜೆ, ಅಶ್ವತ್ಥ ನಾರಾಯಣ, ಸಿ.ಟಿ.ರವಿ ಒಕ್ಕಲಿಗ, ಹಿಂದೂ ವಿರೋಧಿಗಳು" ಎಂದು ಆರೋಪ ಮಾಡಿದರು.

ಸಚಿವ ಮುನಿರತ್ನ ಮತ್ತು ನಿರ್ಮಲಾನಂದ ಸ್ವಾಮೀಜಿ ಅವರ ನಡುವಿನ ಮಾತುಕತೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, "ಸ್ವಾಮೀಜಿ ಹಾಗೂ ಮುನಿರತ್ನ ಸಭೆ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ, ಈ ಚಿತ್ರ ಆಗಬಾರದು ಎಂದು ಸ್ವಾಮೀಜಿಗಳಿಗೆ ನಾನು ಮನವಿ ಮಾಡುತ್ತೇನೆ" ಎಂದರು. ಇದೇ ವೇಳೆ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಹೇಳಿಕೆಗೂ ಉತ್ತರ ನೀಡಿದರು.

ಸಿದ್ದರಾಮಯ್ಯ ಸವಾಲು: "ಹೈಕಮಾಂಡ್ ಹೇಳಿದಲ್ಲಿ ನಾನು ನಿಲ್ತೀನಿ. ಯಾವ ವಿಧಾನಸಭಾ ಕ್ಷೇತ್ರ ಹೇಳಿದರೂ ಸರಿ. ನಾನು ಅರ್ಜಿಯಲ್ಲಿ ಅದನ್ನೇ ಬರೆದಿದ್ದೇನೆ" ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. "ನಾನು ಓದಿದ ಇತಿಹಾಸದಲ್ಲಿ ಊರಿಗೌಡ ಮತ್ತು ನಂಜೇಗೌಡ ಹೆಸರು ಎಲ್ಲೂ ಇಲ್ಲ. ದಾಖಲೆ ಇದ್ರೆ ದಾಖಲೆ ಕೊಡಲಿ" ಎಂದು ಅವರು ಇದೇ ವೇಳೆ ಸವಾಲು ಹಾಕಿದರು.

ಇದನ್ನೂ ಓದಿ: ಬೆಳಗಾವಿಯಲ್ಲಿ ಯುವಕ್ರಾಂತಿ ಕಾರ್ಯಕ್ರಮ : ರಾಹುಲ್​ ಗಾಂಧಿ ಆಗಮನ.. ಅಭ್ಯರ್ಥಿಗಳ ಪಟ್ಟಿ​ ಬಿಡುಗಡೆ- ಡಿಕೆಶಿ

Last Updated :Mar 20, 2023, 1:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.