ಚಿಕ್ಕೋಡಿ: ವಿವಿಧ ಕಾಮಗಾರಿಗಳಿಗೆ ಅನುಮೋದನೆ ಪಡೆಯಲು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕಮಿಷನ್ ಕೇಳುತ್ತಿದ್ದಾರೆ ಎಂದು ಆರೋಪಿಸಿ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮೇಖಳಿ ಗ್ರಾಮ ಪಂಚಾಯತ್ ಸದಸ್ಯೆಯೊಬ್ಬರು ರಾಜೀನಾಮೆ ನೀಡಿದ್ದಾರೆ. ಪಿಡಿಒ ಮಂಜುನಾಥ್ ದಳವಾಯಿ ಎಂಬುವರು ವಿವಿಧ ಕಾಮಗಾರಿಗೆ ಕಮಿಷನ್ ಕೇಳುತ್ತಿದ್ದಾರೆ ಎಂದು ಸದಸ್ಯೆ ಸುಧಾ ಸಿದ್ದಪ್ಪ ರಾಜಂಗಳೆ ತಮ್ಮ ರಾಜೀನಾಮೆ ಪತ್ರದಲ್ಲಿ ದೂರಿದ್ದಾರೆ.
ಅನುದಾನ ಬಿಡುಗಡೆಗೆ ಕಮಿಷನ್ ಬೇಡಿಕೆ : ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸುಧಾ ಸಿದ್ದಪ್ಪ ರಾಜಂಗಳೆ, ಕಳೆದ ಎರಡೂವರೆ ವರ್ಷಗಳಿಂದ ಮೇಖಳಿ ಗ್ರಾಮ ಪಂಚಾಯಿತಿ ಸದಸ್ಯೆಯಾಗಿದ್ದೇನೆ. ನಮ್ಮ ವಾರ್ಡ್ನಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆದಿಲ್ಲ. ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಕೇಳಿದರೆ ಪ್ರತಿ ಕಾಮಗಾರಿಗೆ ಕಮಿಷನ್ ನೀಡಿ, ನಾನು ಅನುದಾನ ಮಂಜೂರು ಮಾಡುತ್ತೇನೆ ಎಂದು ಹೇಳುತ್ತಾರೆ. ಪಂಚಾಯಿತಿಯ 14 ಮತ್ತು 15ನೇ ಹಣಕಾಸು, ಉದ್ಯೋಗ ಖಾತ್ರಿ ಯೋಜನೆ ಅನುದಾನ ಸೇರಿದಂತೆ ವಿವಿಧ ಯೋಜನೆಗಳಿಗೆ ಅನುಮೋದನೆಗೆ ಕಮಿಷನ್ ಬೇಡಿಕೆ ಇಡುತ್ತಾರೆ. ಅಲ್ಲದೇ ಕ್ರಿಯಾಯೋಜನೆ ಅನುಮೋದನೆಗೆ ಮುಂಗಡ ಶೇ 3 ಪರ್ಸೆಂಟ್ ಹಣ ಕೊಡಬೇಕು. ಇದಕ್ಕಿಂತ ರಾಜೀನಾಮೆ ನೀಡಿದರೆ ಒಳಿತು ಎಂದು ಈ ನಿರ್ಧಾರಕ್ಕೆ ಬಂದಿದ್ದೇನೆ. ಮತ ನೀಡಿದ ಜನರು ಹಲವು ಅಭಿವೃದ್ಧಿ ಕಾಮಗಾರಿ ಕೇಳುತ್ತಾರೆ. ಅವರಿಗೆ ನಾವು ಏನು ಉತ್ತರ ಕೊಡಬೇಕು ಎಂಬುದು ಗೊತ್ತಾಗುತ್ತಿಲ್ಲ. ಇದರಿಂದಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದರು.
ಪಂಚಾಯಿತಿಯ ಒಟ್ಟು ಸದಸ್ಯರ ಬಲ 26: ಈ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಮೇಖಳಿ, ಭಾವಚಿ, ಮಾಡಲಗಿ ಎಂಬ ಗ್ರಾಮಗಳು ಬರುತ್ತವೆ. ಈ ಪಂಚಾಯಿತಿ ಒಟ್ಟು 26 ಸದಸ್ಯರನ್ನು ಹೊಂದಿದೆ. ಇಲ್ಲಿನ ಪಿಡಿಒ ಅವರಿಂದ ಹಣದ ಬಗ್ಗೆ ತುಂಬಾ ಕಿರುಕುಳ ಇದೆ. ಗ್ರಾಮದಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಯಾವುದೇ ಕಾಮಗಾರಿ ನಡೆಯುತ್ತಿಲ್ಲ. ಎಲ್ಲ ಪ್ರಸ್ತಾವನೆಗೆ ಈ ಅಧಿಕಾರಿಗಳು ಮುಂಗಡವಾಗಿ ಕಮಿಷನ್ ಕೇಳುತ್ತಾರೆ. ಈ ಬಗ್ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿನ ಪಿಡಿಒ ಸೇರಿ ಎಲ್ಲರಿಗೂ ಹಣ ನೀಡಬೇಕು. ಅಲ್ಲದೇ ಮುಂಗಡವಾಗಿ ಶೇ3ರಷ್ಟು ಹಣ ಕೇಳುತ್ತಾರೆ. ಇದರಿಂದಾಗಿ ಬೇಸತ್ತು ನಾವು ರಾಜೀನಾಮೆ ನೀಡುತ್ತಿದ್ದೇವೆ. ಈಗಾಗಲೇ ಒಬ್ಬರು ನೀಡಿದ್ದಾರೆ. ಇನ್ನೂ ಹತ್ತಕ್ಕೂ ಹೆಚ್ಚು ಸದಸ್ಯರು ರಾಜೀನಾಮೆ ನೀಡುತ್ತೇವೆ ಎಂದು ಪಂಚಾಯಿತಿ ಸದಸ್ಯ ಸುನೀಲ್ ಗಣಪತಿ ಖಿಚಡಿ ಹೇಳಿದರು.
ಸೂಕ್ತ ಕ್ರಮ - ಇಒ ಭರವಸೆ : ವಿಷಯಕ್ಕೆ ಸಂಬಂಧಿಸಿದಂತೆ ರಾಯಭಾಗ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸುರೇಶ್ ಕಡ್ಡು ಅವರನ್ನು ಈಟಿವಿ ಭಾರತ ಪ್ರತಿನಿಧಿ ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡಿದರು. ಈ ವೇಳೆ, ಮೇಖಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿರುದ್ಧ ಆರೋಪ ಕೇಳಿ ಬಂದಿದೆ. ಅವರ ವಿರುದ್ಧ ತನಿಖೆ ಮಾಡಲಾಗುವುದು. ಅಕ್ರಮ ಕಂಡು ಬಂದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ : ಮಹಿಳೆಯ ಕೊಂದು ಶವದ ಜೊತೆ ಫೇಸ್‌ಬುಕ್ ಲೈವ್! ಬಳಿಕ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ