ಬೆಳಗಾವಿ: ಈ ಬಾರಿ ಮಳೆರಾಯ ಮುನಿಸಿಕೊಂಡಂತೆ ಕಾಣಿಸುತ್ತಿದೆ. ಜೂನ್ ಮೂರನೇ ವಾರ ಬಂದರೂ ಮಳೆಯಾಗದ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಭತ್ತ ಬೆಳೆದ ರೈತರು ನಷ್ಟದ ಭೀತಿ ಎದುರಿಸುತ್ತಿದ್ದಾರೆ. ಹೌದು. ಬೆಳಗಾವಿ ಸುತ್ತಮುತ್ತಲಿನ ರೈತರು ಅಧಿಕವಾಗಿ ಭತ್ತವನ್ನೆ ಬೆಳೆಯುತ್ತಾರೆ. ಉತ್ತಮ ಮುಂಗಾರು ಮಳೆಯಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಇಲ್ಲಿನ ವಡಗಾವಿ, ಅನಗೋಳ ಮತ್ತು ತಾಲೂಕಿನ ಯಳ್ಳೂರು ಸೇರಿ ಸುತ್ತಮುತ್ತಲಿನ ಗ್ರಾಮಗಳ ರೈತರು ಮೇ ತಿಂಗಳ 3 ಮತ್ತು 4ನೇ ವಾರದಲ್ಲೇ ಭತ್ತದ ಒಣ ಬಿತ್ತನೆ ಆರಂಭಿಸಿದ್ದರು.
ಅಲ್ಲದೇ ಕೆಲ ರೈತರು ನಾಟಿಗಾಗಿ ಭತ್ತದ ಸಸಿ ಕೂಡ ಬೆಳೆಸಿದ್ದರು. ಆದರೆ, ಈಗ ಮಳೆ ಕೈಕೊಟ್ಟಿದ್ದರಿಂದ ಒಂದೆಡೆ ಮೊಳಕೆಯೊಡೆದಿದ್ದ ಬೀಜಗಳು ಭೂಮಿಯಲ್ಲೇ ಕಮರಿ ಹೋಗುತ್ತಿದ್ದರೆ, ಮತ್ತೊಂದೆಡೆ ನಾಟಿ ಮಾಡಿದ್ದ ಭತ್ತದ ಸಸಿಗಳೂ ಒಣಗುತ್ತಿವೆ. ಇನ್ನು ಭತ್ತದ ಸಸಿಗಳನ್ನು ಉಳಿಸಿಕೊಳ್ಳಬೇಕು ಎಂದು ಕೊಡದಿಂದ ನೀರು ಹಾಕುವ ಪ್ರಯತ್ನವನ್ನು ರೈತರು ಮಾಡುತ್ತಿದ್ದಾರೆ.
ಕೊಡದಿಂದ ನೀರು ಹಾಕುತ್ತಿದ್ದ ಯಳ್ಳೂರು ರೈತ ಹಣಮಂತ ಕುಗಜಿ ಮಾತನಾಡಿ, ಮಳೆಯಾದ ನಂತರ ನಾಟಿ ಮಾಡಲು ಭತ್ತದ ಸಸಿ ಬೆಳೆಸುತ್ತಿದ್ದೇನೆ. ಮಳೆ ಅಭಾವದಿಂದ ಅವು ಒಣಗುತ್ತಿವೆ. ಕೊಳವೆಬಾವಿ ಇದೆ. ಆದರೆ, ಅಸಮರ್ಪಕ ವಿದ್ಯುತ್ ಪೂರೈಕೆಯಿಂದಾಗಿ ಸಸಿಗಳಿಗೆ ನೀರು ಬಿಡಲು ಆಗುತ್ತಿಲ್ಲ. ಹೀಗಾಗಿ ಕೊಡದಲ್ಲಿ ನೀರು ತುಂಬಿಕೊಂಡು ಬಂದು ಸಸಿಗಳಿಗೆ ನೀರು ಹಾಕುತ್ತಿದ್ದೇನೆ ಎಂದು ತಿಳಿಸಿದರು.
ಇನ್ನು ಬೆಳಗಾವಿ ತಾಲೂಕಿನ ಯಳ್ಳೂರು, ಶಹಾಪುರ, ವಡಗಾವಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭತ್ತವೇ ಪ್ರಮುಖ ಬೆಳೆ. ಬೆಳಗಾವಿ ತಾಲೂಕಿನ 2 ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಬಾಸುಮತಿ, ಇಂದ್ರಾಯಿಣಿ ತಳಿಯ ಭತ್ತ ಬೆಳೆಯಲಾಗುತ್ತದೆ. ಈ ಬಾರಿ ಇನ್ನೂ ಮಳೆಯಾಗದ ಹಿನ್ನೆಲೆಯಲ್ಲಿ ಭತ್ತದ ಉತ್ಪಾದನೆ ಕಡಿಮೆಯಾಗಿ ಅಕ್ಕಿ ಕೊರತೆ ಆಗುವ ಸಾಧ್ಯತೆಯಿದೆ.
ಇದೇ ವೇಳೆ, ಈಟಿವಿ ಭಾರತ ಜೊತೆಗೆ ಮಾತನಾಡಿದ ರೈತ ರಾಜು ಮರವೆ, ನಮ್ಮಲ್ಲಿ ಬೆಳೆಯಲಾಗುವ ಬಾಸುಮತಿ, ಸಾಯಿರಾಮ್, ಇಂದ್ರಾಯಿಣಿ ತಳಿಗಳ ಭತ್ತಕ್ಕೆ ಮಾರುಕಟ್ಟೆಯಲ್ಲಿ ಬಹಳಷ್ಟು ಬೇಡಿಕೆಯಿದೆ. ಜೂನ್ ತಿಂಗಳಲ್ಲಿ ಮೃಗಶಿರಾ ಮಳೆಯಾಗುತ್ತದೆ ಎಂದು ಪ್ರತಿ ಎಕರೆಗೆ 15-20 ಸಾವಿರ ರೂ. ಖರ್ಚು ಮಾಡಿ ಬಿತ್ತಿದ್ದೆವು. ಆದರೆ, ಮಳೆ ಆಗದೇ ಇರುವುದರಿಂದ ಭೂಮಿಯಲ್ಲೇ ಬೀಜ ಕಮರುತ್ತಿವೆ.
ನಾಲ್ಕು ದಿನಗಳಲ್ಲಿ ಮಳೆಯಾಗದಿದ್ದರೆ, ಎರಡನೇ ಸಲ ಬಿತ್ತನೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಕೇಳಿಕೊಂಡರು. ಬೆಳಗಾವಿ ಜಿಲ್ಲೆಯಲ್ಲಿ ಈ ವರ್ಷ ಬರೊಬ್ಬರಿ 63 ಸಾವಿರ ಹೆಕ್ಟೇರ್ ಜಮೀನಿನಲ್ಲಿ ಭತ್ತ ಬೆಳೆಯುವ ಗುರಿ ಹಾಕಿಕೊಂಡಿದ್ದೇವೆ. ಆದರೆ, ಮಳೆ ಅಭಾವದಿಂದಾಗಿ ಈವರೆಗೆ ಶೇ. 6ರಷ್ಟು ಮಾತ್ರ ಬಿತ್ತನೆಯಾಗಿದೆ.
ಸೈಕ್ಲೋನ್ ಪರಿಣಾಮದಿಂದ ಮಾನ್ಸೂನ್ ತಡವಾಗಿದೆ. ರೈತರು ಮಳೆ ನೋಡಿಕೊಂಡು ಬಿತ್ತನೆ ಮಾಡಬೇಕು ಎಂದು ಕೃಷಿ ಇಲಾಖೆ ಉಪ ನಿರ್ದೇಶಕರಾದ ಎಸ್.ಬಿ.ಕೊಂಗವಾಡ ಅವರು ರೈತರಿಗೆ ಸಲಹೆ ನೀಡಿದ್ದಾರೆ. ಒಟ್ಟಾರೆ ಎರಡು ದಿನಗಳಲ್ಲಿ ಮಳೆಯಾಗದಿದ್ದರೆ ಭತ್ತ ಸೇರಿ ಇನ್ನಿತರ ಬೆಳೆ ಬಿತ್ತನೆ ಮಾಡಿರುವ ರೈತರು ನಷ್ಟ ಅನುಭವಿಸುವ ಸಾಧ್ಯತೆಯಿದೆ. ಹೀಗಾಗಿ ಎಲ್ಲ ರೈತರು ಆಕಾಶ ಕಡೆ ಮುಖ ಮಾಡುತ್ತಿದ್ದು, ವರುಣರಾಯ ಕೃಪೆ ತೋರಬೇಕಿದೆ.
ಇದನ್ನೂ ಓದಿ: ಬಾರದ ಮುಂಗಾರು ಮಳೆ: ಭೂಮಿ ಹದಗೊಳಿಸಿ ಬಿತ್ತನೆಗೆ ಸಜ್ಜಾಗಿದ್ದ ದಾವಣಗೆರೆ ರೈತರಿಗೆ ನಿರಾಶೆ