ETV Bharat / state

ಹಾಲಿ, ಮಾಜಿ ಶಾಸಕರನ್ನು ಟೈಮ್ ಬಂದಾಗ ವಿದೇಶಕ್ಕೆ ಕರೆದುಕೊಂಡು ಹೋಗೋಣ: ಸತೀಶ್​ ಜಾರಕಿಹೊಳಿ

author img

By ETV Bharat Karnataka Team

Published : Nov 26, 2023, 3:55 PM IST

ಕೃಷಿ ಇಲಾಖೆಗೆ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳನ್ನು ಸೇರಿಸುವ ಕೆಲಸ ನಡೆಯುತ್ತಿದೆ ಎಂದು ಸಚಿವ ಸತೀಶ್​ ಜಾರಕಿಹೊಳಿ ತಿಳಿಸಿದರು.

Etv Bharatminister-satish-jarakiholi-reaction-on-taking-mlas-to-abroad
ಹಾಲಿ, ಮಾಜಿ ಶಾಸಕರನ್ನು ಟೈಮ್ ಬಂದಾಗ ವಿದೇಶಕ್ಕೆ ಕರೆದುಕೊಂಡು ಹೋಗೋಣ: ಸತೀಶ್​ ಜಾರಕಿಹೊಳಿ

ಸಚಿವ ಸತೀಶ್​ ಜಾರಕಿಹೊಳಿ ಪ್ರತಿಕ್ರಿಯೆ

ಬೆಳಗಾವಿ: "ಟೈಮ್ ಬಂದಾಗ ಮಾಜಿ, ಹಾಲಿ ಶಾಸಕರನ್ನು ವಿದೇಶಕ್ಕೆ ಕರೆದುಕೊಂಡು ಹೋಗೋಣ" ಎಂದು ಲೋಕೋಪಯೋಗಿ ಸಚಿವ ಸತೀಶ್​ ಜಾರಕಿಹೊಳಿ ಹೇಳಿದರು.

ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ಹೊರೆಯಾಗುತ್ತಿದೆ ಎಂದು ಕೃಷಿ ಇಲಾಖೆಗೆ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳನ್ನು ಸೇರಿಸಲು ಸರ್ಕಾರ ಮುಂದಾಗಿದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಕೆಲವು ಇಲಾಖೆಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುವ ಅವಶ್ಯಕತೆ ಇಲ್ಲವೆಂದು, 10 ವರ್ಷಗಳ ಹಿಂದೆಯೇ ಈ ಇಲಾಖೆಗಳನ್ನು ಒಟ್ಟಿಗೆ ಸೇರಿಸಬೇಕೆಂದು ವರದಿ ಕೊಟ್ಟಿದ್ದಾರೆ. ಅದರ ಆಧಾರದ ಮೇಲೆ ಇಲಾಖೆಗಳನ್ನು ಒಟ್ಟಿಗೆ ಸೇರಿಸುವ ಕೆಲಸ ನಡೆಯುತ್ತಿದೆ. ಗ್ಯಾರಂಟಿ ಯೋಜನೆಗಳಿಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ" ಎಂದು ಸ್ಪಷ್ಟಪಡಿಸಿದರು.

ಕಾಂತರಾಜು ವರದಿ ಸ್ವೀಕರಿಸಿದರೆ ಕಾಂಗ್ರೆಸ್ ಸರ್ಕಾರಕ್ಕೆ ತೊಂದರೆ ಆಗುತ್ತದೆಯಾ ಎಂಬ ಪ್ರಶ್ನೆಗೆ ಉತ್ತರಿಸಿ, "ಇನ್ನೂ ನಮಗೆ ವರದಿಯನ್ನೇ ಕೊಟ್ಟಿಲ್ಲ. ವರದಿ ಕೊಡಬೇಕು‌. ಅದರ ಬಗ್ಗೆ ಚರ್ಚೆಯಾಗಬೇಕು. ಅದಕ್ಕೆ ಸುದೀರ್ಘ ಪ್ರಕ್ರಿಯೆ ನಡೆಯುತ್ತದೆ. ಆ ವರದಿ ಬಂದ ಬಳಿಕ ನೋಡೋಣ. ಸಿಎಂ ಮತ್ತು ಡಿಸಿಎಂ ಇದ್ದಾರೆ, ಅವರು ಈ ಕುರಿತು ಚರ್ಚೆ ಮಾಡುತ್ತಾರೆ" ಎಂದು ಹೇಳಿದರು.

ಚಳಿಗಾಲದ ಅಧಿವೇಶನ ಸಿದ್ಧತೆ ಬಗ್ಗೆ ಮಾತನಾಡಿ, "ಜಿಲ್ಲಾಧಿಕಾರಿಗಳು, ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಈಗಾಗಲೇ ಎಲ್ಲ ರೀತಿ ಸಿದ್ಧತೆ ಮಾಡಿದ್ದಾರೆ. ಕಳೆದ ಬಾರಿ ಅಧಿವೇಶನ ನಡೆಸಿದ ಅನುಭವ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರಿಗಿದ್ದು, ಈ ಬಾರಿಯ ಅಧಿವೇಶನವೂ ಏನೂ ತೊಂದರೆ ಆಗದೇ ಸುಗಮವಾಗಿ ನಡೆಯಲಿದೆ" ಎಂದರು. ಸುವರ್ಣ ಸೌಧದ ಬಳಿ ಪ್ರತಿಭಟನೆಗಳು ನಡೆಯುವ ವಿಚಾರವಾಗಿ ಮಾತನಾಡಿ, "ಪ್ರತಿಭಟನೆ ಮಾಡಲು ಬರುವವರನ್ನು ಬರಬೇಡ ಎನ್ನಲು ಬರುವುದಿಲ್ಲ. ಆಯಾ ಇಲಾಖೆ ಸಚಿವರು ಮೊದಲೇ ಅವರ ಅಹವಾಲುಗಳನ್ನು ಸ್ವೀಕರಿಸಿದರೆ ಪ್ರತಿಭಟನೆಗಳು ಸ್ವಲ್ಪ ಕಡಿಮೆ ಆಗಬಹುದು" ಎಂದರು.

ಇದನ್ನೂ ಓದಿ: ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2ರ ಆರನೇ ವರದಿ ಸಿಎಂಗೆ ಸಲ್ಲಿಕೆ: ವರದಿಯಲ್ಲಿರುವ ಶಿಫಾರಸುಗಳೇನು?

ಅಧಿವೇಶನಕ್ಕೆ ಸಿದ್ಧಗೊಳ್ಳುತ್ತಿದೆ ಸುವರ್ಣ ವಿಧಾನಸೌಧ: ಡಿ.4 ರಿಂದ ಚಳಿಗಾಲದ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಭರದ ಸಿದ್ಧತೆ ನಡೆಯುತ್ತಿದೆ. ಸೌಧದ ಸ್ವಚ್ಛತೆ ಸೇರಿ ಇನ್ನಿತರ ಕಾರ್ಯಗಳಲ್ಲಿ ಸಿಬ್ಬಂದಿ‌ ಮಗ್ನರಾಗಿದ್ದಾರೆ. 10 ದಿನಗಳ ಕಾಲ ನಡೆಯುವ ಚಳಿಗಾಲ ಅಧಿವೇಶನಕ್ಕೆ ಸುವರ್ಣ ವಿಧಾನಸೌಧ ಸರ್ವ ರೀತಿಯಲ್ಲೂ ಸನ್ನದ್ಧವಾಗುತ್ತಿದೆ. ಅಧಿವೇಶನದ ಹಿನ್ನೆಲೆ ಸುವರ್ಣ ಸೌಧ ಮದುವಣಗಿತ್ತಿಯಂತೆ ಶೃಂಗಾರಗೊಳ್ಳುತ್ತಿದೆ. ಸೌಧದ ಪ್ರವೇಶ ದ್ವಾರಗಳ ಕಂಬಗಳು ಮತ್ತು ಒಳ ಛಾವಣಿಗೆ ಬಣ್ಣವನ್ನೂ ಬಳಿಯಲಾಗುತ್ತಿದೆ. ಇನ್ನು ವಿಧಾನಸಭೆ ಮತ್ತು ವಿಧಾನ ಪರಿಷತ್ ಸಭಾಂಗಣ, ಮುಖ್ಯಮಂತ್ರಿ, ಸಚಿವರು ಹಾಗೂ ಅಧಿಕಾರಿಗಳ ಕಚೇರಿ, ಸೌಧದ ಮೆಟ್ಟಿಲುಗಳು ಸೇರಿ ಇಡೀ ಸೌಧವನ್ನು ಸಿಬ್ಬಂದಿ ಸ್ವಚ್ಛಗೊಳಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.