ETV Bharat / state

ಪ್ರತಿಭಟನೆ ಮಾಡಲು ಬಿಜೆಪಿಗೆ ಯಾವ ನೈತಿಕತೆ ಇದೆ? ಸಚಿವ ಗುಂಡೂರಾವ್ ವಾಗ್ದಾಳಿ

author img

By ETV Bharat Karnataka Team

Published : Dec 13, 2023, 1:02 PM IST

ಪ್ರತಿಭಟನೆ ಮಾಡಲು ಬಿಜೆಪಿಗೆ ಯಾವ ನೈತಿಕತೆ ಇದೆ ಎಂದು ಸಚಿವ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ವಿರುದ್ಧ ಸಚಿವ ಗುಂಡೂರಾವ್ ವಾಗ್ದಾಳಿ
ಬಿಜೆಪಿ ವಿರುದ್ಧ ಸಚಿವ ಗುಂಡೂರಾವ್ ವಾಗ್ದಾಳಿ

ಬೆಳಗಾವಿ: ಬರ ಹಿನ್ನೆಲೆಯಲ್ಲಿ ಕೇಂದ್ರದ ಬರ ಅಧ್ಯಯನ ತಂಡ ಬಂದು ಹೋಗಿ ಸುಮಾರು ತಿಂಗಳುಗಳೇ ಕಳೆದುಹೋಗಿವೆ. ಈಗಾಗಲೇ ರಾಜ್ಯದಿಂದ ಬರಗಾಲದ‌ ಕುರಿತು ಸಂಪೂರ್ಣ ವರದಿ ಕಳಿಸಲಾಗಿದೆ. ಆದರೆ, ಕೇಂದ್ರ ಸರ್ಕಾರದಿಂದ ಈವರೆಗೆ ಒಂದು ರೂಪಾಯಿಯೂ ಬಂದಿಲ್ಲ ಎಂದು ಸಚಿವ ದಿನೇಶ್​ ಗುಂಡೂರಾವ್ ವಾಗ್ದಾಳಿ ನಡೆಸಿದರು.

ಬಿಜೆಪಿ ಪ್ರತಿಭಟನೆ ಸಮಾವೇಶ ವಿಚಾರಕ್ಕೆ ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಜ್ಯದ‌‌ ಅನುದಾನ ಕುರಿತಂತೆ ಕೃಷ್ಣ ಬೈರೇಗೌಡರು ಘೋಷಣೆ ಮಾಡಿದ್ದಾರೆ. ಮುಂದೆಯೂ‌ ಸಹಿತ ಏನು‌ ಮಾಡುತ್ತೇವೆ ಎನ್ನುವುದನ್ನು ಸಿಎಂ ಹೇಳುತ್ತಾರೆ. ಆದರೆ ಬಿಜೆಪಿಯವರ ಜವಾಬ್ದಾರಿ‌ ಏನೂ ಇಲ್ಲವಾ? ಕೇಂದ್ರದ 25 ಸಂಸದರನ್ನು ಕರೆದುಕೊಂಡು ಒಂದು‌ ಮಾತೂ‌ ಸಹ ಆಡೋದಕ್ಕೆ ತಯಾರಿಲ್ಲ ಎಂದರು.

ರಾಜ್ಯದಲ್ಲಿ ಅವರ ಸರ್ಕಾರ ಹೋಯಿತು ಅಂತ ಉದ್ದೇಶಪೂರ್ವಕಾಗಿ ನಮ್ಮ ಜನರಿಗೆ‌ ತೊಂದರೆ ಕೊಡಬೇಕೆಂದು ಮೋದಿಯವರು‌ ಹೀಗೆ ಮಾಡ್ತಿದ್ದಾರೆ. ಇಷ್ಟು ನಿರ್ಲಕ್ಷ್ಯ ಮನೋಭಾವನೆ ಯಾಕೆ? ನಮ್ಮ ಮಂತ್ರಿಗಳು ಹೋದರೆ‌ ಭೇಟಿ ಆಗೋಕೂ ಕೂಡ ತಯಾರಿಲ್ಲ. ಇಷ್ಟು ತಾತ್ಸಾರ ಮನೋಭಾವ ಹೊಂದಿರಬೇಕಾದರೆ ಬಿಜೆಪಿಯವರ ಇಂದಿನ ಹೋರಾಟಕ್ಕೆ ಯಾವ ನೈತಿಕತೆ ಇದೆ ಎಂದು ಗುಂಡೂರಾವ್​ ಪ್ರಶ್ನಿಸಿದ್ದಾರೆ.

ಬಿಜೆಪಿಯವರ ಹೋರಾಟಕ್ಕೆ ಯಾವುದೇ ತರ್ಕ ಇಲ್ಲ: ಇವರು ಜನರಿಗೆ ನ್ಯಾಯ ಒದಗಿಸಿ ನಮ್ಮ ವಿರುದ್ಧ ಹೋರಾಟ ಮಾಡಿದ್ರೆ ಒಪ್ಪಿಕೊಳ್ಳಬಹುದು. ಒಂದು ಪರ್ಸೆಂಟ್ ಕೂಡ ನಮಗೆ ಇವರಿಂದ ಸಹಾಯ ಆಗಿಲ್ಲ. ಆದರೆ ನಾವು ಮಾಡ್ತಿದ್ದೇವೆ. ಹೀಗಾಗಿ ಬಿಜೆಪಿಯವರ ಇಂಥಹ ಹೋರಾಟಗಳಿಗೆ ಯಾವುದೇ ತರ್ಕ ಇಲ್ಲ ಎಂದು ದಿನೇಶ ಗುಂಡೂರಾವ್ ತಿರುಗೇಟು ಕೊಟ್ಟರು. ಇನ್ನು ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಕುರಿತು‌ ಸಮಸ್ಯೆ ಚರ್ಚೆ ಆಗುತ್ತಿಲ್ಲ, ವಿರೋಧ ಪಕ್ಷದವರು ಕೇವಲ ರಾಜಕೀಯಕ್ಕೋಸ್ಕರ ಸದನದ ಭಾವಿಗಿಳಿಯುತ್ತಿದ್ದಾರೆ ಎಂದು ಸಚಿವರು ಕಿಡಿಕಾರಿದರು.

ಯಾವುದೇ ಸಮಸ್ಯೆ ಬಗ್ಗೆ ಚರ್ಚೆ ಮಾಡೋಕೆ ಅವಕಾಶ ಕೊಡ್ತಿಲ್ಲ. ಸ್ಪಷ್ಟವಾಗಿ ಒಂದೂ ವಿಷಯವನ್ನೂ‌ ಸಹ ಎತ್ತುತ್ತಿಲ್ಲ. ನಿನ್ನೆ ಅನಾವಶ್ಯಕವಾಗಿ ಶಾಸಕ ಸುನೀಲ್​ಕುಮಾರ್​ ಅವರು ಸಚಿವ ಕೆ ಜೆ ಜಾರ್ಜ್​ ರನ್ನು ಅಸಮರ್ಥ‌ ಸಚಿವರು ಎಂದು ಕರೆದರು. ಸಮರ್ಥ ಇರುವುದರಿಂದಲೇ ಜಾರ್ಜ್ ಕೆಲಸ‌ ಮಾಡ್ತಿದ್ದಾರೆ. ಅಸಮರ್ಥ ಆಗಿರೋದು ಇವತ್ತು ವಿರೋಧ ಪಕ್ಷ ಹಾಗೂ ವಿರೋಧ ಪಕ್ಷದ‌ ನಾಯಕರು. ಜನರ ಪರ ಸದುದ್ದೇಶದಿಂದ ನಡೆದುಕೊಳ್ಳದೇ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಸಚಿವ ದಿನೇಶ ಗುಂಡೂರಾವ್ ಹರಿಹಾಯ್ದರು.

ಇದನ್ನೂ ಓದಿ: ಜಾತಿ ಗಣತಿಗೆ ವಿರೋಧವಿಲ್ಲ, ವೈಜ್ಞಾನಿಕ ಸಮೀಕ್ಷೆ ಆಗಲಿ: ಡಿಕೆ ಶಿವಕುಮಾರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.