ETV Bharat / state

ಹುಬ್ಬಳ್ಳಿ- ಬೆಳಗಾವಿ ವಿಮಾನ ನಿಲ್ದಾಣಕ್ಕೆ ಸ್ವಾತಂತ್ರ್ಯ ಹೋರಾಟಗಾರರ ಹೆಸರಿಡಲು ಕೇಂದ್ರಕ್ಕೆ ಶಿಫಾರಸ್ಸು:ಎಂ.ಬಿ ಪಾಟೀಲ್

author img

By ETV Bharat Karnataka Team

Published : Dec 13, 2023, 3:50 PM IST

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಬೆಳಗಾವಿ ವಿಮಾನ ನಿಲ್ದಾಣಕ್ಕೆ ವೀರರಾಣಿ ಕಿತ್ತೂರು ಚೆನ್ನಮ್ಮ ಹೆಸರಿಡುವ ವಿಷಯವನ್ನು ಶಾಸಕ ಎನ್.ಹೆಚ್ ಕೊನರೆಡ್ಡಿ ಪ್ರಸ್ತಾಪಿಸಿದರು.

ಸಚಿವ ಎಂ.ಬಿ ಪಾಟೀಲ್
ಸಚಿವ ಎಂ.ಬಿ ಪಾಟೀಲ್

ಬೆಂಗಳೂರು/ ಬೆಳಗಾವಿ : ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಬೆಳಗಾವಿಯ ವಿಮಾನ ನಿಲ್ದಾಣಕ್ಕೆ ವೀರರಾಣಿ ಕಿತ್ತೂರು ಚನ್ಮಮ್ಮ ಎಂದು ನಾಮಕರಣ ಮಾಡಲು ಗೊತ್ತುವಳಿ ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು ಎಂದು ಬೃಹತ್ ಕೈಗಾರಿಕಾ ಸಚಿವರಾದ ಎಂ.ಬಿ. ಪಾಟೀಲ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಬುಧವಾರ ಶೂನ್ಯ ವೇಳೆಯಲ್ಲಿ ಶಾಸಕ ಎನ್.ಹೆಚ್ ಕೊನರೆಡ್ಡಿ ಅವರು ಪ್ರಸ್ತಾಪಿಸಿದ ವಿಷಯ ಹಾಗೂ ಶ್ರೀನಿವಾಸ ಮಾನೆ ನೀಡಿದ ಪತ್ರದನ್ವಯ ಮಾತನಾಡಿದ ಸಚಿವರು, ವಿಮಾನ ನಿಲ್ದಾಣಗಳಿಗೆ ನಾಮಕರಣಗೊಳಿಸುವುದು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಡುತ್ತದೆ. ಆದರೂ ಶಾಸಕರ ಬೇಡಿಕೆ ಅನ್ವಯ ಎರಡೂ ಸದನಗಳಲ್ಲಿ ಗೊತ್ತುವಳಿ ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸು ಕಳುಹಿಸಲಾಗುವುದು ಎಂದು ಹೇಳಿದರು.

ಶಾಸಕ ಅರವಿಂದ ಬೆಲ್ಲದ್ ಹಾಗೂ ಬಸನಗೌಡ ಪಾಟೀಲ ಯತ್ನಾಳ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ಎರಡೂ ಸದನಗಳ ಸರ್ವ ಸದಸ್ಯರ ಒಪ್ಪಿಗೆ ಇದ್ದು, ತಕ್ಷಣ ಸರ್ಕಾರವು ಈ ಕುರಿತು ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ಸಾರ್ವಜನಿಕ ಉದ್ಯಮಗಳ ಸಮಿತಿ ವರದಿ ಮಂಡನೆ : ಶಾಸಕ ಯು.ಬಿ ಬಣಕಾರ್ ಅವರು ವಿಧಾನಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಂಬಂಧಿಸಿದಂತೆ ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರ “ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತಕ್ಕೆ ಸಂಬಂಧಿಸಿದ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆ ಮೇಲಿನ ಸಮಿತಿಯ ಶಿಫಾರಸುಗಳನ್ನೊಳಗೊಂಡ ಸಾರ್ವಜನಿಕ ಉದ್ಯಮಗಳ ಸಮಿತಿಯ 136ನೇ ವರದಿಯನ್ನು ಸದನದ ಮುಂದೆ ಮಂಡಿಸಿದರು.

ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತ ಚರ್ಚೆ : ವಿಧಾನಸಭೆಯಲ್ಲಿ ಮಂಗಳವಾರ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ್ದ ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್ ಅಲ್ಲಿನ ಸಮಸ್ಯೆಗಳು ಮತ್ತು ಜನಪ್ರತಿನಿಧಿಗಳು ತಾತ್ಸಾರ ಮನೋಭಾವದ ಕುರಿತು ಸದನದ ಗಮನಕ್ಕೆ ತಂದರು. ಉತ್ತರ ಕರ್ನಾಟಕದ ಭಾಗಕ್ಕೆ ಎಚ್.ಕೆ ಪಾಟೀಲ್, ಎಂ. ಬಿ ಪಾಟೀಲ್, ಬಸವರಾಜ ಬೊಮ್ಮಾಯಿ ಅವರು ಬಿಟ್ಟರೆ ಉಳಿದೆಲ್ಲ ನೀರಾವರಿ ಮಂತ್ರಿಗಳು ಹಳೆ ಮೈಸೂರು ಭಾಗದವರಾಗಿದ್ದಾರೆ. ಹೀಗಾಗಿ ಈ ಭಾಗದ ನೀರಿನ ಸಮಸ್ಯೆ ಬಗ್ಗೆ ಮಾಹಿತಿ ಇಲ್ಲವಾಗಿದೆ ಎಂದು ಹೇಳಿದ್ದರು.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ನೀರಾವರಿ ಮಂತ್ರಿಯಾಗಿದ್ದಾಗ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಲು ಹೊರಟರು. ಆದರೆ, ಅವರ ವಿರುದ್ಧ ಕುತಂತ್ರ ರಾಜಕಾರಣ ಮಾಡಿದರು. ಇಂತಹ ಕೆಟ್ಟ ರಾಜಕಾರಣ ಬೇಕಿರಲಿಲ್ಲ. ಇದು ನಮ್ಮ ಭಾಗದ ಅಭಿವೃದ್ಧಿಗೆ ಹಿನ್ನಡೆ ತಂದಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ : ಸದನದೊಳಗೆ ಬಿಟ್ಟು, ಹೊರಗೆ ಮಾತನಾಡಿದರೆ ಯಾರ್ರೀ ಕೇಳ್ತಾರೆ: ಡಿಸಿಎಂ ಡಿ ಕೆ ಶಿವಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.