ETV Bharat / state

ಸಾರ್ವಜನಿಕರಿಗೆ ಸಮಸ್ಯೆ ಪರಿಹಾರದ ಜೊತೆ ಜ್ಞಾನ ದಾಸೋಹ: ಬೆಳಗಾವಿ ಡಿಸಿ ಕಾರ್ಯಕ್ಕೆ ಜನ ಮೆಚ್ಚುಗೆ

author img

By

Published : Aug 2, 2023, 2:03 PM IST

Updated : Aug 2, 2023, 8:10 PM IST

ಸಾರ್ವಜನಿಕರು ಜಿಲ್ಲಾಧಿಕಾರಿಯನ್ನು ಭೇಟಿಯಾಗಲು ಕಾಯುವಷ್ಟು ಸಮಯ ವ್ಯರ್ಥವಾಗದಂತೆ, ಓದಲು ನೂರಾರು ಪುಸ್ತಕಗಳನ್ನು ಜೋಡಿಸಲಾಗಿದೆ.

Belagavi DC Office
ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ

ಡಿಸಿ ಕಚೇರಿಯಲ್ಲಿ ಲೈಬ್ರರಿ

ಬೆಳಗಾವಿ: ಜಿಲ್ಲೆಯ‌ ವಿವಿಧೆಡೆಯಿಂದ ಸಮಸ್ಯೆಗಳನ್ನು ಹೊತ್ತು ಬರುವ ಜನರಿಗೆ ಸಮಸ್ಯೆ ನಿವಾರಣೆ ಜೊತೆಗೆ ಜ್ಞಾನ ಭಂಡಾರವನ್ನು ಉಣಬಡಿಸುವ ಕೆಲಸವನ್ನು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮತ್ತು ಜಿಲ್ಲಾ ಪಂಚಾಯಿತಿ ಮಾಡುತ್ತಿರುವುದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Belagavi DC Office
ಜಿಲ್ಲಾಧಿಕಾರಿ ಕಚೇರಿಯಲ್ಲಿ ಪುಸ್ತಕಗಳನ್ನು ಓದುತ್ತಿರುವುದು

ಒಂದೆಡೆ ಶಿಸ್ತಿನಿಂದ ಆಸನಗಳಲ್ಲಿ ಕುಳಿತುಕೊಂಡು ಪುಸ್ತಕ ಓದುತ್ತಿರುವ ಜನ, ಮತ್ತೊಂದೆಡೆ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳ ಭಾವಚಿತ್ರಗಳು ಎಲ್ಲರ ಗಮನ ಸೆಳೆಯುತ್ತಿರುವುದು. ಹೌದು ಜಿಲ್ಲಾಧಿಕಾರಿ ಕಚೇರಿಗೆ ನಿತ್ಯ ವಿವಿಧ ಕೆಲಸದ ನಿಮಿತ್ತ ನೂರಾರು ಜನ ಆಗಮಿಸುತ್ತಾರೆ. ಈ ವೇಳೆ ಜಿಲ್ಲಾಧಿಕಾರಿಗಳು ಬೇರೆ ಕೆಲಸದಲ್ಲಿ ನಿರತರಾಗಿದ್ದರೆ, ಸಾರ್ವಜನಿಕರ ಸಮಯ ವ್ಯರ್ಥವಾಗುತ್ತದೆ. ಹಾಗಾಗಿ ಜನರಿಗೆ ಅನುಕೂಲ ಆಗಲಿ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಮ್ಮ ಕಚೇರಿ ಮುಂಭಾಗದ ಹಾಲ್​ನಲ್ಲಿ ಒಂದು ಚಿಕ್ಕ ಲೈಬ್ರರಿ ಮತ್ತು ಫೋಟೋ ಗ್ಯಾಲರಿ ನಿರ್ಮಿಸಿದ್ದಾರೆ.

Belagavi DC Office
ಜಿಲ್ಲಾಧಿಕಾರಿ ಕಚೇರಿಯಲ್ಲಿ ಪುಸ್ತಕಗಳ ಸಂಗ್ರಹ

ಈ ಲೈಬ್ರರಿಯಲ್ಲಿ ಕನ್ನಡದ ಕಥೆ, ಕಾದಂಬರಿ, ಕವನ, ಬಸವಾದಿ ಶರಣರ ವಚನಗಳು ಮತ್ತು ಜೀವನ ಚರಿತ್ರೆ, ಸಂವಿಧಾನ, ಭಗವಾನ್ ಬುದ್ಧ, ದಾಸಶ್ರೇಷ್ಠ ಕನಕದಾಸ, ಮಹಾತ್ಮ ಗಾಂಧೀಜಿ, ಡಾ.ಬಿ.ಆರ್. ಅಂಬೇಡ್ಕರ್, ಸಿದ್ಧಾಂತ ಶಿಖಾಮನಿ, ವೇದ, ಉಪನಿಷತ್ತುಗಳು, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕೈಪಿಡಿ, ಮಾಹಿತಿ ಹಕ್ಕು ಅಧಿನಿಯಮ - 2005, ಕರ್ನಾಟಕ ಸಿವಿಲ್ ಸೇವಾ ನಿಯಮಗಳು, ಸರ್ಕಾರದ ಯೋಜನೆಗಳ ಕೈಪಿಡಿ ಸೇರಿ ವಿವಿಧ ಪುಸ್ತಕಗಳು ಇಲ್ಲಿಗೆ ಆಗಮಿಸುವ ಜನರಿಗೆ ಜ್ಞಾನ ದಾಸೋಹ ನೀಡುತ್ತಿವೆ.

Belagavi DC Office
ಜಿಲ್ಲಾಧಿಕಾರಿ ನಿತೇಶ ಪಾಟೀಲ

ಕಣ್ಮನ ಸೆಳೆಯುತ್ತಿರುವ ಡಿಜಿಟಲ್ ಫೋಟೋಗಳು: ಇನ್ನು ರಾಮದುರ್ಗ ತಾಲೂಕಿನ ಮುಳ್ಳೂರ ಗುಡ್ಡದಲ್ಲಿರುವ ಬೃಹದಾಕಾರದ ಶಿವನ‌ ಮೂರ್ತಿ, ಕಣಬರಗಿಯ ಸಿದ್ದೇಶ್ವರ ದೇವಸ್ಥಾನ, ಗೋಕಾಕ್ ತಾಲೂಕಿನ ದೂಫದಾಳ ಜಲಾಶಯ, ಖಾನಾಪುರ ತಾಲೂಕಿನ ಚಿಕಲೆ ಜಲಪಾತ, ಹಲಸಿಯ ಐತಿಹಾಸಿಕ ರಾಮತೀರ್ಥ ಮಂದಿರ, ಕಿಲ್ಲಾ ಕೆರೆ ಆವರಣದಲ್ಲಿನ ದೇಶದ ಅತೀ ದೊಡ್ಡ ತಿರಂಗಾ ಧ್ವಜ, ಮಹಾತ್ಮಾ ಗಾಂಧೀಜಿ ಭೇಟಿ ನೀಡಿದ್ದ ವೀರಸೌಧ, ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ, ಸುವರ್ಣ ವಿಧಾನಸೌಧ, ಭೂತರಾಮನಹಟ್ಟಿಯ ರಾಣಿ ಚನ್ನಮ್ಮ ಮೃಗಾಲಯ, ಜಿಲ್ಲೆಯ ವಿಶೇಷ ತಿನಿಸುಗಳಾದ ಕುಂದಾ - ಕರದಂಟು - ಮಿಸಳ್ ಪಾವ್ - ಕಬ್ಬಿನ ಹಾಲಿನ ಡಿಜಿಟಲ್ ಫೋಟೋಗಳು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸುವ ಪ್ರತಿಯೊಬ್ಬರನ್ನು ಆಕರ್ಷಿಸುತ್ತಿವೆ. ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳ ಪರಿಚಯ ಈ ಫೋಟೋಗಳು ಮಾಡಿ ಕೊಡುತ್ತಿವೆ.

Belagavi DC Office
ಜಿಲ್ಲಾಧಿಕಾರಿ ಕಚೇರಿಯಲ್ಲಿ ಪುಸ್ತಕಗಳನ್ನು ಓದುತ್ತಿರುವುದು

ಪುಸ್ತಕ ಕೊಡಿ, ಹೂಗುಚ್ಛ ಬೇಡ - ಡಿಸಿ: ಜಿಲ್ಲಾಧಿಕಾರಿ ನಿತೇಶ ಪಾಟೀಲ ಈಟಿವಿ ಭಾರತ ಜೊತೆಗೆ ಮಾತನಾಡಿ, ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಗೆ ಜಿಲ್ಲೆ 15 ತಾಲೂಕುಗಳಿಂದ ಜನ‌ ಬರುತ್ತಾರೆ. ಹೀಗೆ ಬರುವ ಜನರಿಗೆ ಕುಳಿತುಕೊಳ್ಳಲು ಸುಸಜ್ಜಿತವಾದ ಆಸನಗಳ ವ್ಯವಸ್ಥೆ ಮಾಡಿದ್ದು, ಒಂದು ಚಿಕ್ಕ ಲೈಬ್ರರಿಯನ್ನೂ ಆರಂಭಿಸಿದ್ದೇವೆ. ಅದೇ ರೀತಿ, ಕಳೆದ ಒಂದು ವರ್ಷದಿಂದ ನಾವು ಹೂಗುಚ್ಛಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದ್ದು, ಹೀಗೆ ಒಂದು ವರ್ಷದಿಂದ ಹೂಗುಚ್ಛದ ಬದಲು ಸಾರ್ವಜನಿಕರು ನಮಗೆ ಕೊಟ್ಟಿರುವ ಪುಸ್ತಕಗಳನ್ನು ಈ ಲೈಬ್ರಿಯಲ್ಲಿ ಇಟ್ಟಿದ್ದೇವೆ. ಅದೇ ರೀತಿ ಜಿಲ್ಲೆಯ ಪ್ರವಾಸಿ ತಾಣಗಳ ಭಾವಚಿತ್ರಗಳ ಗ್ಯಾಲರಿಯನ್ನೂ ಮಾಡಿದ್ದು, ಬಹಳಷ್ಟು ಸಾರ್ವಜನಿಕರು ಇದಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದರು.

Belagavi DC Office
ಜಿಲ್ಲಾಧಿಕಾರಿ ಕಚೇರಿಯಲ್ಲಿ ಪುಸ್ತಕಗಳನ್ನು ಓದುತ್ತಿರುವುದು

ಕನ್ನಡ ಹೋರಾಟಗಾರ ಬಾಬು ಸಂಗೋಡಿ ಮಾತನಾಡಿ, ವಿವಿಧ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಲು ಜಿಲ್ಲಾಧಿಕಾರಿ ಕಚೇರಿಗೆ ನಿತ್ಯ ಬಹಳಷ್ಟು ಜನರು ಬರುತ್ತಾರೆ. ಇಲ್ಲಿ ಜಿಲ್ಲಾಧಿಕಾರಿಗಳು ಆರಂಭಿಸಿರುವ ಗ್ರಂಥಾಲಯ ಮತ್ತು ಪ್ರವಾಸಿ ತಾಣಗಳ ಭಾವಚಿತ್ರಗಳನ್ನು ನೋಡಿ ಬಹಳಷ್ಟು ಖುಷಿ ಆಗುತ್ತಿದೆ. ಪ್ರತಿಯೊಬ್ಬರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೇಳಿಕೊಂಡರು.

Belagavi DC Office
ಜಿಲ್ಲಾಧಿಕಾರಿ ಕಚೇರಿಯಲ್ಲಿ ಪುಸ್ತಕಗಳನ್ನು ಓದುತ್ತಿರುವುದು

ಜಿಪಂ ಲೈಬ್ರಿಗೆ ಹೈಟೆಕ್ ಟಚ್: ಜಿಪಂ ಕಚೇರಿಗೆ ಆಗಮಿಸುವ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಸುಸಜ್ಜಿತ ಆಸನಗಳ ವ್ಯವಸ್ಥೆಯಿದೆ. ಅಲ್ಲದೇ ಉಚಿತ ವೈಫೈ ಕೂಡ ಇದೆ. ಕಳೆದ ವರ್ಷ ಜೂನ್, ಜುಲೈ ತಿಂಗಳಲ್ಲಿ ಹಿಂದಿನ ಸಿಇಒ ದರ್ಶನ್ ಅವರು ಈ ಲೈಬ್ರರಿ ಆರಂಭಿಸಿದ್ದರು. ಈಗ ಅದನ್ನು ನಾವು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ವಿವಿಧ ವಿಷಯಗಳ 100ಕ್ಕೂ ಹೆಚ್ಚು ಪುಸ್ತಕಗಳು ಇಲ್ಲಿದ್ದು, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದು ಜಿಪಂ ಸಿಇಒ ಹರ್ಷಲ್ ಭೊಯರ್ ತಿಳಿಸಿದ್ದಾರೆ. ಒಟ್ಟಿನಲ್ಲಿ ಜಿಲ್ಲೆಯ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಜೊತೆಗೆ ಅವರ ಜ್ಞಾನವೃದ್ಧಿ ಮಾಡುತ್ತಿರುವ ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಒ ಅವರ ಕಾರ್ಯಕ್ಕೆ ಎಲ್ಲೆಡೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಅಪ್ಪು ಅಭಿಮಾನಿಯಿಂದ ₹10 ಲಕ್ಷ ವೆಚ್ಚದಲ್ಲಿ ಗ್ರಂಥಾಲಯ ನಿರ್ಮಾಣ

Last Updated : Aug 2, 2023, 8:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.