ETV Bharat / state

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ: ಜಿಲ್ಲಾ, ತಾಲ್ಲೂಕು ಕೇಂದ್ರದಿಂದ ಪ್ರವೇಶಕ್ಕೆ ಕೇಂದ್ರಕ್ಕೆ ಮನವಿ

author img

By

Published : Dec 28, 2022, 5:34 PM IST

ಬೆಂಗಳೂರು-ಮೈಸೂರು ದಶಪಥ ರಸ್ತೆ ಎಕ್ಸ್​ಪ್ರೆಸ್ ವೇಗೆ ಮಂಡ್ಯ ಸುತ್ತಮುತ್ತಲಿನ ಜನರಿಗೆ ಪ್ರವೇಶ ಸಿಗುತ್ತಿಲ್ಲ ಎಂಬ ವಿಚಾರ ಇಂದು ವಿಧಾನ ಪರಿಷತ್‌ನಲ್ಲಿ ಚರ್ಚೆಗೆ ಬಂತು. ಈ ಕುರಿತು ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಅವರ ಪ್ರಶ್ನೆಗೆ ಲೋಕೋಪಯೋಗಿ ಸಚಿವ ಉತ್ತರಿಸಿದರು.

question-and-answer-session
ವಿಧಾನ ಪರಿಷತ್​ ಪ್ರಶ್ನೋತ್ತರ ಕಲಾಪ

ಬೆಳಗಾವಿ/ಬೆಂಗಳೂರು: ಬೆಂಗಳೂರು-ಮೈಸೂರು ದಶಪಥ ರಸ್ತೆ ಎಕ್ಸ್​ಪ್ರೆಸ್ ವೇ ಆಗಿರುವುದರಿಂದ ಅದು ಬೆಂಗಳೂರಿನಿಂದ ಮೈಸೂರಿಗೆ, ಮೈಸೂರಿನಿಂದ ಬೆಂಗಳೂರಿಗೆ ಬರುವವರ ಬಳಕೆಗೆ ಮಾತ್ರ ಮೀಸಲಾಗಿದೆ. ಜಿಲ್ಲಾ ಕೇಂದ್ರ ಮತ್ತು ತಾಲ್ಲೂಕು ಕೇಂದ್ರದಿಂದ ರಸ್ತೆಗೆ ಪ್ರವೇಶ ಮತ್ತು ನಿರ್ಗಮನಕ್ಕೆ ಅವಕಾಶ ಕಲ್ಪಿಸುವ ಕುರಿತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುತ್ತದೆ ಎಂದು ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್ ತಿಳಿಸಿದರು.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಬೆಂಗಳೂರು ಮೈಸೂರು ದಶಪಥ ರಸ್ತೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಳಪೆ ಕಾಮಗಾರಿ ಆರೋಪ ಮಾಡಿದ್ದಾರೆ. ಆದರೆ ಎರಡು ಬಾರಿ ಆ ಭಾಗಕ್ಕೆ ಹೋಗಿ ಪರಿಶೀಲನೆ ಮಾಡಿದ್ದೇವೆ. ಮಳೆ ಹೆಚ್ಚಾದಾಗ ರಾಮನಗರ, ಮಂಡ್ಯದಲ್ಲಿ ಕುಮಾರಸ್ವಾಮಿ ಕರೆಗೆ ಸ್ಪಂದಿಸಿ ಕೇವಲ 1 ಗಂಟೆಯಲ್ಲೇ ನಮ್ಮ ಸಿಎಂ ಭೇಟಿ ನೀಡಿ ಬಂದಿದ್ದಾರೆ. ಆ ಸಮಯದಲ್ಲಿ ಆದ ಮಳೆಯ ಗಾತ್ರವನ್ನೂ ಸದಸ್ಯರು ಗಮನಿಸಬೇಕು, ರಾಮನಗರದಲ್ಲಿ ಅಂಡರ್​ ಪಾಸ್​ನಲ್ಲಿ ಪ್ಯಾಸೇಜ್ ಸಾಮರ್ಥ್ಯಕ್ಕೂ ಮೀರಿ ಎರಡು ಮೂರು ಪಟ್ಟು ಮಳೆ ಬಂದಾಗ ನೀರು ಬಂದಿತ್ತು.

ಅದನ್ನು ಸರಿಪಡಿಸಲು ಸೂಚನೆ ಕೊಡಲಾಗಿದೆ. ಉಬ್ಬು ತಗ್ಗು ಸರಿಪಡಿಸಲು ಸೂಚನೆ ಕೊಡಲಾಗುತ್ತದೆ. ನಾರಾಯಣಸ್ವಾಮಿ ಗುರುಕುಲದಲ್ಲಿ ಒತ್ತುವರಿಯಾಗಿತ್ತು. ಶೇಷಗಿರಿ ಹಳ್ಳಿ ಟೀಲ್ ಪ್ಲಾಜಾದಲ್ಲಿ ಡ್ರೈನೇಜ್ ಬಂದ್ ಆಗಿತ್ತು ಅದನ್ನು ತೆರವಿಗೆ ಸೂಚನೆ ಕೊಡಲಾಗಿದೆ. ಅಲ್ಲಿ ಆನೆ ಕಾರಿಡಾರ್ ಇದೆ, ಹಾಗಾಗಿ ಸೂಕ್ಷ್ಮವಾಗಿ ಕೆಲಸ ಮಾಡಲಾಗುತ್ತಿದೆ ಎಂದು ವಿವರ ನೀಡಿದರು. ಇದು ದೊಡ್ಡ ಯೋಜನೆಯಾಗಿರುವ ಕಾರಣ, ಅನುಕೂಲ, ಅನಾನುಕೂಲ ಎರಡೂ ಇರಲಿದೆ.

ದೊಡ್ಡ ಯೋಜನೆ ಕಾರಣ ಎರಡು ಮೂರು ಕಡೆ ಮಾತ್ರ ಪ್ರವೇಶ, ನಿರ್ಗಮನ ವ್ಯವಸ್ಥೆ ಇರಲಿದೆ. ಎಕ್ಸ್​ಪ್ರೆಸ್ ವೇ ಬೆಂಗಳೂರಿನಿಂದ ಮೈಸೂರಿಗೆ ಹೋಗುವವರಿಗೆ ಮಾತ್ರ ಈ ರಸ್ತೆ ಇದೆ. ಹಾಗಾಗಿ ನಡುವೆ ಪ್ರವೇಶ ನಿರ್ಗಮನಕ್ಕೆ ವ್ಯವಸ್ಥೆ ಕಷ್ಟ. ಇದರ ನಡುವೆ ಇರುವ ಅಡೆತಡೆ ಪರಿಹರಿಸಲು ಸರ್ಕಾರ ಬದ್ದವಾಗಿದೆ ಎಂದರು. ಜಿಲ್ಲಾ ಕೇಂದ್ರದಿಂದ ಎಕ್ಸ್​ಪ್ರೆಸ್ ವೇ ಪ್ರವೇಶಕ್ಕೆ ಅವಕಾಶವಿಲ್ಲ ಎನ್ನುವ ಉತ್ತರಕ್ಕೆ ಮರಿತಿಬ್ಬೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಮಂಡ್ಯ ಸುತ್ತಮುತ್ತ ಜನರು ರಸ್ತೆ ಪ್ರವೇಶಕ್ಕೆ ಅವಕಾಶವಿಲ್ಲ, ಮದ್ದೂರಿನ ಜನರಿಗೆ ಅವಕಾಶ ಇಲ್ಲ ಎಂದರೆ ಹೇಗೆ? ಈ ಭಾಗ ಅಭಿವೃದ್ಧಿ ಆಗುವುದಾದರೂ ಹೇಗೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಚಿವರು, ಎಕ್ಸ್​ಪ್ರೆಸ್ ವೇ ಆಗಿರುವುದರಿಂದ ಜಿಲ್ಲೆ, ತಾಲ್ಲೂಕಿನಲ್ಲಿ ಪ್ರವೇಶ, ನಿರ್ಗಮಕ್ಕೆ ಅವಕಾಶ ಕೊಡಿ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಮಾಡಲಿದ್ದೇನೆ. ಜನವರಿ 5 ರಂದು ಎಕ್ಸ್​​ಪ್ರೆಸ್ ವೇ ಪರಿಶೀಲನೆಗೆ ಗಡ್ಕರಿ ಬರುತ್ತಾರೆ ಆಗ ಅವರ ಮುಂದೆ ಈ ಪ್ರಸ್ತಾವನೆ ಇರಿಸಲಾಗುತ್ತದೆ ಎಂದರು.

ಇದನ್ನೂ ಓದಿ: 8001.12 ಕೋಟಿ ರೂ. ಮೊತ್ತದ ಎರಡನೇ ಕಂತಿನ ಪೂರಕ ಅಂದಾಜು ವಿಧಾನಸಭೆಯಲ್ಲಿ ಮಂಡನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.