ಜಾತಿ ಧರ್ಮ‌ ಬದಿಗಿಟ್ಟು‌ ರಾಯಣ್ಣನ ದೇಶಪ್ರೇಮ ಬೆಳೆಸಿಕೊಳ್ಳಿ: ಸಿಎಂ ಸಿದ್ದರಾಮಯ್ಯ

author img

By ETV Bharat Karnataka Desk

Published : Jan 17, 2024, 4:59 PM IST

Updated : Jan 17, 2024, 7:43 PM IST

ಸಂಗೊಳ್ಳಿ ಉತ್ಸವಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ

ಸಂಗೊಳ್ಳಿ ಉತ್ಸವಕ್ಕೆ ಚಾಲನೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ದೇಶಕ್ಕೆ ಸ್ವಾತಂತ್ರ್ಯ‌ ತಂದು ಕೊಟ್ಟಿರುವುದು ಮಹಾತ್ಮ ಗಾಂಧೀಜಿ ನೇತೃತ್ವದ ಕಾಂಗ್ರೆಸ್‌ ಎಂಬುದನ್ನು ಮರೆಯುವಂತಿಲ್ಲ ಎಂದರು.

ಸಿಎಂ ಸಿದ್ದರಾಮಯ್ಯ

ಬೆಳಗಾವಿ: ನಾವು ಸಂಗೊಳ್ಳಿ ರಾಯಣ್ಣ ಆಗದಿದ್ದರೂ ಪರವಾಗಿಲ್ಲ. ಆದರೆ, ಜಾತಿಧರ್ಮ‌ ಬದಿಗಿಟ್ಟು‌ ಅವರ ದೇಶಪ್ರೇಮವನ್ನಾದರೂ ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು. ಬೆಳಗಾವಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಯಣ್ಣನ ಹುಟ್ಟೂರು ಸಂಗೊಳ್ಳಿ ಹಾಗೂ ನೇಣುಗಂಬಕ್ಕೆ ಏರಿಸಿದ ನಂದಗಡ ಅಭಿವೃದ್ಧಿಗೆ 2016 - 17ನೇ ಸಾಲಿನಲ್ಲಿ ಪ್ರಾಧಿಕಾರ ರಚಿಸಲಾಗಿದೆ. ರಾಯಣ್ಣನ ಹೆಸರು ಚಿರಸ್ಥಾಯಿಯಾಗಿಸಲು ಸಂಗೊಳ್ಳಿ ಮತ್ತು ನಂದಗಡ ಅಭಿವೃದ್ಧಿಗೆ ರಚಿಸಲಾದ ಪ್ರಾಧಿಕಾರಕ್ಕೆ ನೂರು ಎಕರೆ ಜಮೀನು ನೀಡಲಾಯಿತು. ಅಪ್ಪಟ ದೇಶಭಕ್ತ ರಾಯಣ್ಣ ಯುವಕರಿಗೆ ಸ್ಫೂರ್ತಿಯಾಗಬೇಕು ಎಂಬ ಕಾರಣಕ್ಕೆ 267 ಕೋಟಿ ವೆಚ್ಚದಲ್ಲಿ ಸೈನಿಕ ಶಾಲೆ, ಶಿಲ್ಪವನ ನಿರ್ಮಿಸಲಾಗಿದೆ. ಬಾಲಕಿಯರು ಸೇರಿದಂತೆ 230 ವಿದ್ಯಾರ್ಥಿಗಳು ಸೈನಿಕ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ದೇಶಪ್ರೇಮ ಬೆಳೆಸಲು ಶಾಲೆ ಪ್ರೇರಣೆಯಾಗಿದೆ. ಸಂಗೊಳ್ಳಿ ರಾಯಣ್ಣನಲ್ಲಿದ್ದ ತಾಯ್ನಾಡಿನ ಪ್ರೇಮವನ್ನು ನಾವೆಲ್ಲರೂ ರೂಢಿಸಿಕೊಳ್ಳಬೇಕು ಎಂದರು.

ಉತ್ಸವಕ್ಕೆ ಸಾಕ್ಷಿಯಾದ ಜನಸ್ತೋಮ
ಉತ್ಸವಕ್ಕೆ ಸಾಕ್ಷಿಯಾದ ಜನಸ್ತೋಮ

ಒಡೆದಾಳುವ ನೀತಿಯಿಂದಲೇ ಬ್ರಿಟಿಷರು ಯಶಸ್ಸು ಸಾಧಿಸಿದರು... ಮೊಗಲರು‌ ಹಾಗೂ ಬ್ರಿಟಿಷರು ಸ್ವಂತ‌ ಸಾಮರ್ಥ್ಯದಿಂದ ಭಾರತವನ್ನು ಆಳಲಿಲ್ಲ, ನಮ್ಮ ನಮ್ಮಲ್ಲಿ ಒಡಕು ಮೂಡಿಸಿ ನಮ್ಮನ್ನು ಆಳುವಲ್ಲಿ ಯಶಸ್ವಿಯಾದರು. ಅಂಥದ್ದೇ ಸ್ಥಿತಿ ಈಗ ದೇಶದಲ್ಲಿ ನಿರ್ಮಾಣ ಆಗುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ‌ ತಂದು ಕೊಟ್ಟಿರುವುದು ಮಹಾತ್ಮ ಗಾಂಧೀಜಿ ನೇತೃತ್ವದ ಕಾಂಗ್ರೆಸ್‌ ಎಂಬುದನ್ನು ಮರೆಯುವಂತಿಲ್ಲ. ಇನ್ನು ಮಸೀದಿಗಳನ್ನು ಧ್ವಂಸಗೊಳಿಸಿ ದೇವಸ್ಥಾನ ನಿರ್ಮಿಸುತ್ತೇವೆ ಎಂದು ಯಾರೋ ಒಬ್ಬ ಮೂರ್ಖ ಹೇಳುತ್ತಾನೆ. ಅಂಥವರಿಗೆ ಚಪ್ಪಾಳೆ ತಟ್ಟಬೇಡಿ, ಬೆಂಬಲಿಸಬೇಡಿ. ಸಂಗೊಳ್ಳಿ ರಾಯಣ್ಣನಂಥವರಿಗೆ ಮಾತ್ರ ಚಪ್ಪಾಳೆ ತಟ್ಟಿ ಎನ್ನುವ ಮೂಲಕ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಹೆಸರು ಹೇಳದೇ ಸಿದ್ದರಾಮಯ್ಯ ತಿರುಗೇಟು ಕೊಟ್ಟರು.

ಶಾಸಕ ಮಹಾಂತೇಶ ಕೌಜಲಗಿಯಂಥ ಸಭ್ಯರು ರಾಜಕಾರಣದಲ್ಲಿ ಇರಬೇಕು. ಜನರನ್ನು ದ್ವೇಷ ಮಾಡುವವರು ಇರಬಾರದು. ಜನರನ್ನು ಪ್ರೀತಿಸುವರು ರಾಜಕಾರಣದಲ್ಲಿ ಇರಬೇಕು. ಐದೂ ಗ್ಯಾರಂಟಿ ಕೊಟ್ಟಿದ್ದೇವೆ. ಅವು ಜಾರಿಗೆ ಬರುತ್ತಿವೆ. ಈ ವರ್ಷ 38 ಸಾವಿರ ಕೋಟಿ ಖರ್ಚು ಮಾಡಿದ್ದೇವೆ. ಮುಂದಿನ ವರ್ಷ 58 ಸಾವಿರ ಕೋಟಿ ಖರ್ಚು ಮಾಡುತ್ತೇವೆ. ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಒಂದು ವೇಳೆ ದಿವಾಳಿಯಾಗಿದ್ದರೆ ಪಂಚ ಗ್ಯಾರಂಟಿ‌ ಯೋಜನೆಗಳನ್ನು ಮತ್ತು ಇತರ ಅಭಿವೃದ್ಧಿ ಯೋಜನೆ‌ ಜಾರಿಗೊಳಿಸಲು ಹೇಗೆ ಸಾಧ್ಯವಿತ್ತು ಎಂದು ಪ್ರಶ್ನಿಸಿದರು.

ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಸಂಗೊಳ್ಳಿ ರಾಯಣ್ಣನವರ ಹೆಸರು ದೇಶದಾದ್ಯಂತ ಪ್ರಸಿದ್ಧಿಗೊಳಿಸಲು ಅನುಕೂಲವಾಗುವಂತೆ ಸೈನಿಕ ಶಾಲೆಯನ್ನು ಆರಂಭಿಸಲಾಗಿದೆ. ಈ ಶಾಲೆ ಇಡೀ ದೇಶಕ್ಕೆ‌ ಮಾದರಿಯಾಗಬೇಕು. ಸ್ಥಳೀಯ ಮಕ್ಕಳಿಗೆ ಪ್ರವೇಶ ಕಲ್ಪಿಸಲು ಅನುಕೂಲವಾಗುವಂತೆ ರಾಜ್ಯದಾದ್ಯಂತ ಸೈನಿಕ ಶಾಲೆಯ ಮಾದರಿ‌ಯಲ್ಲಿ ಸಂಗೊಳ್ಳಿ ರಾಯಣ್ಣ ಶಾಲೆಗಳನ್ನು ಸ್ಥಾಪಿಸಬೇಕಿದೆ. ಈ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕು ಎಂದರು.

ಸಂಗೊಳ್ಳಿ ರಾಯಣ್ಣ ಉತ್ಸವಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ
ಸಂಗೊಳ್ಳಿ ರಾಯಣ್ಣ ಉತ್ಸವಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ

ಅಧ್ಯಕ್ಷತೆ ವಹಿಸಿ ಮಾತನಾಡಿದ ಬೈಲಹೊಂಗಲ ಶಾಸಕ ಮಹಾಂತೇಶ್ ಕೌಜಲಗಿ, ಈ ಭಾಗದ ಜನರ ಆಶಯದಂತೆ ಸುಸಜ್ಜಿತ ಸೈನಿಕ ಶಾಲೆ ಹಾಗೂ ಶಿಲ್ಪವನ ಲೋಕಾರ್ಪಣೆಗೊಂಡಿರುವುದು ಸಂತಸ ತಂದಿದೆ. ಅಪ್ಪಟ ದೇಶಪ್ರೇಮಿ ಸಂಗೊಳ್ಳಿ ರಾಯಣ್ಣನ ಹೆಸರಿನಲ್ಲಿ ನೂರು‌ ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿರುವ ಶಾಲೆಯು ಇಡೀ‌ ದೇಶಕ್ಕೆ‌ ಮಾದರಿಯಾಗಿದೆ. 45 ವರ್ಷದ ಹಿಂದಿನ ಮಲಪ್ರಭಾ ಯೋಜನೆಯಡಿ ಬೈಲಹೊಂಗಲ್ ಮತಕ್ಷೇತ್ರದ 48 ಹಳ್ಳಿಗಳು ಮುಳುಗಡೆಯಾಗಿವೆ. ಈ ಗ್ರಾಮಗಳ ಜನರ‌ ಅನುಕೂಲಕ್ಕಾಗಿ ಆರಂಭಿಸಲಾಗಿರುವ ಏತ ನೀರಾವರಿ ಯೋಜನೆಗಳು ಸ್ಥಗಿತಗೊಂಡಿದ್ದು, ಆ ಯೋಜನೆಗಳ ಅನುಷ್ಠಾನಕ್ಕೆ ಮುಂಬರುವ ಆಯವ್ಯಯದಲ್ಲಿ ವಿಶೇಷ ಅನುದಾನ ಒದಗಿಸಬೇಕು ಎಂದರು.

ಇನ್ನೂ ಬೇಕಿದೆ ಮೂಲ ಸೌಕರ್ಯ: ಸಂಗೊಳ್ಳಿ ಹಿರೇಮಠದ ಗುರು ಸಿದ್ಧಲಿಂಗೇಶ್ವರ ಸಂಸ್ಥಾನದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಂಗೊಳ್ಳಿಯಲ್ಲಿ ಇಷ್ಟೊಂದು ಅಭಿವೃದ್ಧಿ ಮಾಡಲಾಗಿದೆ. ಆದರೆ ಗ್ರಾಮವು ಸಾಕಷ್ಟು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಹಾಗಾಗಿ, ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು. ಅಲ್ಲದೇ ಜನರ ಜೀವನ ಕ್ರಮ ಸುಧಾರಿಸುವತ್ತ ಯೋಚಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಕೆಲಸಕಾರ್ಯಗಳಿಗೆ ಅನುಕೂಲವಾಗುವಂತೆ ನೂತನ ಮುಖ್ಯ ಎಂಜಿನಿಯರ್ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು‌ ಆನ್ ಲೈನ್ ಮೂಲಕ ಉದ್ಘಾಟಿಸಿದರು. ಶ್ರೀ ಕ್ಷೇತ್ರ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ, ಸಂಸದೆ ಮಂಗಲ ಅಂಗಡಿ, ಶಾಸಕರಾದ ಆಸಿಫ್ ಸೇಠ್, ಗಣೇಶ್ ಹುಕ್ಕೇರಿ, ಬಾಬಾಸಾಹೇಬ್ ಪಾಟೀಲ, ಮಹೇಂದ್ರ ತಮ್ಮಣ್ಣವರ, ವಿಶ್ವಾಸ್ ವೈದ್ಯ, ಮಾಜಿ ಸಚಿವರು ಹಾಗೂ ಶಾಸಕರಾದ ಹೆಚ್​​ ವೈ ಮೇಟಿ, ಹೆಚ್​​ಎಂ ರೇವಣ್ಣ, ವಿಧಾನಪರಿಷತ್ ಸದಸ್ಯ ನಾಗರಾಜ್, ಮಾಜಿ ಸಚಿವರಾದ ಅಂಜಲಿ ನಿಂಬಾಳ್ಕರ್, ಸಂಗೊಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪಾ ಚಚಡಿ ಸೇರಿದಂತೆ ಅನೇಕ‌ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಂಗೊಳ್ಳಿ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಜನರು ಉತ್ಸವದಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ: 'ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ಸಿದ್ದರಾಮಯ್ಯ 5 ವರ್ಷ ಅಡೆತಡೆ ಇಲ್ಲದೇ ಸಿಎಂ'

Last Updated :Jan 17, 2024, 7:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.