ETV Bharat / state

ನಂದಿನಿ-ಅಮುಲ್ ವಿವಾದ​: ಬೆಳಗಾವಿಯಲ್ಲಿ ಕರವೇ ಪ್ರತಿಭಟನೆ

author img

By

Published : Apr 11, 2023, 4:25 PM IST

ಅಮುಲ್​ ಉತ್ಪನ್ನಗಳನ್ನು ಸುಟ್ಟು ಹಾಕಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

karnataka-rakshana-vedike-protest-against-amul
ನಂದಿನಿ-ಅಮುಲ್ ವಿವಾದ​:​ ಕರವೇ ಕಾರ್ಯಕರ್ತರಿಂದ ಪ್ರತಿಭಟನೆ

ನಂದಿನಿ-ಅಮುಲ್ ವಿವಾದ

ಬೆಳಗಾವಿ : ರಾಜ್ಯದಲ್ಲಿ ಅಮುಲ್ ಹಾಲು, ಮೊಸರು ಮಾರಾಟವನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ.ನಾರಾಯಣಗೌಡ ಬಣ) ಕಾರ್ಯಕರ್ತರು ನಗರದ ಕೆಎಂಎಫ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಅಮುಲ್ ಬ್ರ್ಯಾಂಡ್‌ನ ಹಾಲು, ಮೊಸರು, ತುಪ್ಪ, ಬೆಣ್ಣೆ ಮೊದಲಾದ ಉತ್ಪನ್ನಗಳನ್ನು‌ ಸುಟ್ಟು ಹಾಕಿದರು. ಯಾವುದೇ ಕಾರಣಕ್ಕೂ ಅಮುಲ್ ಹಾಲು ಮತ್ತು ಮೊಸರು ವ್ಯಾಪಾರಕ್ಕೆ ರಾಜ್ಯದಲ್ಲಿ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಇದೇ ವೇಳೆ ನಂದಿನಿ ಉತ್ಪನ್ನಗಳಾದ ಪೇಡಾ, ಮಜ್ಜಿಗೆ, ಲಸ್ಸಿ ವಿತರಿಸಿದರು. ನಂದಿನಿ ಪರ ಘೋಷಣೆ ಮೊಳಗಿಸಿದ ಕಾರ್ಯಕರ್ತರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ‌ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಮಾತನಾಡಿ, ಇಡೀ ದೇಶದ ಹಾಲು ಉತ್ಪಾದಕರ ಒಕ್ಕೂಟದಲ್ಲಿ ರಾಜ್ಯದ ಕೆಎಂಎಫ್ ಎರಡನೇ ಸ್ಥಾನದಲ್ಲಿದೆ. ಅನ್ಯ ರಾಜ್ಯದ ಅಮುಲ್ ಪದಾರ್ಥಗಳನ್ನು ನಮ್ಮ ಮೇಲೆ ಒತ್ತಾಯ ಪೂರ್ವಕವಾಗಿ ಹೇರುತ್ತಿದ್ದಾರೆ. ಇದನ್ನು ಖಂಡಿಸಿ‌ ರಾಜ್ಯವ್ಯಾಪಿ ಕರವೇ ಪ್ರತಿಭಟನೆ ನಡೆಸುತ್ತಿದೆ. ಸಾಮಾಜಿಕ‌ ಜಾಲತಾಣಗಳಲ್ಲೂ ಕೂಡ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದ್ದು, ಇಡೀ ರಾಜ್ಯದ ಜನಸಾಮಾನ್ಯರು ನಂದಿನಿ ಮೆಚ್ಚಿಕೊಂಡಿದ್ದಾರೆ. ಹೀಗಾಗಿ ನಾವು ಇದನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಬ್ಯಾಂಕ್ ಸೇರಿ ಬೇರೆ ಬೇರೆ ಸಂಸ್ಥೆಗಳನ್ನು ಯಾವ ರೀತಿ ಕೇಂದ್ರ ಸರಕಾರ ವಿಲೀನ ಮಾಡುತ್ತಿದೆಯೋ ಅದೇ ರೀತಿ ನಂದಿನಿಯನ್ನೂ ವಿಲೀನ ಮಾಡಲು ವ್ಯವಸ್ಥಿತ ಷಡ್ಯಂತ್ರ ಮಾಡುತ್ತಿದೆ. ಈ ಬಗ್ಗೆ ರಾಜ್ಯ ಸರಕಾರ ಮತ್ತು ಇಲ್ಲಿನ ಸಂಸದರು ಕೇಂದ್ರದ ಗಮನಕ್ಕೆ ತರುವ ಕೆಲಸ ಮಾಡಬೇಕು ಎಂದು ದೀಪಕ ಗುಡಗನಟ್ಟಿ ಒತ್ತಾಯಿಸಿದರು. ಕರವೇ ಮುಖಂಡರಾದ ಸುರೇಶ ಗವನ್ನವರ, ಗಣೇಶ ರೋಕಡೆ, ಬಾಳು‌ ಜಡಗಿ, ರಮೇಶ ಯರಗನ್ನವರ ಸೇರಿ ಮತ್ತಿತರರು ಉಪಸ್ಥಿತರಿದ್ದರು.

ದೇವನಹಳ್ಳಿ ತಾಲೂಕು ಕಚೇರಿ ಎದುರು ಕರವೇ ಪ್ರತಿಭಟನೆ: ರಾಜ್ಯದಲ್ಲಿ ಗುಜರಾತ್ ಮೂಲದ ಅಮುಲ್ ಹಾಲು ಮಾರಾಟಕ್ಕೆ ಕರವೇ ನಾರಾಯಣಗೌಡ ಬಣ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ಪಟ್ಟಣದ ತಾಲೂಕು ಕಚೇರಿ ಎದುರು ಕರವೇ ನಾರಾಯಣಗೌಡ ಬಣ ಪ್ರತಿಭಟನೆ ನಡೆಸಿತು. ಕರವೇ ರಾಜ್ಯ ಉಪಾಧ್ಯಕ್ಷ ಆಂಜೀನಪ್ಪ ನೇತೃತ್ವದಲ್ಲಿ ತಾಲೂಕು ಕಚೇರಿ ಎದುರು ಅಮುಲ್ ವಿರುದ್ದ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಪ್ರತಿಭಟನಾಕಾರರು, ಯಾವುದೇ ಕಾರಣಕ್ಕೂ ಗುಜರಾತ್ ನ ಅಮುಲ್ ಹಾಲು ಹಾಗೂ ಇತರ ಉತ್ಪನ್ನಗಳಿಗೆ ರಾಜ್ಯದಲ್ಲಿ ಅವಕಾಶ ನೀಡಬಾರದು. ಸರ್ಕಾರ ಅಮುಲ್ ಬ್ರಾಂಡ್ ಜೊತೆ ನಂದಿನಿ ವಿಲೀನಕ್ಕೆ ಸಂಚು ಮಾಡಿದೆ. ಅಮುಲ್ ಬಂದರೆ ನಂದಿನಿಗೆ ಕೊನೆ ಮೊಳೆ ಹೊಡೆದಂತೆ ಎಂದು ಆಕ್ರೋಶ ಹೊರಹಾಕಿದರು. ಅಲ್ಲದೆ ನಂದಿನಿ ಉಳಿಸಿ ರೈತರ ರಕ್ಷಿಸಿ ಎಂದು ಘೋಷಣೆ ಕೂಗಿ ತಹಶೀಲ್ದಾರ್ ಮೂಲಕ ಕರವೇ ಕಾರ್ಯಕರ್ತರು ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಕರವೇ ಮುಖಂಡರಾದ ಶಿವಕುಮಾರ್ ಆರಾಧ್ಯ, ತಾಲೂಕು ಕರವೇ ಅಧ್ಯಕ್ಷರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದನ್ನೂ ಓದಿ : ಅಮುಲ್ ಮತ್ತು ನಂದಿನಿ ನಡುವೆ ಉತ್ತಮ ಸಂಬಂಧವಿದೆ; ಸ್ಪರ್ಧೆಯ ಪ್ರಶ್ನೆಯೇ ಇಲ್ಲ: ಅಮುಲ್​ ಎಂಡಿ ಜಯನ್​ ಮೆಹ್ತಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.