ETV Bharat / state

ಹಿರೇಕೋಡಿ‌ ಜೈನ ಮುನಿಗಳ ಹತ್ಯೆಯಲ್ಲಿ ವಿದೇಶಿ ಕುತಂತ್ರದ ಕೈವಾಡ: ಕೃಷ್ಣ ಭಟ್ ಆರೋಪ

author img

By

Published : Jul 11, 2023, 2:13 PM IST

ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಜೈನ ಮುನಿಗಳ ಹತ್ಯೆಯಲ್ಲಿ ವಿದೇಶಿ ಕೈವಾಡ ಇದೆ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಕೃಷ್ಣ ಭಟ್​ ಆರೋಪಿಸಿದ್ದಾರೆ.

Etv jain-monk-murder-case-dot-vhp-leader-krishna-bhat-alleges-that-foreign-conspiracy
ಹಿರೇಕೋಡಿ‌ ಜೈನ ಮುನಿಗಳ ಹತ್ಯೆಯಲ್ಲಿ ವಿದೇಶಿ ಕುತಂತ್ರದ ಕೈವಾಡ: ಕೃಷ್ಣ ಭಟ್ ಆರೋಪ

ಹಿರೇಕೋಡಿ‌ ಜೈನ ಮುನಿಗಳ ಹತ್ಯೆಯಲ್ಲಿ ವಿದೇಶಿ ಕುತಂತ್ರದ ಕೈವಾಡ: ಕೃಷ್ಣ ಭಟ್ ಆರೋಪ

ಬೆಳಗಾವಿ : ಚಿಕ್ಕೋಡಿ ತಾಲೂಕಿನ ಹಿರೇಕೋಡಿಯ ಜೈನ ಮುನಿ‌ ಕಾಮಕುಮಾರ ನಂದಿ ಮಹಾರಾಜರನ್ನು ಬರ್ಬರವಾಗಿ ಹತ್ಯೆ ಮಾಡಿದ್ದು ಖಂಡನೀಯ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಪ್ರಕರಣದ ಸತ್ಯಾಸತ್ಯತೆ ಬಯಲಿಗೆ ತರಬೇಕು ಎಂದು ವಿಶ್ವ ಹಿಂದೂ ಪರಿಷತ್ ಉತ್ತರ ಕರ್ನಾಟಕ‌ ಪ್ರಾಂತ ಕೋಶಾಧ್ಯಕ್ಷ ಕೃಷ್ಣ ಭಟ್ ಆಗ್ರಹಿಸಿದ್ದಾರೆ.

ಇಂದು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಹಣಕಾಸಿನ‌ ವಿಚಾರದಲ್ಲಿ ಮುನಿಗಳ ಹತ್ಯೆ ಆಗಲು ಸಾಧ್ಯವೇ ಇಲ್ಲ. ಯಾಕೆಂದರೆ ನಿರ್ವಾಣ ಮುನಿಗಳು ಕೈಯಲ್ಲಿ ದುಡ್ಡು ಹಿಡಿಯುವುದೇ ಇಲ್ಲ. ಇದು ವೈಚಾರಿಕ ಹತ್ಯೆಯಾಗಿದ್ದು, ವಿದೇಶಿ ಕುತಂತ್ರದ ಸಂಶಯ ಮೂಡಿದೆ. ಇವರೆಲ್ಲ ಯಾವ ರೀತಿ ಆಶ್ರಮಕ್ಕೆ ಬರುತ್ತಾರೆ ಅನ್ನೋದು ಗೊತ್ತಾಗಲ್ಲ. ಚಾಲಕರಾಗಿ, ಸೇವಕರಾಗಿಯೂ ಬರುವ ಸಾಧ್ಯತೆಯಿದೆ. ಹಾಗಾಗಿ ತನಿಖೆ ಅಡ್ಡದಾರಿ ಹಿಡಿಯಬಾರದು. ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.

ಜೂನ್ 17ರಂದು ಮತಾಂತರ ನಿಷೇಧ ಕಾಯ್ದೆ ಹಿಂಪಡೆಯುವ ಸರ್ಕಾರದ ನಿರ್ಧಾರ ಖಂಡಿಸಲು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಲು ಆಗಮಿಸುತ್ತಿದ್ದ ಶಿವಾಪುರದ ಮುಪ್ಪಿನ ಕಾಡಸಿದ್ದೇಶ್ವರ ಮಠದ ಸ್ವಾಮೀಜಿ ಅವರ ಕಾರು ಕಾಕತಿ ಬಳಿ ಅಪಘಾತವಾಗಿತ್ತು. ಇದರಲ್ಲಿ ಇಬ್ಬರು ಸಾವನ್ನಪ್ಪಿ, ಸ್ವಾಮೀಜಿ ಕೂಡ ತೀವ್ರವಾಗಿ ಗಾಯಗೊಂಡಿದ್ದರು. ಗೋವುಗಳ‌ ರಕ್ಷಣೆ ಮಾಡುವ ಸ್ವಾಮೀಜಿಗೆ ಅಪಘಾತವಾದರೂ ಅವರಿಗೆ ಪರಿಹಾರ ಕೊಡಲು ಸರ್ಕಾರ ಮನಸ್ಸು ಮಾಡುವುದಿಲ್ಲ. ಆದ್ದರಿಂದ ಪ್ರತಿಯೊಬ್ಬ ಹಿಂದೂ 11 ರೂಪಾಯಿ ಜಮಾ ಮಾಡಿ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಕೊಡೋಣ ಎಂದು ಕೃಷ್ಣ ಭಟ್ ಹೇಳಿದರು.

ಗಣೇಶಪುರದ ರುದ್ರಕೇಸರಿ ಮಠದ ಹರಿಗುರು ಮಹಾರಾಜ ಮಾತನಾಡಿ, ಸಾಧು, ಸಂತರ ಹತ್ಯೆ ಮಾಡಿ‌ ವಿಕೃತಿ ಮೆರೆದರೆ ಹಿಂದೂತ್ವ ನಾಶವಾಗಲ್ಲ. ಎಲ್ಲ ಸಾಧು, ಸಂತರು ಮಠಗಳನ್ನು ಬಿಟ್ಟು ಹಿಂದುತ್ವ ಕಟ್ಟಲು ಹೊರಗಡೆ ಬಂದು‌ ಹೋರಾಡಬೇಕು. ಬರುವ ದಿನಗಳಲ್ಲಿ‌ ಹಿಂದುಗಳ ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಹಿಂದುಗಳು ಮನೆಯಲ್ಲಿ‌ ಕುಳಿತುಕೊಂಡರೆ ಹಿಂದು ಧರ್ಮ ಉಳಿಯುವುದಿಲ್ಲ, ನಾವೆಲ್ಲಾ ಜಾಗೃತರಾಗಬೇಕು ಎಂದು ಕರೆ ನೀಡಿದರು.

ಕಾರಂಜಿಮಠದ ಗುರುಶಿದ್ಧ ಸ್ವಾಮೀಜಿ ಮಾತನಾಡಿ, ಧರ್ಮ, ಶಿಕ್ಷಣ ಪ್ರಸಾರ ಮಾಡಿದ್ದ ಸಾತ್ವಿಕ ಮುನಿಗಳನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ನಮಗೆಲ್ಲಾ ನೋವಾಗಿದೆ. ಇದನ್ನು ಒಕ್ಕೋರಲಿನಿಂದ ಖಂಡಿಸುತ್ತೇವೆ. ಯಾವುದೇ ಧರ್ಮದ ಗುರುಗಳ ರಕ್ಷಣೆ ಮಾಡುವುದು ಸರ್ಕಾರ ಮತ್ತು ಸಮಾಜದ ಜವಾಬ್ದಾರಿಯಾಗಿದೆ. ಆರೋಪಿಗಳನ್ನು ಸರಿಯಾಗಿ ವಿಚಾರಣೆ ಮಾಡಬೇಕು. ಯಾವ ಕಾರಣಕ್ಕೆ ಹತ್ಯೆ ಆಗಿದೆ ಎಂಬುದನ್ನು ಪತ್ತೆ ಹಚ್ಚಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಮುಂದೆ ಈ ರೀತಿಯ ಘಟನೆಗಳು ಮರುಕಳಿಸದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಮಾಧ್ಯಮಗೋಷ್ಟಿಯಲ್ಲಿ ಮುತ್ನಾಳ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಗಣಿಕೊಪ್ಪದ ಗಂಗಾಧರ ಸ್ವಾಮೀಜಿ, ಜಿಲ್ಲಾಧ್ಯಕ್ಷ ಶ್ರೀಕಾಂತ ಕದಂ, ಆನಂದ ಕರಲಿಂಗನವರ, ಪ್ರಮೋದಕುಮಾರ ವಕ್ಕುಂದಮಠ, ವಿನೋದ ದೊಡ್ಡಣ್ಣವರ, ರವಿರಾಜ ಪಾಟೀಲ, ಪ್ರವೀಣ ಕೋಡಾ ಸೇರಿ ಮತ್ತಿತರರು ಉಪಸ್ಥಿತರಿದ್ದರು.

ಜೈನ ಮುನಿಗಳ ಹತ್ಯೆ ಖಂಡಿಸಿ ವಿಹೆಚ್​​ಪಿ ಪ್ರತಿಭಟನೆ : ಹಿರೇಕೋಡಿ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಖಂಡಿಸಿ ನಗರದ ರಾಣಿ ಚೆನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಪ್ರತಿಭಟನಾ ರ್ಯಾಲಿ ನಡೆಸಿದರು. ಹಣಕಾಸಿನ ವಿಚಾರಕ್ಕೆ ಮುನಿಗಳ ಹತ್ಯೆಯಾಗಿದೆ ಎಂಬ ಸಂಗತಿಯನ್ನು ನಾವು ಒಪ್ಪಲು ಸಾಧ್ಯವಿಲ್ಲ‌. ಹಣಕಾಸಿನ‌ ವ್ಯವಹಾರವಾಗಿದ್ದರೆ ಈ ರೀತಿ ಅಪಹರಿಸಲು ಸಾಧ್ಯವೇ..? ನಿಜವಾದ ಅಪರಾಧಿಯನ್ನು ಕಾಪಾಡುವ ಷಡ್ಯಂತ್ರ ನಡೆದಿದೆ. ಹಾಗಾಗಿ ಸಿಬಿಐ ಮೂಲಕ ತನಿಖೆ ನಡೆಸಿ ಪ್ರಕರಣದ ಸತ್ಯಾಸತ್ಯತೆ ಹೊರತರಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.

ಇದನ್ನೂ ಓದಿ : ಜೈನ ಮುನಿಗಳ ಹತ್ಯೆ ಖಂಡಿಸಿ ಸಿಡಿದೆದ್ದ ಜೈನ ಸಮಾಜ.. ಬೆಳಗಾವಿಯಲ್ಲಿ ಹೆದ್ದಾರಿ ಬಂದ್ ಮಾಡಿ ಬೃಹತ್​ ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.