ETV Bharat / state

ಮುಂಬರುವ ಚುನಾವಣೆಯಲ್ಲಿ ನಾನು ಸ್ಪರ್ಧಿಸಲ್ಲ: ಬಿ ಎಸ್ ಯಡಿಯೂರಪ್ಪ

author img

By

Published : Jan 29, 2023, 3:15 PM IST

Updated : Jan 29, 2023, 4:00 PM IST

ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲ್ಲ - ಈ ಕುರಿತು ಈಗಾಗಲೇ ತೀರ್ಮಾನಿಸಿದ್ದೇನೆ -ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿಕೆ ​

ಮಾಜಿ ಸಿಎಂ ಬಿ ಎಸ್​​ ಯಡಿಯೂರಪ್ಪ
ಮಾಜಿ ಸಿಎಂ ಬಿ ಎಸ್​​ ಯಡಿಯೂರಪ್ಪ

ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಮಾತನಾಡಿದರು

ಬೆಳಗಾವಿ : ಈಗಾಗಲೇ ನಾನು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ. ಬರುವ ಚುನಾವಣೆಯಲ್ಲಿ ಸ್ಪರ್ಧಿಸಲ್ಲ. ಈಗಾಗಲೇ ನನಗೆ 80 ವರ್ಷ ಆಗ್ತಿದೆ. ಪಕ್ಷ ಕಟ್ಟಲು ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡುತ್ತೇನೆ ಎಂದು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್‌ವೈ ಸ್ಪರ್ಧೆ ಮಾಡ್ತಾರಾ ಎಂಬ ಮಾಧ್ಯಮದವರ ಪ್ರಶ್ನೆಗೆ ನಗರದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರು ಸ್ಪಷ್ಟಪಡಿಸಿದ್ದಾರೆ.

ಋಣ ತೀರಿಸುವ ಜವಾಬ್ದಾರಿ ನನ್ನದು: ಈ ಕುರಿತು ನಗರದಲ್ಲಿಂದು ಮಾತನಾಡಿದ ಅವರು, ಈಗಾಗಲೇ ಬಿ ವೈ ರಾಘವೇಂದ್ರ ಎಂಪಿ ಇದ್ದಾರೆ, ಬಿ ವೈ ವಿಜಯೇಂದ್ರ ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿ ಪಕ್ಷ ಸಂಘಟನೆಗಾಗಿ ಪ್ರವಾಸ ಮಾಡ್ತಿದ್ದಾರೆ. ವಿಜಯೇಂದ್ರ ಯುವಕರಿದ್ದು, ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುತ್ತಾರೆ. ವಿಜಯೇಂದ್ರ ಜೊತೆಗೆ ನಾನೂ ಓಡಾಡುತ್ತಿದ್ದೇನೆ, ನಾನೇನು ಇನ್ನೂ ರಿಟೈರ್ ಆಗಿಲ್ಲ. ಈ ಚುನಾವಣೆಯಲ್ಲಿ ಓಡಾಡುತ್ತೇನೆ, ದೇವರು ಶಕ್ತಿ ನೀಡಿದ್ರೆ ಮುಂದಿನ ಚುನಾವಣೆವರೆಗೂ ಪಕ್ಷಕ್ಕೆ ದುಡಿಯುತ್ತೇನೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಪ್ರಯತ್ನಿಸುವೆ. ನಾನೇನು ರಾಷ್ಟ್ರ ರಾಜಕಾರಣಕ್ಕೆ ಹೋಗಲ್ಲ, ವಾಜಪೇಯಿ ಪಿಎಂ ಆಗಿದ್ದಾಗ ನನ್ನನ್ನು ಆಹ್ವಾನಿಸಿದ್ದರು. ಪಕ್ಷ ಈಗ ರಾಜ್ಯದಲ್ಲಿ ನನಗೆ ಎಲ್ಲ ಸ್ಥಾನಮಾನ, ಅಧಿಕಾರ, ಗೌರವ ನೀಡಿದೆ. ಅದರ ಋಣ ತೀರಿಸುವ ಜವಾಬ್ದಾರಿ ನನ್ನದು. ಅದಕ್ಕಾಗಿ ರಾಜ್ಯಾದ್ಯಂತ ಸಂಚರಿಸುತ್ತೇನೆ ಎಂದು ಹೇಳಿದರು.

ಮೂರು ತಿಂಗಳಲ್ಲಿ ಚುನಾವಣೆ ಎದುರಿಸಲಿದ್ದೇವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ನಮಗೆ ಮಾರ್ಗದರ್ಶನ ಮಾಡಿದ್ದಾರೆ. ಬರುವ ಚುನಾವಣೆಯಲ್ಲಿ ನಾವು 140 ಸ್ಥಾನ ಪಡೆಯುತ್ತೇವೆ. ಯಾರೋ ನಾನೇ ಮುಂದಿನ ಮುಖ್ಯಮಂತ್ರಿ ಎಂದು ತಿರುಕನ ಕನಸು ಕಾಣುತ್ತಿದ್ದಾರೆ. ಅದು ನನಸಾಗಲ್ಲ. ಸೂರ್ಯಚಂದ್ರ ಇರುವುದು ಎಷ್ಟು ಸತ್ಯವೋ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ ಎಂದು ಬಿಎಸ್​ವೈ ಭವಿಷ್ಯ ನುಡಿದರು.

ಯೋಗ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ: ಬಿಜೆಪಿ ಟಿಕೆಟ್‌ಗಾಗಿ ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ಪೈಪೋಟಿ ವಿಚಾರವಾಗಿ ಪ್ರತಿಕ್ರಿಯಿಸಿ, ಗೆಲ್ಲುವ ಪಕ್ಷದ, ಅಧಿಕಾರ ರಚಿಸುವ ಪಕ್ಷಕ್ಕೆ ಆಕಾಂಕ್ಷಿಗಳ ಸಂಖ್ಯೆಯೂ ಬಹಳಷ್ಟು ಇರುತ್ತದೆ. ನಾವೆಲ್ಲರೂ ಕುಳಿತು ಚರ್ಚೆ ಮಾಡಿ ನಂತರವೇ ಯೋಗ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ. ಒಂದಲ್ಲ, ಎರಡು ಸರ್ವೇ ಮಾಡಿಸಿ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡುತ್ತೇವೆ. ಇದರಲ್ಲಿ ನಾವು ಯಾವುದೇ ಕಾಂಪ್ರಮೈಸ್ ಮಾಡಲ್ಲ, ಗೆಲ್ಲುವ ಅಭ್ಯರ್ಥಿಗೆ ಮಣೆ ಹಾಕ್ತಿವಿ ಎಂದು ಹೇಳಿದರು.

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತಾವು ಸ್ಪರ್ಧಿಸಿದ್ರೆ ಪ್ರಭಾವ ಹೆಚ್ಚಿರುತ್ತೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಾರದು ಎಂದು ನಾನು ಈಗಾಗಲೇ ತೀರ್ಮಾನ ಮಾಡಿದ್ದೇನೆ ಎಂದರು.

ಇದನ್ನೂ ಓದಿ : ಯುದ್ಧ ವಿಮಾನ ದುರಂತ: ಪೈಲಟ್ ಹನುಮಂತರಾವ್ ಸಾರಥಿಗೆ ಬೆಳಗಾವಿಯಲ್ಲಿ ಗಣ್ಯರಿಂದ ಅಂತಿಮ‌ ನಮನ

ವಿಂಗ್ ಕಮಾಂಡರ್​ಗೆ ಯಡಿಯೂರಪ್ಪ ಸಂತಾಪ‌: ಮಧ್ಯಪ್ರದೇಶದ ಮೊರೆನಾದಲ್ಲಿ ನಡೆದ ಯುದ್ಧ ವಿಮಾನ ಪತನ ಅವಘಡದಲ್ಲಿ ಬೆಳಗಾವಿಯ ವಿಂಗ್ ಕಮಾಂಡರ್ ಹುತಾತ್ಮರಾದ ಬಗ್ಗೆ ಬೆಳಗಾವಿಯಲ್ಲಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಸಂತಾಪ‌ ಸೂಚಿಸಿದರು. ಈ ಸುದ್ದಿ ಕೇಳಿ ನನಗೆ ದುಃಖವಾಗಿದೆ. ಹನಮಂತರಾವ್ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬದ ಸದಸ್ಯರಿಗೆ ಹನಮಂತರಾವ್ ಅಗಲಿಕೆ ತಡೆಯುವ ಶಕ್ತಿ ನೀಡಲಿ. ರಾಷ್ಟ್ರೀಯ ಬಿಜೆಪಿ ಕೃಷಿ ಮೋರ್ಚಾ ಕಾರ್ಯಕ್ರಮ ಬಳಿಕ ನಾನೂ ಹನಮಂತರಾವ್ ಮನೆಗೆ ಭೇಟಿ ನೀಡುತ್ತೇನೆ. ವಿಂಗ್​ ಕಮಾಂಡರ್ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಈ ಘಟನೆ ಆಗಬಾರದಾಗಿತ್ತು, ದುರ್ದೈವ ಘಟನೆ ನಡೆದು ಹೋಗಿದೆ. ದೇವರು ಆ ಕುಟುಂಬ ವರ್ಗಕ್ಕೆ ನೋವು ಸಹಿಸಿಕೊಳ್ಳುವ ಶಕ್ತಿ ಕರುಣಿಸಲಿ ಎಂದರು.

ಇದನ್ನೂ ಓದಿ : 'ಕರ್ನಾಟಕದಲ್ಲಿ ಬಿಜೆಪಿ ಅಲೆ ಎದ್ದಿದೆ, ಗೆಲುವು ನಮ್ಮದೇ': ಸಿಎಂ​ ಬೊಮ್ಮಾಯಿ

Last Updated : Jan 29, 2023, 4:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.