ETV Bharat / state

ಬೆಳಗಾವಿಯಲ್ಲಿ ಅಧಿವೇಶನ ನಡೆಸುವಂತೆ ಸಿಎಂಗೆ ಪತ್ರ ಬರೆದಿದ್ದೇನೆ: ಬಸವರಾಜ ಹೊರಟ್ಟಿ

author img

By

Published : Jul 13, 2021, 3:21 PM IST

ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಚರ್ಚಿಸಬೇಕೆಂಬ ಆಸೆ ನಮ್ಮದು. ಅಧಿವೇಶನ ಮಾಡಿ ಎಂದು ನಿರ್ದೇಶನ ಕೊಡುವ ಅಧಿಕಾರ ನಮಗಿಲ್ಲ. ಸಚಿವ ಸಂಪುಟದಲ್ಲಿ ಕೈಗೊಳ್ಳುವ ತೀರ್ಮಾನಕ್ಕೆ ನಾವು ಬದ್ಧ. ಸದ್ಯ ಜುಲೈ ಅಂತ್ಯ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಅಧಿವೇಶನ ಕರೆಯಬಹುದೆಂಬ ಭರವಸೆ ಇದೆ ಎಂದು ವಿಧಾನ ಪರಿಷತ್ ಸಭಾಪತಿ ಹೊರಟ್ಟಿ ಹೇಳಿದ್ದಾರೆ.

basavaraja-horatti
ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ

ಬೆಳಗಾವಿ: ಬೆಳಗಾವಿಯಲ್ಲಿ ಅಧಿವೇಶನ ನಡೆಸುವಂತೆ 15 ದಿನಗಳ ಹಿಂದೆ ಸಿಎಂಗೆ ಪತ್ರ ಬರೆದಿದ್ದೇನೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಸಂಬಂಧ ಸಿಎಂ ಬಿಎಸ್‌ವೈ ಜತೆ ಮಾತನಾಡಿದ್ದೇನೆ. ಡಿಸೆಂಬರ್ 2018ರ ಬಳಿಕ ಈವರೆಗೆ ಬೆಳಗಾವಿಯಲ್ಲಿ ಅಧಿವೇಶನ ಕರೆದಿಲ್ಲ. ಹೀಗಾಗಿ ಅಧಿವೇಶನ ನಡೆಸುವಂತೆ ಮನವಿ ಮಾಡಲಾಗಿದೆ ಎಂದರು.

ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಈ ಬಗ್ಗೆ ಸಚಿವ ಸಂಪುಟ ಸಭೆ ಕರೆದು ಚರ್ಚಿಸಿ ತೀರ್ಮಾನಿಸೋದಾಗಿ ಸಿಎಂ ತಿಳಿಸಿದ್ದಾರೆ. ನಾನು, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಕಾನೂನು ಸಂಸದೀಯ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ವಿಧಾನ ಪರಿಷತ್ ಸರ್ಕಾರಿ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಉತ್ತರ ಕರ್ನಾಟಕದವರು.

ಉತ್ತರ ಕರ್ನಾಟಕದ ಸಮಸ್ಯೆ ಚರ್ಚಿಸಬೇಕೆಂಬ ಆಸೆ ನಮ್ಮದಿದೆ. ಹೀಗೆ ಅಧಿವೇಶನ ಮಾಡಿ ಅಂತಾ ನಿರ್ದೇಶನ ಕೊಡುವ ಅಧಿಕಾರ ನಮಗಿಲ್ಲ. ಸಚಿವ ಸಂಪುಟದಲ್ಲಿ ಕೈಗೊಳ್ಳುವ ತೀರ್ಮಾನಕ್ಕೆ ನಾವು ಬದ್ಧ. ಸದ್ಯ ಜುಲೈ ಅಂತ್ಯ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಅಧಿವೇಶನ ಕರೆಯಬಹುದೆಂಬ ಭರವಸೆ ಇದೆ. ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿವೇಶನ ಕರೆಯುವುದು ಸೂಕ್ತ ಎಂದು ಹೇಳಿದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿಕೆ

ಅಧಿವೇಶನ ಕರೆದರೆ ಬೆಳಗಾವಿಗೆ 600 ಅಧಿಕಾರಿಗಳು ಬರಬೇಕಾಗುತ್ತದೆ, ಕೊರೊನಾ ಇದೆ ಅಂತಾ ಕೆಲವು ಅಧಿಕಾರಿಗಳು ಹೇಳಿದ್ದಾರೆ. ಹೀಗಾಗಿ ಬೆಳಗಾವಿಯಲ್ಲಿ ಅಧಿವೇಶನ ಕರೆಯುವ ಬಗ್ಗೆ ಸಚಿವ ಸಂಪುಟ ತೀರ್ಮಾನಿಸುತ್ತೆ ಎಂದರು.

'ರಾಜ್ಯದ ಸಮಸ್ಯೆಗೆ ಒಗ್ಗೂಡುವುದು ಸೂಕ್ತ'

ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ಹಸ್ತಕ್ಷೇಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯದ ಸಮಸ್ಯೆ ಬಂದಾಗ ಎಲ್ಲಾ ಪಕ್ಷದವರು ಒಗ್ಗೂಡುವುದು ಸೂಕ್ತ. ಗಡಿ ಭಾಗ, ಮೇಕೆದಾಟು, ಆಲಮಟ್ಟಿ, ಕಾವೇರಿ ಈ ರೀತಿ ರಾಜ್ಯದ ಸಮಸ್ಯೆ ಬಂದಾಗ ಪಕ್ಷ ಬೇಧ ಮರೆತು ಎಲ್ಲರೂ ಒಗ್ಗೂಡಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ: ಬೆಳಗಾವಿಯ ಯೋಧನ ಅಂತ್ಯಕ್ರಿಯೆ : ಸೇನಾ ಸಮವಸ್ತ್ರ ಧರಿಸಿ ಅಪ್ಪನಿಗೆ ಸೆಲ್ಯೂಟ್ ಹೊಡೆದ ಮಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.