ETV Bharat / state

ಬೆಳಗಾವಿ: ದೂಧಗಂಗಾ ನದಿ ಸಮೀಪ ಮಾನವ ತಲೆಬುರುಡೆಗಳು ಪತ್ತೆ

author img

By

Published : Jul 2, 2023, 1:00 PM IST

ಬೆಳಗಾವಿಗೆ ಹೊಂದಿಕೊಂಡಿರುವ ಕಾಗಲ್ ತಾಲೂಕಿನ ಶಿದ್ನಳ್ಳಿ ಗ್ರಾಮದಲ್ಲಿ ಹರಿಯುವ ದೂಧಗಂಗಾ ನದಿ ನೀರಿನ ಮಟ್ಟ ಇಳಿಮುಖವಾಗಿದ್ದು, ನದಿ ಪಾತ್ರದಲ್ಲಿ ಮಾನವ ತಲೆಬುರುಡೆಗಳು ಕಾಣಸಿಕ್ಕಿವೆ.

skulls
ಮಾನವ ತಲೆ ಬುರುಡೆ

ಬೆಳಗಾವಿ : ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದಲ್ಲಿ ಹರಿಯುವ ದೂಧಗಂಗಾ ನದಿಯ ಪಕ್ಕದಲ್ಲಿ ನಾಲ್ಕು ಮಾನವ ತಲೆಬುರುಡೆಗಳು ದೊರೆತಿವೆ. ಜಾನುವಾರುಗಳ ಮೈ ತೊಳೆಯಲು ಹೋದಾಗ ರೈತರ ಕಣ್ಣಿಗೆ ಈ ತಲೆ ಬುರುಡೆಗಳು ಕಾಣಿಸಿದ್ದು, ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.

ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕಾಗಲ್ ತಾಲೂಕಿನಲ್ಲಿರುವ ಹಾಗೂ ಗಡಿ ಜಿಲ್ಲೆ ಬೆಳಗಾವಿಗೆ ಹೊಂದಿಕೊಂಡಿರುವ ಶಿದ್ನಳ್ಳಿ ಗ್ರಾಮದಲ್ಲಿ ತಲೆಬುರುಡೆಗಳು ಸಿಕ್ಕಿದ್ದು, ಕೂಡಲೇ ಸ್ಥಳೀಯರು ಕಾಗಲ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಪರಿಶೀಲನೆ ನಡೆಸಿದ್ದು, ತಲೆಬುರುಡೆಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಸದ್ಯಕ್ಕೆ ಕರ್ನಾಟಕ ಮತ್ತು ಮಹಾರಾಷ್ಟ್ರ ಪೊಲೀಸರಿಗೆ ಈ ತಲೆ ಬುರಡೆಗಳು ತಲೆನೋವಾಗಿ ಪರಿಣಮಿಸಿದೆ. ಕರ್ನಾಟಕ ಪೊಲೀಸರನ್ನು ಸಂಪರ್ಕಿಸಿ ಮಹಾರಾಷ್ಟ್ರ ಪೊಲೀಸರು ಮಾಹಿತಿ ಪಡೆದಿದ್ದಾರೆ. ಇದರ ಜೊತೆಗೆ, ನದಿ ಪಕ್ಕ ಸಿಕ್ಕ ತಲೆಬುರುಡೆಗಳನ್ನು ಕಾಗಲ್ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಇವು ಯಾರ ತಲೆ ಬುರುಡೆಗಳು?, ಏನಾಗಿದೆ ಎಂಬ ಕುರಿತು ಪೊಲೀಸ್​ ತನಿಖೆಯಿಂದ ಮಾಹಿತಿ ಬಹಿರಂಗವಾಗಬೇಕಿದೆ.

ಇದನ್ನೂ ಓದಿ : ತಲೆಬುರುಡೆ ತಿನ್ನುವ ಸೈಕೋ... ಇವನ ವಿಕೃತಿ ಕಂಡು ಬೆಚ್ಚಿಬಿದ್ದ ಗ್ರಾಮಸ್ಥರು!

ಮಳೆಯಿಂದಾಗಿ ದೂಧಗಂಗಾ ನದಿ ಪಾತ್ರದಲ್ಲಿ ನೀರು ಕಡಿಮೆಯಾಗಿದೆ. ಪರಿಣಾಮ ತಲೆಬುರುಡೆಗಳು ದೊರೆತಿವೆ. ಒಂದೇ ಸ್ಥಳದಲ್ಲಿ ನಾಲ್ಕು ಮಾನವ ತಲೆ ಬುರುಡೆಗಳು ದೊರೆತಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ವಿಷಯ ತಿಳಿಯುತ್ತಿದ್ದಂತೆ ತಲೆ ಬುರುಡೆಗಳನ್ನು ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಜನರು ಸ್ಥಳದಲ್ಲಿ ಜಮಾಯಿಸಿದ್ದರು.

ಕೆಲವು ದಿನಗಳ ಹಿಂದಷ್ಟೇ ವಲಸಿಗ ಭೋಂಡು ಬಾಬಾ ಸಿದ್ದನೇರ್ಲಿ, ಬಾಮನಿ ಗ್ರಾಮಗಳಲ್ಲೂ ಕೂಡ ತಲೆ ಬುರುಡೆಗಳು ಪತ್ತೆಯಾಗಿದ್ದವು. ಇದೀಗ, ಒಂದೇ ಸ್ಥಳದಲ್ಲಿ ನಾಲ್ಕು ತಲೆ ಬುರುಡೆಗಳು ಸಿಕ್ಕಿರುವುದು ಅಘೋರಿಗಳ ಕೃತ್ಯವಿರಬಹುದೇ? ಎಂಬ ಅನುಮಾನ ಮೂಡಿಸಿದೆ. ನದಿಯಲ್ಲಿ ತಲೆಬುರುಡೆಗಳು ಮಾತ್ರ ಪತ್ತೆಯಾಗಿವೆ. ಆದರೆ, ಮೃತದೇಹಗಳನ್ನು ಎಲ್ಲಿ‌ ಬಿಸಾಡಲಾಗಿದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಹಾಗೆಯೇ, ಕಳೆದ ತಿಂಗಳು ಸಾಂಗ್ಲಿ ಜಿಲ್ಲೆಯ ಯುವಕನೊಬ್ಬನನ್ನು ಆತನ ತಂದೆಯೇ ಕೊಲೆ ಮಾಡಿ ಶವವನ್ನು ಪಕ್ಕದ ಬಾಮ್ನಿ ಗ್ರಾಮದ ಗಡಿಯಲ್ಲಿ ಎಸೆದಿದ್ದ ಪ್ರಕರಣ ಬೆಳಕಿಗೆ ಬಂದಿತ್ತು.

ಇದನ್ನೂ ಓದಿ : ಅಂತ್ಯಸಂಸ್ಕಾರ ಮಾಡಿದ ಒಂದೇ ದಿನದಲ್ಲಿ ಶವದ ತಲೆ ಬುರುಡೆ ನಾಪತ್ತೆ!

ಕಳೆದ ವರ್ಷ, 2022ರ ಆಗಸ್ಟ್​ ತಿಂಗಳಿನಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯ ಸಮೀಪ ಇರುವ ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿ ಆಘಾತ ಅನ್ನಿಸುವ ಘಟನೆ ನಡೆದಿತ್ತು. ಅಂತ್ಯಕ್ರಿಯೆ ನಡೆಸಿದ ವ್ಯಕ್ತಿಯ ದೇಹದಿಂದ ತಲೆ ಬುರುಡೆ ನಾಪತ್ತೆಯಾಗಿತ್ತು. ಮುಸ್ಸೂರಿ ಪೊಲೀಸ್ ಠಾಣೆ ವ್ಯಾಪ್ತಿಯ ಇಂದರ್‌ಗರ್ಹಿ ಪ್ರದೇಶದ ನಿವಾಸಿ ಮಂಗೇರಾಮ್ (55) ಎಂಬವರು ಮೃತಪಟ್ಟ ಹಿನ್ನೆಲೆಯಲ್ಲಿ ಅಗ್ನಿಸ್ಪರ್ಶದ ಮೂಲಕ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು. ಮರುದಿನ ಚಿತಾಭಸ್ಮವನ್ನು ಸಂಗ್ರಹಿಸಲು ಬಂದ ಕುಟುಂಬ ಸದಸ್ಯರಿಗೆ ಶವದ ತಲೆ ಬುರುಡೆ ದೊರೆಯಲಿಲ್ಲ. ಜೊತೆಗೆ, ಕೆಲವು ಮೂಳೆಗಳು ಸಹ ಕಾಣೆಯಾಗಿದ್ದವು. ಹಾಗೂ ಶವಸಂಸ್ಕಾರದ ಸ್ಥಳದಲ್ಲಿ ಮಾಟ- ಮಂತ್ರಕ್ಕೆ ಸಂಬಂಧಿಸಿದ ವಸ್ತುಗಳು ಸಿಕ್ಕಿದ್ದವು. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.