ETV Bharat / state

ತಡರಾತ್ರಿ ಮನೆಗೆ ನುಗ್ಗಿ ಕಳ್ಳತನ: ಓಲೆ ಕೀಳುವಾಗ ಮಹಿಳೆಯ ಕಿವಿ ಹರಿದು ಗಾಯ!

author img

By

Published : Mar 19, 2023, 11:05 AM IST

ಚಿಕ್ಕೋಡಿಯಲ್ಲಿನ ತೋಟದ ಮನೆಗೆ ನುಗ್ಗಿದ ಕಳ್ಳರು ಮಹಿಳೆಯನ್ನು ಗಾಯಗೊಳಿಸಿದ್ದಾರೆ.

ಓಲೆ ಕೀಳುವಾಗ ಮಹಿಳೆಯ ಕಿವಿ ಹರಿದು ಗಾಯ
ಓಲೆ ಕೀಳುವಾಗ ಮಹಿಳೆಯ ಕಿವಿ ಹರಿದು ಗಾಯ

ಚಿಕ್ಕೋಡಿ: ತಡರಾತ್ರಿ ಮನೆಗೆ ನುಗ್ಗಿದ ನಾಲ್ವರು ಕಳ್ಳರು ಮಹಿಳೆ, ಮಕ್ಕಳ ಮೈಮೇಲಿನ ಚಿನ್ನಾಭರಣ ದೋಚಿಕೊಂಡು ಪರಾರಿಯಾದ ಘಟನೆ ನಗರದಲ್ಲಿ ನಡೆದಿದೆ. ಮಹಿಳೆಯ ಓಲೆ ಕಿತ್ತುಕೊಳ್ಳುವಾಗ ಕಿವಿ ಹರಿದು ಹಾಕಿದ್ದಾರೆ. ಗಾಯಾಳುವಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದ ನಿರ್ಮಲಾ ಪಾಟೀಲ್ ಗಾಯಗೊಂಡವರು. ನಿನ್ನೆ ತಡರಾತ್ರಿ ಕಳ್ಳರ ಗುಂಪು ಮನೆಗೆ ನುಗ್ಗಿದೆ. ಗರ್ಭಿಣಿ, ಮಕ್ಕಳು ಮತ್ತು ನಿರ್ಮಲಾ ಅವರು ಮಾತ್ರ ಮನೆಯಲ್ಲಿದ್ದರು. ಇದನ್ನೇ ಬಳಸಿಕೊಂಡ ದುಷ್ಕರ್ಮಿಗಳು ಮಹಿಳೆಯರ ಮೈಮೇಲಿದ್ದ ಚಿನ್ನಾಭರಣವನ್ನು ದೋಚಿದ್ದಾರೆ.

ಮಕ್ಕಳ ಮೇಲಿದ್ದ ಚಿನ್ನವನ್ನೂ ಕಳ್ಳರು ಬಿಟ್ಟಿಲ್ಲ. ನಿರ್ಮಲಾ ಅವರ ಕಿವಿಯಲ್ಲಿ ಬಂಗಾರದ ಓಲೆಯನ್ನು ಪಡೆಯುವಾಗ ಪ್ರತಿರೋಧ ಒಡ್ಡಿದ್ದಾರೆ. ಆದರೂ ಬಿಡದ ಕಳ್ಳರು ಜೋರಾಗಿ ಎಳೆದಾಗ ಮಹಿಳೆಯ ಕಿವಿ ಹರಿದು ಗಂಭೀರ ಗಾಯವಾಗಿದೆ. 20 ಗ್ರಾಂ ಚಿನ್ನ, ಬೆಳ್ಳಿಯನ್ನು ಕದಿಯಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಘಟನೆಯಲ್ಲಿ ಕಿವಿ ಹರಿತಕ್ಕೀಡಾದ ನಿರ್ಮಲಾ ಪಾಟೀಲ್​ರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಹೆಣ್ಣುಮಕ್ಕಳಿದ್ದ ಕುಟುಂಬದ ಮೇಲೆ ದುಷ್ಕರ್ಮಿಗಳ ಗ್ಯಾಂಗ್ ಅಟ್ಟಹಾಸ ಮೆರೆದಿದ್ದು, ಆತಂಕ ಮೂಡಿಸಿದೆ. ಸುತ್ತಮುತ್ತಲಿನ ನಿವಾಸಿಗಳಲ್ಲೂ ಇದು ಭೀತಿ ಉಂಟು ಮಾಡಿದೆ. ಸ್ಥಳಕ್ಕೆ ಕಾಗವಾಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಎಚ್ಚರಿಕೆಯಿಂದಿರಲು ಪೊಲೀಸರ ಮನವಿ: ಕಳ್ಳತನ ಘಟನೆಯ ಬಳಿಕ ತೋಟದ ಮನೆಗಳಲ್ಲಿ ವಾಸಿಸುವ ಕುಟುಂಬಗಳು ಎಚ್ಚರಿಕೆಯಿಂದ ಇರಬೇಕು. ಮಹಾರಾಷ್ಟ್ರದ ಕೆಲವು ಕಳ್ಳರ ತಂಡವೊಂದು ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್​ ಮಾಡಿ ದೋಚುತ್ತಿದೆ. ತೋಟದ ವಸತಿ ಪ್ರದೇಶದಲ್ಲಿ ವಾಸಿಸುವ ಮನೆಗಳು ಇವರ ಮೊದಲ ಗುರಿ. ಹೀಗಾಗಿ ಕುಟುಂಬಸ್ಥರು ಎಚ್ಚರಿಕೆ ವಹಿಸಬೇಕು. ಯಾರಾದರೂ ಅಪರಿಚಿತರು, ಸಂಶಯಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ 112 ಗೆ ಅಥವಾ ಕಾಗವಾಡ ಠಾಣೆ ಕಂಟ್ರೋಲ್ ರೂಮಿಗೆ ಕರೆ ಮಾಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಮಗು ಕದ್ದು ಸಿಕ್ಕಿಬಿದ್ದ ಮಹಿಳೆ: ಮದುವೆಯಾಗಿ 7 ವರ್ಷವಾದರೂ ಮಕ್ಕಳ ಪಡೆಯದ ಮಹಿಳೆಯೊಬ್ಬಳು ಆಸ್ಪತ್ರೆಯಲ್ಲಿ 11 ತಿಂಗಳ ಹಸುಳೆಯನ್ನು ಕದ್ದು 5 ಗಂಟೆ ಅವಧಿಯಲ್ಲೇ ಪೊಲೀಸರ ಅತಿಥಿಯಾದ ಘಟನೆ ಮೈಸೂರಿನಲ್ಲಿ ವರದಿಯಾಗಿದೆ. ದೇವರಾಜ ಠಾಣೆ ಪೊಲೀಸರ ಮಿಂಚಿನ ಕಾರ್ಯಾಚರಣೆ ನಡೆಸಿ ಮಗುವನ್ನು ಸುರಕ್ಷಿತವಾಗಿ ತಾಯಿ ಮಡಿಲು ಸೇರಿಸಿದ್ದರು.

ಬಾಣಂತಿ ತಾಯಿಯೊಬ್ಬರು ಚೆಲುವಾಂಬ ಆಸ್ಪತ್ರೆಯ ವಾರ್ಡ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅಪರಿಚಿತ ಮಹಿಳೆಯೊಬ್ಬಳು ಅಲ್ಲಿಗೆ ಬಂದು 11 ತಿಂಗಳ ನವಜಾತ ಶಿಶುವನ್ನು ಕದ್ದೊಯ್ದಿದ್ದಳು. ಆಸ್ಪತ್ರೆಯ ಸಿಬ್ಬಂದಿ, ಕುಟುಂಬಸ್ಥರು ಮಗುವನ್ನು ಹುಡುಕಾಡಿದರು ಸಿಕ್ಕಿರಲಿಲ್ಲ. ಬಳಿಕ ದೇವರಾಜ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಆಸ್ಪತ್ರೆಯ ಸಿಸಿ ಕ್ಯಾಮರಾ ಪರಿಶೀಲಿಸಿ, ಹುಡುಕಾಟ ನಡೆಸಿದರು.

ಅಪರಿಚಿತ ಮಹಿಳೆ ಆಟೋ ರಿಕ್ಷಾ ಹತ್ತಿ ಹೋದ ಜಾಡು ಹಿಡಿದು ಮನೆ ಪತ್ತೆ ಮಾಡಿ ಮಗುವನ್ನು ಸುರಕ್ಷಿತವಾಗಿ ತಂದು ತಾಯಿಯ ಮಡಿಲು ಸೇರಿಸಿದ್ದರು. ಮಗು ಕದ್ದ ಮಹಿಳೆಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ, ತನಗೆ 7 ವರ್ಷದಿಂದ ಮಗುವಾಗದ ಕಾರಣ ಈ ಕೃತ್ಯ ಎಸಗಿದ್ದಾಗಿ ತಿಳಿಸಿದ್ದಳು.

ಇದನ್ನೂ ಓದಿ: ನರ್ಸ್ ವೇಷದಲ್ಲಿ ಬಂದು ಮಗು ಕದ್ದಿದ್ದ ಚಾಲಾಕಿ.. ನವಜಾತ ಶಿಶು ಒಂದೇ ದಿನದಲ್ಲಿ ತಾಯಿ ಮಡಿಲು ಸೇರಿದ್ದು ಹೇಗೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.