ETV Bharat / state

ಮಂಗನ ಕಾಯಿಲೆ ಲಸಿಕೆ ಸಂಶೋಧನೆಗೆ ಸರ್ಕಾರದಿಂದ ಆರ್ಥಿಕ ನೆರವು : ದಿನೇಶ್ ಗುಂಡೂರಾವ್

author img

By ETV Bharat Karnataka Team

Published : Dec 11, 2023, 4:38 PM IST

ಮಂಗನ ಕಾಯಿಲೆಗೆ ಲಸಿಕೆ ಕಂಡು ಹಿಡಿಯಲು ಸರ್ಕಾರದ ವತಿಯಿಂದ ಸಂಶೋಧನಾ ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ಹೇಳಿದ್ದಾರೆ.

government-will-give-financial-support-for-monkey-disease-kfd-vaccine-research-dinesh-gundurao
ದಿನೇಶ್ ಗುಂಡೂರಾವ್

ಮಂಗನ ಕಾಯಿಲೆ(ಕೆಎಫ್ಡಿ)ಲಸಿಕೆ ಸಂಶೋಧನೆಗೆ ಸರ್ಕಾರದಿಂದ ಆರ್ಥಿಕ ನೆರವು : ದಿನೇಶ್ ಗುಂಡೂರಾವ್

ಬೆಂಗಳೂರು/ ಬೆಳಗಾವಿ : ಮಲೆನಾಡು ಭಾಗದಲ್ಲಿ ಸಾಕಷ್ಟು ಸಮಸ್ಯೆ ಸೃಷ್ಟಿಸಿರುವ ಕೆಎಫ್ಡಿ(ಮಂಗನ ಕಾಯಿಲೆ)ಗೆ ಲಸಿಕೆ ಸಂಶೋಧನೆ ಮಾಡಲು ಸಂಶೋಧನಾ ಸಂಸ್ಥೆಗಳಿಗೆ ರಾಜ್ಯ ಸರ್ಕಾರ ಹಣಕಾಸು ನೆರವು ನೀಡಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ವಿಧಾನ ಪರಿಷತ್ ಶೂನ್ಯ ವೇಳೆಯಲ್ಲಿ ಬಿಜೆಪಿ ಸದಸ್ಯ ಡಿ.ಎಸ್ ಅರುಣ್ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, ಇಷ್ಟು ದಿನ ಕೆಎಫ್​​ಡಿ ರೋಗಕ್ಕೆ ಲಸಿಕೆಯೊಂದನ್ನು ಬಳಕೆ ಮಾಡಲಾಗುತ್ತಿತ್ತು. ಈಗ ಆ ಲಸಿಕೆ ನೀಡುವಿಕೆಯನ್ನು ನಿಲ್ಲಿಸಲಾಗಿದೆ. ಆ ಲಸಿಕೆಯಿಂದ ಯಾವುದೇ ರೀತಿಯ ಪ್ರಯೋಜನ ಇಲ್ಲ. ಮಂಗನ ಕಾಯಿಲೆ ನಿಯಂತ್ರಿಸುವ ಶಕ್ತಿ ಆ ಲಸಿಕೆಯಲ್ಲಿ ಇಲ್ಲ ಎಂದು ವರದಿ ಬಂದಿದೆ. ಹಾಗಾಗಿ ಆ ಲಸಿಕೆ ನೀಡಿಕೆಯನ್ನು ನಿಲ್ಲಿಸಲಾಗಿದೆ. ಆದರೆ ಹೊಸ ಲಸಿಕೆ ಪಡೆಯಲು ಪ್ರಯತ್ನ ನಡೆಸಲಾಗಿದೆ. ಈ ಬಗ್ಗೆ ಐಸಿಎಂಆರ್ ಜೊತೆ ಮಾತುಕತೆ ನಡೆಸಲಾಗಿದೆ. ಆದರೆ, ಈ ಕಾಯಿಲೆಗೆ ಲಸಿಕೆ ತಯಾರಿಕೆ ಮಾಡಲು ಕಂಪನಿಗಳು ಹೆಚ್ಚು ಆಸಕ್ತಿ ತೋರುತ್ತಿಲ್ಲ. ಈ ಕಾಯಿಲೆಯಿಂದ ಬಳಲುತ್ತಿರುವವರು ಬಹಳ ಕಡಿಮೆ ಇದ್ದಾರೆ. ಕಡಿಮೆ ಜನರಿಗೆ ಬೇಕಾದ ಲಸಿಕೆಯಾಗಿದೆ. ಹಾಗಾಗಿ ಕಂಪನಿಗಳು ಲಸಿಕೆ ಸಂಶೋಧನೆಗೆ ಮುಂದೆ ಬರುತ್ತಿಲ್ಲ. ಆದರೂ ನಾವು ಐಸಿಎಂಆರ್ ಜೊತೆ ಮಾತನಾಡಿದ್ದೇವೆ ಎಂದು ಹೇಳಿದರು.

ಈಗಾಗಲೇ ಒಂದು ಕಂಪನಿ ಜೊತೆ ಮಾತುಕತೆಯಾಗಿದೆ. ಸಂಶೋಧನೆಗೆ ನಾವೂ ಕೂಡ ಹಣ ನೀಡುವ ಭರವಸೆ ನೀಡಿದ್ದೇವೆ. ಲಸಿಕೆ ಸಂಶೋಧನೆಗೆ ಪ್ರಯತ್ನ ನಡೆಯುತ್ತಿದೆ. ಅದರ ಯಶಸ್ಸಿನ ಬಗ್ಗೆ ಈಗಲೇ ಏನೂ ಹೇಳಲು ಸಾಧ್ಯವಿಲ್ಲ. ಈ ವರ್ಷ ಹೆಚ್ಚಿನ ಕೆಎಫ್​​​ಡಿ ಆಗಿಲ್ಲ. ಇದರ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿಲ್ಲ. ಎಲ್ಲವನ್ನೂ ಗಮನದಲ್ಲಿರಿಸಿಕೊಂಡಿದ್ದೇವೆ. ಸದಾ ಐಸಿಎಂಆರ್ ಜೊತೆ ಸಂಪರ್ಕದಲ್ಲಿದ್ದೇವೆ. ಲಸಿಕೆ ಕಂಡುಹಿಡಿಯಲು ಮತ್ತು ಉತ್ಪಾದಿಸಲು ನಮ್ಮ ಪ್ರಯತ್ನ ನಡೆದಿದೆ ಎಂದು ಮಾಹಿತಿ ನೀಡಿದರು. ಆದರೆ, ಸದ್ಯ ನಿಲ್ಲಿಸಿರುವ ಲಸಿಕೆಯನ್ನು ಹೊಸ ಲಸಿಕೆ ಬರುವವರೆಗೂ ಮುಂದುವರೆಸುವ ಪ್ರಸ್ತಾಪ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಕಮಿಷನ್ ಆರೋಪ ಲೋಕಾಯುಕ್ತ ತನಿಖೆಗೆ ವಹಿಸಿ : ರಾಜ್ಯ ಸರ್ಕಾರದ ವಿರುದ್ಧ ಕೇಳಿ ಬಂದಿರುವ ಕಮಿಷನ್ ಆರೋಪ ಪ್ರಕರಣವನ್ನು ಲೋಕಾಯುಕ್ತ ತನಿಖೆ ನಡೆಸುವಂತೆ ಬಿಜೆಪಿ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ. ಗುತ್ತಿಗೆದಾರ ಕೆಂಪಣ್ಣ ಆರೋಪದ ಬಗ್ಗೆ ಶೂನ್ಯ ವೇಳೆಯಲ್ಲಿ ಪ್ರಸ್ತಾಪ ಮಾಡಿದ ಕೋಟಾ ಶ್ರೀನಿವಾಸ ಪೂಜಾರಿ, ಈ ಹಿಂದೆ ಬಿಜೆಪಿ ಸರ್ಕಾರದ ಬಗ್ಗೆ ಆಪಾದನೆ ಮಾಡಿದ್ದ ರಾಜ್ಯ ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ, ಈಗಿನ ಕಾಂಗ್ರೆಸ್ ಸರ್ಕಾರದಲ್ಲಿಯೂ ಕಮಿಷನ್ ಮಿತಿ ಮೀರಿದೆ ಎಂದು ಪ್ರಸ್ತುತ ರಾಜ್ಯ ಸರ್ಕಾರದ ವಿರುದ್ಧ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಗೆ ದಾಖಲೆಗಳನ್ನು ನೀಡಿದ್ದಾರೆ.

ಸರ್ಕಾರದ ಭಷ್ಟಾಚಾರ ಮತ್ತು ಕಮಿಷನ್ ಬಗ್ಗೆ ಬರೋಬ್ಬರಿ 8000 ಪುಟಗಳ ದಾಖಲೆಗಳ ಮಾಹಿತಿಯನ್ನು ನೀಡಿದ ಕೆಂಪಣ್ಣ, ಕಮಿಷನ್ ಕೊಟ್ಟವರಿಗೆ ಮಾತ್ರ ಬಿಲ್ ಪಾವತಿಯನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಹಿರಿತನದ ಆಧಾರದ ಮೇಲೆ ಬಿಲ್ ಮಾಡಿದರೇ ಸಮಸ್ಯೆ ಇಲ್ಲ. ಅದನ್ನು ಬಿಟ್ಟು ಕಮಿಷನ್ ಕೊಟ್ಟವರಿಗೆ ಮಾತ್ರ ಈಗಿನ ಸರ್ಕಾರ ಬಿಲ್ ಪಾವತಿ ಮಾಡುತ್ತಿದೆ. ಅಂದ ಮೇಲೆ ಹೊಸ ಸರ್ಕಾರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುತ್ತದೆ ಎನ್ನುವುದು ಕೇವಲ ಬೊಗಳೆ ಎಂದು ಕೆಂಪಣ್ಣ ಆರೋಪಿಸಿದ್ದಾರೆ ಎಂದರು.

ಈ ಮಧ್ಯೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಡೆಯುತ್ತಿರುವ ಭಷ್ಟಾಚಾರದ ಬಗ್ಗೆ ಮತ್ತು ಪ್ರತಿ ವರ್ಗಾವಣೆಗೂ ಲಕ್ಷಾಂತರ ರೂಪಾಯಿಗಳನ್ನು ಸರ್ಕಾರದ ಪರವಾಗಿ ಅಗೋಚರ ಕೈಗಳು ಕೇಳುತ್ತಿರುವ ಬಗ್ಗೆ ರಾಜ್ಯದಲ್ಲಿ ಸರ್ಕಾರಿ ಅಧಿಕಾರಗಳ ಮಧ್ಯೆ ಹಾಹಾಕಾರ ಎದ್ದಿದೆ. ಒಂದು ವೇಳೆ ವರ್ಗಾವಣೆ ದಂಧೆಯ ಬಗ್ಗೆ ಬಾಯಿ ಬಿಟ್ಟರೇ ನಿಂತ ಸ್ಥಳದಲ್ಲಿಯೇ ಅಧಿಕಾರಿಗಳು ಅಮಾನತು ಆಗುವ ಭೀತಿ ಎದುರಿಸುತ್ತಿದ್ದಾರೆ. ಹೀಗಾಗಿ ಈ ಬಗ್ಗೆ ಲೋಕಾಯುಕ್ತ ತನಿಖೆ ನಡೆಸುವಂತೆ ಒತ್ತಾಯಿಸಿದರು.

ಕೋಟಾ ಶ್ರೀನಿವಾಸ ಪೂಜಾರಿ ಅವರ ಪ್ರಸ್ತಾಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉತ್ತರ ಕೊಡಿಸುವುದಾಗಿ ಸಭಾನಾಯಕ ಭೋಸರಾಜ್ ತಿಳಿಸಿದರು. ಆದರೆ ಇದನ್ನು ಒಪ್ಪದ ಕೋಟಾ ಶ್ರೀನಿವಾಸ ಪೂಜಾರಿ, ಇದು ಗಂಭೀರ ವಿಚಾರ. ಸರ್ಕಾರ ಇದಕ್ಕೆ ಉತ್ತರಿಸಬೇಕೆಂದು ಒತ್ತಾಯಿಸಿದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಪರಿಸ್ಥಿತಿ ಅರಿತು ಮಧ್ಯಪ್ರವೇಶಿಸಿದ ಉಪಸಭಾಪತಿ ಪ್ರಾಣೇಶ್, ಶೂನ್ಯವೇಳೆಯಲ್ಲಿ ಚರ್ಚೆಗೆ ಅವಕಾಶವಿಲ್ಲ. ಮನವಿ ಕೊಟ್ಟರೆ ಬೇರೆ ನಿಯಮದಲ್ಲಿ ಅವಕಾಶ ನೀಡಲಾಗುವುದೆಂದು ಗೊಂದಲಕ್ಕೆ ತೆರೆ ಎಳೆದರು.

ಅರಸು ಪ್ರತಿಮೆ ನಿರ್ಮಿಸಿ : ಮೈಸೂರು ಜಿಲ್ಲಾಧಿಕಾರಿ ಕಚೇರಿ ಹಾಗೂ ಬೆಳಗಾವಿ ಸುವರ್ಣ ಸೌಧದ ಎದುರು ದೇವರಾಜ ಅರಸು ಪ್ರತಿಮೆ ಸ್ಥಾಪಿಸುವಂತೆ ರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್ ಸದಸ್ಯ ಬಿಕೆ ಹರಿಪ್ರಸಾದ್ ಒತ್ತಾಯಿಸಿದ್ದಾರೆ. ವಿಧಾನ ಪರಿಷತ್ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ದುಡಿದವರು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಹಾಗೂ ಬೆಳಗಾವಿ ಸುವರ್ಣ ಸೌಧದ ಎದುರು ಪ್ರತಿಮೆ ಸ್ಥಾಪಿಸಿ ಗೌರವ ಸಲ್ಲಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಭಾನಾಯಕ ಬೋಸರಾಜ್, ದೇವರಾಜ ಅರಸು ಪ್ರತಿಮೆ ಸ್ಥಾಪನೆ ಕುರಿತು ಹರಿಪ್ರಸಾದ್ ಪ್ರಸ್ತಾಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉತ್ತರ ಕೊಡಿಸುವುದಾಗಿ ತಿಳಿಸಿದರು.

ಇದನ್ನೂ ಓದಿ : ಮುಂದಿನ ವರ್ಷದಿಂದ ಉಚಿತ ಬೈಸಿಕಲ್ ವಿತರಣೆ: ಮಧು ಬಂಗಾರಪ್ಪ ಭರವಸೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.