ETV Bharat / state

ಬೆಳಗಾವಿಯಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣಕ್ಕೆ ಸರ್ಕಾರ ಸಿದ್ದ: ಸಚಿವ ಬಿ ನಾಗೇಂದ್ರ

author img

By ETV Bharat Karnataka Team

Published : Dec 13, 2023, 3:40 PM IST

ಬೆಳಗಾವಿಯಲ್ಲಿ ಸುಸಜ್ಜಿತ ಅಂತಾರಾಷ್ಟ್ರೀ ಕ್ರೀಡಾಂಗಣ ನಿರ್ಮಾಣ ಮಾಡಲು ಸರ್ಕಾರ ಸಿದ್ಧವಾಗಿದೆ ಎಂದು ವಿಧಾನಸಭೆಯಲ್ಲಿ ಸಚಿವ ಬಿ ನಾಗೇಂದ್ರ ತಿಳಿಸಿದ್ದಾರೆ.

government-is-ready-for-construction-of-international-stadium-in-belgaum-says-minister-b-nagendra
ಬೆಳಗಾವಿಯಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣಕ್ಕೆ ಸರ್ಕಾರ ಸಿದ್ದ : ಸಚಿವ ಬಿ ನಾಗೇಂದ್ರ

ಬೆಳಗಾವಿಯಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣಕ್ಕೆ ಸರ್ಕಾರ ಸಿದ್ದ : ಸಚಿವ ಬಿ ನಾಗೇಂದ್ರ

ಬೆಂಗಳೂರು/ ಬೆಳಗಾವಿ : ಬೆಳಗಾವಿ ತಾಲೂಕಿನ ಯಳ್ಳೂರು ಗ್ರಾಮದ ಬಳಿಯ ಸರ್ಕಾರಿ ಜಾಗದಲ್ಲಿ, ಸುಸಜ್ಜಿತ ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣಕ್ಕೆ ಸರ್ಕಾರ ಸಿದ್ದವಿದೆ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಬಿ ನಾಗೇಂದ್ರ ಹೇಳಿದರು. ವಿಧಾನಸಭೆ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಅಭಯ ಪಾಟೀಲ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೇಂದ್ರ ಸರ್ಕಾರ ಒದಗಿಸುವ ಅನುದಾನದ ಜೊತೆ ರಾಜ್ಯ ಸರ್ಕಾರವು ಅನುದಾನ ನೀಡಿ ಕ್ರೀಡಾಂಗಣ ನಿರ್ಮಿಸಲು ಯಾವುದೇ ಅಡ್ಡಿಯಿಲ್ಲ. ಯಳ್ಳೂರು ಗ್ರಾಮದ ರಿ.ಸ.ನಂ 1142ರ 66 ಎಕರೆ ಪೈಕಿ 40 ಎಕರೆ ಜಮೀನು ಕ್ರೀಡಾ ಇಲಾಖೆಗೆ ಹಸ್ತಾಂತರವಾಗಿದೆ ಎಂದರು.

ಪಾರ್ಕಿಂಗ್ ಒಳಗೊಂಡಂತೆ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲು ಕನಿಷ್ಠ 55 ಎಕರೆ ಜಮೀನಿನ ಅವಶ್ಯಕತೆಯಿದೆ. ಈಗಾಗಲೇ ಜಮೀನು ಹಸ್ತಾಂತರ ಪ್ರಕ್ರಿಯೆ ಸಲುವಾಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ 11 ಅಧಿಕಾರಿಗಳ ಸಮಿತಿ ರಚನೆ ಮಾಡಲಾಗಿದೆ. ಸ್ಥಳೀಯ ಶಾಸಕರು ಅವಶ್ಯ ಇರುವ 15 ಎಕರೆ ಜಮೀನು ಒದಗಿಸಿದರೆ ಶೀಘ್ರವಾಗಿ ಕ್ರೀಡಾಂಗಣ ನಿರ್ಮಾಣದ ಯೋಜನೆ ರೂಪಿಸಲಾಗುವುದು ಎಂದು ಸಚಿವ ಬಿ.ನಾಗೇಂದ್ರ ಹೇಳಿದರು.

ಸದ್ಯ, ಸರ್ಕಾರಿ ಜಮೀನಿನಲ್ಲಿ ನಿರ್ಮಾಣವಾಗಿರುವ ಶಾಲೆ ಹಾಗೂ ಸರ್ಕಾರದ ಯೋಜನೆಗಳಲ್ಲಿ ಬಡವರಿಗೆ ವಿತರಿಸಲಾಗಿರುವ ಮನೆಗಳನ್ನು ಹೊರತುಪಡಿಸಿ ಉಳಿದ ಖಾಲಿ ಜಾಗವನ್ನು ಕ್ರೀಡಾ ಇಲಾಖೆಗೆ ಹಸ್ತಾಂತರಿಸಲಾಗುವುದು. ಇದಕ್ಕೆ ಜನರ ವಿರೋಧವಿಲ್ಲ ಎಂದು ಶಾಸಕ ಅಭಯ ಪಾಟೀಲ್ ಹೇಳಿದರು.

ತಿಂಗಳ ಒಳಗಾಗಿ ವಿದ್ಯಾರ್ಥಿ ನಿಲಯ ಮಂಜೂರಾತಿ : ಹೊಸಕೋಟೆಯಲ್ಲಿ ಮೆಟ್ರಿಕ್ ನಂತರ ಪರಿಶಿಷ್ಟ ವರ್ಗಗಳ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಅಗತ್ಯ ಇರುವ 10,000 ಚದುರ ಅಡಿ ಜಾಗವನ್ನು ಒದಗಿಸಿದರೆ, ತಿಂಗಳ ಒಳಗಾಗಿ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಮಂಜೂರಾತಿ ನೀಡುವುದಾಗಿ ಸಚಿವರು, ಶಾಸಕ ಶರತ್ ಬಚ್ಚೇಗೌಡ ಅವರ ಪ್ರಶ್ನೆಗೆ ಉತ್ತರಿಸಿದರು.

ಸಚಿವ ಜಮೀರ್​ ಅಹ್ಮದ್​ ವಿರುದ್ಧ ಪ್ರತಿಭಟನೆ : ಸಚಿವ ಜಮೀರ್‌ ಅಹ್ಮದ್​ ಹೇಳಿಕೆ ಖಂಡಿಸಿ ವಿಧಾನ ಪರಿಷತ್ ಸದಸ್ಯರು ಸಚಿವರ ರಾಜೀನಾಮೆಗೆ ಒತ್ತಾಯಿಸಿ ಸುವರ್ಣಸೌಧದ ದ್ವಾರದ ಬಳಿ ಪ್ರತಿಭಟನೆ ನಡೆಸಿದರು. ಸುಮಾರು 10ಕ್ಕೂ ಹೆಚ್ಚು ವಿಧಾನ ಪರಿಷತ್ ಸದಸ್ಯರು ಧರಣಿ ನಡೆಸಿದರು. ಜಮೀರ್​ ಅಹ್ಮದ್​ ಸಚಿವ‌ ಸ್ಥಾನಕ್ಕೆ ರಾಜೀನಾಮೆ ‌ನೀಡಬೇಕೆಂದು ಬಿಜೆಪಿ ಪರಿಷತ್ ಸದಸ್ಯರು ಆಗ್ರಹಿಸಿದರು. ಕೋಟಾ ಶ್ರೀನಿವಾಸ್ ಪೂಜಾರಿ, ರವಿಕುಮಾರ್ ಸೇರಿದಂತೆ‌ ಬಿಜೆಪಿ ಸದಸ್ಯರರು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ : ಸದನದೊಳಗೆ ಬಿಟ್ಟು, ಹೊರಗೆ ಮಾತನಾಡಿದರೆ ಯಾರ್ರೀ ಕೇಳ್ತಾರೆ: ಡಿಸಿಎಂ ಡಿ ಕೆ ಶಿವಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.