ETV Bharat / state

ಕಾಂಗ್ರೆಸ್ ಸೇರಲ್ಲ, ಲೋಕಸಭೆಗೆ ಬಿಜೆಪಿ ಟಿಕೆಟ್ ಕೇಳುತ್ತೇನೆ: ಮಾಜಿ ಶಾಸಕ ಅನಿಲ‌ ಬೆನಕೆ

author img

By ETV Bharat Karnataka Team

Published : Sep 5, 2023, 3:19 PM IST

Updated : Sep 5, 2023, 5:50 PM IST

ವೈಯುಕ್ತಿಕವಾಗಿ ನನ್ನ ಹೆಸರು ಹಾಳು ಮಾಡುವ ಉದ್ದೇಶದಿಂದ ಕಾಂಗ್ರೆಸ್ ಸೇರುತ್ತೇನೆ ಎಂದು ಸುಳ್ಳು ಚರ್ಚೆ ಹುಟ್ಟು ಹಾಕಿರಬಹುದು. ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಶಾಸಕ ಅನಿಲ‌ ಬೆನಕೆ ಸ್ಪಷ್ಟನೆ ನೀಡಿದ್ದಾರೆ.

former-mla-anila-benake-clarification-on-joining-of-congress
ಕಾಂಗ್ರೆಸ್ ಸೇರಲ್ಲ, ಲೋಕಸಭೆಗೆ ಬಿಜೆಪಿ ಟಿಕೆಟ್ ಕೇಳುತ್ತೇನೆ: ಮಾಜಿ ಶಾಸಕ ಅನಿಲ‌ ಬೆನಕೆ

ಮಾಜಿ ಶಾಸಕ ಅನಿಲ‌ ಬೆನಕೆ

ಬೆಳಗಾವಿ: ನಾನು ಕಾಂಗ್ರೆಸ್ ಸೇರ್ಪಡೆಯಾಗುವ ಪ್ರಶ್ನೆಯೇ ಇಲ್ಲ. ವಿನಾಕಾರಣ ರಾಜಕೀಯ ವಿರೋಧಿಗಳು ಮಾಧ್ಯಮಗಳಲ್ಲಿ ನನ್ನ ಹೆಸರು ಕೆಡಿಸುವ ಹುನ್ನಾರ ನಡೆಸಿದ್ದಾರೆ ಎಂದು ಬಿಜೆಪಿ ಮಾಜಿ ಶಾಸಕ ಅನಿಲ ಬೆನಕೆ ಆರೋಪಿಸಿದರು. ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 25 ವರ್ಷಗಳಿಂದ ನಿಷ್ಠಾವಂತ ಬಿಜೆಪಿ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಎರಡು ಬಾರಿ ಟಿಕೆಟ್ ಕೇಳಿದಾಗ ಕೊಟ್ಟಿರಲಿಲ್ಲ. ಮೂರನೇ ಬಾರಿ 2018ರಲ್ಲಿ ಟಿಕೆಟ್ ನೀಡಿದಾಗ ಉತ್ತರ ಕ್ಷೇತ್ರದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ಸಾಧಿಸಿತ್ತು ಎಂದರು.

ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಸಿಕ್ಕಿಲ್ಲ ಎಂದು, ಬಿಜೆಪಿ ಬಿಡುವುದಿಲ್ಲ ಮತ್ತು ಕಾಂಗ್ರೆಸ್ ಸೇರುವುದಿಲ್ಲ. ಅನಿಲ್​ ಬೆನಕೆ ಅವರು ಕಾಂಗ್ರೆಸ್​ ಸೇರುವ ಸಲುವಾಗಿ ಜಗದೀಶ್​ ಶೆಟ್ಟರ್​ ಅವರನ್ನು ಭೇಟಿ ಮಾಡಿದ್ದಾರೆ ಎಂದು ಕೆಲ ಮಾಧ್ಯಮಗಳು ಪ್ರಸಾರ ಮಾಡುತ್ತಿವೆ. ನಾನು ಆರು ತಿಂಗಳ ಹಿಂದೆ ಜಗದೀಶ್​ ಶೆಟ್ಟರ್ ಅವರನ್ನು ಭೇಟಿಯಾಗಿದ್ದು ಬಿಟ್ಟರೆ, ಮತ್ತೆ ಅವರನ್ನು ಭೇಟಿಯಾಗಿಲ್ಲ ಮತ್ತು ಅವರೊಂದಿಗೆ ನಾನು ಸಂಪರ್ಕದಲ್ಲಿಲ್ಲ ಎಂದು ಸ್ಪಷ್ಟಪಡಿಸಿದರು.

ಹೈಕಮಾಂಡ್ ಏನೋ ಲೆಕ್ಕಾಚಾರ ಹಾಕಿ, ನನಗೆ ಟಿಕೆಟ್ ನೀಡಿರಲಿಲ್ಲ. ಈಗ ಭಾರತೀಯ ಜನತಾ ಪಾರ್ಟಿಯನ್ನು ಬಿಡುವ ಪ್ರಶ್ನೆಯೇ ಇಲ್ಲ. ಸದ್ಯ ಲೋಕಸಭೆ ಚುನಾವಣೆಗೆ ತಯಾರಿ ನಡೆಸಿದ್ದೇವೆ. ನೂರಕ್ಕೆ ನೂರರಷ್ಟು ನಾನೂ ಕೂಡ ಟಿಕೆಟ್ ಕೇಳುತ್ತೇನೆ. ಪಕ್ಷ ಅವಕಾಶ ನೀಡಿದರೆ ಸ್ಪರ್ಧಿಸುವುದು ನಿಶ್ಚಿತ. ಒಂದು ವೇಳೆ ಬೇರೆ ಯಾರಿಗೆ ಟಿಕೆಟ್ ಕೊಟ್ಟರೂ, ಅವರ ಗೆಲುವಿಗೆ ಶ್ರಮಿಸುತ್ತೇನೆ. ವೈಯಕ್ತಿಕವಾಗಿ ನನ್ನ ಹೆಸರು ಹಾಳು ಮಾಡುವ ಉದ್ದೇಶದಿಂದ ಕಾಂಗ್ರೆಸ್ ಸೇರುತ್ತೇನೆ ಎಂದು ಸುಳ್ಳು ಚರ್ಚೆ ಹುಟ್ಟು ಹಾಕಿರಬಹುದು. ನನ್ನ ವಿರುದ್ಧ ಕುತಂತ್ರ ನಡೆದಿರಬಹುದು, ವಿರೋಧ ಪಕ್ಷಕ್ಕಿಂತ ನಮ್ಮ ಪಕ್ಷದಲ್ಲೇ ಕುತಂತ್ರಿಗಳು ಹೆಚ್ಚು ಇರುತ್ತಾರೆ ಎಂದು ಹೇಳಿದರು.

ಆಪರೇಷನ್ ಹಸ್ತ ಮಾಡುವವರು ಮತ್ತು ಹೋಗುವವರು ಮೂರ್ಖರು - ರಮೇಶ್ ಜಾರಕಿಹೊಳಿ: ಮತ್ತೊಂದೆಡೆ, ಮಾಜಿ ಸಚಿವ, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ನಿನ್ನೆ(ಸೋಮವಾರ) ಅಥಣಿ ಪಟ್ಟಣದಲ್ಲಿ ಮಾತನಾಡಿ, ಆಪರೇಷನ್ ಹಸ್ತ ಮಾಡುವವರು ಮತ್ತು ಆಪರೇಷನ್ ಹಸ್ತಕ್ಕೆ ಒಳಗಾಗುವವರು ಮೂರ್ಖರು. ಆಪರೇಷನ್ ಹಸ್ತ​ ನಡೆಸುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ. ನಾವು ಆಪರೇಷನ್ ಕಮಲ ಮಾಡಿದಾಗ ಒಂದು ಅರ್ಥ ಇತ್ತು. ಆಗ ಸರ್ಕಾರಕ್ಕೆ ಪೂರ್ಣ ಬಹುಮತ ಇರಲಿಲ್ಲ. ಬಿಜೆಪಿಯವರು ನಮಗೆ ಆಹ್ವಾನ ನೀಡಿರಲಿಲ್ಲ. ನಮ್ಮ ಸ್ವಂತ ನಿರ್ಣಯದಿಂದ ನಾವು ಬಿಜೆಪಿಗೆ ಹೋಗಿದ್ದೆವು. ಕಾಂಗ್ರೆಸ್​ನಲ್ಲಿ ಆದ ಅನ್ಯಾಯದಿಂದ ಬೇಸತ್ತು ನಾವಾಗೇ ಹೊರಬಂದಿದ್ದೆವು. ಈಗ ಆಪರೇಷನ್​ ಹಸ್ತ ಮಾಡುತ್ತಿರುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ ಎಂದು ಹೇಳಿದ್ದರು.

ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೂ ಸರಿಯಿಲ್ಲ. ಕಾಂಗ್ರೆಸ್ ಪಕ್ಷದ 25 ರಿಂದ 30 ಹಿರಿಯ ಶಾಸಕರು ಬಂಡಾಯದ ಬಾವುಟ ಹಾರಿಸಲು ಸಿದ್ಧತೆ ನಡೆಸಿದ್ದರು. ಈ ಸಂಬಂಧ ಬೆಂಗಳೂರಿನ ಹೋಟೆಲ್​ ಒಂದರಲ್ಲಿ ಸಭೆ ನಡೆಸಲು ಮುಂದಾಗಿದ್ದರು. ಇದನ್ನು ಮರೆಮಾಚಲು ಆಪರೇಷನ್​ ಹಸ್ತ ಎಂಬುದನ್ನು ಮುನ್ನಲೆಗೆ ತರಲಾಯಿತು. ಇದು ಮಹಾನಾಯಕನ ಕುತಂತ್ರ ಎಂದು ಪರೋಕ್ಷವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ ವಿರುದ್ಧ ಸೆ.8 ರಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ: ಮಾಜಿ ಸಚಿವ ಅಶ್ವತ್ಥನಾರಾಯಣ

Last Updated : Sep 5, 2023, 5:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.