ETV Bharat / state

ನವಿಲುತೀರ್ಥ ಡ್ಯಾಂನಿಂದ ಏಕಾಏಕಿ ನೀರು ಬಿಡುಗಡೆ... ಪ್ರವಾಹ ಭೀತಿಯಲ್ಲಿ ಜನ

author img

By

Published : Jul 23, 2021, 8:56 PM IST

Updated : Jul 24, 2021, 5:22 AM IST

ನವೀನ ತೀರ್ಥ ಡ್ಯಾಂನಿಂದ ನೀರು ಹೊರ ಬಿಡುತ್ತಿರುವ ಹಿನ್ನೆಲೆ ಮುನವಳ್ಳಿ, ರಾಮದುರ್ಗ ಸೇರಿ ನೂರಾರು ಗ್ರಾಮಗಳು ಜಲಾವೃತವಾಗುವ ಆತಂಕ ಎದುರಿಸುತ್ತಿವೆ. ಸದ್ಯ ಜಿಲ್ಲೆಯಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಮತ್ತಷ್ಟು ನೀರನ್ನು ಹೊರಕ್ಕೆ ಬಿಟ್ಟರೆ ರಾಮದುರ್ಗ ತಾಲೂಕಿನ ಸಾಕಷ್ಟು ಗ್ರಾಮಗಳು ನೀರಿನಲ್ಲಿ ಮುಳುಗಡೆಯಾಲಿವೆ. ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ..

Belgavi
ನವಿಲುತೀರ್ಥ ಡ್ಯಾಂನಿಂದ ನೀರು ಬಿಡುಗಡೆ

ಬೆಳಗಾವಿ : ಖಾನಾಪುರ ಭಾಗದಲ್ಲಿ ಭಾರೀ‌ ಪ್ರಮಾಣದಲ್ಲಿ ಮಳೆ ಆಗುತ್ತಿರುವುದರಿಂದ ಮಲಪ್ರಭಾ ನದಿಗೆ ನೀರಿನ ಒಳಹರಿವು ಹೆಚ್ಚಳವಾಗಿದೆ. ಹೀಗಾಗಿ ನವಿಲುತೀರ್ಥ ಡ್ಯಾಮ್‌ನಿಂದ ದಿಢೀರ್ 12500 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ.

ಡ್ಯಾಂ ಒಟ್ಟು 37 ಟಿಎಂಸಿ ಸಾಮರ್ಥ್ಯವನ್ನು ಹೊಂದಿದ್ದು, ಸದ್ಯ 28ಟಿಎಂಸಿ ನೀರು ಭರ್ತಿಯಾಗಿದೆ. ಒಳಹರಿವು ಹೆಚ್ಚಿದಂತೆ ಬಿಡುಗಡೆಯ ಪ್ರಮಾಣವೂ ಹೆಚ್ಚಾಗಲಿದೆ. ಪರಿಣಾಮ, ರಾಮದುರ್ಗ ಪಟ್ಟಣ ಸೇರಿದಂತೆ ಸುತ್ತಲಿನ ಸುಮಾರು 30ಕ್ಕೂ ಹೆಚ್ಚು ಹಳ್ಳಿಗಳಿಗೆ ಪ್ರವಾಹದ ಭೀತಿ ಕಾಡುತ್ತಿದೆ. ಇದರ ಜೊತೆಗೆ ಗದಗ, ಬಾಗಲಕೋಟೆ ಜಿಲ್ಲೆಗಳಲ್ಲೂ ಮಲಪ್ರಭಾ ತೀರದ ಜನತೆ ಎಚ್ಚರಿಕೆಯಿಂದ ಇರಬೇಕೆಂದು ನವಿಲುತೀರ್ಥ ಡ್ಯಾಂನ ಅಧಿಕಾರಿಗಳು ತಿಳಿಸಿದ್ದಾರೆ.

ನವಿಲುತೀರ್ಥ ಡ್ಯಾಂ

ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ : ನವೀನ ತೀರ್ಥ ಡ್ಯಾಂನಿಂದ ನೀರು ಹೊರ ಬಿಡುತ್ತಿರುವ ಹಿನ್ನೆಲೆ ಮುನವಳ್ಳಿ, ರಾಮದುರ್ಗ ಸೇರಿ ನೂರಾರು ಗ್ರಾಮಗಳು ಜಲಾವೃತವಾಗುವ ಆತಂಕ ಎದುರಿಸುತ್ತಿವೆ.

ಸದ್ಯ ಜಿಲ್ಲೆಯಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಮತ್ತಷ್ಟು ನೀರನ್ನು ಹೊರಕ್ಕೆ ಬಿಟ್ಟರೆ ರಾಮದುರ್ಗ ತಾಲೂಕಿನ ಸಾಕಷ್ಟು ಗ್ರಾಮಗಳು ನೀರಿನಲ್ಲಿ ಮುಳುಗಡೆಯಾಲಿವೆ. ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಂಬಂಧಿಸಿದ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ವೇದಗಂಗಾ ನದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಡಿಸಿ : ನೆರೆಯ ಮಹಾರಾಷ್ಟ್ರ ಹಾಗೂ ಜಿಲ್ಲೆಯಲ್ಲಿ ಕಳೆದ 3 ದಿನಗಳಿಂದ ವ್ಯಾಪಕ ಮಳೆಯಾಗುತ್ತಿರುವುದರಿಂದ ನದಿ ತೀರದ ಗ್ರಾಮಗಳ ಜನರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ತಿಳಿಸಿದರು.

ವೇದಗಂಗಾ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿರುವ ಹಿನ್ನೆಲೆ ಶುಕ್ರವಾರ ನಿಪ್ಪಾಣಿ ತಾಲೂಕಿನ ಕೋಡಣಿ ಗ್ರಾಮ ಸೇರಿದಂತೆ ವಿವಿಧೆಡೆ ಭೇಟಿ ನೀಡಿ ಅವರು ಪರಿಶೀಲಿಸಿದರು. ತುರ್ತು ಸಂದರ್ಭದಲ್ಲಿ ನದಿ ತೀರದ ಗ್ರಾಮಗಳ ಜನರ ಸ್ಥಳಾಂತರಕ್ಕೆ ಈಗಾಗಲೇ ಗುರುತಿಸಲಾಗಿರುವ ಕಾಳಜಿ ಕೇಂದ್ರಗಳಲ್ಲಿ ಜನರಿಗೆ ತಾತ್ಕಾಲಿಕ ಊಟೋಪಹಾರ ಹಾಗೂ ವಸತಿ ಸೌಕರ್ಯ ಕಲ್ಪಿಸಲಾಗಿದೆ ಎಂದರು.

ಕೆಲವು ಗ್ರಾಮಗಳ ಜನರು ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ತೆರಳಿದ್ದು, ಕೆಲವು ಕುಟುಂಬಗಳು ತಮ್ಮ ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದುಕೊಂಡಿರುತ್ತಾರೆ. ಆದರೆ, ಪ್ರವಾಹದಿಂದ ಬಾಧಿತಗೊಳ್ಳಬಹುದಾದ ನದಿ ತೀರದ ಎಲ್ಲ ಗ್ರಾಮಗಳ ಜನರ ಸ್ಥಳಾಂತರಕ್ಕೆ ಅನುಕೂಲವಾಗುವಂತೆ ಕಾಳಜಿ ಕೇಂದ್ರಗಳನ್ನು ಈಗಾಗಲೇ ಗುರುತಿಸಲಾಗಿದೆ.

ಗ್ರಾಮಸ್ಥರು ಭಯಪಡುವ ಅಗತ್ಯವಿಲ್ಲ. ಪ್ರತಿ ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ತುರ್ತು ಸಂದರ್ಭದಲ್ಲಿ ಜನರು ಹಾಗೂ ಜಾನುವಾರುಗಳ ಸ್ಥಳಾಂತರಕ್ಕೆ ತಕ್ಷಣವೇ ಅವರು ಕ್ರಮಕೈಗೊಳ್ಳಲಿದ್ದಾರೆ. ಎನ್​​ಡಿಆರ್​​ಎಫ್ ಮತ್ತು ಎಸ್​​ಡಿ‌ಆರ್​​ಎಫ್ ತಂಡಗಳು ಕೂಡ ಜಿಲ್ಲೆಯಲ್ಲಿ ಬೀಡು ಬಿಟ್ಟಿರುವುದರಿಂದ ಜನರ ರಕ್ಷಣೆಗೆ ಕ್ರಮಕೈಗೊಳ್ಳಲಿವೆ ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದರು.

Belgavi
ವೇದಗಂಗಾ ನದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಡಿಸಿ ಎಂ.ಜಿ ಹಿರೇಮಠ

ಕೋಯ್ನಾ ಜಲಾಶಯ ವ್ಯಾಪ್ತಿಯಲ್ಲಿ ಇಂದು ಮಳೆಯ ಪ್ರಮಾಣ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ. ಜಲಾಶಯಗಳಿಂದ ನಿರಂತರವಾಗಿ ನೀರು ಬಿಡುಗಡೆ ಮಾಡಲಾಗುತ್ತಿರುವುದರಿಂದ ಪ್ರವಾಹ ಭೀತಿ ಕಡಿಮೆಯಾಗುತ್ತಿದೆ ಎಂದರು.

ವೇದಗಂಗಾ ಸೇತುವೆ, ನಿಪ್ಪಾಣಿ ತಾಲೂಕಿನ ಕೋಡಣಿ ಗ್ರಾಮ, ಮಮದಾಪುರ, ಸಂಕೇಶ್ವರ ಪಟ್ಟಣದ ಕುಂಬಾರ ಓಣಿ, ಮಠಗಲ್ಲಿ, ಶಂಕರಲಿಂಗ ದೇವಸ್ಥಾನದ ಬಳಿ ಪ್ರವಾಹ ಪರಿಸ್ಥಿತಿಯನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಿದರು. ಇದಾದ ಬಳಿಕ ಚಿಕ್ಕೋಡಿ ತಾಲೂಕಿನ ಮಾಂಜರಿ ಸೇತುವೆ ಬಳಿ ಕೃಷ್ಣಾ ನದಿ ಹರಿವು ವೀಕ್ಷಿಸಿದರು.

ಇದೇ ಸಂದರ್ಭದಲ್ಲಿ ಚಿಕ್ಕೋಡಿಯಲ್ಲಿ ಸಭೆ ನಡೆಸಿದ ಜಿಲ್ಲಾಧಿಕಾರಿ ಹಿರೇಮಠ, ಮಹಾರಾಷ್ಟ್ರ ಹಾಗೂ ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿರುವುದರಿಂದ ಎಲ್ಲ ನೋಡಲ್ ಅಧಿಕಾರಿಗಳು ಸ್ಥಳದಲ್ಲಿಯೇ ಇದ್ದುಕೊಂಡು ಪರಿಸ್ಥಿತಿಯ ಮೇಲೆ ನಿಗಾವಹಿಸಬೇಕು ಎಂದು ಸೂಚಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಚಿಕ್ಕೋಡಿ ಉಪ ವಿಭಾಗಾಧಿಕಾರಿ ಯುಕೇಶ್ ಕುಮಾರ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: ವರುಣನ ಆರ್ಭಟಕ್ಕೆ ತತ್ತರಿಸಿದ ಕರುನಾಡು; ಜನಜೀವನ ಅಸ್ತವ್ಯಸ್ತ

Last Updated : Jul 24, 2021, 5:22 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.