ಬೆಳಗಾವಿ: ''ಕೆಲವೇ ದಿನಗಳಗಳಲ್ಲಿ ಜನರ ವಾಕ್ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿದ್ದಾರೆ. ತಮ್ಮ ಅಭಿಪ್ರಾಯಗಳನ್ನು ವಿರೋಧಿಸುವವರ ಧ್ವನಿಯನ್ನು ದಮನಗೊಳಿಸುತ್ತಿದ್ದಾರೆ. ಇದನ್ನು ನೋಡಿದರೆ ಮತ್ತೆ ಕರ್ನಾಟಕದಲ್ಲಿ ಶೀಘ್ರವೇ ತುರ್ತು ಪರಿಸ್ಥಿತಿ ಬರುತ್ತದೆ'' ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಇಂದು ಸೋತ ಅಭ್ಯರ್ಥಿಗಳು, ಶಾಸಕರು ಮತ್ತು ಪದಾಧಿಕಾರಿಗಳ ಜೊತೆಗಿನ ಆತ್ಮಾವಲೋಕನ ಸಭೆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ''ನಾವು ವಿರೋಧ ಪಕ್ಷವಾಗಿ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಎಷ್ಟು ಜನರನ್ನು ಜೈಲಿಗೆ ಹಾಕುತ್ತಿರಿ ಹಾಕಿ. ನಿಮ್ಮ ನೀತಿಯಿಂದ ಜನ ತಿರುಗಿ ಬಿದ್ದರೆ, ಯಾವ ಜೈಲುಗಳು ಸಾಕಾಗುವುದಿಲ್ಲ. ತುರ್ತು ಪರಿಸ್ಥಿತಿ ತರುವ ಪ್ರಯತ್ನಕ್ಕೆ ಪ್ರಜಾಪ್ರಭುತ್ವದಲ್ಲಿ ಜನರ ಶಕ್ತಿ ದೊಡ್ಡದಿದೆ. ಖಂಡಿತವಾಗಲೂ ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ'' ಎಂದು ಎಚ್ಚರಿಸಿದರು.
ಸರ್ಕಾರಕ್ಕೆ ಏರಿದ ಅಧಿಕಾರದ ಅಮಲು: ''ಪಶು ಸಂಗೋಪನಾ ಸಚಿವ ವೆಂಕಟೇಶ ಹೇಳಿಕೆ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ರಾಜ್ಯದ ಜನರಿಂದ ಆಕ್ರೋಶ ವ್ಯಕ್ತವಾಗಿದೆ. ಗೋವುಗಳ ಪಾವಿತ್ರ್ಯತೆ ಸಂಬಂಧವನ್ನು ಲೆಕ್ಕಿಸದೇ ಅವರು ಮಾತನಾಡಿರುವುದು ಇದು ಖಂಡನೀಯ. ಗೋಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆ ಕಾನೂನು ನಾವು ತಂದಿದ್ದೇವೆ. ಅಷ್ಟು ಬಿಟ್ಟರೆ ಬೇರೆ ಏನೂ ತಂದಿಲ್ಲ. ಗೋಹತ್ಯೆ ನಿಷೇಧ ಕಾನೂನು 60ರಿಂದಲೇ ಜಾರಿಗೆ ಬಂದಿದೆ. ಹೀಗಾಗಿ ಅವರೇನೋ ತಿದ್ದುಪಡಿ ತರುತ್ತಾರಂತೆ ತರಲಿ ನೋಡೋಣ. ಗೋಹತ್ಯೆ ನಿಷೇಧ ಕಾನೂನು ಮುಟ್ಟಿದರೆ, ಕಾಂಗ್ರೆಸ್ ಪಕ್ಷಕ್ಕೆ ಆಪತ್ತು ಕಾದಿದೆ. ಗೋಹತ್ಯೆ ನಿಷೇಧ, ಪಠ್ಯಪುಸ್ತಕ ಪರಿಷ್ಕರಣೆ, ಯಾರಾದ್ರೂ ಸರ್ಕಾರದ ಅಭಿಪ್ರಾಯಕ್ಕೆ ವಿರೋಧವಾಗಿ ಮಾತನಾಡಿದರೆ ಜೈಲಿಗೆ ಹಾಕುತ್ತೇವೆ ಎಂಬ ಸಚಿವರ ಹೇಳಿಕೆ ನೋಡಿದಾಗ, ಈ ಸರ್ಕಾರಕ್ಕೆ ಅಧಿಕಾರದ ಅಮಲು ಏರಿದ್ದು ಸ್ಪಷ್ಟವಾಗಿದೆ ಎಂದು ಕಿಡಿಕಾರಿದರು.
ಲೋಕಸಭೆ ಚುನಾವಣೆಗೆ ತಯಾರಿ ಶುರು: ''ಮತಗಳ ವಿಶ್ಲೇಷಣೆ ಮಾಡಿದಾಗ ಬೆಳಗಾವಿ ಲೋಕಸಭೆ ಚುನಾವಣೆಯಲ್ಲಿ ಕಿತ್ತೂರು, ಖಾನಾಪುರ ಹೊರತುಪಡಿಸಿ ಅತೀ ಹೆಚ್ಚು ಮತಗಳನ್ನು ಪಡೆದಿದ್ದೇವೆ. ಅದೇ ರೀತಿ ಚಿಕ್ಕೋಡಿಯಲ್ಲಿ ಪಕ್ಷೇತರ ಬಿಟ್ಟರೆ, ನಾವು ಕಾಂಗ್ರೆಸ್ ಸರಿ ಸಮಾನವಾಗಿದ್ದೇವೆ. ಇದೆಲ್ಲವನ್ನು ನೋಡಿದಾಗ ಮತ್ತೊಮ್ಮೆ ಜನ ಬಿಜೆಪಿಗೆ ಸಂಪೂರ್ಣ ಬೆಂಬಲ ನೀಡುವ ಎಲ್ಲ ಸಾಧ್ಯತೆಯಿದೆ. ಆ ಪ್ರಕಾರ ನಮ್ಮ ಕಾರ್ಯಕ್ರಮಗಳು, ಸಂಪರ್ಕ ಮತ್ತು ಅಭಿಯಾನ ಇರಬೇಕಾಗುತ್ತದೆ ಎಂಬ ಬಗ್ಗೆ ಚರ್ಚೆ ಮಾಡಿದ್ದೇವೆ'' ಎಂದರು. ''ಬರುವ ಲೋಕಸಭೆ ಚುನಾವಣೆಗೆ ಬೆಳಗಾವಿ ಜಿಲ್ಲೆಗೆ ಸೀಮಿತವಾಗಿ ನಮ್ಮ ತಯಾರಿ ಇವತ್ತಿನಿಂದ ಶುರುವಾಗಿದೆ. ಇದನ್ನು ನಿರಂತರವಾಗಿ ಅಭಿಯಾನ ಮಾಡಿ, ಮತ್ತೆ ಪಕ್ಷ ಪುನರ್ ಸಂಘಟನೆ ಮಾಡಿ, ಎರಡೂ ಲೋಕಸಭೆ ಕ್ಷೇತ್ರ ಗೆಲ್ಲಲು ಏನೆಲ್ಲಾ ಮಾಡಬೇಕು. ಅವುಗಳನ್ನು ಮಾಡಿ ಗೆಲ್ಲುವ ವಿಶ್ವಾಸ ನಮಗಿದೆ'' ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ಲೇವಡಿ: ''ನಾನು ಮುಖ್ಯಮಂತ್ರಿ ಇದ್ದಾಗ ಎಲ್ಲ ಹೆಸ್ಕಾಂಗಳಿಗೆ ಆರ್ಥಿಕ ಬೆಂಬಲ ಕೊಟ್ಟಿದ್ದೆವು. ಕೆಪಿಟಿಸಿಎಲ್ ಸೇರಿ ಎಲ್ಲವುಗಳಿಗೆ 13 ಸಾವಿರ ಕೋಟಿ ರೂ. ಕೊಟ್ಟು ವಿದ್ಯುತ್ಶಕ್ತಿ ಕ್ಷೇತ್ರ ಉಳಿಸಿಕೊಂಡಿದ್ದೆವು. ಈಗ ಇವರು ಗ್ಯಾರಂಟಿ ಕೊಡುವುದರಿಂದ ಎಲ್ಲ ಹೆಸ್ಕಾಂಗಳಿಗೆ ಬೇರೆ ಕೆಲಸ ಇಲ್ಲ. ಯಾಕೆಂದರೆ ಒಟ್ಟು ಬಿಲ್ನಲ್ಲಿ ಕೃಷಿ ಕ್ಷೇತ್ರ, ಗ್ರಾಹಕರ ಬಳಿಯಿಂದಲೂ ಯಾವುದೇ ಕಲೆಕ್ಷನ್ ಇಲ್ಲ. ಕಲೆಕ್ಷನ್ ಇರುವುದು ಕೈಗಾರಿಕೆ ಮತ್ತು ಕಮರ್ಷಿಯಲ್ಗಳಲ್ಲಿ ಮಾತ್ರ. ಒಟ್ಟು ಬಿಲ್ನಲ್ಲಿ ಶೇ.50ರಷ್ಟು ಬರುವುದು ಸರ್ಕಾರದಿಂದ. ಹೀಗಾಗಿ ಎಲ್ಲ ಹೆಸ್ಕಾಂಗಳ ಎಂಡಿಗಳಿಗೆ ಆರ್ಥಿಕ ಇಲಾಖೆಯಲ್ಲೇ ಒಂದು ರೂಮ್ ಮಾಡಿ ಕೊಟ್ಟು ಬಿಲ್ ವಸೂಲಿ ಮಾಡಲು ಒಂದು ಕುರ್ಚಿ, ಟೇಬಲ್ ಹಾಕಿ ಕೊಡಬೇಕು'' ಎಂದು ಬೊಮ್ಮಾಯಿ ಲೇವಡಿ ಮಾಡಿದರು.
ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ- ಮಾಜಿ ಸಿಎಂ: ''ಬೆಳಗಾವಿ ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳನ್ನು ತಡೆ ಹಿಡಿದ ವಿಚಾರಕ್ಕೆ ಈಗಾಗಲೇ ನಾನು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಈ ಗ್ಯಾರಂಟಿಗಳನ್ನು ಕೊಡುವ ಭರದಲ್ಲಿ, ರಾಜ್ಯದ ಆರ್ಥಿಕ, ಸಾಮಾಜಿಕ ವಲಯಗಳಲ್ಲಿರುವ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ನಿಲ್ಲಿಸಬಾರದು ಎಂದು ಸ್ಪಷ್ಟವಾಗಿ ಹೇಳಿದ್ದೇನೆ. ನೀರಾವರಿಯಲ್ಲಿ ವಿಶೇಷವಾಗಿ ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದಂತೆ ಬೆಳಗಾವಿ ಅಧಿವೇಶನದಲ್ಲೆ 5 ಸಾವಿರ ಕೋಟಿ ರೂ. ಯೋಜನೆಗಳಿಗೆ ಅನುಮೋದನೆ ಕೊಟ್ಟು, ಕೆಲಸ ಪ್ರಾರಂಭವಾಗಿದೆ. ಇದು ಬೆಳಗಾವಿ ಕೃಷಿ ಕ್ಷೇತ್ರದ ಒಟ್ಟಾರೆ ಅಭಿವೃದ್ಧಿಗೆ ಬಹಳ ಪ್ರಮುಖವಾದದ್ದು, ಇದನ್ನು ನಿಲ್ಲಿಸಿದರೆ ಇಡೀ ಬೆಳಗಾವಿ ಜಿಲ್ಲೆಯ ರೈತರಿಗೆ ದ್ರೋಹ ಮಾಡಿದಂತೆ. ವಿವೇಕ ಯೋಜನೆಯಡಿ ಕೈಗೊಂಡ ಶಾಲಾ ಕೊಠಡಿಗಳ ನಿರ್ಮಾಣವನ್ನೂ ಕೈಬಿಡಬಾರದು. ಗ್ಯಾರಂಟಿ ನೆಪದಲ್ಲಿ ನಮ್ಮ ಜನರ ಅಭಿವೃದ್ಧಿ, ರಾಜ್ಯದ ಅಭಿವೃದ್ಧಿಗೆ ಎಲ್ಲಿಯೂ ಕೂಡ ತೊಂದರೆ ಆಗದ ರೀತಿಯಲ್ಲಿ ನಿಭಾಯಿಸಬೇಕು'' ಎಂದು ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು.
ಇದನ್ನೂ ಓದಿ: ಡಿಸಿಎಂ ಡಿಕೆಶಿ ನೇತೃತ್ವದಲ್ಲಿ ಸರ್ವಪಕ್ಷ ಶಾಸಕರ ಸಭೆ: ಅಸಮಾಧಾನಿತ ಎಂ.ಕೃಷ್ಣಪ್ಪ, ಪ್ರಿಯಾ ಕೃಷ್ಣ ಗೈರು