ETV Bharat / state

ಬೆಳಗಾವಿಯಲ್ಲಿ ಇಬ್ಬರು ರೌಡಿಗಳ ಮರ್ಡರ್... ದೇವಾಲಯದ ಕಟ್ಟೆಯ ಮೇಲೆಯೇ ಭೀಕರ ಹತ್ಯೆ

author img

By

Published : Oct 7, 2022, 10:18 AM IST

ಸುಳೇಭಾವಿ ಗ್ರಾಮದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಇಬ್ಬರು ಯುವಕರ ಬರ್ಬರ ಹತ್ಯೆ ಮಾಡಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ, ಡಿಸಿಪಿ ರವೀಂದ್ರ ಗಡಾದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Double murder in sulebavi village
ಸುಳೇಭಾವಿ ಗ್ರಾಮದಲ್ಲಿ ಡಬಲ್ ಮರ್ಡರ್

ಬೆಳಗಾವಿ: ಮಾರಕಾಸ್ತ್ರಗಳಿಂದ ಕೊಚ್ಚಿ ಇಬ್ಬರು ರೌಡಿಗಳನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಸುಳೇಭಾವಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಹೇಶ್ ಮುರಾರಿ (28) ಹಾಗೂ ಪ್ರಕಾಶ್ ಹುಂಕರಿ ಪಾಟೀಲ್ (24) ಹತ್ಯೆಯಾದವರು.

ಪ್ರಕರಣದ ವಿವರ: ನಿನ್ನೆ ರಾತ್ರಿ ಕೆಲ ಪಡ್ಡೆ ಹುಡುಗರು ಸುಳೇಭಾವಿ ಗ್ರಾಮದ ಲಕ್ಷ್ಮಿ ಗಲ್ಲಿಯ ಶಿವಾಜಿ ಪ್ರತಿಮೆಯ ಬಳಿ ನಿಂತು ಹರಟೆ ಹೊಡೆಯುತ್ತಿದ್ದರು. ಎಂಟೂವರೆ ಗಂಟೆ ಸುಮಾರಿಗೆ ಕೈಯಲ್ಲಿ ಮಾರಕಾಸ್ತ್ರಗಳು ಹಾಗೂ ಖಾರದ ಪುಡಿ ಹಿಡಿದುಕೊಂಡು ಬಂದ 10ಕ್ಕೂ ಅಧಿಕ ಯುವಕರ ಗ್ಯಾಂಗ್ ಅಲ್ಲೇ ನಿಂತಿದ್ದವರ ಮೇಲೆ ದಾಳಿ ಮಾಡಿದೆ.

ಯುವಕರ ಗ್ಯಾಂಗ್ ರೌದ್ರಾವತಾರ ಕಂಡ ಕೆಲ ಯುವಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ಇಬ್ಬರನ್ನ ಮಾತ್ರ ಎಲ್ಲಿಯೂ ಹೋಗದಂತೆ ತಡೆದಿದ್ದಾರೆ. ಏಕಾಏಕಿ ಲಾಂಗ್​, ಮಚ್ಚುಗಳಿಂದ ಹಲ್ಲೆ ಮಾಡಲು ಆರಂಭಿಸಿದ್ದಾರೆ. ಈ ವೇಳೆ ಓರ್ವನನ್ನ ಶಿವಾಜಿ ವೃತ್ತದಲ್ಲೇ ಹತ್ಯೆ ಮಾಡಿದರೆ, ಇನ್ನೋರ್ವ ಅಲ್ಲಿಂದ ಎಸ್ಕೇಪ್ ಆಗಿ ಅಲ್ಲೇ ಇದ್ದ ಗಣಪತಿ ದೇವಸ್ಥಾನಕ್ಕೆ ಹೋಗಿ ಜೀವ ಉಳಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೆ ಮೊದಲೇ ಪ್ಲ್ಯಾನ್ ಮಾಡಿಕೊಂಡ ಆರೋಪಿಗಳು ದೇವಸ್ಥಾನದ ಕಟ್ಟೆಯ ಮೇಲೆಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾರೆ.

Double murder in sulebavi village
ಮಹೇಶ್ ಮುರಾರಿ ಹಾಗೂ ಪ್ರಕಾಶ್ ಹುಂಕರಿ ಪಾಟೀಲ್

(ಓದಿ: ಅಜ್ಜಿಯನ್ನು ಕೊಂದು, ಗೋಡೆ ಕೊರೆದು ಶವ ಬಚ್ಚಿಟ್ಟ ತಾಯಿ ಮಗ: 5 ವರ್ಷದ ಬಳಿಕ ಪ್ರಕರಣ ಬೇಧಿಸಿದ ಬೆಂಗಳೂರು ಪೊಲೀಸ್ರು!)

ಗ್ರಾಮದಲ್ಲಿ ಬಿಗುವಿಣ ವಾತಾವರಣ, ಕಮಿಷನರ್ ಭೇಟಿ: ಘಟನೆಯನ್ನ ಕಂಡ ಲಕ್ಷ್ಮಿ ಗಲ್ಲಿ ಹಾಗೂ ಅಕ್ಕಪಕ್ಕದ ಗಲ್ಲಿಯ ಜನರು ಮಾರಿಹಾಳ ಪೊಲೀಸರಿಗೆ ಕೂಡಲೇ ಸುದ್ದಿ ಮುಟ್ಟಿಸಿದ್ದಾರೆ. ಪೊಲೀಸರು ಗ್ರಾಮಕ್ಕೆ ಬರುವ ಪೂರ್ವದಲ್ಲೇ ಘಟನೆ ನಡೆದ ಸುತ್ತಮುತ್ತಲಿನ ಮನೆಯವರು ಮನೆಗಳ ಬಾಗಿಲು ಹಾಕಿಕೊಂಡು ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ ಎನ್ನಲಾಗಿದೆ.

ಸ್ಥಳಕ್ಕಾಗಮಿಸಿದ ಮಾರಿಹಾಳ ಪೊಲೀಸರು, ಪರಿಶೀಲನೆ ನಡೆಸಿ ಕೂಡಲೇ ಮೇಲಾಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ಸದ್ಯ ಗ್ರಾಮದಲ್ಲಿ ಬಿಗುವಿನ ವಾತಾವರಣ ಇದ್ದು, ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಹಳೆಯ ದ್ವೇಷ ಕಾರಣ: ಘಟನೆಗೆ ಹಳೆಯ ದ್ವೇಷವೇ ಕಾರಣ ಎನ್ನಲಾಗಿದೆ. ಕೊಲೆಯಾದ ಇಬ್ಬರು ಗ್ರಾಮದಲ್ಲಿ ಯಾವುದೇ ಕೆಲಸ ಮಾಡದೇ ಗುಂಪು ಕಟ್ಟಿಕೊಂಡು ಓಡಾಡುತ್ತಿದ್ದರು ಎನ್ನಲಾಗಿದೆ. ಕೊಲೆಯಾದ ಮಹೇಶ ಮುರಾರಿ ಕಳೆದ 2019ರಲ್ಲಿ ನಡೆದ ನಾಗೇಶ್ ಮ್ಯಾಕಲ್ಯಾಗೋಳ ಕೊಲೆ ಪ್ರಕರಣದಲ್ಲಿ ಸೆರೆಯಾಗಿದ್ದ. ಎರಡು ವರ್ಷಗಳ ಕಾಲ ಜೈಲುವಾಸ ಅನುಭವಿಸಿ ಇತ್ತೀಚೆಗೆ ಜಾಮೀನಿನ ಮೇಲೆ ಹೊರ ಬಂದಿದ್ದನಂತೆ. ಈತನ ವಿರುದ್ಧ ಅನೇಕ ಠಾಣೆಗಳಲ್ಲಿ ಹಲ್ಲೆ, ದೊಂಬಿ ಪ್ರಕರಣಗಳು ದಾಖಲಾಗಿವೆ.

ಜಾಮೀನಿನ ಮೇಲೆ ಹೊರ ಬಂದ ಬಳಿಕವೂ ಕೆಲವು ಗಲಾಟೆಗಳಲ್ಲಿ ಭಾಗಿಯಾಗಿದ್ದ. ಸಹಚರರ ಜೊತೆಗೂ ಜಗಳವಾಡಿಕೊಂಡಿದ್ದನಂತೆ. ಸಹಚರರೇ ಕೊಲೆಗೈದಿರುವ ಸಾಧ್ಯೆತೆಯೂ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಡಬಲ್ ಮರ್ಡರ್​ಗೆ ಬೆಚ್ಚಿಬಿದ್ದ ಗ್ರಾಮ: ಶಾಂತವಾಗಿದ್ದ ಗ್ರಾಮದಲ್ಲಿ ಜೋಡಿ ಕೊಲೆ ಬೆಚ್ಚಿ ಬೀಳುವಂತೆ ಮಾಡಿದೆ. ಗ್ರಾಮದಲ್ಲಿ ಬಿಗುವಿಣ ವಾತಾವರಣವಿದ್ದು, 50ಕ್ಕೂ ಅಧಿಕ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಸದ್ಯ ಪೊಲೀಸರು ಎರಡು ತಂಡಗಳನ್ನು ರಚಿಸಿ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಇಬ್ಬರು ಯುವಕರ ಡಬಲ್ ಮರ್ಡರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.