ETV Bharat / state

ಒಂದೇ ಜಾತಿಗೆ ರಾಣಿ ಚನ್ನಮ್ಮಳನ್ನು ಸೀಮಿತಗೊಳಿಸಬೇಡಿ: ಸಂಶೋಧಕ ಸಂತೋಷ ಹಾನಗಲ್

author img

By ETV Bharat Karnataka Team

Published : Oct 24, 2023, 10:16 PM IST

ಇತಿಹಾಸದಲ್ಲಿ ಹುದುಗಿ ಹೋಗಿರುವ ಮತ್ತಷ್ಟು ಕಿತ್ತೂರು ಯೋಧರ ಬಗ್ಗೆ ಸಂಶೋಧನೆಯ ಅವಶ್ಯಕತೆ ಇದೆ ಎಂದು ಸಂತೋಷ ಹಾನಗಲ್ ಹೇಳಿದರು.

dont-limit-rani-channamma-to-one-caste-says-researcher-santosh-hanagal
ಒಂದೇ ಜಾತಿಗೆ ರಾಣಿ ಚನ್ನಮ್ಮನನ್ನು ಸಿಮೀತಗೊಳಿಸಬೇಡಿ: ಸಂಶೋಧಕ ಸಂತೋಷ ಹಾನಗಲ್

ಬೆಳಗಾವಿ: "ವೀರರಾಣಿ ಕಿತ್ತೂರು ಚನ್ನಮ್ಮಾಜಿಯನ್ನು ಒಂದೇ ಜಾತಿ ಮತ್ತು ಸಮುದಾಯಕ್ಕೆ ಸೀಮಿತಗೊಳಿತ್ತಿರುವ ವಿಚಾರ ಕಳೆದ ಐದು ವರ್ಷಗಳಿಂದ ಶುರುವಾಗಿದೆ. ಇದನ್ನು ಮೊಳಕೆಯೊಡೆಯುವ ಮೊದಲೇ ಚಿವುಟಿ ಹಾಕುವ ಅವಶ್ಯಕತೆಯಿದೆ" ಎಂದು ಸಂಶೋಧಕ ಸಂತೋಷ ಹಾನಗಲ್ ಅಭಿಪ್ರಾಯ ವ್ಯಕ್ತಪಡಿಸಿದರು. ಕಿತ್ತೂರು ಉತ್ಸವದ ಅಂಗವಾಗಿ ಮಂಗಳವಾರ ನಡೆದ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, "ರಾಣಿ ಚನ್ನಮ್ಮಾಜಿ ಜತೆ ಸೇರಿಕೊಂಡು ಎಲ್ಲ ಸಮುದಾಯದ ವೀರರು ಸಂಸ್ಥಾನದ ಉಳಿವಿಗಾಗಿ ಹೋರಾಡಿದ್ದಾರೆ. ಅವರೆಲ್ಲ ಇಡೀ ದೇಶಕ್ಕೆ ಸೇರಿದ ಮಹಾಪುರುಷರು. ಅಂತಹವರನ್ನು ಒಂದೇ ಜಾತಿ, ಸಮುದಾಯಕ್ಕೆ ಸೀಮಿತಗೊಳಿಸಬಾರದು" ಎಂದರು.

"ಬ್ರಿಟಿಷರ ವಿರುದ್ಧ ಯುದ್ಧದಲ್ಲಿ ದಿಗ್ವಿಜಯ ಸಾಧಿಸಿದ ವೀರರಾಣಿ ಚನ್ನಮ್ಮನ ವಿಜಯೋತ್ಸವಕ್ಕೆ ಮುಂದಿನ ವರ್ಷ 200 ವರ್ಷ ತುಂಬಲಿದ್ದು, ವಿಜಯೋತ್ಸವದ ದ್ವಿಶತಮಾನೋತ್ಸವ ಅದ್ಧೂರಿಯಾಗಿ ನಡೆಯಬೇಕು. ಸದ್ಯ ಇಲ್ಲಿರುವುದು ಅರಮನೆಯ ಕೋಟೆ. ದೊಡ್ಡ ಸಂಸ್ಥಾನವಾಗಿದ್ದ ಕಿತ್ತೂರಿನ ಸಂಸ್ಥಾನದ ಬೇರೆ ಕೋಟೆ ಇರಬಹುದು. ಅದರ ಶೋಧ‌ಕಾರ್ಯ ನಡೆಯಬೇಕು. ಅಷ್ಟೇ ಅಲ್ಲದೇ ಪ್ರತಿರೂಪ ಅರಮನೆ ನಿರ್ಮಾಣಕ್ಕೆ ಚಾಲನೆ ನೀಡಬೇಕು. ಇತಿಹಾಸದಲ್ಲಿ ಹುದುಗಿ ಹೋಗಿರುವ ಮತ್ತಷ್ಟು ಕಿತ್ತೂರು ಯೋಧರ ಬಗ್ಗೆ ಸಂಶೋಧನೆ ಅವಶ್ಯಕತೆಯಿದೆ" ಎಂದು ಹೇಳಿದರು.

ವಿಚಾರಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಬಾಬಾಸಾಹೇಬ ಪಾಟೀಲ, "ಕಿತ್ತೂರು ಸಂಸ್ಥಾನದ ವಿಷಯ ಸೀಮಿತ ಮಟ್ಟಕ್ಕೆ ಬಂದು ತಲುಪಿದೆ. ಈ ವಿಚಾರಗೋಷ್ಠಿಯಲ್ಲಿ ಅಭಿಪ್ರಾಯ ಪಟ್ಟ ಇತಿಹಾಸ ತಜ್ಞರ ಸಲಹೆಗಳನ್ನು ಪಡೆದುಕೊಂಡು, ಹೊಸ ಯೋಜನೆಯೊಂದಿಗೆ ಕೆಲಸ ಮಾಡಲಾಗುವುದು. ಕಿತ್ತೂರಿನ ಇತಿಹಾಸ ಮನೆ ಮನೆಗೆ ತಲುಪಿಸಲು ನಾವು ಬದ್ಧ" ಎಂದು ತಿಳಿಸಿದರು.

ಮೊದಲನೇ ವಿಚಾರ ಗೋಷ್ಠಿಯಲ್ಲಿ ಕಾದಂಬರಿಕಾರ ಯ.ರು.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ‘ಕಿತ್ತೂರು ಸಂಸ್ಥಾನದ ಆಡಳಿತದಲ್ಲಿ ರಾಣಿಯರ ಪಾತ್ರ’ ಕುರಿತು ರಾಜೇಂದ್ರ ಗಡಾದ, ‘ದೊರೆ ಮಲ್ಲಸರ್ಜ ದತ್ತಕ ಪ್ರಕ್ರಿಯೆ’ ಕುರಿತು ವೀರಭದ್ರ ಕೌದಿ, ‘ಕಿತ್ತೂರಿನ ಬೆಳಕಿಗೆ ಬಾರದ ಕ್ರಾಂತಿವೀರರು’ ಕುರಿತು ಮಂಜುನಾಥ ಕಳಸಣ್ಣವರ, ‘ಬ್ರಿಟಿಷ್ ದಾಖಲೆಗಳಲ್ಲಿ ರಾಣಿ ಚನ್ನಮ್ಮ’ ಕುರಿತು ರಾಜಶೇಖರ ಕೋಟಿ ಹಾಗೂ ‘ಕಿತ್ತೂರು ಸಂಸ್ಥಾನ ಹಾಗೂ ಪ್ರಮುಖ ಬ್ರಿಟಿಷ್ ಅಧಿಕಾರಿಗಳು’ ಕುರಿತು ಮಹೇಶ ಚನ್ನಂಗಿ ವಿಚಾರ ಪ್ರಸ್ತುತ ಪಡಿಸಿದರು.

ಎರಡನೇ ಗೋಷ್ಠಿಯಲ್ಲಿ ಡಾ.ಸಂಗಮನಾಥ ಲೋಕಾಪುರ ಅಧ್ಯಕ್ಷತೆ ವಹಿಸಿದ್ದರು. ‘ಕಿತ್ತೂರು ಸಂಸ್ಥಾನದೊಂದಿಗೆ ಸಮಕಾಲೀನ ದೇಶಗತಿ ಮನೆತನಗಳ ಸಂಬಂಧ’ ಕುರಿತು ಗಜಾನಂದ ಸೊಗಲನ್ನವರ, ‘ಕಿತ್ತೂರು ಸಂಸ್ಥಾನ ಕಾಲದ ಸಾಹಿತ್ಯ ಮತ್ತು ಸಾಂಸ್ಕೃತಿಕ ಹೆಜ್ಜೆಗಳು’ ಕುರಿತು ಕೆ. ಆರ್. ಮೆಳವಂಕಿ ವಿಚಾರ ಮಂಡಿಸಿದರು.

ಬೈಲಹೊಂಗಲ ಎಸಿ ಪ್ರಭಾವತಿ ಫಕೀರಪುರ, ಡಾ.ಪ್ರಜ್ಞಾ ಮತ್ತಿಹಳ್ಳಿ, ಎಸ್.ಜಿ.ಗಾಂಜಿ, ಬಸವರಾಜ ಚಿನಗುಡಿ ಮತ್ತಿತರರು ಇದ್ದರು.

ಇದನ್ನೂ ಓದಿ: ಕಿತ್ತೂರು ಉತ್ಸವ: ಸಿರಿಧಾನ್ಯಗಳಲ್ಲಿ ಅರಳಿದ ಚನ್ನಮ್ಮನ ಮೂರ್ತಿ, ತರಕಾರಿಯಲ್ಲಿ ಆಕರ್ಷಣೀಯ ಕಲಾಕೃತಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.