ETV Bharat / state

ಹಳೆ ಪಿಂಚಣಿ ಯೋಜನೆ ಜಾರಿ ಪ್ರಸ್ತಾವನೆಯು ಸರ್ಕಾರದ ಮುಂದಿಲ್ಲ: ಸಚಿವ ಮಾಧುಸ್ವಾಮಿ

author img

By

Published : Dec 29, 2022, 10:49 PM IST

ರಾಜ್ಯ ಸರ್ಕಾರಿ ನೌಕರರಿಗೆ ಜಾರಿಗೆ ತಂದಿರುವ ಎನ್‍ಪಿಎಸ್‌ನಿಂದ ಒಪಿಎಸ್‍ಗೆ ಪರಿವರ್ತನೆ ಮಾಡುವ ವಿಚಾರ ವಿಧಾನ ಪರಿಷತ್​ನಲ್ಲಿ ಪ್ರಸ್ತಾಪವಾಗಿದ್ದು ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟನೆ ಕೊಟ್ಟರು.

legislative-council-session
ಜೆಸಿ ಮಾಧುಸ್ವಾಮಿ

ಬೆಂಗಳೂರ/ಬೆಳಗಾವಿ: ಹಳೆಯ ಪಿಂಚಣಿ ಯೋಜನೆ ಜಾರಿ ತರುವ ಪ್ರಸ್ತಾವನೆಯು ಸರ್ಕಾರದ ಮುಂದಿಲ್ಲ. ಹಣಕಾಸಿನ ನೆರವು ನೋಡಿಕೊಂಡು ಒಪಿಎಸ್ ಜಾರಿ ಬಗ್ಗೆ ಪರಿಶೀಲನೆ ನಡೆಸುವುದಾಗಿ ಮುಖ್ಯಮಂತ್ರಿಗಳು ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಮತ್ತು ಸಣ್ಣ ನೀರಾವರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಹೇಳಿದರು.

ರಾಜ್ಯ ಸರ್ಕಾರಿ ನೌಕರರಿಗೆ ಜಾರಿಗೆ ತಂದಿರುವ ಎನ್‍ಪಿಎಸ್‌ನಿಂದ ಒಪಿಎಸ್‍ಗೆ ಪರಿವರ್ತನೆ ಕುರಿತು ಸರ್ಕಾರದ ನಿಲುವೇನು ಎಂದು ಸದಸ್ಯ ತಳವಾರ ಸಾಬಣ್ಣ ಅವರು ಕೇಳಿದ ಪ್ರಶ್ನೆಗೆ ಪರಿಷತ್ತಿನಲ್ಲಿ ಮುಖ್ಯಮಂತ್ರಿಗಳ ಪರವಾಗಿ ಮಾತನಾಡಿ, ಹಳೆಯ ಪಿಂಚಣಿ ಯೋಜನೆಯ ಜಾರಿ ಬಗ್ಗೆ ಸದ್ಯಕ್ಕೆ ಯಾವುದೇ ಆಲೋಚನೆ ಇರುವುದಿಲ್ಲ. ಒಪಿಎಸ್ ಜಾರಿಗೆ ಪದೆಪದೇ ಒತ್ತಾಯಿಸುವುದು ಸರಿಯಲ್ಲ. ಒಪಿಎಸ್ ಜಾರಿ ಸಂಬಂಧ ಪರಿಶೀಲಿಸಲು ಈಗಾಗಲೇ ಮೂರು ಸಭೆಗಳು ನಡೆದಿವೆ. ಹೊಸ ಪಿಂಚಣಿ ವ್ಯಾಪ್ತಿಗೆ ಬರುವ ನೌಕರರಿಗೆ ಈಗಾಗಲೇ ಹಲವಾರು ಸೌಲಭ್ಯ ನೀಡಲಾಗಿದೆ. ಒಪಿಎಸ್ ನೀಡುವ ಅವಶ್ಯಕತೆಯಿಲ್ಲ ಎಂದು ಸಮಿತಿಯು ವರದಿ ನೀಡಿದೆ ಎಂದು ತಿಳಿಸಿದರು.

ಹಳೆಯ ಪಿಂಚಣಿ ಯೋಜನೆಯ ಜಾರಿ ಬಗ್ಗೆ ರಾಜ್ಯ ಸರ್ಕಾರವು ಪುನರ್ ಪರಿಶೀಲಿಸಬೇಕು ಎಂಬುದು ನಮ್ಮ ಕಳಕಳಿಯ ವಿನಂತಿಯಾಗಿದೆ. ನಾವು ಸರ್ಕಾರದ ಜೊತೆಗಿದ್ದೇವೆ. ಒಪಿಎಸ್ ಜಾರಿಯ ಒತ್ತಾಯಕ್ಕೆ ತಾವು ಈಗಲೂ ಬದ್ಧರಿದ್ದೇವೆ ಎಂದು ಪ್ರಕಟಿಸುವಂತೆ ಕೋರಿ ವಿಧಾನ ಪರಿಷತ್‍ನ ಸದಸ್ಯರಾದ ಆಯನೂರ ಮಂಜುನಾಥ ಮತ್ತು ಎಸ್ ವಿ ಸಂಕನೂರ ಅವರು ಸಭಾತ್ಯಾಗ ಮಾಡಿ, ಸಾತ್ವಿಕ ಪ್ರತಿಭಟನೆ ವ್ಯಕ್ತಪಡಿಸಿದರು. ಸದಸ್ಯ ಮರಿತಿಬ್ಬೇಗೌಡ ಅವರು ಸಹ ರಾಜ್ಯ ಸರಕಾರಿ ನೌಕರರಿಗೆ ಒಪಿಎಸ್ ಅಗತ್ಯತೆ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿಸಿದರು ಮತ್ತು ಸಭಾತ್ಯಾಗ ಮಾಡಿದರು.

ಈ ಸಂದರ್ಭದಲ್ಲಿ ಸದಸ್ಯರಾದ ಸಂಕನೂರ ಮಾತನಾಡಿ, ಹೊಸ ಪಿಂಚಣಿ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಿರುವ 2,97,925 ನೌಕರರ ಬೇಡಿಕೆಯನ್ನು ಸಾವಧಾನದಿಂದ, ಮಾನವೀಯತೆಯಿಂದ ಪರಿಶೀಲಿಸಬೇಕು. ನೌಕರರು ಒತ್ತಾಯದಂತೆ ಸದ್ಯಕ್ಕೆ ಒಪಿಎಸ್ ಜಾರಿಗೆ ತಾತ್ವಿಕ ಒಪ್ಪಿಗೆ ಕೊಡಬೇಕು. ಆ ಮೇಲೆ ಕಾನೂನು ತೊಡಕುಗಳನ್ನು ಸರಿಪಡಿಸಬಹುದು ಎಂದು ತಿಳಿಸಿದರು. ಇದಕ್ಕೆ ದನಿಗೂಡಿಸಿದ ಸದಸ್ಯರಾದ ಆಯನೂರ ಮಂಜುನಾಥ ಅವರು ಮಾತನಾಡಿ, ಹೊಸ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಕರ್ನಾಟಕ ರಾಜ್ಯದಲ್ಲಿ ಹೇರಲ್ಪಟ್ಟಿದೆಯೇ ವಿನಃ ಒಪ್ಪಿತವಾಗಿ ಜಾರಿಯಾದ ಯೋಜನೆಯಲ್ಲ.

ನೌಕರರ ಒತ್ತಾಯದಂತೆ ಹಳೆಯ ಪಿಂಚಣಿ ಯೋಜನೆ ಜಾರಿ ಸಂಬಂಧ ಪರಿಶೀಲಿಸಲು ಮಾಡಿದ ಸಮಿತಿಯು ಸತ್ತ ರೀತಿಯಲ್ಲಿದೆ. ಸರ್ಕಾರವು ತಾಯಿ ಸ್ಥಾನದಲ್ಲಿದೆ. ನೌಕರರ ಬೇಡಿಕೆಯ ಬಗ್ಗೆ ತಾಳ್ಮೆಯಿಂದ ಚರ್ಚಿಸಬೇಕು. ಇದನ್ನು ಪುನರ್​ ಪರಿಶೀಲನೆ ಮಾಡಬೇಕು. ಒಪಿಎಸ್ ಜಾರಿ ಸಂಬಂಧ ಸಭೆ ನಡೆಸಿ ಅದಕ್ಕೆ ತಮ್ಮನ್ನು ಆಹ್ವಾನಿಸಿದಲ್ಲಿ ಒಪಿಎಸ್ ಜಾರಿ ಸಂಬಂಧ ಸರ್ಕಾರಕ್ಕೆ ಹೊರೆಯಾಗದು ಎಂಬುದನ್ನು ನಾವು ತಿಳಿಸಿಕೊಡುತ್ತೇವೆ ಎಂದರು. ತಮ್ಮ ನೋವಿಗೆ ನಾವುಗಳು ದನಿಯಾಗಬೇಕು ಎಂದೇ ನೌಕರರು ನಮಗೆ ಮತ ನೀಡಿ ಆಯ್ಕೆ ಮಾಡಿ ವಿಧಾನ ಮಂಡಲಕ್ಕೆ ಕಳುಹಿಸಿದ್ದಾರೆ.

ಮತ ಹಾಕಿದವರಿಗೆ ಎನ್‍ಪಿಎಸ್, ಮತ ಪಡೆದವರಿಗೆ ಒಪಿಎಸ್ ಯಾಕೆ ಎಂದು ಪ್ರಶ್ನಿಸಿದ ಆಯನೂರ ಮಂಜುನಾಥ ಅವರು, ಹಳೆಯ ಪಿಂಚಣಿ ಯೋಜನೆಯನ್ನು ಜಾರಿ ತರುವ ಪ್ರಸ್ತಾವನೆಯು ಸರ್ಕಾರದ ಮುಂದಿಲ್ಲ ಎನ್ನುವುದಾದರೆ ವಿಧಾನ ಮಂಡಲದ ಸದಸ್ಯರಿಗೂ ಹೊಸ ಪಿಂಚಣಿ ಯೋಜನೆ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು. ಹೊಸ ಪಿಂಚಣಿ ಯೋಜನೆಯನ್ನು ರದ್ದುಪಡಿಸಬೇಕು. ನೌಕರರ ಬೇಡಿಕೆಯನ್ನು ಪುನರ್ ಪರಿಶೀಲಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿ ಸಾತ್ವಿಕ ಪ್ರತಿಭಟನೆ ಭಾಗವಾಗಿ ತಾವು ಸದನದಿಂದ ಹೊರಹೋಗುತ್ತಿರುವುದಾಗಿ ತಿಳಿಸಿದರು.

ಒಪಿಎಸ್ ಜಾರಿಯ ಒತ್ತಾಯಕ್ಕೆ ದನಿಗೂಡಿಸಿದ ಸದಸ್ಯರಾದ ಪ್ರಕಾಶ ಹುಕ್ಕೇರಿ ಮಾತನಾಡಿ, ಒಪಿಎಸ್ ಜಾರಿಗೆ ಒತ್ತಾಯಿಸಿ ನೌಕರರು ಮನೆ, ಹೆಂಡತಿ, ಮಕ್ಕಳನ್ನು ಬಿಟ್ಟು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನೌಕರರ ಬೇಡಿಕೆಯನ್ನು ಸರ್ಕಾರವು ಸಾವಧಾನದಿಂದ ಪರಿಶೀಲಿಸಬೇಕು ಎಂದು ಮುಖ್ಯಮಂತ್ರಿಗಳಲ್ಲಿ ತಾವು ಕಳಕಳಿಯಿಂದ ಮನವಿ ಮಾಡುವುದಾಗಿ ತಿಳಿಸಿದರು. ಚಳಿಗಾಲದ ಈ ಅಧಿವೇಶದನಲ್ಲಿ ಒಪಿಎಸ್ ಜಾರಿಯ ಬಗ್ಗೆ ಸರ್ಕಾರವು ಸಕಾರಾತ್ಮಕವಾದ ನಿರ್ಧಾರವನ್ನು ಸ್ಪಷ್ಟಪಡಿಸಬೇಕು ಎಂದರು.

43 ವರ್ಷಗಳಿಂದ ತಾವು ಶಿಕ್ಷಕರ, ನೌಕರರ ನೋವನ್ನು ಹತ್ತಿರದಿಂದ ನೋಡಿದ್ದೀರಿ. ಹಳೆಯ ಪಿಂಚಣಿ ಯೋಜನೆಯ ಜಾರಿಯ ವಿಷಯದ ಬಗ್ಗೆ ತಾವುಗಳು ಮೃದುಧೋರಣೆ ತಾಳಬಾರದು. ಒಪಿಎಸ್ ಜಾರಿ ಬೇಡಿಕೆಯ ವಿಷಯದ ನೇತೃತ್ವ ವಹಿಸಿ ಯೋಜನೆ ಜಾರಿಗೆ ಸಹಕರಿಸಬೇಕು ಎಂದು ಸದಸ್ಯ ಹುಕ್ಕೇರಿ ಅವರು ಸಭಾಪತಿ ಬಸವರಾಜ ಹೊರಟ್ಟಿ ಅವರಲ್ಲಿ ಮನವಿ ಮಾಡಿದರು.

ಇನ್ನು ಅಂತರ್ಜಲ ಅತಿ ಬಳಕೆ ಆಗುತ್ತಿರುವ ರಾಜ್ಯದ 41 ತಾಲೂಕುಗಳ ಗ್ರಾಮಗಳಲ್ಲಿ ಅಂತರ್ಜಲದ ಮಿತ ಬಳಕೆ ಮತ್ತು ಅಂತರ್ಜಲ ವೃದ್ಧಿಪಡಿಸಲು ಅಟಲ್ ಭೂ ಜಲ ಯೋಜನೆ ಜಾರಿ ತರಲಾಗಿದೆ. ಇದರ ಜೊತೆಗೆ ಅತಿವೃಷ್ಠಿ ಸಂದರ್ಭದಲ್ಲಿ ನೀರಿನ ಸಂಗ್ರಹಣೆಗೆ ಸಮಾನಂತರ ಜಲಾಶಯಗಳನ್ನು ನಿರ್ಮಿಸುವ ಚಿಂತನೆಯಿದೆ ಎಂದು ಸಣ್ಣ ನೀರಾವರಿ ಮಾಧುಸ್ವಾಮಿ ಹೇಳಿದರು.

ಶಾಸಕರಾದ ಭಾರತಿ ಶೆಟ್ಟಿ ಹಾಗೂ ಎಂ.ನಾಗರಾಜು ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿ, ರಾಜ್ಯದಲ್ಲಿ ಅಂತರ್ಜಲ ಬಳಕೆಯನ್ನು ನಿಯಂತ್ರಿಸಲು ಹಾಗೂ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಅಂತರ್ಜಲ ಅಭಿವೃದ್ದಿ ಮತ್ತು ನಿರ್ವಹಣೆಯ ವಿನಿಯಮನ ಹಾಗೂ ನಿಯಂತ್ರಣ ಅಧಿನಿಯಮ 2011 ಜಾರಿಗೊಳಿಸಿ 2012ರಲ್ಲಿ ನಿಯಮಗಳನ್ನು ಜಾರಿಗೆ ತರಲಾಗಿದೆ. ರಾಜ್ಯದಲ್ಲಿ ಅತಿವೃಷ್ಠಿ ಸಂದರ್ಭದಲ್ಲಿ ನೀರು ಹೆಚ್ಚಾಗಿ ಹರಿದು ಅವಾಂತರಗಳಿಗೆ ಕಾರಣವಾಗುತ್ತದೆ.

ನೀರು ವ್ಯರ್ಥವಾಗಿ ನದಿಗಳ ಮೂಲಕ ಸಮುದ್ರ ಸೇರುತ್ತದೆ. ಇದನ್ನು ತಪ್ಪಿಸಿ ಪ್ರವಾಹದ ಸಂದರ್ಭದ ನೀರನ್ನು ಸಮಾನಂತರ ಜಲಾಶಯಗಳಲ್ಲಿ ಸಂಗ್ರಹಿಸಲು ಯೋಜನೆ ರೂಪಿಸಲಾಗುವುದು ಎಂದರು. ಕೇಂದ್ರ ಸರ್ಕಾರದ ಪ್ರಯೋಜಕತ್ವದಲ್ಲಿ ಜಲ ಜೀವನ್ ಮಿಷನ್ ಜಾರಿಗೊಳಿಸಲಾಗಿದೆ. ಇದರ ಅಡಿ ಕೊಳವೆ ಬಾವಿಗಳ ಬದಲಾಗಿ, ಭೂ ಮೇಲ್ಮೈ ಮೇಲಿನ ನೀರನ್ನು ಶುದ್ಧೀಕರಿಸಿ ಸಾರ್ವಜನಿಕರಿಗೆ ಕುಡಿಯಲು ಸಬರಾಜು ಮಾಡಲಾಗುವುದು. ರಾಜ್ಯದಲ್ಲಿ 1000 ಚದರು ಅಡಿಗಿಂತಲೂ ಹೆಚ್ಚಿನ ನಿರ್ಮಾಣಗಳಿಗೆ ಮಳೆಕೊಯ್ಲ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದರು.

2030ರ ವೇಳೆಗೆ 1591 ಟಿಎಂಸಿ ನೀರಿನ ಬೇಡಿಕೆ: ಕೃಷಿ ಚಟುವಟಿಕೆ ಮತ್ತು ಹೆಚ್ಚುತ್ತಿರುವ ಜನಸಂಖ್ಯೆ ಅನುಗುಣವಾಗಿ 2030ರ ವೇಳೆಗೆ ರಾಜ್ಯದ ನೀರಿನ ಬೇಡಿಕೆ 1591 ಟಿ.ಎಂ.ಸಿಗಳಾಗಬಹುದು ಎಂದು 2022ರ ಜಲ ನೀತಿಯಲ್ಲಿ ನಿರೀಕ್ಷಿಸಲಾಗಿದೆ. ಇದಕ್ಕಾಗಿ ನಗರ ಪ್ರದೇಶಗಳ ತ್ಯಾಜ್ಯ ನೀರನ್ನು ಕೊಳಚೆ ನೀರು ಶುದ್ಧೀಕರಣ ಘಟಕಗಳ ಮೂಲಕ ಶುದ್ಧೀಕರಿಸಿ ಕೆರೆಗಳನ್ನು ತುಂಬಿಸಲಾಗುವುದು. ಇದೇ ರೀತಿ ಕೈಗಾರಿಕೆ ಹಾಗೂ ಉಷ್ಣ ಸ್ಥಾವರ ಯೋಜನೆಯ ತ್ಯಾಜ್ಯ ನೀರನ್ನು ಸಂಸ್ಕರಿಸಿ ಮರು ಬಳಕೆ ಮಾಡಲು ಉದ್ದೇಶಿಸಲಾಗಿದೆ.

ವೈಜ್ಞಾನಿಕ ಪದ್ದತಿಗಳ ಮೂಲಕ ಕೃಷಿಯಲ್ಲಿ ನೀರಿನ ಬಳಕೆಯನ್ನು ತಗ್ಗಿಸುವುದು. ಬೆಳೆ ಆವರ್ತನಾ ಪದ್ದತಿಗೆ ಉತ್ತೇನಜ ನೀಡಲಾಗುತ್ತಿದೆ. ಹನಿ ನೀರಾವರಿ ಪದ್ದತಿಗೆ ಆದ್ಯ್ಯತೆ, ಅಂತರ್ಜಲ ಹೆಚ್ಚಿಸಲು ಮಳೆ ನೀರನ್ನು ಸಂಗ್ರಹಿಸಲು ಬ್ಯಾರೇಜ್ ಮತ್ತು ಚೆಕ್ ಡ್ಯಾಂ ನಿರ್ಮಾಣ ಮಾಡಲಾಗುವುದು ಎಂದರು. ಶಾಸಕಿ ಭಾರತಿ ಶೆಟ್ಟಿ ಮಾತನಾಡಿ ಜಲಮಂಡಳಿ ಅನಾವಶ್ಯಕವಾಗಿ ಬೋರ್ ವೆಲ್ ಕೋರೆಯಲು ಅನುಮತಿ ನೀಡುತ್ತಿದೆ. ಜಲಮಂಡಳಿ ವತಿಯಿಂದ ಕೊರೆಯಲಾದ ಬೋರ್‍ವೆಲ್ ಬಳಿ ಮಳೆ ನೀರು ಮರುಪೂರಣಕ್ಕೆ ವ್ಯವಸ್ಥೆ ಕಲ್ಪಿಸಿರುವುದಿಲ್ಲ. ಇದು ವಿಪರ್ಯಾಸವೇ ಸರಿ. ನಗರ ಪ್ರದೇಶಗಳಲ್ಲಿ ಪ್ರತಿ ಮನೆಗೂ ಬೋರ್‍ವೆಲ್ ಕೊರೆಯಲು ಅನುಮತಿ ನೀಡದೆ; ಸಾಮೂಹಿಕ ಬಳಕೆಗೆ ಮಾತ್ರ ಬೋರ್‍ವೆಲ್ ಕೊರೆಯಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಕೋರಿದರು.

ಇದನ್ನೂ ಓದಿ: ಲಿಂಗಾಯತ, ಒಕ್ಕಲಿಗರಿಗೆ ಸಿಹಿಸುದ್ದಿ: ಎರಡು ಪ್ರತ್ಯೇಕ ಪ್ರವರ್ಗ ರಚನೆಗೆ ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.