ETV Bharat / state

ಬೆಳಗಾವಿ ಜಿಲ್ಲೆ ವಿಭಜನೆಗೆ ಹೆಚ್ಚಿದ ಕೂಗು; ನಾಳೆ ಅಥಣಿ ಬಂದ್, ಚಿಕ್ಕೋಡಿಯಲ್ಲೂ ಬೃಹತ್ ಪ್ರತಿಭಟನೆ

author img

By ETV Bharat Karnataka Team

Published : Dec 10, 2023, 5:04 PM IST

ನಮ್ಮನ್ನು ಹಿಡಿದು ರಾಜಕೀಯ ನಾಯಕರ ಇಚ್ಛಾಶಕ್ತಿ ಕೊರತೆಯಿಂದ ಈ ಭಾಗಕ್ಕೆ ಅನ್ಯಾಯ ಮಾಡಿದ್ದೇವೆ. ಈಗಲೂ ಕಾಲ ಮಿಂಚಿಲ್ಲ. ಅಭಿವೃದ್ಧಿ, ಆಡಳಿತ ದೃಷ್ಟಿಯಿಂದ ಬೆಳಗಾವಿ ಜಿಲ್ಲೆ ವಿಭಜನೆ ಅನಿವಾರ್ಯ. ಈ ಚಳಿಗಾಲ ಅಧಿವೇಶನದಲ್ಲಿ ಬೆಳಗಾವಿ ಜಿಲ್ಲೆ ವಿಭಜನೆಗೆ ಸರ್ಕಾರ ಅಂಕಿತ ಹಾಕಬೇಕೆಂದು ಮಾಜಿ ಶಾಸಕ ಶಹಜಾನ್ ಡೋಂಗರಗಾಂವ್​ ಒತ್ತಾಯಿಸಿದ್ದಾರೆ.

Chikkodi Administrative Office
ಚಿಕ್ಕೋಡಿ ತಾಲೂಕು ಆಡಳಿತ ಸೌಧ

ಮಾಜಿ ಶಾಸಕ ಶಹಜಾನ್ ಡೋಂಗರಗಾಂವ ಮಾಧ್ಯಮದವರ ಜೊತೆ ಮಾತನಾಡಿದರು.

ಚಿಕ್ಕೋಡಿ: ರಾಜ್ಯದಲ್ಲೇ ಅತಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯನ್ನು ವಿಭಜನೆ ಮಾಡುವಂತೆ ದಶಕಗಳಿಂದ ಹೋರಾಟ ನಡೆಯುತ್ತಿದೆ. ಬೆಳಗಾವಿ ಜಿಲ್ಲೆ ವಿಭಜಿಸಿ 1997ರಲ್ಲಿ ಚಿಕ್ಕೋಡಿಯನ್ನು ಹೊಸ ಜಿಲ್ಲೆಯನ್ನಾಗಿ ಘೋಷಿಸಲು ಸರ್ಕಾರ ನಿರ್ಧರಿಸಿತ್ತು. ಜಿಲ್ಲೆ ವಿಭಜಿಸಿದರೆ ಮರಾಠಿಗರ ಪ್ರಾಬಲ್ಯ ಹೆಚ್ಚಾಗುತ್ತದೆ ಎಂದು ಕನ್ನಡ ಪರ ಸಂಘಟನೆಗಳು ಪ್ರತಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆ ಹೊಸ ಜಿಲ್ಲೆಯನ್ನಾಗಿ ಘೋಷಿಸುವ ನಿರ್ಧಾರದಿಂದ ಸರ್ಕಾರ ಹಿಂದಕ್ಕೆ ಸರಿದಿತ್ತು.

ಆದರೆ ಇತ್ತೀಚೆಗೆ ಮತ್ತೆ ಗೋಕಾಕ್​ ಮತ್ತು ಅಥಣಿಯನ್ನು ನೂತನ ಜಿಲ್ಲೆಯಾಗಿ ರಚನೆ ಮಾಡಬೇಕೆಂಬ ಕೂಗು ಕೇಳಿಬಂದಿದೆ. ಜಿಲ್ಲೆ ವಿಭಜನೆಯ ಬೇಡಿಕೆಗಳು ಸರ್ಕಾರಕ್ಕೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ.

ಜಿಲ್ಲಾ ವಿಭಜನೆಗೆ ಆಗ್ರಹಿಸಿ ಅಥಣಿ, ಚಿಕ್ಕೋಡಿಯಲ್ಲಿ ನಾಳೆ ಬೃಹತ್​ ಪ್ರತಿಭಟನೆ: ಅಥಣಿ ಜಿಲ್ಲೆ ರಚನೆಗೆ ಒತ್ತಾಯಿಸಿ ಸೋಮವಾರ ಸ್ವಯಂ ಪ್ರೇರಿತ ಅಥಣಿ ಸಂಪೂರ್ಣ ಬಂದ್ ಆಚರಿಸಲು ನಿರ್ಧರಿಸಲಾಗಿದೆ. ಮತ್ತೊಂದೆಡೆ ಚಿಕ್ಕೋಡಿ ಜಿಲ್ಲಾ ರಚನೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಚಿಕ್ಕೋಡಿ ಅಥಣಿ ಜಿಲ್ಲಾ ಹೋರಾಟಗಾರ ಪ್ರಶಾಂತ ತೋಡ್ಕರ್ ಮತ್ತು ಚಂದ್ರಕಾಂತ್ ಹುಕ್ಕೇರಿ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ರಾಜಕೀಯ ನಾಯಕರ ಇಚ್ಛಾಶಕ್ತಿ ಕೊರತೆ: ಚಿಕ್ಕೋಡಿ ಪಟ್ಟಣದಲ್ಲಿ ಚಂದ್ರಕಾಂತ ಹುಕ್ಕೇರಿ ಈಟಿವಿ ಭಾರತ ಜೊತೆ ಮಾತನಾಡಿ, 25 ವರ್ಷಗಳಿಂದ ಚಿಕ್ಕೋಡಿ ಜಿಲ್ಲಾ ರಚನೆಗೆ ಒತ್ತಾಯ ಮಾಡುತ್ತಿದ್ದೇವೆ. 1997ರಲ್ಲಿ ರಲ್ಲಿ ಅಂದಿನ ಮುಖ್ಯಮಂತ್ರಿ ಜೆ ಎಚ್ ಪಟೇಲ್ ಅವರು ಏಳು ಜಿಲ್ಲೆಗಳನ್ನು ರಚನೆ ಮಾಡಿದ್ದರು. ಆ ಸಂದರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ರಚನೆಗೆ ಸಿಎಂ ಮುಂದಾಗಿದ್ದರು. ಆದರೆ ಅಂದು ಮಹಾರಾಷ್ಟ್ರ ರಾಜ್ಯದ ಎಂಇಎಸ್ ಪುಂಡಾಟಿಕೆ ತೀವ್ರವಾಗಿದ್ದರಿಂದ ಕನ್ನಡಪರ ಸಂಘಟನೆಗಳು ಚಿಕ್ಕೋಡಿ ಜಿಲ್ಲಾ ರಚನೆಗೆ ವಿರೋಧ ವ್ಯಕ್ತಪಡಿಸಿದ್ದವು.

ಅವತ್ತು ಚಿಕ್ಕೋಡಿ ಜಿಲ್ಲೆ ರಚನೆಯನ್ನು ಕೈ ಬಿಡಲಾಗಿತ್ತು. ಸದ್ಯ ಮಹಾರಾಷ್ಟ್ರ ಎಂಇಎಸ್ ಪ್ರಾಬಲ್ಯ ಸಂಪೂರ್ಣ ನೆಲಕಚ್ಚಿದರಿಂದ ಕನ್ನಡಪರ ಹೋರಾಟಗಾರರು ಬೆಳಗಾವಿ ಜಿಲ್ಲೆ ವಿಭಜನೆಗೆ ಸಹಮತಿ ತೋರಿದ್ದಾರೆ. ಆದರೆ ರಾಜಕೀಯ ನಾಯಕರ ಇಚ್ಛಾಶಕ್ತಿ ಕೊರತೆಯಿಂದ ಬೆಳಗಾವಿ ವಿಭಜನೆಗೆ ಸರ್ಕಾರಗಳು ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.

ಪ್ರಸ್ತುತ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಬೆಳಗಾವಿ ವಿಭಜನೆ ಮಾಡುವಂತೆ ಒತ್ತಾಯಿಸಿ ಚಿಕ್ಕೋಡಿಯಲ್ಲಿ ಡಿ.11ರಂದು ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲು ತೀರ್ಮಾನಿಸಲಾಗಿದೆ. ಒಂದು ವೇಳೆ ಸರ್ಕಾರ ಈ ಅಧಿವೇಶನದಲ್ಲಿ ಬೆಳಗಾವಿ ವಿಭಜನೆಗೆ ಮುಂದಾಗದಿದ್ದರೆ, ಮುಂದಿನ ದಿನಗಳಲ್ಲಿ ಉಗ್ರ ಹೊರಾಟ ನಡೆಸಲಾಗುವುದು ಎಂದು ಎಚ್ಚರಿಕೆ ರವಾನಿಸಿದ್ದಾರೆ.

ಅಥಣಿ ಜಿಲ್ಲಾ ಹೋರಾಟಗಾರ ಸಂಘದ ಅಧ್ಯಕ್ಷ ಪ್ರಶಾಂತ್ ತೋಡ್ಕರ್ ಮಾತನಾಡಿ, ಸೋಮವಾರ ಅಥಣಿಯನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಲು ವಿವಿಧ ಸಂಘಟನೆಗಳು ಕರೆ ನೀಡಿವೆ. ಬೆಳಗಾವಿಯಿಂದ ಅಥಣಿ ಪಟ್ಟಣ ಸುಮಾರು 250 ಕಿಲೋ ಮೀಟರ್ ಅಂತರ ಇರೋದ್ರಿಂದ ಆಡಳಿತಾತ್ಮಕವಾಗಿ ತೊಂದರೆಯಾಗುತ್ತಿದೆ. ಹಲವಾರು ಬಾರಿ ಅಥಣಿ ನೂತನ ಜಿಲ್ಲಾ ರಚನೆಗೆ ಒತ್ತಾಯಿಸಿ ಪತ್ರ ಚಳವಳಿ ಮುಖಾಂತರ ಹಿಂದಿನ ಸರ್ಕಾರದ ಗಮನವನ್ನು ಸೆಳೆದಿದ್ದೆವು. ಆದರೆ ಸರ್ಕಾರದಿಂದ ಯಾವುದೇ ಸಕಾರಾತ್ಮಕ ಉತ್ತರ ಬಾರದಿರುವ ಹಿನ್ನೆಲೆ ನಾಳೆ ಸ್ವಯಂ ಪ್ರೇರಿತವಾಗಿ ಅಥಣಿ ಪಟ್ಟಣ ಬಂದ್ ಮಾಡಲಿದ್ದೇವೆ ಎಂದು ತಿಳಿಸಿದರು.

ಮಾಜಿ ಶಾಸಕ ಶಹಜಾನ್ ಡೋಂಗರಗಾಂವ್​ ಮಾತನಾಡಿ, ಬೆಳಗಾವಿ ಜಿಲ್ಲೆ ವಿಭಜನೆ ಹೋರಾಟ ದಶಕಗಳಿಂದ ನಡೆಯುತ್ತಿದೆ. ನಮ್ಮನ್ನು ಹಿಡಿದು ರಾಜಕೀಯ ನಾಯಕರ ಇಚ್ಛಾಶಕ್ತಿ ಕೊರತೆಯಿಂದ ಈ ಭಾಗಕ್ಕೆ ಅನ್ಯಾಯ ಮಾಡಿದ್ದೇವೆ. ಈಗಲೂ ಕಾಲ ಮಿಂಚಿಲ್ಲ. ಬೆಳಗಾವಿ ಜಿಲ್ಲೆ ವಿಸ್ತೀರ್ಣದಲ್ಲಿ ದೊಡ್ಡ ಜಿಲ್ಲೆ, ಆದರೆ ಅಭಿವೃದ್ಧಿ, ಆಡಳಿತ ದೃಷ್ಟಿಯಿಂದ ವಿಭಜನೆ ಅತ್ಯಂತ ಸೂಕ್ತವಾದ ತೀರ್ಮಾನ, ಈ ಚಳಿಗಾಲ ಅಧಿವೇಶನದಲ್ಲಿ ಬೆಳಗಾವಿ ವಿಂಗಡನೆಗೆ ಸರ್ಕಾರ ಅಂಕಿತ ಹಾಕಬೇಕು. ಅಥಣಿ ಬಂದ್ ಗೆ ನಾವು ಸಂಪೂರ್ಣ ಬೆಂಬಲ ಕೊಡುತ್ತಿದ್ದೇವೆ ಎಂದು ತಮ್ಮ ಅಭಿಪ್ರಾಯ ತಿಳಿಸಿದರು.

ಅರ್ಹತೆ ಪಟ್ಟಿಯಲ್ಲಿ ಬೈಲಹೊಂಗಲ, ಚಿಕ್ಕೋಡಿ: ಬೆಳಗಾವಿ ಜಿಲ್ಲೆ ವಿಭಜನೆಗೆ ಕೂಗು ವ್ಯಾಪಕವಾಗಿ ಹಬ್ಬಿದ್ದು ಚಳಿಗಾಲದ ಅಧಿವೇಶನದಲ್ಲಿ ಈ ಕುರಿತು ಜಿಲ್ಲೆಯ ಶಾಸಕರು ಸದನದಲ್ಲಿ ದ್ವನಿ ಎತ್ತಲೆಂದು ಇಲ್ಲಿನ ಜನರು ಆಗ್ರಹಿಸಿದ್ದಾರೆ. ದಶಕಗಳ ಹಿಂದೆ ಬೈಲಹೊಂಗಲ ಹಾಗೂ ಚಿಕ್ಕೋಡಿ ನೂತನ ಜಿಲ್ಲೆ ರಚನೆಗೆ ಎಲ್ಲಾ ಅರ್ಹತೆ ಪಡೆದಿವೆ. ಸರ್ಕಾರ ಈ ಎರಡು ನಗರಗಳನ್ನು ನೂತನ ಜಿಲ್ಲೆ ಘೋಷಣೆಗಾಗಿ ತಯಾರಿ ಮಾಡಿಕೊಂಡಿದ್ದು ಕೆಲವು ರಾಜಕೀಯ ನಾಯಕರು ತಮ್ಮ ಕ್ಷೇತ್ರಗಳನ್ನು ನೂತನ ಜಿಲ್ಲೆಗೆ ಒತ್ತಾಯಿಸಿರುವ ಹಿನ್ನೆಲೆ ಸರ್ಕಾರ ಜಿಲ್ಲಾ ರಚನೆ ಕಾರ್ಯವನ್ನು ಸ್ಥಗಿತಗೊಳಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಚಿಕ್ಕೋಡಿ ಜಿಲ್ಲೆಗೆ ಹೋರಾಡಿದ್ದ ಬಿ ಆರ್ ಸಂಗಪ್ಪಗೋಳ: ಚಿಕ್ಕೋಡಿ ಜಿಲ್ಲೆಗಾಗಿ 30 ವರ್ಷಗಳಿಂದ ಹೋರಾಟ ಮಾಡಿದ್ದ ದಿವಂಗತ ಬಿ ಆರ್ ಸಂಗಪ್ಪಗೋಳ ಇತ್ತೀಚೆಗೆ ನಿಧನರಾದರು. 2018ರಲ್ಲಿ ಬಿ ಎಸ್ ಯಡಿಯೂರಪ್ಪ ಅವರು ಬೆಳಗಾವಿಗೆ ಬಂದಾಗ ಬಿ ಆರ್ ಸಂಗಪ್ಪಗೋಳ ಏಕಾಂಗಿಯಾಗಿ ಮುಖ್ಯಮಂತ್ರಿ ಎದುರು ಚಿಕ್ಕೋಡಿ ಜಿಲ್ಲೆಗಾಗಿ ಪ್ರತಿಭಟನೆ ನಡೆಸಿದ್ದರು. ಮತ್ತೆ ಕಾಂಗ್ರೆಸ್ ಸರ್ಕಾರದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್​ ಜಾರಕಿಹೊಳಿ ಬೆಳಗಾವಿ ವಿಭಜನೆ ಕುರಿತು ಮಾತನಾಡಿದ್ದು, ಜಿಲ್ಲೆ ವಿಭಜನೆ ಕೂಗು ಹೆಚ್ಚಾಗಿದೆ. ಇದರ ಮಧ್ಯೆ ಬೆಳಗಾವಿ ವಿಭಜನೆ ಕೂಗು ಮುನ್ನೆಲೆಗೆ ಬಂದು ಬೈಲಹೊಂಗಲ ಹಾಗೂ ಚಿಕ್ಕೋಡಿ ಜಿಲ್ಲೆ ರಚನೆ ಕನಸು ಚಿಗುರೊಡೆದಿದೆ.

ಆಡಳಿತದ ದೃಷ್ಟಿಯಿಂದ ಬೆಳಗಾವಿ ಜಿಲ್ಲೆ ವಿಭಜನೆ ಅನಿವಾರ್ಯವಾಗಿದೆ. ಸರ್ಕಾರದ ಅನುದಾನ ಕೊರತೆಯಿಂದ ಬೆಳಗಾವಿ ಜಿಲ್ಲೆ ಅಭಿವೃದ್ಧಿಯಲ್ಲಿ ಹಿನ್ನಡೆ ಅನುಭವಿಸುತ್ತಿದೆ. ನೀರಾವರಿ ಯೋಜನೆಗಳು ಅರ್ಧಕ್ಕೆ ನಿಂತು ರೈತರ ಕನಸು ಕಮರಿದೆ. ಅದಷ್ಟು ಬೇಗ ಬೆಳಗಾವಿ ಜಿಲ್ಲೆ ವಿಭಜನೆ ಮಾಡಿ ಗಡಿ ಜಿಲ್ಲೆ ಅಭಿವೃದ್ಧಿಗೆ ಸಿಎಂ ಸಿದ್ದರಾಮಯ್ಯ ಕೈಗೆತ್ತಿಕೊಳ್ಳಬೇಕೆನ್ನುವುದು ಜಿಲ್ಲೆಯ ಜನರ ಒತ್ತಾಸೆಯಾಗಿದೆ.

ಇದನ್ನೂಓದಿ:ಡಿ.​ 13ರಂದು ಪಂಚಮಸಾಲಿ ಸಮಾಜದಿಂದ ಬೃಹತ್ ಪ್ರತಿಭಟನೆ: ಜಯಮೃತ್ಯುಂಜಯ ಸ್ವಾಮೀಜಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.