ನಾನು, ಸಿದ್ದರಾಮಯ್ಯ ನಾಳೆ ಚಕ್ಕಡಿಗಾಡಿಯಲ್ಲಿ ವಿಧಾನಸೌಧಕ್ಕೆ ಹೋಗ್ತೀವಿ: ಡಿ.ಕೆ.ಶಿವಕುಮಾರ್​

author img

By

Published : Sep 12, 2021, 7:57 PM IST

d-k-shivakumar
ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ()

ಚುನಾವಣೆಯಲ್ಲಾದ ಸೋಲನ್ನು ನಾವು ಒಪ್ಪಿಕೊಳ್ಳುತ್ತೇವೆ.‌ ಕಾಂಗ್ರೆಸ್ ನೀರಸ ಪ್ರದರ್ಶನವನ್ನು ಎಐಸಿಸಿ ಗಂಭೀರವಾಗಿ ಪರಿಗಣಿಸಿದೆ.‌ ಪಕ್ಷದ ಹಿನ್ನೆಡೆಗೆ ಕಾರಣ ತಿಳಿಯಲು ಶೀಘ್ರವೇ ಎಐಸಿಸಿಯ ವಿಶೇಷ ತಂಡ ಬೆಳಗಾವಿಗೆ ಭೇಟಿ ನೀಡಲಿದೆ- ಡಿಕೆಶಿ

ಬೆಳಗಾವಿ: ತೈಲ ಬೆಲೆ,‌ ಗ್ಯಾಸ್ ಸಿಲಿಂಡರ್ ಹೆಚ್ಚಳ ಸೇರಿದಂತೆ ಅಗತ್ಯವಸ್ತುಗಳ ಬೆಲೆ ಏರಿಕೆಯ ನಿರ್ಧಾರ ಖಂಡಿಸಿ ನಾಳೆ ನಾನು ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತ್ಯೇಕವಾಗಿ ಚಕ್ಕಡಿಗಾಡಿಯಲ್ಲಿ ವಿಧಾನಸೌಧಕ್ಕೆ ತೆರಳುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಈ ಕುರಿತು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಕೇಂದ್ರ ಸರ್ಕಾರದ ಗಮನ ಸೆಳೆಯಲು ವಿನೂತನ ಪ್ರತಿಭಟನೆಗೆ ಕಾಂಗ್ರೆಸ್ ನಿರ್ಧರಿಸಿದೆ. ನಾನು ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಚಕ್ಕಡಿಗಾಡಿಯಲ್ಲಿ ವಿಧಾನಸೌಧಕ್ಕೆ ತೆರಳುತ್ತೇವೆ. ನಾನು ಬೆಳಗ್ಗೆ 9ಕ್ಕೆ ಮನೆಯಿಂದ ವಿಧಾನಸೌಧದವರೆಗೆ ಚಕ್ಕಡಿಗಾಡಿಯಲ್ಲಿ ತೆರಳುತ್ತೇನೆ.

9.30ಕ್ಕೆ ಸಿದ್ದರಾಮಯ್ಯ ಅವರು ಪ್ರತ್ಯೇಕ ಚಕ್ಕಡಿಗಾಡಿಯಲ್ಲಿ ವಿಧಾನಸೌಧಕ್ಕೆ ಬರಲಿದ್ದಾರೆ. ಎಷ್ಟೇ ಪ್ರತಿಭಟನೆ ನಡೆಸಿದರೂ ಕೇಂದ್ರ ಸರ್ಕಾರ ಬೆಲೆ ಇಳಿಸುತ್ತಿಲ್ಲ. ಈ ಕಾರಣಕ್ಕೆ ಕೇಂದ್ರ ಸರ್ಕಾರದ ವಿರುದ್ಧ ವಿಧಾನಸೌಧ ಎದುರು ಪ್ರತಿಭಟನೆ ನಡೆಸುತ್ತೇವೆ. ಸಂಚಾರ ಸಮಸ್ಯೆ ಕಾರಣ ನಾವಿಬ್ಬರೇ ಚಕ್ಕಡಿಗಾಡಿಯಲ್ಲಿ ವಿಧಾನಸೌಧಕ್ಕೆ ತೆರಳಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

'ಶ್ರೀಮಂತ ಪಾಟೀಲ್​ಗೆ ಅಭಿನಂದಿಸುವೆ'

ಬಿಜೆಪಿ ನಾಯಕರಿಂದ ಹಣದ ಆಫರ್ ಬಂದಿತ್ತು ಎಂಬ ಶ್ರೀಮಂತ ಪಾಟೀಲ್​​ ಹೇಳಿಕೆ ವಿಚಾರಕ್ಕೆ ಅವರು ಪ್ರತಿಕ್ರಿಯಿಸಿದರು. ಅವರು ಸತ್ಯದ ಮಾತು ಹೇಳಿದ್ದಾರೆ. ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ.‌ ಅವರ ಹೇಳಿಕೆ ಆಧರಿಸಿ ಎಸಿಬಿ ತಕ್ಷಣವೇ ಸುಮೋಟೊ ಕೇಸ್ ದಾಖಲಿಸಿಕೊಳ್ಳಬೇಕು. ಬೆಳಗಾವಿ ಅಥವಾ ಬೆಂಗಳೂರಿನ ಎಸಿಬಿ ಅಧಿಕಾರಿಗಳು ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಬೇಕು. ಹಣ ಆಫರ್ ಮಾಡಿದವರು ಯಾರು? ಎಂಬ ಬಗ್ಗೆ ಸಮಗ್ರ ತನಿಖೆ ಆಗಬೇಕು. ಬಿಜೆಪಿ ನಾಯಕರು ನಾವು ಶುದ್ಧಹಸ್ತರೆಂದು ಹೇಳುತ್ತಾರೆ. ಶ್ರೀಮಂತ ಪಾಟೀಲ್​ ಹೇಳಿಕೆ ಆಧರಿಸಿ ಗಂಭೀರ ತನಿಖೆ ಆಗಬೇಕು ಎಂದು ಡಿಕೆಶಿ ಒತ್ತಾಯಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್

ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ‌ ನಿರ್ಣಾಮವಾಗಿರುವ ನಾಡದ್ರೋಹಿ ಎಂಇಎಸ್ ಬಗ್ಗೆ ಡಿಕೆಶಿ ಕನಿಕರ ತೋರಿದ್ದಾರೆ. ಪಾಪ ಎಂಇಎಸ್ ಹೀನಾಯ ಸೋಲನ್ನನುಭವಿಸಿತು. ಫಲಿತಾಂಶ ಬಗ್ಗೆ ಅನೇಕ ಪರಾಜಿತರು ಕೋರ್ಟ್ ಮೆಟ್ಟಿಲೇರುತ್ತಿದ್ದಾರೆ. ಕೋರ್ಟ್ ಮೆಟ್ಟಿಲೇರುವುದು ಅವರ ಹಕ್ಕು. ಬೆಳಗಾವಿ ಕಾಂಗ್ರೆಸ್ ನಾಯಕರಲ್ಲಿ ಯಾವುದೇ ಭಿನ್ನಮತವಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆಯಲ್ಲಿ ಶ್ರಮಿಸಿದ್ದಾರೆ ಎಂದರು.

ಪರಿಷತ್ ಚುನಾವಣೆಗೆ ಕಾಂಗ್ರೆಸ್​ನಿಂದ ಅರ್ಜಿ ಆಹ್ವಾನಿಸಲಾಗಿದೆ. ಇದೇ ತಿಂಗಳು 25 ರವರೆಗೆ ಆಸಕ್ತರು ಅರ್ಜಿ ಸಲ್ಲಿಸಬಹುದು. ಆಗ ಕಾಂಗ್ರೆಸ್ ಭವನ ನಿರ್ಮಾಣಕ್ಕೆ 1 ಲಕ್ಷ ದೇಣಿಗೆ ನೀಡಬೇಕು. ಟಿಕೆಟ್ ‌ಸಿಗದವರಿಗೆ ಹಣ ಮರಳಿಸುವುದಿಲ್ಲ ಎಂದು ತಿಳಿಸಿದರು.

ಎಐಸಿಸಿಯಿಂದ ಸತ್ಯಶೋಧನೆ

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ನೀರಸ ಪ್ರದರ್ಶನಕ್ಕೆ ಕಾರಣ ತಿಳಿಯಲು ಎಐಸಿಸಿಯ ವಿಶೇಷ ತಂಡ ಬೆಳಗಾವಿಗೆ ಬರಲಿದೆ. ಫಲಿತಾಂಶ ಹಿನ್ನಡೆಯ ಬಗ್ಗೆ ಈ ತಂಡ ಸತ್ಯಶೋಧನೆ ನಡೆಸಲಿದೆ ಎಂದರು.

ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಮೊದಲ ಬಾರಿಗೆ ಚಿಹ್ನೆ ಮೇಲೆ ಸ್ಪರ್ಧಿಸಿದ್ವಿ. ಲೋಕಸಭೆ ಉಪಚುನಾವಣೆಗಿಂತ ಶೇ. 10 ಮತ ನಮಗೆ ಕಡಿಮೆ ಬಂದಿವೆ. 10 ಕಾಂಗ್ರೆಸ್ ಹಾಗೂ ಐವರು ಬೆಂಬಲಿತರು ಗೆಲುವು ದಾಖಲಿಸಿದ್ದಾರೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆ 74000, ಬಿಜೆಪಿಗೆ 85000 ಮತ ಬಂದಿದ್ದವು. ಪಾಲಿಕೆ ಚುನಾವಣೆಯಲ್ಲಿ 60000 ಮತಗಳು ನಮಗೆ ಬಂದಿವೆ.‌ ಫಲಿತಾಂಶ ಬಗ್ಗೆ ಸಮಧಾನ ಇದೆ ಎಂದು ನಾನು ಹೇಳುವುದಿಲ್ಲ. ಆದರೆ, ಈ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಒಂದೂವರೆ ಲಕ್ಷ ಮತ ಬಿದ್ದಿವೆ. ಹೀಗಿದ್ದರೂ ಬಿಜೆಪಿ ಮ್ಯಾಜಿಕ್ ನಂಬರ್ ದಾಟಿ ಸ್ಥಾನ ಗಳಿಸಿದೆ.‌

ಚುನಾವಣೆಯಲ್ಲಿ ಆದ ಸೋಲನ್ನು ನಾವು ಒಪ್ಪಿಕೊಳ್ಳುತ್ತೇವೆ.‌ ಕಾಂಗ್ರೆಸ್ ನೀರಸ ಪ್ರದರ್ಶನವನ್ನು ಎಐಸಿಸಿ ಗಂಭೀರವಾಗಿ ಪರಿಗಣಿಸಿದೆ.‌ ಪಕ್ಷದ ಹಿನ್ನಡೆಗೆ ಕಾರಣ ತಿಳಿಯಲು ಶೀಘ್ರವೇ ಎಐಸಿಸಿಯ ವಿಶೇಷ ತಂಡ ಬೆಳಗಾವಿಗೆ ಭೇಟಿ ನೀಡಲಿದೆ. ನಂತರ ಈ ತಂಡ ಹುಬ್ಬಳ್ಳಿ-ಧಾರವಾಡ, ಕಲ್ಬುರ್ಗಿಗೂ ಭೇಟಿ ನೀಡಲಿದೆ. ಮುಂದಿನ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ 58 ವಾರ್ಡ್​ಗಳಲ್ಲಿ ಸ್ಪರ್ಧಿಸಲಿದೆ ಎಂದು ತಿಳಿಸಿದರು.

ಇದನ್ನೂ ಓದಿ: ನಾವು ಸಮಾಜದಿಂದ ಪಡೆದಿರುವುದನ್ನು ಮರಳಿ ಕೊಡಬೇಕು: ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.