ETV Bharat / state

Belagavi crime : ಬೆಳಗಾವಿಯ ಅನಗೋಳ ಕೆರೆ ಬಳಿ ವ್ಯಕ್ತಿಯ ಬರ್ಬರ ಹತ್ಯೆ

author img

By

Published : Jun 15, 2023, 5:29 PM IST

ಬೆಳಗಾವಿಯ ಅನಗೋಳ ಕೆರೆಯ ಬಳಿ ದುಷ್ಕರ್ಮಿಗಳು ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆಗೈದು ಶವ ಬಿಸಾಕಿ ಹೋಗಿದ್ದಾರೆ.

ಸಂಜಯ್ ತುಕಾರಾಮ್ ಪಾಟೀಲ
ಸಂಜಯ್ ತುಕಾರಾಮ್ ಪಾಟೀಲ

ಬೆಳಗಾವಿ: ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆಗೈದ ದುಷ್ಕರ್ಮಿಗಳು ಕೆರೆ ಹತ್ತಿರ ಶವ ಬಿಸಾಕಿ ಹೋಗಿರುವ ಘಟನೆ ನಗರದ ಅನಗೋಳದಲ್ಲಿ ನಡೆದಿದೆ. ಅನಗೋಳದ ಹೊರ ವಲಯದ ಕೆರೆ ಹತ್ತಿರ ವ್ಯಕ್ತಿಯ ಶವ ಪತ್ತೆಯಾಗಿದ್ದು, ಕೃಷಿ ಕೆಲಸಕ್ಕೆ ಹೊರಟಿದ್ದ ರೈತರು ಮೃತದೇಹ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬೆಳಗಾವಿ ತಾಲೂಕಿನ ಯಳ್ಳೂರ ಗ್ರಾಮದ ಸಂಜಯ್ ತುಕಾರಾಮ್ ಪಾಟೀಲ (34) ಕೊಲೆಯಾದ ವ್ಯಕ್ತಿ.

ಟಿಳಕವಾಡಿ ಪೊಲೀಸರಿಂದ ತನಿಖೆ: ಕೆಲಸಕ್ಕೆ ಹೋಗಿ ಬರುವುದಾಗಿ ಮೊನ್ನೆ ಮನೆಯಿಂದ ಹೊರಬಂದಿದ್ದ ಸಂಜಯ್ ಪಾಟೀಲ ನಿನ್ನೆ ಮನೆಗೆ ಬರದಿರುವ ಹಿನ್ನೆಲೆ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಈಗ ಮೃತದೇಹ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಟಿಳಕವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮರಣೋತ್ತರ ‌ಪರೀಕ್ಷೆ ಬಳಿಕ ಮೃತದೇಹ ಹಸ್ತಾಂತರ: ಮೃತದೇಹ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಮರಣೋತ್ತರ ‌ಪರೀಕ್ಷೆ ಬಳಿಕ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಿದ್ದಾರೆ. ಇನ್ನು, ಯಾರು ಕೊಲೆ ಮಾಡಿದ್ದಾರೆ..? ಕೊಲೆ ಕಾರಣ ಏನು ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬರಬೇಕಿದೆ.

ಮಾರಕಾಸ್ತ್ರದಿಂದ ಕೊಚ್ಚಿ ಯುವಕನ‌‌ ಕೊಲೆ; ಪ್ರಮುಖ ಆರೋಪಿ ಬಂಧನ : ಇನ್ನೊಂದೆಡೆ ವೈಯಕ್ತಿಕ ದ್ವೇಷದ ಹಿನ್ನೆಲೆ ವ್ಯಕ್ತಿಯೊಬ್ಬನನ್ನು ಯುವಕರ ಗುಂಪೊಂದು ಮಾರಕಾಸ್ತ್ರಗಳಿಂದ‌ ಬರ್ಬರವಾಗಿ‌ ಕೊಲೆ‌ ಮಾಡಿರುವ ಘಟನೆ ಶಿವಮೊಗ್ಗದಲ್ಲಿ‌ ಜರುಗಿದೆ. ಇಲ್ಲಿನ ಇಲಿಯಾಜ್ ನಗರದ 100 ಅಡಿ ರಸ್ತೆಯಲ್ಲಿ ಕೊಲೆ ನಡೆದಿದೆ ಎಂದು ತಿಳಿದುಬಂದಿದೆ. ಆಸೀಫ್(25) ಮೃತ ವ್ಯಕ್ತಿ. ಈತನನ್ನು ಜಬಿವುಲ್ಲಾ (25) ಹಾಗೂ ಇತರ ಮೂವರು ಯುವಕರು ಸೇರಿ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ.

ವೈಯಕ್ತಿಕ ದ್ವೇಷದ ಹಿನ್ನೆಲೆ ಕೊಲೆ: ಮೃತ ಆಸಿಫ್ ಇಲಿಯಾಜ್‌ ನಗರದ 100 ಅಡಿ ರಸ್ತೆಯಲ್ಲಿ ಬೈಕ್​ನಲ್ಲಿ ಬಂದು ನಿಂತಿದ್ದ. ಇದೇ ವೇಳೆ ಹಿಂಬದಿಯಿಂದ ಬಂದ ನಾಲ್ವರು ಯುವಕರ ಗುಂಪು, ಮಾರಾಕಾಸ್ತ್ರಗಳಿಂದ ದಾಳಿ ಮಾಡಿದೆ. ದಾಳಿ ವೇಳೆ ಆಸೀಫ್ ತಲೆಗೆ ಬಲವಾದ ಹೊಡೆತ ಬಿದ್ದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕೊಲೆಯನ್ನು ಕಂಡು ಸ್ಥಳೀಯರು ಗಾಬರಿಯಿಂದ ಅತ್ತಿಂದಿತ್ತ ಓಡಾಡಿದ್ದಾರೆ. ವೈಯಕ್ತಿಕ ದ್ವೇಷದ ಹಿನ್ನೆಲೆ ಈ ಕೊಲೆ ನಡೆದಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ದೊಡ್ಡಪೇಟೆ ಪೊಲೀಸರು ಭೇಟಿ‌ ನೀಡಿ ಪರಿಶೀಲಿಸಿದ್ದಾರೆ. ಮೃತ ಆಸೀಫ್ ಹಾಗೂ ಜಬೀವುಲ್ಲಾ ಇಬ್ಬರು ಆಟೋ ಚಾಲಕರೆಂದು ತಿಳಿದು ಬಂದಿದೆ.

ಬುಧವಾರ ರಾತ್ರಿ ನಡೆದಿರುವ ಯುವಕನ ಭೀಕರ ಹತ್ಯೆಯ ಪ್ರಮುಖ ಆರೋಪಿ ಜಬೀವುಲ್ಲಾನನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಎಸ್​ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ. ಈ ಬಗ್ಗೆ ಇಂದು ಡಿಎಆರ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ರಾತ್ರಿ (ಬುಧವಾರ) ಇಲಿಯಾಜ್ ನಗರದ 100 ಅಡಿ ರಸ್ತೆಯಲ್ಲಿ ಬೈಕ್​ನಲ್ಲಿ ಬರುತ್ತಿದ್ದ ಆಸೀಫ್ ಎಂಬಾತನನ್ನು ಜಬೀವುಲ್ಲಾ ಹಾಗೂ ಇತರೆ ಮೂವರು ಸೇರಿ ಮಾರಕಾಸ್ತ್ರಗಳಿಂದ ಅವನ ತಲೆಗೆ ಹೊಡೆದು ಕೊಲೆ ಮಾಡಿದ್ದರು.

ಸದ್ಯಕ್ಕೆ ಓರ್ವನ ಬಂಧನ : ಈಗಾಗಲೇ ಪ್ರಮುಖ ಆರೋಪಿ ಜಬೀವುಲ್ಲಾನನ್ನು ಬಂಧಿಸಲಾಗಿದೆ. ಕೊಲೆಗೆ ಹಳೆಯ ದ್ವೇಷವೇ ಕಾರಣ ಎಂಬುವುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಆಸೀಫ್ ಹಾಗೂ ಜಬೀವುಲ್ಲಾ ಈ ಇಬ್ಬರ ನಡುವೆ ಕಳೆದ ಕೆಲ ತಿಂಗಳಿನಿಂದ ದ್ವೇಷವಿತ್ತು. ಈ ಕುರಿತು ಸಮುದಾಯದ ಮುಖಂಡರುಗಳು ಇಬ್ಬರ ಸಮ್ಮುಖದಲ್ಲಿ ಮಾತುಕತೆ ನಡೆಸಿದ್ದರು. ಆದರೂ ಸಹ ಸಮಸ್ಯೆ ಬಗೆಹರಿದಿರಲಿಲ್ಲ. ಸದ್ಯಕ್ಕೆ ಓರ್ವನನ್ನು ಮಾತ್ರ ಬಂಧಿಸಲಾಗಿದೆ. ಇತರೆ ಮೂವರನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಮಾರಾಕಾಸ್ತ್ರದಿಂದ ಕೊಚ್ಚಿ ಯುವಕನ‌‌ ಕೊಲೆ: ಪ್ರಮುಖ ಆರೋಪಿ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.