ETV Bharat / state

ಮುಂದುವರಿದ ವರುಣನ ಆರ್ಭಟ: ಧರೆಗುರುಳಿದ ಮನೆಗಳು, ಜನಜೀವನ ಅಸ್ತವ್ಯಸ್ತ..! ಹೀಗಿದೆ ಜಲಾಶಯಗಳ ನೀರಿನ ಮಟ್ಟ!

author img

By

Published : Jul 24, 2023, 4:59 PM IST

ಬೆಳಗಾವಿ ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದೆ. ಮಳೆಯ ಅಬ್ಬರಕ್ಕೆ ಮನೆಗಳು ಧರೆಗುರುಳಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

Continued rain in Belgaum district
ಮುಂದುವರಿದ ವರುಣನ ಆರ್ಭಟ: ಧರೆಗುರುಳಿದ ಮನೆಗಳು, ಜನಜೀವನ ಅಸ್ತವ್ಯಸ್ತ..!

ಬೆಳಗಾವಿ: ಜಿಲ್ಲೆಯಲ್ಲಿ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ವರುಣನ ಆರ್ಭಟಕ್ಕೆ ಕೆಲ ಮನೆಗಳಿಗೆ ನೀರು ನುಗ್ಗಿದರೆ, ಮತ್ತೊಂದಿಷ್ಟು ಮನೆಗಳು ಧರೆಗುರುಳಿವೆ. ಮಳೆಯ ಅಬ್ಬರಕ್ಕೆ ಜನ ಜೀವನ ಅಸ್ತವ್ಯಸ್ತವಾಗಿದೆ.

ಕಳೆದ ಹತ್ತು ದಿನಗಳಿಂದ ಬೆಳಗಾವಿ ನಗರ ಮತ್ತು ಜಿಲ್ಲಾದ್ಯಂತ ಬಿಟ್ಟು ಬಿಡದೇ ಮಳೆಯಾಗುತ್ತಿದೆ. ಅಲ್ಲದೇ ಪಶ್ಚಿಮ ಘಟ್ಟ ಪ್ರದೇಶದಲ್ಲೂ ಧಾರಾಕಾರ ಮಳೆ ಆಗುತ್ತಿರುವ ಹಿನ್ನೆಲೆ ಜಿಲ್ಲೆಯ ಕೃಷ್ಣಾ, ಮಲಪ್ರಭಾ, ಘಟಪ್ರಭಾ, ಹಿರಣ್ಯಕೇಶಿ, ಮಹದಾಯಿ ನದಿಗಳು, ಹಳ್ಳಗಳು ತುಂಬಿ ಹರಿಯುತ್ತಿವೆ. ಪರಿಣಾಮ ನದಿ ಪಾತ್ರ ಹಾಗೂ ತಗ್ಗು ಪ್ರದೇಶದ ಮನೆಗಳಿಗೆ ನೀರು‌ ನುಗ್ಗಿದ್ದರಿಂದ ಜನರು ತೀವ್ರ ಪರದಾಡುವಂತಾಗಿದೆ.

ನಿರಂತರ ಮಳೆಯಿಂದ ಖಾನಾಪುರ ತಾಲೂಕಿನ ಭೂರುಣಕಿ ಗ್ರಾಮದ ಗೋಪಾಲ ತಾರೋಡ್ಕರ ಮತ್ತು ಗೌಸ್ ಅಹ್ಮದ್ ಹೆರೇಕರ ಎಂಬುವವರಿಗೆ ಸೇರಿದ ಮನೆಗಳು ಧರೆಗೆ ಉರುಳಿವೆ. ತಾರೋಡ್ಕರ್ ಕುಟುಂಬ ರಾತ್ರಿ ಹೊತ್ತು ಮನೆಯಲ್ಲಿ ಮಲಗಿದ್ದ ಸಮಯದಲೇ ಮನೆ ಬಿದ್ದಿದೆ. ಗೋಪಾಲ್ ಅವರ ಪತ್ನಿಗೆ ಗಾಯವಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬಿದ್ದಿರುವ ಮನೆ ಗೋಡೆಗೆ ತಾಡಪತ್ರಿ‌ ಕಟ್ಟಿಕೊಂಡು ಅಲ್ಲಿಯೇ ಈ ಕುಟುಂಬ ಆಶ್ರಯ ಪಡೆದಿದೆ.

ಮನೆಯೊಳಗೆ ನುಗ್ಗಿದ ಮಳೆ ನೀರು: ಭಾರಿ ಮಳೆ ಹಿನ್ನೆಲೆ ಬೆಳಗಾವಿಯ ಬಳ್ಳಾರಿ ನಾಲಾ ಸೇರಿದಂತೆ ಹಲವು ಸೇತುವೆಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಸಂಭಾಜಿ ನಗರ, ಗಣೇಶ್ ಕಾಲೋನಿ, ಕೇಶವ ನಗರ, ಅನ್ನಪೂರ್ಣೇಶ್ವರಿ ನಗರ, ರಾಘವೇಂದ್ರ ಕಾಲೋನಿ, ಸಾಯಿ ನಗರದ ನೇಕಾರ ಕಾಲೋನಿ ಸೇರಿ‌ದಂತೆ ವಿವಿಧ ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಮನೆಯೊಳಗೆ ಮಳೆ ನೀರು ನುಗ್ಗಿದ್ದರಿಂದ ನಿವಾಸಿಗಳು ರಾತ್ರಿ ಇಡೀ ನಿದ್ದೆ ಮಾಡದೇ ಪರದಾಡಿದರು.

ನಗರದ ಹೊರ ವಲಯದಲ್ಲಿ ಬಳ್ಳಾರಿ ನಾಲಾ, ಮೂಡಲಗಿ,‌ ಗೋಕಾಕ, ಖಾನಾಪುರ, ಹುಕ್ಕೇರಿ, ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನಲ್ಲಿ ಒಟ್ಟು 21 ಸೇತುವೆಗಳು ಜಲಾವೃತಗೊಂಡಿವೆ. ಈ ಸೇತುವೆಗಳ ಮಾರ್ಗಗಳಲ್ಲಿ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಬೆಳಗಾವಿ ಜಿಲ್ಲೆಯ ಜಲಾಶಯಗಳ ನೀರಿನ ಮಟ್ಟದ ವಿವರ:

ಮಲಪ್ರಭಾ:

ಗರಿಷ್ಠ: 2079.50 ಅಡಿ
ವಾಸ್ತವ : 2054.80 ಅಡಿ
ಒಳ ಹರಿವು : 21,247 ಕ್ಯೂಸೆಕ್
ಹೊರ ಹರಿವು : 194 ಕ್ಯೂಸೆಕ್

ಘಟಪ್ರಭಾ:

ಗರಿಷ್ಠ : 2175 ಅಡಿ
ವಾಸ್ತವ: 2064 ಅಡಿ
ಒಳ ಹರಿವು: 31,815 ಕ್ಯೂಸೆಕ್
ಹೊರ ಹರಿವು : 99 ಕ್ಯೂಸೆಕ್

ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ಮುಂದುವರಿದ ಮಳೆ ಆರ್ಭಟ: ಪರೀಕ್ಷೆ ಹಿನ್ನೆಲೆ ಅಪಾಯಕಾರಿ ಸ್ಥಿತಿಯಲ್ಲೇ ಸಂಚರಿಸಿದ ಪದವಿ ವಿದ್ಯಾರ್ಥಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.