ETV Bharat / state

ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್​ಗೆ ಯಾವುದೇ ತೊಂದರೆ ಇಲ್ಲ: ಸಚಿವ ಪರಮೇಶ್ವರ್

author img

By ETV Bharat Karnataka Team

Published : Sep 23, 2023, 6:40 AM IST

ಈ ಬಾರಿಯ ಲೋಕಸಭೆಯಲ್ಲಿ ಕಾಂಗ್ರೆಸ್​ಗೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದ ಯಾವುದೇ ತೊಂದರೆ ಇಲ್ಲ ಎಂದು ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.

ಸಚಿವ ಡಾ.ಜಿ. ಪರಮೇಶ್ವರ್
ಸಚಿವ ಡಾ.ಜಿ. ಪರಮೇಶ್ವರ್

ಬಿಜೆಪಿ ಜೊತೆಗಿನ ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್​ಗೆ ಯಾವುದೇ ತೊಂದರೆ ಇಲ್ಲ

ಬೆಂಗಳೂರು: ಬಿಜೆಪಿ ಜೊತೆಗಿನ ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್​ಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ನಾವು ಈ ಬಾರಿ ಲೋಕಸಭೆ ಚುನಾವಣೆಯಲ್ಲಿ 20ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸ ಇದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ನಾವು ಕಾಂಗ್ರೆಸ್ ಶೇ.45ರಷ್ಟು ಮತ ಪ್ರಮಾಣ ಗಳಿಸಿದ್ದೆವು. ಅದನ್ನು ಲೋಕಸಭೆ ಚುನಾವಣೆಯಲ್ಲೂ ಉಳಿಸುವ ಸಾಧ್ಯತೆ ಇದೆ. ಅದರಿಂದ ನಮಗೇನು ತೊಂದರೆ ಆಗಲ್ಲ. ಅವರು ಮೈತ್ರಿ ಮಾಡಿಕೊಳ್ಳಲಿ. ನಾವು 2019ರಲ್ಲಿ ಅವರ ಜೊತೆ ಮೈತ್ರಿ ಕೊಂಡಿದ್ದೆವು. ಆಗ ಐದು ಸ್ಥಾನವನ್ನು ಜೆಡಿಎಸ್​​ಗೆ ಬಿಟ್ಟು ಕೊಟ್ಟಿದ್ದೆವು. ಆದರೆ ಅಂತಿಮವಾಗಿ ಫಲಿತಾಂಶ ಏನು ಬಂದಿದೆ ಎಂದು ಗೊತ್ತಿದೆ ಎಂದರು.

ಆ ಸಂದರ್ಭ ಮೈತ್ರಿ ಮಾಡಿಕೊಂಡಿದ್ದನ್ನು ಕಾಂಗ್ರೆಸ್ ಕಾರ್ಯಕರ್ತರು ಒಪ್ಪಿರಲಿಲ್ಲ. ಹೈ ಕಮಾಂಡ್ ತೀರ್ಮಾನ ಅಂತ ನಾವೆಲ್ಲ ಒಪ್ಪಿಕೊಂಡೆವು. ಈಗ ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತಿದೆ. ಅದರಿಂದ ನಮಗೇನು ಸಮಸ್ಯೆ ಆಗಲ್ಲ. ನೀವು ಜಾತ್ಯಾತೀತ ಜನತಾದಳ ಅಂತ ಹಾಕಿದ್ದೀರ. ಈಗ ಯಾವ ಜಾತ್ಯಾತೀತ ಅಂತ ಜನ ಕೇಳ್ತಾರೆ. ಉತ್ತರವನ್ನು ಅವರು ಕೊಡ್ತಾರೆ ಅಂತ ಅಂದುಕೊಳ್ಳುತ್ತೇನೆ ಎಂದು ಟೀಕಿಸಿದರು.

ಶಾಂತಿ ಕಾಪಾಡಬೇಕು : ಕಾವೇರಿ ನೀರಿನ ವಿವಾದ ಹಿನ್ನೆಲೆ ಮಂಡ್ಯ ಬಂದ್ ವಿಚಾರವಾಗಿ ಮಾತನಾಡಿದ ಅವರು, ಶಾಂತಿ ಕಾಪಾಡಲು ಎಲ್ಲ ತಯಾರಿ ಮಾಡಿದ್ದೇವೆ. ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಪ್ರತಿಭಟನಾಕಾರರು ಸಾರ್ವಜನಿಕ ಆಸ್ತಿಗೆ ಹಾನಿ ಬಾರದಂತೆ, ಶಾಂತಿ ಸೌಹಾರ್ದತೆ ಕಾಪಾಡಬೇಕು. ಕಾನೂನು ಕೈಗೆತ್ತಿಕೊಳ್ಳಬಾರದು. ಕಾನೂನು ಬಾಹಿರ ಚಟುವಟಿಕೆ ಮಾಡಬಾರದು ಎಂದು ಮನವಿ ಮಾಡಿದರು.

ಬಿಜೆಪಿ ಜೊತೆ ಮೈತ್ರಿ ನಿರ್ಧಾರ ಒಪ್ಪುವಂತಹದ್ದು ಅಲ್ಲ: ಮತ್ತೊಂದೆಡೆ ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರು ತಮ್ಮ ರಾಜಕೀಯ ಸಾರ್ವಜನಿಕ ಜೀವನದ ಸಂಧ್ಯಾ ಕಾಲದಲ್ಲಿ ಬಿಜೆಪಿ ಜೊತೆ ಮೈತ್ರಿ ನಿರ್ಧಾರ ಒಪ್ಪುವಂತಹದ್ದು ಅಲ್ಲ ಎಂದು ವಿಧಾನ ಪರಿಷತ್​ ಸದಸ್ಯ ಹೆಚ್.ವಿಶ್ವನಾಥ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೋಮುವಾದಿ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳುತ್ತಿರುವುದು ಸರಿಯಲ್ಲ. ನನ್ನ ಉಸಿರಾಟವೇ ಜಾತ್ಯತೀತ ಅಂತಿದ್ದ ದೇವೇಗೌಡರು ಕೋಮುವಾದಿ ಪಕ್ಷದ ಜತೆ ಮೈತ್ರಿ ಮಾಡಿದ್ದು ರಾಜಕೀಯ ದುರಂತ. ಇದೆಲ್ಲಾ ಅನುಕೂಲ ಸಿಂಧು ರಾಜಕೀಯ ಅಷ್ಟೇ. ಕಳೆದ ಬಾರಿ ಹೊಂದಾಣಿಕೆ ಮಾಡುತ್ತಿರುವುದು ದೇಶಕ್ಕಾಗಿ ಮತ್ತು ರಾಜ್ಯಕ್ಕಾಗಿ ಎಂದಿದ್ದರು. ಈಗ ಅದು ಯಾವ ದೇಶಪ್ರೇಮ ಅಂತ ಹೇಳಲಿ. ಈ ಮೈತ್ರಿಯಿಂದ ಯಾವುದೇ ಪರಿಣಾಮ ಬೀರಲ್ಲ. ಅನುಕೂಲವಾಗುವುದು ಕೇವಲ ಕಾಂಗ್ರೆಸ್​ ಪಕ್ಷಕ್ಕೆ ​ಎಂದು ತಿಳಿಸಿದರು.

ಬಿಜೆಪಿ ಜತೆ ಮೈತ್ರಿ ಶಾಶ್ವತ ಅನ್ನೋ ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಎಷ್ಟು ಜನರಿಗೆ ಹೀಗೆ ಈ ಹಿಂದೆ ಹೇಳಿದ್ರು. ಯಡಿಯೂರಪ್ಪ ಅವರಿಗೆ ಹೇಳಿದ್ರು. ಕಾಂಗ್ರೆಸ್ ಅವರಿಗೂ ಕಳೆದ ಬಾರಿ ಹೇಳಿದ್ರು‌. ಇದು ಯಾವುದೂ ಶಾಶ್ವತ ಅಲ್ಲ. ಕರ್ನಾಟಕದ ಬಿಜೆಪಿ ನಾಯಕರನ್ನು ಮೋದಿಯವರು ಕ್ಯಾರೆ ಎನ್ನುತ್ತಿಲ್ಲ. ಸಾಮಾನ್ಯ ಜನರು ಈ ನಾಯಕರಿಗೆ ಯಾವ ಮರ್ಯಾದೆ ಕೊಡ್ತಾರೆ. ಒಂದು ವಿರೋಧ ಪಕ್ಷದ ನಾಯಕರನ್ನ ನೇಮಕ ಮಾಡುತ್ತಿಲ್ಲ ಎಂದು ಕಿಡಿ ಕಾರಿದರು.

ಇದನ್ನೂ ಓದಿ : BJP-JDS alliance: ಎನ್​ಡಿಎ ಮೈತ್ರಿಕೂಟ ಸೇರಿದ ಜೆಡಿಎಸ್​ - ಹೊಸ ರಾಜಕೀಯ ಶಕೆ ಆರಂಭ ಎಂದ ಕುಮಾರಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.