ETV Bharat / state

ಬೊಮ್ಮಾಯಿ ಚೊಚ್ಚಲ ಬಜೆಟ್​ಗೆ ದಿನಗಣನೆ.. ಕುಂದಾನಗರಿ ಜನರ ನಿರೀಕ್ಷೆಗಳೇನು?

author img

By

Published : Mar 1, 2022, 11:01 PM IST

ಸಂಚಾರ ದಟ್ಟಣೆ ಕೂಡ ದಿನೇ ದಿನೆ ಹೆಚ್ಚಳವಾಗುತ್ತಿದೆ. ಹೀಗಾಗಿ, ನಗರಕ್ಕೆ ಫ್ಲೈಓವರ್ ಅವಶ್ಯಕತೆ ಇದ್ದು, ಬೊಮ್ಮಾಯಿ ಅವರು ಬೆಳಗಾವಿಗೊಂದು ಫ್ಲೈಓವರ್ ಘೋಷಣೆ ಮಾಡುವ ನಿರೀಕ್ಷೆಗಳಿವೆ. ಬಸ್ ನಿಲ್ದಾಣದಿಂದ ಉದ್ಯಮಭಾಗದವರೆಗೆ ಫ್ಲೈಓವರ್ ಆದರೆ ಸಂಚಾರ ಸಮಸ್ಯೆಯನ್ನು ಸರಿದಾರಿಗೆ ತರಬಹುದಾಗಿದೆ.

cm Bommai
ಸಿಎಂ ಬೊಮ್ಮಾಯಿ

ಬೆಳಗಾವಿ: ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಚೊಚ್ಚಲ ಬಜೆಟ್ ಮಂಡನೆಗೆ ದಿನಗಣನೆ ಆರಂಭವಾಗಿದೆ. ಈ ಹಿಂದೆ ಬಿಜೆಪಿ ಸರ್ಕಾರದ ಸಮಯದಲ್ಲಿ ಬೆಳಗಾವಿ ಉಸ್ತುವಾರಿ ಸಚಿವರೂ ಆಗಿದ್ದ ಬಸವರಾಜ ಬೊಮ್ಮಾಯಿ ಅವರಿಗೆ ಈ ಜಿಲ್ಲೆ ಬಗ್ಗೆ ವಿಶೇಷ ಕಾಳಜಿಯೂ ಇದೆ. ಹೀಗಾಗಿ, ಬಜೆಟ್ ಬಗ್ಗೆ ಗಡಿ ಜಿಲ್ಲೆಯ ಜನರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

ಹಿರಿಯ ಪತ್ರಕರ್ತ ಅಶೋಕ್ ಚಂದರಗಿ ಮಾತನಾಡಿದರು

ಕಳೆದ ಮೂರು ವರ್ಷಗಳಿಂದ ಸತತ ಪ್ರವಾಹಕ್ಕೆ ಜಿಲ್ಲೆಯ ಜನರು ರೋಸಿಹೋಗಿದ್ದು, ಬೆಳೆ ಹಾನಿ ಜೊತೆಗೆ ಹಲವು ಜನರು ಮನೆಗಳನ್ನು ಕಳೆದುಕೊಂಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಕೂಡ ಅನೇಕ ಜನರು ಉದ್ಯೋಗ ಕಳೆದುಕೊಂಡಿದ್ದರೆ, ಮತ್ತೆ ಕೆಲವರು ಉದ್ಯಮದಲ್ಲಿ ನಷ್ಟ ಅನುಭವಿಸಿ ಕಂಗಾಲಾಗಿದ್ದಾರೆ.

ಬೀದಿಬದಿ ವ್ಯಾಪಾರಿಗಳು ಹಾಗೂ ಕೂಲಿ ಕಾರ್ಮಿಕರ ಸ್ಥಿತಿಯೂ ಚಿಂತಾಜನಕವಾಗಿದೆ. ಇದೀಗ ಕೋವಿಡ್ ನಿಯಂತ್ರಣಕ್ಕೆ ಬರುತ್ತಿದ್ದು, ಎಲ್ಲ ಕ್ಷೇತ್ರಗಳಲ್ಲಿ ಆರ್ಥಿಕ ಚೇತರಿಕೆ ಕಾಣುತ್ತಿದೆ. ಸರ್ಕಾರದ ಆರ್ಥಿಕ ಸ್ಥಿತಿಯೂ ಸುಧಾರಿಸುತ್ತಿದ್ದು, ಜನತೆ ಕೂಡ ಜನಪರ ಯೋಜನೆಗಳನ್ನು ನಿರೀಕ್ಷಿಸುತ್ತಿದ್ದಾರೆ.

ಫ್ಲೈಓವರ್ ನಿರ್ಮಾಣಕ್ಕೆ ಸಿಗುತ್ತಾ ಗ್ರೀನ್ ಸಿಗ್ನಲ್.. ಉತ್ತರ ಕರ್ನಾಟಕ ಭಾಗದಲ್ಲಿ ಅತಿ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಜಿಲ್ಲೆಗಳಲ್ಲಿ ಬೆಳಗಾವಿ ಕೂಡ ಒಂದು. ಮೂರು ರಾಜ್ಯಗಳ ಸಂಪರ್ಕ ಕೊಂಡಿ ಎಂಬ ಕೀರ್ತಿಗೂ ಕುಂದಾನಗರಿ ಪಾತ್ರವಾಗಿದೆ.

ಸಂಚಾರ ದಟ್ಟಣೆ ಕೂಡ ದಿನೇ ದಿನೆ ಹೆಚ್ಚಳವಾಗುತ್ತಿದೆ. ಹೀಗಾಗಿ, ನಗರಕ್ಕೆ ಫ್ಲೈಓವರ್ ಅವಶ್ಯಕತೆ ಇದ್ದು, ಬೊಮ್ಮಾಯಿ ಅವರು ಬೆಳಗಾವಿಗೊಂದು ಫ್ಲೈಓವರ್ ಘೋಷಣೆ ಮಾಡುವ ನಿರೀಕ್ಷೆಗಳಿವೆ. ಬಸ್ ನಿಲ್ದಾಣದಿಂದ ಉದ್ಯಮಭಾಗವರೆಗೆ ಫ್ಲೈಓವರ್ ಆದರೆ ಸಂಚಾರ ಸಮಸ್ಯೆಯನ್ನು ಸರಿದಾರಿಗೆ ತರಬಹುದಾಗಿದೆ.

ಜಿಲ್ಲಾ ಭವನ ಘೋಷಣೆಯ ನಿರೀಕ್ಷೆ.. ಬೆಳಗಾವಿಗಿಂತಲೂ ಚಿಕ್ಕದಾಗಿರುವ ಗದಗ, ಹಾವೇರಿ, ದಾವಣಗೆರೆ ಜಿಲ್ಲೆಗಳು ಸುಸಜ್ಜಿತ ಜಿಲ್ಲಾಭವನ ಹೊಂದಿವೆ. ಜಿಲ್ಲಾ ಭವನ ನಿರ್ಮಾಣಕ್ಕೆ ಪ್ರಸ್ತಾವನೆ ಕಳಿಸಬೇಕಿದ್ದ ಹಿಂದಿನ ಜಿಲ್ಲಾಧಿಕಾರಿ ಎಸ್.ಬಿ ಬೊಮ್ಮನಹಳ್ಳಿ ಅವರು ಜಿಲ್ಲಾಮಟ್ಟದ ಕಚೇರಿಗಳನ್ನು ಸುವರ್ಣಸೌಧಕ್ಕೆ ಶಿಫ್ಟ್ ಮಾಡಿದ್ದರು.

ಹಿಂದಿನ ಡಿಸಿ ನಡೆ ಈ ಭಾಗದ ಜನರ ಆಕ್ರೋಶಕ್ಕೂ ಕಾರಣವಾಗಿತ್ತು. ಸೌಧಕ್ಕೆ ರಾಜ್ಯಮಟ್ಟದ ಕಚೇರಿಗಳು ಶಿಫ್ಟ್ ಮಾಡಬೇಕು ಎಂಬುದು ಈ ಭಾಗದ ಜನರ ಆಶಯವಾಗಿತ್ತು. ಆದರೆ, ಜಿಲ್ಲಾಡಳಿತ ಜಿಲ್ಲಾ ಮಟ್ಟದ ‌ಕಚೇರಿಗಳನ್ನು ಸೌಧಕ್ಕೆ ಸ್ಥಳಾಂತರ ಮಾಡುವ ಮೂಲಕ ಸುವರ್ಣಸೌಧವನ್ನು ಜಿಲ್ಲಾ ಭವನ ಮಾಡಲು ಹೊರಟಿದೆ.

ನಗರದಿಂದ ವಿಕಾಸಸೌಧ 10 ಕಿ. ಮೀ ದೂರವಿದ್ದು, ಸಾರ್ವಜನಿಕರು ನಿತ್ಯ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನಗರದಲ್ಲೇ ಎಲ್ಲರಿಗೂ ಅನುಕೂಲವಾಗುವಂತೆ ಜಿಲ್ಲಾ ಭವನ ನಿರ್ಮಾಣಕ್ಕೆ ಸರ್ಕಾರ ತನ್ನ ಬಜೆಟ್​ನಲ್ಲಿ ಆದ್ಯತೆ ‌ನೀಡಬೇಕು ಎಂಬುದು ಈ ಭಾಗದ ಜನರ ಒತ್ತಾಯವಾಗಿದೆ.

ಸಾಹಿತಿಗಳ ಹೆಸರಲ್ಲಿ ಟ್ರಸ್ಟ್.. ಭಾರತೀಯ ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕಕ್ಕೆ ಜಿಲ್ಲೆಯ ಅನೇಕ ಸಾಹಿತಿಗಳು ಕೊಡುಗೆ ನೀಡಿದ್ದಾರೆ. ಏಣಗಿ ಬಾಳಪ್ಪ, ಡಿ.ಎಸ್. ಕರ್ಕಿ, ಕುಮಾರ್ ಗಂಧರ್ವ, ಎಸ್.ಡಿ ಇಂಚಲ ಸೇರಿದಂತೆ ಹಲವು ಜನ ಜಿಲ್ಲೆಯ ಸಾಹಿತಿಗಳು ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

ಈ ಎಲ್ಲ ಮಹನೀಯರ ಹೆಸರಲ್ಲಿ ಟ್ರಸ್ಟ್ ಮಾಡಬೇಕು. ಆ ಮೂಲಕ ಬೆಳಗಾವಿಯಲ್ಲಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕವಾಗಿ ಶ್ರೀಮಂತ ಮಾಡಬೇಕು ಎಂಬ ಮನವಿಯೂ ಇದೆ. ಅಲ್ಲದೇ, ನಗರದಲ್ಲಿ ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆಯನ್ನು ಸರ್ಕಾರ ಘೋಷಣೆ ಮಾಡುವ ನಿರೀಕ್ಷೆಯನ್ನು ಈ ಭಾಗದ ಜನ ಹೊಂದಿದ್ದಾರೆ.

ಪ್ರವಾಸೋದ್ಯಮ ಅಭಿವೃದ್ಧಿಗೆ ಸಿಗಬೇಕಿದೆ ಆದ್ಯತೆ.. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಶಬರಿಕೊಳ್ಳವನ್ನು ಪ್ರವಾಸಿ ತಾಣವಾಗಿ ಪರಿವರ್ತಿಸಬೇಕು ಎಂಬ ಬೇಡಿಕೆ ಮೊದಲಿನಿಂದಲೂ ಇದೆ. ಉತ್ತರದಲ್ಲಿ ರಾಮನಿಗೆ ಅಯೋಧ್ಯೆ ಇರುವಂತೆ ಉತ್ತರದಲ್ಲಿ ಶಬರಿಕೊಳ್ಳ ಅಭಿವೃದ್ಧಿ ಆಗಬೇಕು. ಆಗ ಯಲ್ಲಮ್ಮಗುಡ್ಡ ರೇಣುಕಾದೇವಿ, ಶವರಿಕೊಳ್ಳ, ಬಾದಾಮಿ, ಐಹೊಳೆ, ಪಟ್ಟದಕಲ್ಲು, ಗೋಕಾಕ ಫಾಲ್ಸ್ ಹಾಗೂ ಗೊಡಚಿನಮಲ್ಕಿ ಪ್ರವಾಸಿ ಕಾರಿಡಾರ್ ಆಗಿ ಮಾರ್ಪಡಲು ಅನುಕೂಲ ಆಗಲಿದೆ.

ಈ ನಿಟ್ಟಿನಲ್ಲಿ ಶಬರಿಕೊಳ್ಳ ಅಭಿವೃದ್ಧಿಗೆ ಬಜೆಟ್​ನಲ್ಲಿ ಹಣ ಮೀಸಲಿಡುವ ನಿರೀಕ್ಷೆಗಳಿವೆ. ಕೈಗಾರಿಕೆ ಕ್ಷೇತ್ರದಲ್ಲಿ ಕೂಡ ಬೆಳಗಾವಿ ಅಭಿವೃದ್ಧಿ ಹೊಂದುತ್ತಿದೆ. ಇಲ್ಲಿನ ಆಟೋಮೊಬೈಲ್ ಬಿಡಿಭಾಗಗಳು ದೇಶ-ವಿದೇಶಗಳಿಗೆ ರಫ್ತಾಗುತ್ತವೆ. ಸಣ್ಣ ಕೈಗಾರಿಕೋದ್ಯಮಿಗಳಿಗೆ ಅನುಕೂಲ ಕಲ್ಪಿಸಲು ಬೃಹತ್ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಬೇಕು ಎಂಬುದು ಈ ಭಾಗದ ಜನರ ಒತ್ತಾಯವಾಗಿದೆ.

ಬಿಎಸ್‌ವೈ ಸಿಎಂ ಆಗಿದ್ದಾಗ ಜಿಲ್ಲೆಯ ಅನೇಕ ಏತ ನೀರಾವರಿ ಯೋಜನೆಗಳನ್ನು ಘೋಷಿಸಿದ್ದರು. ಆದರೆ, ಸಮರ್ಪಕ ಅನುದಾನ ಬಿಡುಗಡೆ ಆಗಲೇ ಇಲ್ಲ. ಕೋವಿಡ್ ಕಾರಣ ನೀಡಿ ಹಿಂದಿನ ಸಿಎಂ ಅನುದಾನವನ್ನು ಬೇರೆ ಕಾರ್ಯಕ್ಕೆ ಬಳಸಿಕೊಂಡರು.

ಕಳಸಾಬಂಡೂರಿ ಅನುಷ್ಠಾನಕ್ಕಾಗಿ ಬಿಎಸ್‌ವೈ 500 ಕೋಟಿ ಮೀಸಲಿಟ್ಟಿದ್ದರು. ಪರಿಸರ ಇಲಾಖೆ ಅನುಮತಿ ನೀಡದ ಹಿನ್ನಲೆ ಹಾಗೂ ಕೆಲ ತಾಂತ್ರಿಕ ಕಾರಣಕ್ಕೆ ಆ ಹಣವೂ ಬಳಕೆ ಆಗಲಿಲ್ಲ. ಆ ಅನುಮತಿ ಪಡೆಯಲು ಕೇಂದ್ರ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಆಗಬೇಕಿದೆ. ಅಂದಾಗ ಮಹಾದಾಯಿ ಯೋಜನೆ ಅನುಷ್ಠಾನ ಸಾಧ್ಯವಾಗಲಿದೆ.

ಕನ್ನಡ ಶಾಲೆಗಳ ಅಭಿವೃದ್ಧಿಗೆ ಸಿಗಬೇಕಿದೆ ಆದ್ಯತೆ.. ಗಡಿಭಾಗದಲ್ಲಿ ಮರಾಠಿ ಶಾಲೆಗಳು ಹೆಚ್ಚಿದ್ದು, ಹಲವು ಕಡೆ ಕನ್ನಡ ಪ್ರೌಢಶಾಲೆಗಳಿಲ್ಲ. ಹೀಗಾಗಿ, ಗಡಿ ಭಾಗದ ಕನ್ನಡ ವಿದ್ಯಾರ್ಥಿಗಳು ಮರಾಠಿ ಶಿಕ್ಷಣ ಪಡೆಯುವ ಅನಿವಾರ್ಯತೆ ಈ ಭಾಗದ ವಿದ್ಯಾರ್ಥಿಗಳಿಗಿದೆ.

ಗಡಿ ಭಾಗದ ಕನ್ನಡ ಶಾಲೆಗಳಿಗೆ ಮೂಲಸೌಕರ್ಯ ವೃದ್ಧಿಸುವ ಜೊತೆಗೆ ಅಗತ್ಯ ಇರುವ ಕಡೆ ಹೊಸ ಸರ್ಕಾರಿ ಕನ್ನಡ ಪ್ರೌಢಶಾಲೆಗಳ ಮಂಜೂರು ನೀಡಬೇಕಿದೆ. ಬಜೆಟ್​ನಲ್ಲಿ ಸಿಎಂ ಬೊಮ್ಮಾಯಿ ಈ ಭಾಗಕ್ಕೆ ಕನ್ನಡ ಶಾಲೆಗಳನ್ನು ತೆರೆಯಲು ಆದ್ಯತೆ ನೀಡಬೇಕಿದೆ.

ಓದಿ: ಬಸ್​ ಹೇಗ್​ ಓಡಿಸಿದರೂ ಕಷ್ಟ.. ನಿಗಮಗಳ ಚಾಲಕರಿಗೆ ಬಿಎಂಟಿಸಿ ನೋಟಿಸ್ ಅಸ್ತ್ರ..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.