ETV Bharat / state

ಅಂದು ಬೆಳಗಾವಿಯಿಂದಲೇ ಆರಂಭವಾಗಿದ್ದ ಬಿಎಸ್‍ವೈ ಪ್ರವಾಸ.. ಇಂದು ಬೆಳಗಾವಿಯಿಂದಲೇ ಕೊನೆಯಾಗುತ್ತಾ...?

author img

By

Published : Jul 24, 2021, 4:24 PM IST

2018ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷ ಬಹುಮತಗಳಿಸಿರಲಿಲ್ಲ. ಬಿಜೆಪಿ ಅತಿಹೆಚ್ಚು ಸ್ಥಾನ ಪಡೆದ ಕಾರಣ ಬಿ.ಎಸ್.ಯಡಿಯೂರಪ್ಪ ರಾಜ್ಯದ ಸಿಎಂ ಆಗಿ ಪದಗ್ರಹಣ ಮಾಡಿದ್ದರು. ಆದರೆ, ಬಹುಮತ ಸಾಬೀತುಪಡಿಸಲು ಸಾಧ್ಯವಾಗದ ಕಾರಣ ಬಿ.ಎಸ್ ಯಡಿಯೂರಪ್ಪ ರಾಜೀನಾಮೆ ನೀಡಿದ್ದರು.

ಅಂದು ಬೆಳಗಾವಿಯಿಂದಲೇ ಆರಂಭವಾಗಿದ್ದ ಬಿಎಸ್‍ವೈ ಪ್ರವಾಸ.
ಅಂದು ಬೆಳಗಾವಿಯಿಂದಲೇ ಆರಂಭವಾಗಿದ್ದ ಬಿಎಸ್‍ವೈ ಪ್ರವಾಸ.

ಬೆಳಗಾವಿ: ಕುಂಭದ್ರೋಣ ಮಳೆಯಿಂದ ನಲುಗಿರುವ ಕುಂದಾನಗರಿ ಬೆಳಗಾವಿಗೆ ನಾಳೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಗಮಿಸಲಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿರುವ ಸಿಎಂ ಬಿಎಸ್‍ವೈ ಉನ್ನತ ಮಟ್ಟದ ಅಧಿಕಾರಿಗಳ ಜೊತೆಗೆ ಬಳಿಕ ಅತಿವೃಷ್ಟಿಯಿಂದಾದ ಹಾನಿಯ ಬಗ್ಗೆ ಅವಲೋಕನ ನಡೆಸಲಿದ್ದಾರೆ.

ನಾಯಕತ್ವ ಬದಲಾವಣೆ ಕುರಿತು ರಾಜ್ಯದಲ್ಲಿ ನಡೆಯುತ್ತಿರುವ ಚರ್ಚೆಯ ಬೆನ್ನಲ್ಲೆ ದಿಢೀರ್ ಬೆಳಗಾವಿ ಪ್ರವಾಸ ಕೈಗೊಂಡಿರುವ ಸಿಎಂ ಬಿಎಸ್‍ವೈಗೆ ಇದು ಕೊನೆಯ ಪ್ರವಾಸವಾಗಲಿದೆಯೇ ಎಂಬ ಚರ್ಚೆಗಳು ಬಿಜೆಪಿ ವಲಯದಲ್ಲಿ ತೀವ್ರಗೊಂಡಿವೆ.

ದೆಹಲಿ ಪ್ರವಾಸ ಮುಗಿಸಿ ಸಿಎಂ ಯಡಿಯೂರಪ್ಪ ರಾಜ್ಯಕ್ಕೆ ಮರಳುತ್ತಿದ್ದಂತೆ ನಾಯಕತ್ವ ಬದಲಾವಣೆ ಚರ್ಚೆಗಳು ತೀವ್ರಗೊಂಡಿವೆ. ನಾಯಕತ್ವ ಬದಲಾವಣೆಯ ಬೆಳವಣಿಗೆಗಳಿಗೆ ಪೂರಕವಾಗಿಯೂ ಸಿಎಂ ಗೃಹ ಕಚೇರಿಯಲ್ಲಿ ಹಲವು ಬೆಳವಣಿಗೆಗಳು ನಡೆದು ಹೋಗಿವೆ.

ಮಠಾಧೀಶರ ಬೆಂಬಲ

ರಾಜ್ಯದ ವಿವಿಧ ಮಠಾಧೀಶರು ಸಿಎಂ ನಿವಾಸಕ್ಕೆ ಭೇಟಿ ನೀಡಿ ರಾಜೀನಾಮೆ ನೀಡದಂತೆ ಒತ್ತಾಯಿಸಿದ್ದರು. ಅಲ್ಲದೇ ಹೈಕಮಾಂಡ್ ವಿರುದ್ಧವೂ ಗುಡುಗಿದ್ದ ಮಠಾಧೀಶರು ಬಿಎಸ್‍ವೈ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ರೆ ರಾಜ್ಯದಲ್ಲಿ ಬಿಜೆಪಿ ಸರ್ವನಾಶವಾಗಲಿದೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಸಿದ್ದರು.

ನಾಯಕತ್ವ ಬದಲಾವಣೆ ಚರ್ಚೆ ಹಿನ್ನಲೆಯಲ್ಲಿ ಕಳೆದೊಂದು ವಾರದಿಂದ ಬೆಂಗಳೂರಿನಲ್ಲೇ ಠಿಕಾಣಿ ಹೂಡಿದ್ದ ಬಿ.ಎಸ್‍ವೈ ಇದೀಗ ಅತಿವೃಷ್ಟಿಯಿಂದ ಹಾನಿಗೊಳಗಾಗಿರುವ ಗಡಿ ಜಿಲ್ಲೆ ಬೆಳಗಾವಿಗೆ ಭೇಟಿ ನೀಡುತ್ತಿರುವುದು ಕುತೂಹಲ ಮೂಡಿಸಿದೆ.

ಅಂದು ಮೊದಲ ಪ್ರವಾಸ : 2018ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷ ಬಹುಮತಗಳಿಸಿರಲಿಲ್ಲ. ಬಿಜೆಪಿ ಅತಿಹೆಚ್ಚು ಸ್ಥಾನ ಪಡೆದ ಕಾರಣ ಬಿ.ಎಸ್.ಯಡಿಯೂರಪ್ಪ ರಾಜ್ಯದ ಸಿಎಂ ಆಗಿ ಪದಗ್ರಹಣ ಮಾಡಿದ್ದರು. ಆದರೆ, ಬಹುಮತ ಸಾಬೀತುಪಡಿಸಲು ಸಾಧ್ಯವಾಗದ ಕಾರಣ ಬಿಎಸ್​​ವೈ ರಾಜೀನಾಮೆ ನೀಡಿದ್ದರು.

ನಂತರ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದು ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಆದರೆ, 14 ತಿಂಗಳ ಬಳಿಕ ಮೈತ್ರಿ ಸರ್ಕಾರ ಪತನವಾದಾಗ ಬಿಜೆಪಿ ಮರಳಿ ಅಧಿಕಾರಕ್ಕೆ ಬಂದಿತ್ತು. ಬಿ.ಎಸ್. ಯಡಿಯೂರಪ್ಪ ನಾಲ್ಕನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿ ಕೆಲವೇ ದಿನಗಳ ಬಳಿಕ ಉತ್ತರ ಕರ್ನಾಟಕದಲ್ಲಿ ಪ್ರಚಂಡ ಪ್ರವಾಹವೇ ಬಂದಿತ್ತು.

ಸಂಪುಟ ಸಹೋದ್ಯೋಗಿಗಳಿಲ್ಲದೇ ಅಂದು ಬೆಳಗಾವಿಗೆ ಮೊದಲ ಪ್ರವಾಸ ಕೈಗೊಂಡಿದ್ದ ಸಿಎಂ ಬಿ.ಎಸ್. ಯಡಿಯೂರಪ್ಪ ಪ್ರವಾಹಪೀಡಿತ ಪ್ರದೇಶಗಳಲ್ಲಿ ಸುತ್ತಾಡಿದ್ದರು. ಪ್ರವಾಹದ ಸವಾಲನ್ನು ಅಂದು ಸಿಎಂ ಬಿಎಸ್‍ವೈ ಏಕಾಂಗಿಯಾಗಿ ನಿರ್ವಹಿಸಿದ್ದರು. ನಾಲ್ಕನೇ ಬಾರಿಗೆ ಸಿಎಂ ಆದ ಬಳಿಕ ಬಿಎಸ್‍ವೈ ಅವರದ್ದು, ಬೆಳಗಾವಿ ಪ್ರವಾಸ ಮೊದಲನೆದ್ದು ಎಂಬುದು ವಿಶೇಷ.

ಇದಾಗುತ್ತಾ ಬಿಎಸ್‍ವೈ ಕೊನೆಯ ಪ್ರವಾಸ..? : ನಾಯಕತ್ವ ಬದಲಾವಣೆ, ಸಂಪುಟ ಪುನಾರಚಣೆ ಹೀಗೆ ಹಲವು ರಾಜಕೀಯ ಜಂಜಾಟಗಳಲ್ಲೇ ಸಿಎಂ ಬಿಎಸ್‍ವೈ ಬೆಂಗಳೂರಿನಲ್ಲಿ ಬ್ಯೂಸಿ ಆಗಿದ್ದರು. ಇದೀಗ ನಾಳೆ ವಿಶೇಷ ವಿಮಾನದಲ್ಲಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಅವರು ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.

ಮಲಪ್ರಭಾ, ಘಟಪ್ರಭಾ ಹಾಗೂ ಬಳ್ಳಾರಿ ನಾಲಾದಿಂದ ಹಾನಿಯಾದ ಪ್ರದೇಶಗಳಲ್ಲಿ ಸಿಎಂ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ನಂತರ ಬೆಳಗಾವಿಯಲ್ಲೇ ಸಿಎಂ ಬಿಎಸ್‍ವೈ ಉನ್ನತ ಮಟ್ಟದ ಸಭೆ ನಡೆಸಿ ಪ್ರವಾಹದಿಂದ ಆಗುವ ಹಾನಿಯ ಮಾಹಿತಿ ಪಡೆಯಲಿದ್ದಾರೆ. ಅಲ್ಲದೇ ಅತಿವೃಷ್ಟಿಯಿಂದಾದ ಹಾನಿಗೆ ಪರಿಹಾರ ಘೋಷಿಸುವ ಸಾಧ್ಯತೆ ಇದೆ.

ಮುಖ್ಯಮಂತ್ರಿ ಬಿಎಸ್‍ವೈ ಅವರೇ ಜುಲೈ 25ರ ನಂತರ ನಾಯಕತ್ವ ಬದಲಾವಣೆ ವಿಚಾರವಾಗಿ ಹೈಕಮಾಂಡ್ ನೀಡುವ ಸೂಚನೆಗೆ ಬದ್ಧನಾಗಿರುತ್ತೇನೆ ಎಂದು ಹೇಳಿದ್ದಾರೆ. ನಾಲ್ಕನೇ ಬಾರಿಗೆ ಮುಖ್ಯಮಂತ್ರಿ ಆಗಿ ಬೆಳಗಾವಿಯಿಂದ ಆರಂಭವಾಗಿದ್ದ ಬಿಎಸ್‍ವೈ ಪ್ರವಾಸ ಬೆಳಗಾವಿಗೆ ಕೊನೆಯಾಗಲಿದೆಯೇ ಎಂಬ ಕುತೂಹಲದ ಪ್ರಶ್ನೆಗಳು ಎದ್ದಿವೆ. ಜುಲೈ 25ರ ನಂತರವೇ ಇದಕ್ಕೆ ಉತ್ತರ ದೊರೆಯಲಿದೆ.

ಇದನ್ನೂ ಓದಿ : ನಿರ್ಗಮನಕ್ಕೂ ಮುನ್ನ ಬಿಎಸ್​ವೈ ನಗರ ಸಂಚಾರ.. ನಾಳೆ ಸಿಎಂ ಬೆಂಗಳೂರು ಸಿಟಿ ರೌಂಡ್ಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.