ETV Bharat / state

ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ ಪೌರ ಕಾರ್ಮಿಕರ ಕೊರತೆ ಇಲ್ಲ: ಸಚಿವ ಬೈರತಿ ಸುರೇಶ್

author img

By ETV Bharat Karnataka Team

Published : Dec 8, 2023, 3:31 PM IST

Updated : Dec 8, 2023, 4:09 PM IST

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ 1,470 ಪೌರ ಕಾರ್ಮಿಕರ ಹುದ್ದೆಗಳಿವೆ. ಸದ್ಯ 134 ಪೌರ ಕಾರ್ಮಿಕರ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು, ವಿಶೇಷ ನೇರ ನೇಮಕಾತಿ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ಸಚಿವ ಬೈರತಿ ಸುರೇಶ್ ಮಾಹಿತಿ ನೀಡಿದರು.

Minister Bairati Suresh BS informed.
ವಿಧಾನಸಭೆ ಸದನದಲ್ಲಿ ಸಚಿವ ಬೈರತಿ ಸುರೇಶ್ ಬಿ ಎಸ್ ಮಾಹಿತಿ ನೀಡಿದರು.

'ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ ಪೌರ ಕಾರ್ಮಿಕರ ಕೊರತೆ ಇಲ್ಲ'

ಬೆಳಗಾವಿ/ಬೆಂಗಳೂರು: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಪೌರ ಕಾರ್ಮಿಕರ ಕೊರತೆಯಿಲ್ಲ. ನೇರ ಪಾವತಿಯಡಿ 958, ಹೊರಗುತ್ತಿಗೆ ಅಡಿ 774 ಹಾಗೂ 388 ಕಾಯಂ ಪೌರ ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ವಿಧಾನಸಭೆಗೆ ತಿಳಿಸಿದರು.

ಇಂದಿನ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಅಬ್ಬಯ್ಯ ಪ್ರಸಾದ್ ಪ್ರಶ್ನೆಗೆ ಉತ್ತರಿಸಿದ ಅವರು, ಕರ್ನಾಟಕ ಮಹಾನಗರ ಪಾಲಿಕೆ ವೃಂದ ಮತ್ತು ನೇಮಕಾತಿ ನಿಯಮ 2011ರ ಪ್ರಕಾರ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ 1,470 ಪೌರ ಕಾರ್ಮಿಕರ ಹುದ್ದೆಗಳಿವೆ. ಸದ್ಯ 700 ಜನಸಂಖ್ಯೆಗೆ ಒಬ್ಬ ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಒಟ್ಟು 134 ಪೌರ ಕಾರ್ಮಿಕರ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು, ಪೌರಕಾರ್ಮಿಕರ ವಿಶೇಷ ನೇರ ನೇಮಕಾತಿ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ಸ್ಪಷ್ಟಪಡಿಸಿದರು.

ಪೌರ ಕಾರ್ಮಿಕರ ಕಾಯಂಗೆ ಮನವಿ: ಹುಬ್ಬಳ್ಳಿ-ಧಾರವಾಡ 11.60 ಲಕ್ಷ ಜನಸಂಖ್ಯೆ ಹೊಂದಿದೆ. ಸುಮಾರು 2800 ಕಿ.ಮೀ ಉದ್ದದ ರಸ್ತೆಗಳಿವೆ. ಪ್ರತಿನಿತ್ಯ 3 ಟನ್ ತ್ಯಾಜ್ಯ ಸಂಗ್ರಹವಾಗುತ್ತದೆ. ಈ ಕಾರ್ಯಗಳಿಗೆ ಹೆಚ್ಚಿನ ಸಂಖ್ಯೆಯ ಪೌರ ಕಾರ್ಮಿಕರ ಅಗತ್ಯವಿದೆ.

ಐಪಿಡಿ ಸಾಲಪ್ಪನವರ ವರದಿ ಪ್ರಕಾರ, 500 ಜನಸಂಖ್ಯೆ ಒಬ್ಬ ಪೌರ ಕಾರ್ಮಿಕರನ್ನು ಸರ್ಕಾರ ನೇಮಿಸಬೇಕು. ಸದ್ಯ ನೇರಪಾವತಿ ಹಾಗೂ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಪೌರ ಕಾರ್ಮಿಕರನ್ನು ಕಾಯಂಗೊಳಿಸಬೇಕು ಎಂದು ಶಾಸಕ ಅಬ್ಬಯ್ಯ ಪ್ರಸಾದ್ ಸಚಿವರಲ್ಲಿ ಮನವಿ ಮಾಡಿದರು.

19 ಎಕರೆಯಲ್ಲಿ ಘನತ್ಯಾಜ್ಯ ಸಂಗ್ರಹ: ಶಾಸಕರ ಕೋರಿಕೆ ಬಗ್ಗೆ ಪರಿಶೀಲನೆ ಮಾಡುತ್ತೇನೆ. ಹುಬ್ಬಳ್ಳಿ ನಗರದಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯವನ್ನು ಕಾರವಾರ ರಸ್ತೆಯ ಕೆಂಪಕೆರೆಯಲ್ಲಿ ಕಳೆದ 40ರಿಂದ 50 ವರ್ಷಗಳ ಕಾಲ ಸಂಗ್ರಹ ಮಾಡಲಾಗಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿಯನ್ವಯ ಈ ತಾಜ್ಯವು 3.6 ಲಕ್ಷ ಟನ್‌ಗೂ ಅಧಿಕವಾಗಿದೆ. ಇದನ್ನು ವಿಲೇವಾರಿ ಮಾಡಿ 19 ಎಕರೆ ಪ್ರದೇಶವನ್ನು ಮುಕ್ತಗೊಳಿಸಲು ಟೆಂಡರ್ ಕರೆಯಲಾಗಿದೆ ಎಂದು ಹೇಳಿದರು.

ಸ್ವಚ್ಛ ಭಾರತ ಮಿಷನ್ ಯೋಜನೆ ಅನುಷ್ಠಾನಕ್ಕೆ ರೂ 2912 ಕೋಟಿ ಅನುದಾನ: ಸ್ವಚ್ಛ ಭಾರತ ಮಿಷನ್-1.0 ಯೋಜನೆಗೆ ರೂ.854 ಕೋಟಿ ಹಾಗೂ ಸ್ವಚ್ಛ ಭಾರತ ಮಿಷನ್-2.0 ಯೋಜನೆಗೆ ರೂ.2058 ಕೋಟಿ ಸೇರಿ ಒಟ್ಟು ರೂ.2912 ಕೋಟಿ ಅನುದಾನವನ್ನು ಯೋಜನೆ ಅನುಷ್ಠಾನಕ್ಕೆ ಮೀಸಲು ಇರಿಸಲಾಗಿದೆ ಎಂದು ಶಾಸಕರ ಪ್ರಶ್ನೆಗೆ ಸಚಿವ ಬೈರತಿ ಸುರೇಶ್ ಉತ್ತರ ನೀಡಿದರು.

ರಾಜ್ಯ ಎಲ್ಲಾ ಸ್ಥಳೀಯ ನಗರಾಭಿವೃದ್ಧಿ ಸಂಸ್ಥೆಗಳಲ್ಲಿ ಸ್ವಚ್ಛಭಾರತ್ ಮಿಷನ್ ಅನುಷ್ಠಾನ ಮಾಡಲು ಪ್ರತ್ಯೇಕ ಐಎಎಸ್ ಅಧಿಕಾರಿ ನೇಮಿಸಲಾಗಿದೆ. ಎಲ್ಲಾ ಮಹಾನಗರ ಪಾಲಿಕೆಗಳಲ್ಲಿ ಘನತ್ಯಾಜ್ಯ ವಸ್ತುಗಳ ಸಂಗ್ರಹಣೆ, ಸಾಗಣೆ, ಸಂಸ್ಕರಣೆ ಮತ್ತು ವಿಲೇವಾರಿಗೆ ಅಗತ್ಯ ಇರುವ ಯಂತ್ರೊಪಕರಣಗಳನ್ನು ಮತ್ತು ಸಿವಿಲ್ ಕಾಮಗಾರಿಗೆ ಕೈಗೊಳ್ಳಲು ವಿಸ್ತೃತ ಯೋಜನೆಗೆ ಅನುಮತಿ ನೀಡಿದ್ದು, ರೂ.370 ಕೊಟಿ ಬಿಡುಗಡೆ ಮಾಡಲಾಗಿದೆ.

ಹುಬ್ಬಳ್ಳಿ ಧಾರವಾಡದಲ್ಲಿ 450 ಟಿ.ಪಿ.ಡಿ ಹಾಗೂ ತುಮಕೂರು ನಗರದಲ್ಲಿ 140 ಟಿ.ಪಿ.ಡಿ ಸಾಮಾರ್ಥ್ಯದ ತ್ಯಾಜ್ಯ ಸಂಸ್ಕರಣೆ ಸೌಲಭ್ಯ ಕಲ್ಪಿಸಲಾಗಿದೆ. ಈಗಾಗಲೇ ಬಹಳ ವರ್ಷಗಳಿಂದ ಶೇಖರಣೆಯಾಗಿರುವ ಹಳೆಯ ಪಾರಂಪರಿಕ ತ್ಯಾಜ್ಯವನ್ನು ತೆರವುಗೊಳಿಸಲು ಬಯೋ ಮೈನಿಂಗ್ ಹಾಗೂ ಬಯೋ ರೆಮಡೇಷನ್ ಮಾಡಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.

ಶಾಸಕ ಜ್ಯೋತಿ ಗಣೇಶ್ ಜೆ.ಬಿ ಹಾಗೂ ಇತರೆ ಶಾಸಕರು ಬಯೋ ಮೈನಿಂಗ್ ಹಾಗೂ ಬಯೋ ರೆಮಡೇಷನ್ ಕೈಗೊಳ್ಳಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಪ್ರತಿ ಟನ್‌ಗೆ ನೀಡಿರುವ ದರವನ್ನು ರಾಜ್ಯದ ಇತರೆಡೆ ನೀಡಬೇಕು ಎಂದು ಸಚಿವರಲ್ಲಿ ಕೋರಿದರು. ಇದಕ್ಕೆ ಸಕಾರಾತ್ಮವಾಗಿ ಸ್ಪಂದಿಸಿದ ಸಚಿವರು, ದರ ಪರಿಷ್ಕರಣೆ ಮಾಡುವುದಾಗಿ ತಿಳಿಸಿದರು.

ಇದನ್ನೂಓದಿ: ಸಮನ್ವಯತೆ ಕೊರತೆಯಿಂದ ನಿನ್ನೆ ಸದನದಲ್ಲಿ ಗೊಂದಲ ಆಗಿದೆ: ಆರ್.ಅಶೋಕ್ ಸ್ಪಷ್ಟನೆ

Last Updated : Dec 8, 2023, 4:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.