ETV Bharat / state

ಗ್ಯಾರಂಟಿ ಯೋಜನೆಗಳ ಉಳಿತಾಯದ ಹಣದಿಂದ ನಿಮ್ಮ ಮಕ್ಕಳ ಭವಿಷ್ಯ ರೂಪಿಸಿ: ಸಚಿವ ಸತೀಶ ಜಾರಕಿಹೊಳಿ

author img

By

Published : Aug 5, 2023, 4:25 PM IST

Guarantee schemes: ''ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಉಳಿತಾಯದ ಹಣದಿಂದ ನಿಮ್ಮ ಮಕ್ಕಳ ಭವಿಷ್ಯ ರೂಪಿಸಬೇಕು'' ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸಲಹೆ ನೀಡಿದರು.

guarantee schemes
ಗ್ಯಾರಂಟಿ ಯೋಜನೆಗಳ ಉಳಿತಾಯದ ಹಣದಿಂದ ನಿಮ್ಮ ಮಕ್ಕಳ ಭವಿಷ್ಯ ರೂಪಿಸಿ: ಸಚಿವ ಸತೀಶ ಜಾರಕಿಹೊಳಿ

ಬೆಳಗಾವಿ: ''ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಂದ ಪ್ರತಿ ಕುಟುಂಬಕ್ಕೆ 4ರಿಂದ 5 ಸಾವಿರ ರೂ. ಹಣ ಉಳಿತಾಯವಾಗುತ್ತದೆ. ಆ ಹಣವನ್ನು ನಿಮ್ಮ ಮಕ್ಕಳ ಶಿಕ್ಷಣ ಮತ್ತು ಭವಿಷ್ಯ ರೂಪಿಸಲು ಬಳಸಿಕೊಳ್ಳಬೇಕು'' ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಕರೆ ನೀಡಿದರು.

ನಗರದಲ್ಲಿ ಗೃಹ ಜ್ಯೋತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ''ಸರ್ಕಾರದ ಮಹತ್ವದ ಯೋಜನೆಯಾದ ಗೃಹ ಜ್ಯೋತಿಗೆ ಚಾಲನೆ ದೊರೆತಿದೆ. ಚುನಾವಣೆ ಪೂರ್ವದಲ್ಲಿ ಗೃಹ ಜ್ಯೋತಿ ಬಗ್ಗೆ ಭರವಸೆ ನೀಡಲಾಗಿತ್ತು. ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಭರವಸೆ ಈಡೇರಿಸಲಾಗಿದೆ. ಐದು ಗ್ಯಾರಂಟಿಗಳನ್ನು ನಾವು ಘೋಷಣೆ ಮಾಡಿದ್ದೇವು. ಬಹಳ ಜನಕ್ಕೆ ಆತಂಕ ಇತ್ತು. ಇಷ್ಟು ಹಣ ಎಲ್ಲಿಂದ ಹೊಂದಾಣಿಕೆ ಆಗುತ್ತೆ ಅಂತ ಚರ್ಚೆ ಮಾಡುತ್ತಿದ್ದರು. ಆದರೆ, ಸಿಎಂ ಸಿದ್ದರಾಮಯ್ಯ ಆರ್ಥಿಕ ಇಲಾಖೆ ಹೊಣೆ ಹೊತ್ತು ಗ್ಯಾರಂಟಿ ಯೋಜನೆಗಳನ್ನು ಈಡೇರಿಸಿದ್ದಾರೆ. ಬಡವರಿಗೆ ಯೋಜನೆ ಮುಟ್ಟಬಾರದು ಎಂದು ಅನೇಕರ ಅಭಿಪ್ರಾಯ ಆಗಿತ್ತು'' ಎಂದರು.

''200 ಯೂನಿಟ್ ಎಂದು ಮೊದಲು ಘೋಷಣೆ ಮಾಡಲಾಗಿತ್ತು. ಸರಾಸರಿ ಲೆಕ್ಕಾಚಾರ ಹಾಕಿ ಶೇಕಡಾ 10ರಷ್ಟು ಹೆಚ್ಚಳ ಮಾಡಲಾಗಿದೆ. ಜಿಲ್ಲೆಯಲ್ಲಿ 8 ಲಕ್ಷ ಫಲಾನುಭವಿಗಳು ನೋಂದಣಿ ಕಾರ್ಯವಾಗಿದ್ದು, ನೋಂದಣಿ ಮಾಡಿಕೊಂಡ ಗ್ರಾಹಕರಿಗೆ ಶೂನ್ಯ ಬಿಲ್ ನೀಡಲು ಜಿಲ್ಲೆಯಲ್ಲಿ ವರ್ಷಕ್ಕೆ 516 ಕೋಟಿ ರೂಪಾಯಿ ಹಣವನ್ನು ಹೆಸ್ಕಾಂಗೆ ಸರ್ಕಾರ ನೀಡಿದೆ'' ಎಂದು ಸತೀಶ ಜಾರಕಿಹೊಳಿ ಹೇಳಿದರು.

''ಪ್ರತಿ ಕುಟುಂಬಕ್ಕೆ ಗ್ಯಾರಂಟಿ ಯೋಜನೆಗಳಿಂದ 4 ರಿಂದ 5 ಸಾವಿರ ಉಳಿತಾಯವಾಗುತ್ತಿದೆ. ಆ ಹಣ ಮಕ್ಕಳ ಭವಿಷ್ಯ, ಕುಟುಂಬದ ನಿರ್ವಹಣೆಗೆ ಉಪಯೋಗ ಆಗಬೇಕು. ಖಾಸಗಿ ಶಾಲೆಯಲ್ಲಿ ಶುಲ್ಕ ತುಂಬಲು ಹಣ ಬಳಕೆ ಮಾಡಿಕೊಳ್ಳಬೇಕು. ಅದನ್ನು ಬಿಟ್ಟು ಕರ್ಪೂರ, ಬಾಳೆಕಾಯಿಗೆ ಹಣ ಉಪಯೋಗ ಮಾಡಬೇಡಿ. ಯಾಕೆಂದರೆ ಜಗತ್ತಿನಲ್ಲಿ ಕಳವು ಆಗದೇ ಇರೋ ವಸ್ತು ಅಂದ್ರೆ ಅದು ಶಿಕ್ಷಣ. ಜಗತ್ತಿನಲ್ಲಿ ಎಲ್ಲಿ ಬೇಕಾದ್ರು ಕುಳಿತು ಏನು ಬೇಕಾದ್ರೂ ಹ್ಯಾಕ್ ಮಾಡಬಹುದು. ಆದ್ರೆ ಶಿಕ್ಷಣವನ್ನು ಯಾರಿಂದಲೂ ಕಳ್ಳತನ ಮಾಡಲು ಸಾಧ್ಯವಿಲ್ಲ. ಬಸವಣ್ಣನವರ ಸಮಾನತೆ, ಅಂಬೇಡ್ಕರ್ ಸಂವಿಧಾನ ಗೌರವಿಸುವ ಶಿಕ್ಷಣ ನೀಡಿದರು.

ದೇಶದ ಹತ್ತು ರಾಜ್ಯಗಳ ಬಜೆಟ್​ಗಳಷ್ಟು ಮೊತ್ತವನ್ನು ಗ್ಯಾರಂಟಿಗೆ ಬಳಸಿದೆ. ಉಳಿದ ಹಣವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಬೇಕು. ಕೋಟಾ ಮೀರಿದರೆ, ನೀವು ಚಾರ್ಜ್ ತುಂಬಬೇಕಾಗುತ್ತದೆ‌. ಹಾಗಾಗಿ ಇತಿಮಿತಿಯಲ್ಲಿ ಬಳಕೆ ಮಾಡಿ, ಸರ್ಕಾರದ ದುಡ್ಡು ಎಂದರೆ ನಿಮ್ಮದೇ. ಹಾಗಾಗಿ ಸರಿಯಾಗಿ ವಿದ್ಯುತ್ ಬಳಸುವಂತೆ ಸತೀಶ ಜಾರಕಿಹೊಳಿ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಕೆಲ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಗೃಹ ಜ್ಯೋತಿ ಯೋಜನೆಯ ಮಾದರಿ ಬಿಲ್ ವಿತರಣೆ ಮಾಡಲಾಯಿತು. ಶಾಸಕರಾದ ಆಸೀಫ್ ಸೇಠ್, ಬಾಬಾಸಾಹೇಬ ಪಾಟೀಲ, ವಿಶ್ವಾಸ ವೈದ್ಯ, ಎಂಎಲ್​ಸಿ ಚನ್ನರಾಜ ಹಟ್ಟಿಹೊಳಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿಪಂ ಸಿಇಓ ಹರ್ಷಲ್ ಭೊಯರ್, ಪೃಥ್ವಿ ಕತ್ತಿ ಸೇರಿದಂತೆ ಇತರರು ಇದ್ದರು.

ಇದನ್ನೂ ಓದಿ: ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿ ಅಲೋಕ್ ಮೋಹನ್ ಮುಂದುವರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.