ಬೆಳಗಾವಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಡಿಸೆಂಬರ್ 13ರಂದು ಬೆಳಗಾವಿಯ ಯಡಿಯೂರಪ್ಪ ಮಾರ್ಗದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ್ ತಿಳಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, "ರಾಜ್ಯ ಸರ್ಕಾರಕ್ಕೆ ಬಾರುಕೋಲಿನ ಚಡಿ ಏಟು ನೀಡಲು ಸಮಾವೇಶ ನಡೆಸುತ್ತಿದ್ದೇವೆ. ಈ ವೇಳೆ ವಿಪಕ್ಷ ನಾಯಕ ಆರ್ ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಹಾಗೂ ಸಂಸದರು, ಶಾಸಕರು, ಮಾಜಿ ಶಾಸಕರು ಸೇರಿದಂತೆ 25 ಸಾವಿರ ಬಿಜೆಪಿ ಕಾರ್ಯಕರ್ತರು ಆಗಮಿಸಲಿದ್ದಾರೆ" ಎಂದು ಮಾಹಿತಿ ನೀಡಿದರು.
"ಬರ ನಿರ್ವಹಣೆಯಲ್ಲಿ ಈ ಸರ್ಕಾರ ಸಂಪೂರ್ಣ ವಿಫಲವಾಗಿದೆ. 125 ವರ್ಷಗಳ ಬಳಿಕ ಇಷ್ಟೊಂದು ದೊಡ್ಡ ಬರಗಾಲ ಎದುರಾಗಿಲ್ಲ ಎಂದು ಸರ್ಕಾರವೇ ಹೇಳಿದೆ. ಆದರೆ ಇಲ್ಲಿಯವರೆಗೂ 125 ಪೈಸೆಯ ಪರಿಹಾರ ಕೂಡ ಬಿಡುಗಡೆ ಮಾಡಿಲ್ಲ. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೂ ಪರಿಹಾರ ಕೊಟ್ಟಿಲ್ಲ. ಈ ರೀತಿಯ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ 10 ಸಾವಿರ ಕೋಟಿ ರೂಪಾಯಿ ಘೋಷಣೆ ಮಾಡಿರುವುದು ಸರಿಯಲ್ಲ. ರೈತರಿಗೆ ವಿದ್ಯುತ್ ಅಭಾವ ಇದೆ. ಅದನ್ನು ಸಮರ್ಪಕವಾಗಿ ಕೊಡುತ್ತಿಲ್ಲ. ಬರಗಾಲದಲ್ಲಿ ಸರ್ಕಾರ ರೈತರ ಮೇಲೆಯೇ ಬರೆ ಹಾಕಿದೆ" ಎಂದು ವಾಗ್ದಾಳಿ ನಡೆಸಿದರು.
"ಉತ್ತರ ಕರ್ನಾಟಕದ ನೀರಾವರಿ ಯೋಜನೆಗೆ ನಯಾಪೈಸೆ ಬಿಡುಗಡೆ ಮಾಡಿಲ್ಲ. ಇಲ್ಲಿಯವರೆಗೂ ಒಂದು ಕಿ.ಮೀ ರಸ್ತೆ ನಿರ್ಮಿಸಲು ಸಾಧ್ಯವಾಗಲಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಬಳಸಿರುವ ಎಸ್ಟಿಪಿ, ಟಿಎಸ್ಪಿಯ 11 ಸಾವಿರ ಕೋಟಿ ರೂಪಾಯಿ ಅನುದಾನ ಮರಳಿ ಎಸ್ಸಿ, ಎಸ್ಟಿ ಸಮುದಾಯಗಳ ಅಭಿವೃದ್ಧಿಗೆ ಮರಳಿಸಬೇಕು" ಎಂದು ರವಿಕುಮಾರ ಸರ್ಕಾರಕ್ಕೆ ಆಗ್ರಹಿಸಿದರು.
ಮಾಧ್ಯಮಗೋಷ್ಟಿಯಲ್ಲಿ ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಅನಿಲ್ ಬೆನಕೆ, ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ್ ಪಾಟೀಲ್, ರಾಜ್ಯ ಬಿಜೆಪಿ ವಕ್ತಾರ ಎಂ ಬಿ ಜೀರಲಿ, ಮುಖಂಡ ರವಿ ಪಾಟೀಲ್ ಸೇರಿ ಮತ್ತಿತರರು ಇದ್ದರು.
ಆರ್. ಅಶೋಕ್ ನೇತೃತ್ವದಲ್ಲಿ ಶಾಸಕರ ಸಭೆ: ಪ್ರತಿಪಕ್ಷ ನಾಯಕ ಆರ್ ಅಶೋಕ್ ಕಲಾಪ ಚರ್ಚಾ ವಿಚಾರಗಳ ಬಗ್ಗೆ ಬಿಜೆಪಿ ಶಾಸಕರ ಜೊತೆ ಸಭೆ ನಡೆಸಿ, ಯತೀಂದ್ರ ಫೋನ್ ಕರೆ, ಜಮೀರ್ ಹೇಳಿಕೆ, ಡಿಕೆಶಿ ಕೇಸ್ ವಾಪಸ್ ಬಗ್ಗೆ ವಿಷಯ ಪ್ರಸ್ತಾಪಿಸಲು ತೀರ್ಮಾನಿಸಲಾಗಿದೆ.
ಸುವರ್ಣಸೌಧದ ಮೊಗಸಾಲೆಯ ವಿಪಕ್ಷ ನಾಯಕ ಕಚೇರಿಯಲ್ಲಿ ಸಭೆ ನಡೆಸಿ ಬಿಜೆಪಿ ಶಾಸಕರು ಸಮಾಲೋಚನೆ ಮಾಡಿದರು. ಬಿ.ವೈ.ವಿಜಯೇಂದ್ರ, ಆರಗ ಜ್ಞಾನೇಂದ್ರ, ಶಶಿಕಲಾ ಜೊಲ್ಲೆ, ಕೋಟಾ ಶ್ರೀನಿವಾಸ್ ಪೂಜಾರಿ, ಎನ್ ರವಿಕುಮಾರ್, ಅಶ್ವತ್ಥನಾರಾಯಣ್, ಸುರೇಶ್ ಕುಮಾರ್, ಸಿ ಸಿ ಪಾಟೀಲ್, ಗೋಪಾಲಯ್ಯ ಸಭೆಯಲ್ಲಿ ಭಾಗಿಯಾಗಿ ಚರ್ಚೆ ನಡೆಸಿದರು.
ವಿಧಾನಸಭೆ ಕಲಾಪದಲ್ಲಿ ಯಾವ ಯಾವ ವಿಚಾರಗಳ ಬಗ್ಗೆ ಚರ್ಚೆ ನಡೆಸಬೇಕು ಎಂಬ ಬಗ್ಗೆ ಸಮಾಲೋಚಿಸಿದರು. ಕಳೆದ ವಾರ ಸಮನ್ವಯತೆ ಕೊರತೆಯಿಂದಾಗಿ ವಿಧಾನಸಭೆಯಲ್ಲಿ ಗೊಂದಲ ಉಂಟಾಗಿತ್ತು. ಈ ಹಿನ್ನೆಲೆ ಸಮನ್ವಯತೆ ಸಾಧಿಸಿ ಮತ್ತೆ ಗೊಂದಲ ಏರ್ಪಡದಂತೆ ಚರ್ಚೆ ನಡೆಸಿದರು.
ವಿಧಾನಸಭೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ತಮ್ಮ ತಂದೆ ಜೊತೆಗಿನ ದೂರವಾಣಿ ಕರೆ ಸಂಬಂಧ ಸದನದಲ್ಲಿ ವಿಷಯ ಪ್ರಸ್ತಾಪಿಸಲು ಬಿಜೆಪಿ ತೀರ್ಮಾನಿಸಿದೆ. ಅದರ ಜೊತೆಗೆ ಡಿಕೆಶಿ ವಿರುದ್ಧದ ಸಿಬಿಐ ತನಿಖೆ ಅನುಮತಿ ವಾಪಸಾತಿ ಬಗ್ಗೆಯೂ ವಿಷಯ ಪ್ರಸ್ತಾಪಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಚಿವ ಜಮೀರ್ ಅಹಮದ್ ಖಾನ್ರ ಸ್ಪೀಕರ್ ಹೇಳಿಕೆಯನ್ನೂ ಪ್ರಸ್ತಾಪಿಸಲು ನಿರ್ಧರಿಸಿದೆ. ಭ್ರೂಣ ಹತ್ಯೆ ಸಂಬಂಧವೂ ಸದನದಲ್ಲಿ ಚರ್ಚೆ ನಡೆಸಲು ಬಿಜೆಪಿ ತೀರ್ಮಾನಿಸಿದೆ. ಈ ಸಂಬಂಧ ಸಮನ್ವಯತೆ ಸಾಧಿಸಿ, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ತೀರ್ಮಾನಿಸಿದೆ. ಈ ವಿಚಾರಗಳ ಬಗ್ಗೆ ಬಲವಾಗಿ ಸರ್ಕಾರದ ವಿರುದ್ಧ ಮುಗಿಬೀಳಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: ಇಂದಿನಿಂದ ಬಸವನಗುಡಿ ಕಡಲೆಕಾಯಿ ಪರಿಷೆ; ಸಾವಿರಕ್ಕೂ ಹೆಚ್ಚು ಮಳಿಗೆ, ಪ್ಲಾಸ್ಟಿಕ್ ಮುಕ್ತ ಪರಿಷೆ