ETV Bharat / state

ಗೂಳಿಹಟ್ಟಿಗೆ ಆರ್​ಎಸ್ಎಸ್ ಕಚೇರಿ ಪ್ರವೇಶ ನಿರಾಕರಣೆ: ಬಿಜೆಪಿ ನಾಯಕರು ಹೇಳಿದ್ದೇನು?

author img

By ETV Bharat Karnataka Team

Published : Dec 6, 2023, 6:53 PM IST

ಗೂಳಿಹಟ್ಟಿ ಶೇಖರ್ ಆಡಿಯೋ ವೈರಲ್ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

ಬೆಳಗಾವಿ: ಗೂಳಿಹಟ್ಟಿ ಶೇಖರ್ ಆಡಿಯೋ ವೈರಲ್ ವಿಚಾರ ನನಗೆ ಗೊತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದರು. ಸುವರ್ಣಸೌಧದಲ್ಲಿ ಇಂದು ಮಾತನಾಡಿದ ಅವರು, ತಿಳಿದುಕೊಂಡು ಮಾತಾಡ್ತೀನಿ ಎಂದರು. ಈ ಮೂಲಕ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್​ಗೆ ಆರ್‌ಎಸ್‌ಎಸ್‌ ವಸ್ತು ಸಂಗ್ರಹಾಲಯದಲ್ಲಿ ಪ್ರವೇಶ ನಿರಾಕರಣೆ ವಿಚಾರವಾಗಿ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.

ಸತ್ಯಕ್ಕೆ ದೂರವಾದ ಆರೋಪ : ಇದೇ ವೇಳೆ ಮಾತನಾಡಿದ ಬಿಜೆಪಿ ಪರಿಷತ್ ಸದಸ್ಯ ಎನ್.ರವಿಕುಮಾರ್, ಆರ್​ಎಸ್​ಎಸ್ ನಾಯಕರು ಆ ರೀತಿ ಹೇಳಲು ಸಾಧ್ಯವಿಲ್ಲ. ಇದು ಸತ್ಯಕ್ಕೆ ದೂರವಾದ ಮಾತು. ನಾನೇ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಎರಡು ಬಾರಿ ನೇಮಕಗೊಂಡಿದ್ದೇನೆ ಎಂದು ಸಮಜಾಯಿಷಿ ನೀಡಿದರು.

ಆರ್​ಎಸ್​ಎಸ್ ಕಚೇರಿಯಲ್ಲಿ ಎಲ್ಲರಿಗೂ ಅವಕಾಶ ಇದೆ. ಬಿಜೆಪಿ ಅಂಬೇಡ್ಕರ್​ಗೆ ಸೂಕ್ತ ಗೌರವ ನೀಡಿದೆ. ಆದರೆ ಕಾಂಗ್ರೆಸ್ ಅಂಬೇಡ್ಕರ್​ಗೆ ಅಗೌರವ ತೋರಿಸುತ್ತಾ ಬಂತು. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಜಾರಿಗಾಗಿ ಎಸ್​ಸಿ ಪಿಟಿಎಸ್​ಪಿಯಿಂದ 11,500 ಕೋಟಿ ರೂ. ಹಣ ಬಳಕೆ ಮಾಡಿದೆ ಎಂದು ಆರೋಪಿಸಿದರು.

ಆಡಿಯೋ ವೈರಲ್ ವಿಚಾರ: "ದಲಿತ ಎನ್ನುವ ಕಾರಣಕ್ಕೆ ನಾಗ್ಪುರದಲ್ಲಿರುವ ಕೆ.ಬಿ.ಹೆಡ್ಗೇವಾರ್​ ವಸ್ತು ಸಂಗ್ರಹಾಲಯಕ್ಕೆ ಪ್ರವೇಶ ನಿರಾಕರಿಸಲಾಗಿದೆ. ಇದಕ್ಕೆ ಕಾರಣ ಏನು ಎಂದು ಸ್ಪಷ್ಟಪಡಿಸುವಂತೆ" ಮಾಜಿ ಶಾಸಕರೊಬ್ಬರು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್​ ಅವರಿಗೆ ಆಡಿಯೋವೊಂದರ ಮೂಲಕ ಕಾರಣ ಕೇಳಿದ್ದಾರೆ. ಗೂಳಿಹಟ್ಟಿ ಶೇಖರ್​ ಅವರದ್ದು ಎನ್ನಲಾದ ಈ ಆಡಿಯೋ ಸದ್ದು ಮಾಡುತ್ತಿದೆ.

ಈ ಬಗ್ಗೆ ಸುವರ್ಣಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಪ್ರಿಯಾಂಕ್​ ಖರ್ಗೆ, "ಆರ್​ಎಸ್​ಎಸ್ ಸರಸಂಘಚಾಲಕರಾಗಿ ದಲಿತರನ್ನು ನೇಮಕ ಮಾಡಲಿ" ಎಂದು ಸವಾಲು ಹಾಕಿದ್ದಾರೆ. "ಗೂಳಿಹಟ್ಟಿ ಶೇಖರ್ ಅವರು ಬಿ.ಎಲ್ ಸಂತೋಷ್​ ಅವರಿಗೆ ಸ್ಪಷ್ಟವಾದ ಪ್ರಶ್ನೆಯನ್ನು ಕೇಳಿದ್ದಾರೆ. ಅದಕ್ಕೆ ಬಿಜೆಪಿ ನಾಯಕರು ಉತ್ತರ ಕೊಡಲಿ. ಆರ್​ಎಸ್​ಎಸ್​ ಸಂಸ್ಥಾಪಕ ಕೆ.ಬಿ.ಹೆಡ್ಗೇವಾರ್ ಮ್ಯೂಸಿಯಂಗೆ ಹೋದಾಗ ದಲಿತ ಎಂಬ ಕಾರಣಕ್ಕೆ ಪ್ರವೇಶ ಕೊಟ್ಟಿಲ್ಲ ಎಂದು ಗೂಳಿಹಟ್ಟಿ ಶೇಖರ್​ ಆಡಿಯೋದಲ್ಲಿ ಹೇಳಿದ್ದಾರೆ. ಅಲ್ಲದೇ ಈ ನಿಯಮ ಬಿಜೆಪಿಯ ದಲಿತ ನಾಯಕರಿಗೂ ಅನ್ವಯ ಆಗುತ್ತಾ? ಎಂದು ಕೇಳಿದ್ದಾರೆ. ಹಿಂದುತ್ವದಲ್ಲಿ ಆರ್​ಎಸ್​ಎಸ್ ತತ್ವದಲ್ಲಿ ದಲಿತರಿಗೆ, ಹಿಂದುಳಿದವರಿಗೆ ಹಾಗೂ ಅಲ್ಪಸಂಖ್ಯಾತರಿಗೆ, ಬಡವರಿಗೆ ಜಾಗ ಇಲ್ಲ ಎಂದು ಇದರಿಂದ ಸ್ಪಷ್ಟವಾಗುತ್ತದೆ" ಎಂದು ಖರ್ಗೆ ಟೀಕಿಸಿದ್ದಾರೆ.

ಇದನ್ನೂ ಓದಿ: ಮ್ಯೂಸಿಯಂ ಪ್ರವೇಶ ನಿರಾಕರಣೆ ಕುರಿತು ಗೂಳಿಹಟ್ಟಿ ಹೇಳಿಕೆ: ಆರ್​ಎಸ್​ಎಸ್​ಗೆ​ ಸಚಿವ ಖರ್ಗೆ ಸವಾಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.