ETV Bharat / state

ಜೀವನ ನಿರ್ವಹಣೆಗೆ ಅಗರಬತ್ತಿ ಉದ್ಯಮ ಆರಂಭ : ಇಂದು ಒಂದು ಕಂಪನಿಯ ಒಡೆಯ

author img

By

Published : Feb 2, 2021, 1:58 PM IST

Updated : Feb 2, 2021, 8:41 PM IST

ಆರ್ಥಿಕ ತೊಂದರೆ, ಹಣದ ಸಮಸ್ಯೆ ಇದ್ದಾಗ ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆಯಡಿಯಲ್ಲಿ (ಪಿಎಂಇಜಿಪಿ) ಸ್ವಉದ್ಯೋಗಕ್ಕೆ ಅರ್ಜಿ ಸಲ್ಲಿಸುತ್ತಾರೆ. ಪಿಎಂಇಜಿಪಿ ಯೋಜನೆಯಿಂದ 7 ಲಕ್ಷ ಲೋನ್ ಪಡೆದುಕೊಂಡು ನಾಲ್ಕೈದು ಅಗರಭತ್ತಿ ಯಂತ್ರಗಳನ್ನು ತೆಗೆದುಕೊಂಡು ಸ್ವಂತ ಉದ್ಯಮವನ್ನೇ ಆರಂಭಿಸಿದ್ದಾರೆ.

Belgavi businessman who has had success in Agarbatti industry
ಅಗರಬತ್ತಿ ಉದ್ಯಮದಲ್ಲಿ ಯಶಸ್ಸು ಕಂಡ ಕುಂದಾನಗರಿಯ ಯುವ ಉದ್ಯಮಿ

ಬೆಳಗಾವಿ: ತಾನು ಮಾಡುವ ಕೆಲಸದಲ್ಲಿ ದೇವರನ್ನು ಕಾಣುವ, ಕಾಯಕವೇ ಕೈಲಾಸ ಎಂದು ದುಡಿಮೆಯಲ್ಲಿ ಪಳಗಿಸಿಕೊಂಡವ ಇಂದಲ್ಲ ನಾಳೆ ಉತ್ತಮ ಸ್ಥಾನಕ್ಕೆ ಬಂದೇ ಬರುತ್ತಾನೆ ಎಂಬುವುದಕ್ಕೆ ಕುಂದಾನಗರಿಯ ಅಗರಬತ್ತಿ ಉದ್ಯಮಿಯೊಬ್ಬ ಸಾಕ್ಷಿಯಾಗಿದ್ದಾನೆ.

ಕಪಿಲೇಶ್ವರ ನಗರದ ನಿವಾಸಿಯಾಗಿರುವ ಪ್ರಸಾದ್,​ ಪತ್ನಿಯ ಸಹಕಾರದಿಂದ ಅಗರಬತ್ತಿ ಉದ್ಯಮದಲ್ಲಿ ಸೈ ಎನಿಸಿಕೊಂಡಿದ್ದಾರೆ. ಈ ಮೊದಲು ಪ್ರಸಾದ್​ ತಮ್ಮ ಕುಟುಂಬದ ಜೀವನ ನಿರ್ವಹಣೆಗೆ ಮಿನಿ ಬಸ್​ವೊಂದನ್ನು ಇಟ್ಟುಕೊಂಡು ಟ್ರಾವೆಲ್ಸ್ ನಡೆಸುತ್ತಿದ್ದರು. ಆದ್ರೆ, ವಾಹನ ಚಾಲಕನ ಯಡವಟ್ಟಿನಿಂದ ವಾಹನ ಅಪಘಾತಕ್ಕೀಡಾಗಿ ಸಾಕಷ್ಟು ಅನುಭವಿಸಿದರು. ಇತ್ತ ಜೀವನ ನಿರ್ವಹಣೆಗೆ ಏನಾದರೂ ಮಾಡಬೇಕೆಂದು ನಿರ್ಧಸಿದ್ದ ಪ್ರಸಾದ್​ ಗೃಹ ಕೈಗಾರಿಕೆಯಲ್ಲಿ ಬರುವ ಅಗರಬತ್ತಿ ತಯಾರಿಸಲು ಮುಂದಾಗುತ್ತಾರೆ. ಮೊದಲಿಗೆ ಕೈ ಸಾಲ ಮಾಡಿ 1 ಲಕ್ಷ ರೂ.ಬಂಡವಾಳ ಹೂಡಿ ಮನೆಯಲ್ಲಿಯೇ 1 ಅಗರಬತ್ತಿ ತಯಾರಿಸುವ ಯಂತ್ರ ತೆಗೆದುಕೊಳ್ಳುತ್ತಾರೆ.

ಆ ಮಷಿನ್‍ನಿಂದ ಅಲ್ಪಸ್ವಲ್ಪ ಲಾಭ ಬಂದರೂ ಇಡೀ ಕುಟುಂಬ ನಿರ್ವಹಣೆಗೆ ಕಷ್ಟವಾಗುತ್ತಿತ್ತು. ಆರ್ಥಿಕ ತೊಂದರೆ, ಹಣದ ಸಮಸ್ಯೆ ಇದ್ದಾಗ ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆಯಡಿಯಲ್ಲಿ (ಪಿಎಂಇಜಿಪಿ) ಸ್ವಉದ್ಯೋಗಕ್ಕೆ ಅರ್ಜಿ ಸಲ್ಲಿಸುತ್ತಾರೆ. ಪಿಎಂಇಜಿಪಿ ಯೋಜನೆಯಿಂದ 7 ಲಕ್ಷ ಲೋನ್ ಪಡೆದುಕೊಂಡು ನಾಲ್ಕೈದು ಅಗರಬತ್ತಿ ಯಂತ್ರಗಳನ್ನು ತೆಗೆದುಕೊಂಡು ಸ್ವಂತ ಉದ್ಯಮವನ್ನೇ ಆರಂಭಿಸಿದ್ದಾರೆ. ‌ಕೇವಲ ಮೂರೇ ವರ್ಷದಲ್ಲಿ ಹತ್ತಕ್ಕೂ ಹೆಚ್ಚು ಯಂತ್ರಗಳನ್ನು ತಮ್ಮ ಫ್ಯಾಕ್ಟರಿಯಲ್ಲಿಟ್ಟುಕೊಂಡು ಅಗರಬತ್ತಿ ತಯಾರಿಸುವ ಮೂಲಕ ಹಲವಾರು ಜನರಿಗೆ ಉದ್ಯೋಗ ನೀಡಿದ್ದಾರೆ. ಇದರ ಜೊತೆಗೆ ಪ್ರತಿ ತಿಂಗಳು ಲಕ್ಷಾಂತರ ರೂ.ಸಂಪಾದಿಸುತ್ತಾರೆ.

ಅಗರಬತ್ತಿ ಯಂತ್ರಗಳ ಸರ್ವಿಸ್, ಮಾರಾಟ ಕೂಡ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಅಗರಬತ್ತಿ ತಯಾರಿಸುವ ಜನರಿಗೆ ಬೇಕಾದ ಕಚ್ಚಾ ಸಾಮಗ್ರಿಗಳನ್ನು ಕೂಡ ಇವರೇ ನೀಡುತ್ತಿದ್ದು, ಉದ್ಯಮ ಆರಂಭಿಸಬೇಕು ಎನ್ನುವ ಸಾಕಷ್ಟು ಯುವಕರಿಗೆ ತಮ್ಮ ಸ್ವಂತ ಫ್ಯಾಕ್ಟರಿಯಲ್ಲಿ ಉಚಿತವಾಗಿ ತರಬೇತಿ ನೀಡಿ ಪ್ರೋತ್ಸಾಹ ನೀಡುತ್ತಿದ್ದಾರೆ. ಉದ್ಯಮ ಆರಂಭಿಸಬೇಕೆನ್ನುವ ಯುವ ಉದ್ಯಮಿಗಳಿಗೆ ಅಗರಬತ್ತಿ ತಯಾರಿಕಾ ಯಂತ್ರಗಳನ್ನು ಕೂಡ ಮಾರುತ್ತಿದ್ದಾರೆ. ಪ್ರಸಾದ್ ಹೇಳುವಂತೆ, ಶ್ರದ್ಧೆ, ಶ್ರಮ ಹಾಕಿ ಕೆಲಸ ಮಾಡಿದರೆ ಉದ್ಯಮದಲ್ಲಿ ಯಾವುದೇ ನಷ್ಟ ಸಂಭವಿಸಲ್ಲ. ಲಾಭ ಗಳಿಸಿಬಹುದು ಎನ್ನುತ್ತಾರೆ.

ಅಗರಬತ್ತಿ ಉದ್ಯಮದಲ್ಲಿ ಯಶಸ್ಸು ಕಂಡ ಕುಂದಾನಗರಿಯ ಯುವ ಉದ್ಯಮಿ

ಮನೆಯಲ್ಲಿರುವ ಮಹಿಳೆಯರಿಗೂ ಅನುಕೂಲ: ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ನೂರು, ಇನ್ನೂರು ರೂಪಾಯಿಗಾಗಿ ಇಡೀ ದಿನ ಸುಡಿಬಿಸಿಲಿನಲ್ಲೇ ಕೆಲಸ ಮಾಡಬೇಕಾಗುತ್ತದೆ. ಆದ್ರೆ, ಮಹಿಳೆಯರು ಕೂಡ ಸ್ವಲ್ಪ ಬಂಡವಾಳ ಹಾಕಿ ಗೃಹ ಉದ್ಯಮವಾಗಿರುವ ಅಗರಬತ್ತಿ ಉದ್ಯಮಕ್ಕೆ ಮುಂದಾಗಬೇಕು. ಮಹಿಳೆಯರು ತಮ್ಮ ಮನೆಗೆಲಸ ಮಾಡುವುದರೊಂದಿಗೆ ಹೆಚ್ಚುವರಿ ಹಣ ಸಂಪಾದನೆ ಮಾಡಬಹುದು. ಇನ್ನೊಬ್ಬರ ಕೈ ಕೆಳಗೆ ಕೆಲಸ ಮಾಡುವ ಬದಲು ಮಹಿಳೆಯರೇ ಮತ್ತೊಬ್ಬರಿಗೆ ಕೆಲಸ ಕೊಡುವಂತಹ ವಾತಾವರಣ ನಿರ್ಮಿಸಿಕೊಳ್ಳಬಹುದು ಎನ್ನುತ್ತಾರೆ ಉದ್ಯಮಿ ಪ್ರಸಾದ್.

ಓದಿ : ಆದಾಯ ಮೀರಿದ ಆಸ್ತಿ ಸಂಪಾದನೆ: 7 ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ಎಸಿಬಿ ದಾಳಿ

Last Updated :Feb 2, 2021, 8:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.