ಚಳಿಗಾಲದ ಅಧಿವೇಶನಕ್ಕೆ ಬೆಳಗಾವಿ ಸುವರ್ಣ ವಿಧಾನಸೌಧ ಸಂಪೂರ್ಣ ಸಜ್ಜು

author img

By

Published : Dec 12, 2021, 5:12 PM IST

ಚಳಿಗಾಲದ ಅಧಿವೇಶನಕ್ಕೆ ಬೆಳಗಾವಿ ಸುವರ್ಣ ವಿಧಾನಸೌಧ ಸಜ್ಜು ()

ಒಮಿಕ್ರಾನ್‌ ಆತಂಕದ ನಡುವೆಯೂ ಕುಂದಾನಗರಿ ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ. ನಾಳೆಯಿಂದ 10 ದಿನಗಳ ಕಾಲ ಸುವರ್ಣಸೌಧದಲ್ಲಿ ಅಧಿವೇಶನ ನಡೆಯಲಿದೆ..

ಬೆಳಗಾವಿ : ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದೆ. ಅಧಿವೇಶನವನ್ನು ಸುಗಮವಾಗಿ ನಡೆಸುವ ಸಲುವಾಗಿ ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಸರ್ಕಾರದ ವಿವಿಧ ಹಂತದ ಅಧಿಕಾರಿಗಳು ಆಗಮಿಸಿ ನಾಳೆಯಿಂದ ಆರಂಭವಾಗುವ ಅಧಿವೇಶನದ ಸಿದ್ಧತೆಯ ಪರಿಶೀಲನೆ ನಡೆಸಿದ್ದಾರೆ.

ಹೊರಟ್ಟಿ,ಕಾಗೇರಿ ಪರಿಶೀಲನೆ : ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ವಿಶೇಷ ಸಭೆ ನಡೆಸಿ ನಾಳೆ ಆರಂಭವಾಗುವ ವಿಧಾನಮಂಡಲ ಉಭಯ ಸದನಗಳ ಚಳಿಗಾಲದ ಅಧಿವೇಶನಕ್ಕೆ ಕೈಗೊಂಡಿರುವ ಕ್ರಮಗಳ ಕುರಿತಂತೆ ಮಾಹಿತಿ ಪಡೆದಿದ್ದಾರೆ. ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಸಹ ಸುವರ್ಣ ವಿಧಾನಸೌಧಕ್ಕೆ ಆಗಮಿಸಿ ಪರಿಶೀಲಿಸಲಿದ್ದಾರೆ.

ಬಿಗಿ ಪೊಲೀಸ್ ಭದ್ರತೆ : ಬೆಂಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಪೊಲೀಸ್ ಭದ್ರತೆಗೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳು ಹಾಗೂ ಮಲೆನಾಡು ಮತ್ತು ಬಯಲುಸೀಮೆ ಜಿಲ್ಲೆಗಳಿಂದಲೂ ಹೆಚ್ಚುವರಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗುತ್ತಿದೆ. ನಾಳೆ ಬೆಳಗ್ಗೆ 11 ಗಂಟೆಗೆ ಉಭಯ ಸದನಗಳ ಕಲಾಪ ಆರಂಭವಾಗಲಿದೆ. ಮೊದಲ ದಿನ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸುವ ಕಾರ್ಯ ನಡೆಯಲಿದೆ.

ಹೋರಾಟಕ್ಕೆ ಕಾಂಗ್ರೆಸ್ ಸಿದ್ಧತೆ : ವಿವಿಧ ಹಂತಗಳಲ್ಲಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಕಾಂಗ್ರೆಸ್ ಸಿದ್ಧತೆ ನಡೆಸಿಕೊಂಡಿದೆ. ಹೋರಾಟವನ್ನು ನಾಳೆಯಿಂದ ಕೈಗೊಳ್ಳಬೇಕಾ, ಇಲ್ಲ ಮಂಗಳವಾರದಿಂದ ನಡೆಸಬೇಕಾ ಎಂಬ ಕುರಿತು ಇಂದು ಸಂಜೆ ಬೆಳಗಾವಿಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಸಭೆ ಸೇರಿ ಚರ್ಚಿಸುವ ನಿರೀಕ್ಷೆ ಇದೆ.

ಸಿಬ್ಬಂದಿಗೆ ಮಾರ್ಗದರ್ಶನ : ಇಂದು ಸುವರ್ಣವಿಧಾನಸೌಧದಲ್ಲಿ ಪೊಲೀಸ್ ಭದ್ರತೆ, ಊಟೋಪಚಾರದ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯಗಳ ಪರಿಶೀಲನೆ, ಸ್ವಚ್ಛತಾ ಕಾರ್ಯ, ಕೊನೆಯ ಕ್ಷಣದ ರಿಪೇರಿ ಕೆಲಸಗಳು ನಡೆದಿವೆ. ಯಾವ್ಯಾವ ಸ್ಥಳಗಳಲ್ಲಿ ಪೊಲೀಸರು ಯಾವ ರೀತಿ ಕಾರ್ಯ ನಿರ್ವಹಿಸಬೇಕು ಎಂಬ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗೆ ಮಾರ್ಗದರ್ಶನ ನೀಡಿದ್ದಾರೆ.

ನಾಳೆಯಿಂದ ಯಾವ ರೀತಿ ಕಾರ್ಯನಿರ್ವಹಣೆ ಮಾಡಬೇಕು. ಭದ್ರತೆ ವಿಚಾರದಲ್ಲಿ ಯಾವುದೇ ಲೋಪ ಆಗದಂತೆ ನಡೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಬೆಳಗಾವಿ ಜಿಲ್ಲಾ ಇನ್​​​ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ​ಎಂ.ಸತೀಶ್ ಕುಮಾರ್ ನೇತೃತ್ವದಲ್ಲಿ ಸುವರ್ಣ ವಿಧಾನಸೌಧ ಆವರಣದಲ್ಲಿ ಮಹತ್ವದ ಸಭೆ ನಡೆದಿದೆ.

ಇದನ್ನೂ ಓದಿ: Omicron: ಆಂಧ್ರ, ಚಂಢಿಗಡದಲ್ಲಿ ಒಮಿಕ್ರಾನ್ ಮೊದಲ ಪ್ರಕರಣ ಪತ್ತೆ.. ಕರ್ನಾಟಕ, ಮಹಾರಾಷ್ಟ್ರದಲ್ಲಿ ಮತ್ತೆ ಕೇಸ್​ ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.