ಬೆಳಗಾವಿ: ಲಾರಿಯೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 30 ಲಕ್ಷ ರೂಪಾಯಿ ಮೌಲ್ಯದ ಮದ್ಯವನ್ನು ಬೆಳಗಾವಿ ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಗೋವಾದಿಂದ ನಿಪ್ಪಾಣಿ ಬಳಿಯ ರಾಧಾನಗರಕ್ಕೆ ಬಂದು ಸೇರುವ ಸ್ಥಳದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಮದ್ಯ ತುಂಬಿದ ಲಾರಿಯನ್ನು ತಡೆಹಿಡಿದು ಪರಿಶೀಲಿಸಿದಾಗ ಅಕ್ರಮ ಮದ್ಯ ಪತ್ತೆಯಾಗಿದೆ. ಕೂಡಲೇ ಅಧಿಕಾರಿಗಳು ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.
ಲಾರಿಯಲ್ಲಿ ತುಂಬಿದ್ದ ಅಕ್ರಮ ಮದ್ಯ ಪೊಲೀಸರ ಕಣ್ಣಿಗೆ ಬೀಳದಂತೆ ಲಾರಿಯ ಒಳಗಡೆ 400 ಬಾಕ್ಸ್ನಲ್ಲಿ ಮದ್ಯವನ್ನು ಇಟ್ಟು, ನಂತರ ಅವುಗಳ ಮೇಲೆ ಸಿಮೆಂಟ್ ನಲ್ಲಿ ತಯಾರಿಸಿದ ಇಟ್ಟಿಗೆಗಳನ್ನು ಮುಚ್ಚಲಾಗಿತ್ತು. ಈ ಲಾರಿಯನ್ನು ಕಂಡು ಅನುಮಾನ ವ್ಯಕ್ತಪಡಿಸಿದ ಅಬಕಾರಿ ಪೊಲೀಸರು, ಪರಿಶೀಲನೆ ನಡೆಸಿದಾಗ ಅಕ್ರಮ ಮದ್ಯ ಇರುವುದು ಪತ್ತೆಯಾಗಿದೆ.
ಈ ಬಗ್ಗೆ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಬೆಳಗಾವಿ ಅಬಕಾರಿ ಜಂಟಿ ಆಯುಕ್ತ ಡಾ. ವೈ. ಮಂಜುನಾಥ್, ಈ ಲಾರಿ ಅಕ್ರಮ ಮದ್ಯ ತುಂಬಿಕೊಂಡು ಗೋವಾದಿಂದ ಗುಜರಾತ್ಗೆ ತೆರಳುತ್ತಿತ್ತು. ನಮ್ಮ ಇಲಾಖೆಯ ಪೊಲೀಸರಿಗೆ ಈ ಲಾರಿ ಬಗ್ಗೆ ಅನುಮಾನ ಮೂಡಿದಾಗ, ಲಾರಿ ಪರಿಶೀಲಿಸಿದ್ದು, ಅಕ್ರಮ ಮದ್ಯ ಇರುವುದು ಪತ್ತೆಯಾಗಿದೆ. ಸದ್ಯ ಲಾರಿ ಹಾಗೂ ಮದ್ಯವನ್ನು ವಶಕ್ಕೆ ಪಡೆದು, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.